ಎಲ್ಲರೂ ಧಾವಂತದ ಜೀವನ ನಡೆಸುತ್ತಿರುವಾಗ ಸಂಬಂಧಗಳನ್ನು ಉಳಿಸಿಕೊಳ್ಳಬೇಕೆಂಬ ಉದ್ದೇಶದಿಂದ ಒಂದು ಕಾರ್ಯಕ್ರಮಕ್ಕಾದರೂ ಕಡ್ಡಾಯ ಹಾಜರಿ ಹಾಕುವುದನ್ನು ಹೆಚ್ಚಿನವರು ರೂಢಿಸಿದ್ದಾರೆ. ಒಂದೇ ದಿನ, ಎರಡು-ಮೂರು ಕಾರ್ಯಕ್ರಮಗಳಿದ್ದರೆ, ಮೊದಲಿನ ಸಮಾರಂಭದಲ್ಲಿ ಮುಖ ತೋರಿಸಿ ಕೊನೆಯ ಜಾಗದಲ್ಲಿ “ಉದರಂಭರಣ’ ಮಾಡಬೇಕಾಗುತ್ತದೆ.
ಬೆಳಗ್ಗಿನಿಂದ ಮೂವರು ಪರಿಚಿತರ-ಸಂಬಂಧಿಕರ ಕರೆ. ಒಬ್ಬರ ಮನೆಯಲ್ಲಿ ಮದುವೆ, ಇನ್ನೊಬ್ಬರ ಮನೆಯಲ್ಲಿ ಸತ್ಯನಾರಾಯಣ ಪೂಜೆ, ಮತ್ತೂಬ್ಬರ ಮಗಳ ನೃತ್ಯದ ಆರಂಗೇಟ್ರಂ ಕಾರ್ಯಕ್ರಮವಂತೆ. ಒಂದು ಬುಧವಾರದಂದು, ಮತ್ತೆರಡು ಕಾರ್ಯಕ್ರಮಗಳು ಅದರ ಮರುದಿವಸವೇ. ಆ ಎರಡು ಜಾಗಗಳ್ಳೋ, ಬಹಳ ಅಂತರದಲ್ಲಿವೆ.
ಈ ಟ್ರಾಫಿಕ್ ಅನ್ನು ದಾಟಿಕೊಂಡು, ಎಲ್ಲ ಕಾರ್ಯಕ್ರಮಗಳನ್ನೂ ಅಟೆಂಡ್ ಮಾಡಬೇಕೆಂದರೆ, ಎರಡು ದಿವಸಗಳ ರಜಾ ಹಾಕಬೇಕು. ಅಷ್ಟೇ ಅಲ್ಲ, ಬಾಸ್ ಕೈಲಿ ಉಗಿಸಿಕೊಳ್ಳಬೇಕು, ಸಹೋದ್ಯೋಗಿಗಳ ಕೆಂಗಣ್ಣಿಗೆ ಗುರಿಯಾಗಬೇಕು. ಇದರ ಮಧ್ಯೆ, ಮನೆಯಲ್ಲಿರುವ ಹಿರಿಯರ ಉಪಚಾರ, ಮಕ್ಕಳ ಪರೀಕ್ಷೆಯ ತಯಾರಿ- ಎಲ್ಲವನ್ನೂ ಗಮನಿಸಬೇಕು.
ತಾಂತ್ರಿಕತೆ ಮುಂದುವರಿದಂತೆಲ್ಲ, ಆಮಂತ್ರಣ ಕಳಿಸುವ ವಿಧಾನಗಳು ಬಹಳ ಸುಲಭವಾಗಿವೆ. ಕೆಲವರು ಕರೆಮಾಡಿ ತಿಳಿಸಿದರೆ, ವಾಟ್ಸಾಪ್‌ನಲ್ಲಿ, ಇ-ಮೇಲ್‌ನಲ್ಲಿ ಆಮಂತ್ರಣ ಪತ್ರಿಕೆ ಕಳಿಸುವವರೂ ಇದ್ದಾರೆ. ಕೆಲವರಿಗೆ ಸ್ನೇಹಿತರ, ಬಂಧುಗಳ, ಸಹೋದ್ಯೋಗಿಗಳ ಸಂಖ್ಯೆ ಎಷ್ಟಿರುತ್ತದೆಂದರೆ ಹುಟ್ಟೂರಿನಲ್ಲಿ ಮದುವೆ ಕಾರ್ಯಕ್ರಮ ಇಟ್ಟುಕೊಂಡರೆ, ಸದ್ಯ ನೆಲೆಸಿರುವ ಸ್ಥಳದಲ್ಲಿ ಮತ್ತೂಂದು ಭರ್ಜರಿಯ ಆರತಕ್ಷತೆ ಹಮ್ಮಿಕೊಳ್ಳಲೇಬೇಕು. ಒಂದೇ ಆಹ್ವಾನಪತ್ರಿಕೆಯಲ್ಲಿ, ಬೇರೆ ಬೇರೆ ಜಾಗಗಳಲ್ಲಿ ನಡೆಯುವ ಸಮಾರಂಭಕ್ಕೆ ಕರೆ ನೀಡಿ, ಮುಗಿಸಿಬಿಡುತ್ತಾರೆ. ಆಮಂತ್ರಿತರಿಗೆ ಮಾತ್ರ ಯಾವ ಸಮಾರಂಭಕ್ಕೆ ಹೋಗುವುದು, ಯಾವುದನ್ನು ಬಿಡುವುದು ಎಂಬ ಪೀಕಲಾಟ. ಅದರಲ್ಲೂ, ಬಂಧುಗಳ ಮನೆಯಲ್ಲಿ ನಡೆಯುವ ಸಮಾರಂಭಕ್ಕೆ ಮಹಿಳೆಯರು ಗೈರಾಗುವಂತಿಲ್ಲ.
ಕಷ್ಟಪಟ್ಟು ಬಿಡುವು ಮಾಡಿಕೊಂಡು ಸಮಾರಂಭಕ್ಕೆ ಹೋದೆವು ಅಂತಿಟ್ಟುಕೊಳ್ಳಿ, ಅಲ್ಲಿನ ಜನಜಂಗುಳಿ ತಲೆಕೆಡಿಸಿಬಿಡುತ್ತದೆ. ಊಟದ ಪಂಕ್ತಿ ಹಿಡಿಯುವಲ್ಲಿ, ಬಫೆ ಊಟ ನೀಡುವಲ್ಲಿ ಜನ ಕಿಕ್ಕಿರಿದು ಸೇರಿರುತ್ತಾರೆ. ಕೆಲವೆಡೆ, ಒಂದು ಪಂಕ್ತಿಯ ಊಟ ಮುಗಿದು, ಎಂಜಲೆಲೆಗಳನ್ನು ಎತ್ತುವ ಮೊದಲೇ, ಸೀಟು ಹಿಡಿಯಬೇಕಾದ ಅನಿವಾರ್ಯ ಬಂದಾಗ ಯಾಕಾದರೂ ಆಹ್ವಾನಿಸುತ್ತಾರೋ ಅನಿಸುವುದೂ ಉಂಟು. ಅತಿಥಿಗಳನ್ನು ವೈಯಕ್ತಿಕವಾಗಿ ಹೋಗಿ ಆಹ್ವಾನಿಸಬೇಕಾದ ಸಂದರ್ಭವಿರುತ್ತಿದ್ದರೆ ಇಷ್ಟೊಂದು ಜನಜಂಗುಳಿ ಒಟ್ಟಾಗುವುದು ಅಸಾಧ್ಯವಿತ್ತು ಎನ್ನಿಸಿ, ಆಧುನಿಕ ತಂತಜ್ಞಾನದ ಮೇಲೆ ಸ್ವಲ್ಪ ಅಸಮಾಧಾನವಾಗುತ್ತದೆ.
ಕಳೆದ ವಾರ ಸಂಬಂಧಿಕರೊಬ್ಬರ ಆರತಕ್ಷತೆಗೆ ಹೋಗಬೇಕಾಯಿತು. ಹತ್ತು ದಿನಗಳ ಹಿಂದೆ ಹಳ್ಳಿಯಲ್ಲಿ ಮದುವೆ ನಡೆದಿತ್ತು. ಕಾರಣಾಂತರಗಳಿಂದ ಮದುವೆಗೆ ಹೋಗಲಾಗಿರಲಿಲ್ಲ. ಹಾಗಾಗಿ, ಆರತಕ್ಷತೆಗೆ ಹೋಗಲೇಬೇಕೆಂದು ನಿರ್ಧರಿಸಿ, ಪ್ರೀತಿವಿಶ್ವಾಸಗಳನ್ನು ಹೃನ್ಮನಗಳಲ್ಲಿ ತುಂಬಿಕೊಂಡು ಒಂದೂವರೆ ಗಂಟೆಯ ಪ್ರಯಾಣದ ನಂತರ ಗುರಿ ತಲುಪಿದೆ. ಯಥಾವತ್ತಾಗಿ ಸಾಲಿನಲ್ಲಿ ನಿಂತು, ಯುವ ಜೋಡಿಗೆ ವಿಶ್ ಮಾಡಲು ಕಾಯುತ್ತಿ¨ªೆ. ಇನ್ನೇನು ಕೈ ಕುಲುಕಿ ಶುಭಾಶಯ ಕೋರಬೇಕು ಅನ್ನುವಷ್ಟರಲ್ಲಿ, ಮದುಮಗಳ ತಾಯಿಯ ಆಕ್ಷೇಪಣೆ ಬಂತು. ಎಲ್ಲರೆದುರಿಗೆ, “”ಮದುವೆಗೆ ಬರಲೇ ಇಲ್ಲವಲ್ಲ ?” ಅಂತ ಕುಹಕದಿಂದ ಕೇಳಿದರು. ಯಾಕೋ ನನಗೆ ತಡೆದುಕೊಳ್ಳುವುದು ಕಷ್ಟವೆನಿಸಿತು. “ನೋಡಿ, ನಿಮ್ಮ ಕರೆಯೋಲೆ ಬೇರೆಯವರ ಮುಖಾಂತರ ಹಾಗೂ ಮೊಬೈಲ್‌ನಲ್ಲಿ ತಲುಪಿದರೂ, ವಿಶ್ವಾಸ ಉಳಿಸಿಕೊಳ್ಳಲು ಇಲ್ಲಿ ವೈಯಕ್ತಿಕ ಹಾಜರಿ ಹಾಕಿದ್ದೇನೆ. ಆರತಕ್ಷತೆಗೆ ಬಂದದ್ದಕ್ಕೆ ಸಂತೋಷ ವ್ಯಕ್ತಪಡಿಸುವುದನ್ನು ಬಿಟ್ಟು, ಮದುವೆಗೆ ಬಂದಿಲ್ಲವೆಂದು ಮುಖ ಸಣ್ಣ ಮಾಡಿಕೊಳ್ಳುವುದು ಸರಿಯೇ? ಹಾಗಾದ್ರೆ, ಈಗ ತಿರುಗಿ ಹೋಗಿಬಿಡಲೇ?’- ಬಾಣದಂತೆ ಹೊರಬಂತು ನನ್ನ ಮಾತು. “ಸಾರಿ’ ಎಂಬ ಮಾತು ಆ ಕಡೆಯಿಂದ ಬಂದರೂ, ನನ್ನ ಹೃದಯಾಳದ ಭಾವನೆ ಅವರಿಗೆ ಅರ್ಥವಾದಂತೆ ಕಾಣಲಿಲ್ಲ. “ವಿಲನ್’ ಪಟ್ಟ ಹೊತ್ತು ಅಲ್ಲಿಂದ ಹಿಂತಿರುಗಿದೆ.
ಇನ್ನು ಮುಂದೆ ಸಮಾರಂಭಗಳಿಗೆ ಖುದ್ದಾಗಿ ಹೋಗಿ, ಇಲ್ಲಸಲ್ಲದ ಮಾತು ಹೇಳಿಸಿಕೊಳ್ಳುವುದಕ್ಕಿಂತ ತಾಂತ್ರಿಕತೆಯನ್ನು ಉಪಯೋಗಿಸಿ ಆಮಂತ್ರಣ ಬಂದ ರೀತಿಯಲ್ಲೇ ಶುಭ ಸಂದೇಶಗಳನ್ನು ರವಾನಿಸಿ, ಆರಾಮವಾಗಿರುವುದೇ ಕ್ಷೇಮ ಅಂದುಕೊಂಡಿದ್ದೇನೆ.
ಉಮಾಮಹೇಶ್ವರಿ ಎನ್.