ಹಳೆಯ ಕತೆ, ಕವಿತೆ, ಕಾದಂಬರಿಯನ್ನು ಮತ್ತೆ ಓದಿದರೆ ಒಬ್ಬ ಓದುಗನಲ್ಲಿ ಮಾತ್ರ ಮರು ಹುಟ್ಟು ಪಡೆಯುತ್ತದೆ. ಅದೇ ಒಂದು ಕೃತಿ ರಂಗಕ್ಕೆ ಮರಳಿ ಬಂದರೆ, ಒಂದು ಜನರೇಶನ್ ಕಣ್ಮುಂದೇ ಆ ಕೃತಿ ಮರುಹುಟ್ಟು ಪಡೆಯುತ್ತದೆ. “ಕಂಚುಕಿ’ ಆ ಮಟ್ಟಿಗೆ ಮರುಹುಟ್ಟು. ಡಾ. ಚಂದ್ರಶೇಖರ ಕಂಬಾರರು ಬರೆದಿರುವ “ಸಿಂಗಾರವ್ವ ಮತ್ತು ಅರಮನೆ’ “ಕಂಚುಕಿ’ಯ ಹೆಸರಲ್ಲಿ ರಂಗಕ್ಕೆ ಬರುವ ಮೂಲಕ ನಿಜಕ್ಕೂ ಅದಕ್ಕೊದು ಬೇರೆಯದೇ ಆಯಾಮ ಸಿಕ್ಕಿದೆ, ಮರುಹುಟ್ಟು ದೊರೆತಿದೆ.
ತಂದೆಯಿಂದಲೇ ಮೋಸಕ್ಕೊಳಗಾಗಿ ಅರಮನೆಯಂಥ ವಾಡೆಗೆ ಸಿಂಗಾರಿ ಬಂದರೆ, ಗಂಡ ದೇಸಾಯಿ ನಪುಂಸಕ ಅಂತ ಗೊತ್ತಾಗುತ್ತದೆ. ಆದರೂ ಗಂಡನನ್ನೇ ಕೂಡಿ ಮಕ್ಕಳನ್ನು ಹೊಂದುವ ಆಸೆಯಲ್ಲೇ ಬಾಳುತ್ತಿರುವ ಹೊತ್ತಿಗೆ ಸತ್ತ ಅತ್ತೆಯ ಆಸೆ ಹಿಂಬಾಲಿಸುತ್ತದೆ, ವಾಡೆಯ ತುಂಬ ಮಕ್ಕಳನ್ನು ಹಡೆಯುವ ಅತ್ತೆಯ ಆಸೆಯನ್ನು ತೀರಿಸಲಾಗದೇ, ಬಂಜೆ ಅನ್ನುವ ಪಟ್ಟ ಕಟ್ಟಿಕೊಂಡ ಸಿಂಗಾರಿಯ ಬಾಳಲ್ಲಿ ಕೆಲಸದ ಹುಡುಗ, ಕಟ್ಟಾಳು ಮರಿಯಾ ಬರುತ್ತಾನೆ. ಅವನನ್ನು ಕೂಡುತ್ತಾಳೆ. ಆ ಮೂಲಕ ಗಂಡನನ್ನೇ ಧಿಕ್ಕರಿಸಿ, ತನ್ನ ಆಸೆ, ವಾಡೆಯ ಅಭಿಲಾಷೆಗಳನ್ನು ಆಕೆ ತೀರಿಸುತ್ತಾಳೆ. ಇದು “ಸಿಂಗಾರವ್ವ ಮತ್ತು ಅರಮನೆ’ ಕಾದಂಬರಿಯ ಸ್ಥೂಲ ರೂಪ.
ಇದನ್ನೇ ಯಥಾವತ್ ಏಕವ್ಯಕ್ತಿ ಪ್ರದರ್ಶನವಾಗಿ ಈಗಾಗಲೇ ಲಕ್ಷ್ಮೀ ಚಂದ್ರಶೇಖರ್ ಮಾಡಿದ್ದಾರೆ. ಆದರೆ ಆ ಕತೆಯನ್ನೇ ತಮ್ಮ ಗ್ರಹಿಕೆಯಲ್ಲಿ ಹಿಡಿದಿಡಲು ಪ್ರಯತ್ನಪಟ್ಟಿರುವವರು ಯುವ ನಟಿ, ನಿರ್ದೇಶಕಿ ದಿವ್ಯ ಕಾರಂತ್. ಆ ಇಡೀ ಕತೆಯನ್ನು ಹಾಗೇ ಹೇಳಲು ಹೋದರೂ ಅದನ್ನು ಸಿಂಗಾರಿಯ ಗೆಳತಿ, ಸಖೀ ಸೀನಿಂಗಿಯ ಕಣ್ಣಲ್ಲಿ ಹೇಳಲು ಪ್ರಯತ್ನಿಸಿದ್ದಾರೆ. ಹಾಗಾಗಿ ವಾಡೆಯ ಸಖೀ (ಕಂಚುಕಿ)ಯ ದೃಷ್ಟಿಕೋನದಲ್ಲಿ ಕತೆ ಸಾಗಿದೆ, ಕೆಲಸದ ಹುಡುಗ ಮರಿಯಾನನ್ನು ಮನಸಾರೆ ಪ್ರೀತಿಸಿದ್ದ ಸೀನಿಂಗಿ, ಆತ ಸಿಂಗಾರಿಯ ತೆಕ್ಕೆಗೆ ಬಿದ್ದ ನೋವು, ಕ್ರಮೇಣ ಅವಳ ಚಡಪಡಿಕೆ-ಗಳೆಲ್ಲಾ ಇಲ್ಲಿ ವ್ಯಕ್ತವಾಗುತ್ತಾ ಹೋಗುತ್ತದೆ. ಮೊದಲು ಸೀನಿಂಗಿ ಬಡಬಡ ಮಾತಾಡುತ್ತಿದ್ದಾಗ, ಸಿಂಗಾರಿ ಮೌನವಾಗಿರುತ್ತಾಳೆ, ಆಮೇಲೆ ಸಿಂಗಾರಿ ಬಡಬಡ ಮಾತಾಡುತ್ತಾಳೆ, ಆಮೇಲೆ ಸೀನಿಂಗಿ ಮೌನವಾಗಿಬಿಡುತ್ತಾಳೆ. ಮೌನದ ಹಲವು ಮುಖಗಳನ್ನು ಇಲ್ಲಿ ಪರಿಣಾಮಕಾರಿಯಾಗಿ ತೋರಿಸಲಾಗಿದೆ. ಒಂದು ಕತೆಗೆ ಹೀಗೆ ವಿಭಿನ್ನ ದೃಷ್ಟಿಕೋನ ಕೊಟ್ಟು ಹೇಳುವ ಪ್ರಕ್ರಿಯೆಯೇ ನಾಟಕದ ಹೈಲೈಟ್. ಆದರೆ ಇದನ್ನು ನಿರ್ದೇಶಕಿ ಇನ್ನಷ್ಟು ಸ್ಪಷ್ಟವಾಗಿ ಹೇಳುವ ಅಗತ್ಯ ಇತ್ತು. ಆ ಸ್ಪಷ್ಟತೆಯ ಕೊರತೆ ಮತ್ತು ಹಂಪ್‌ಗ್ಳಿರುವ ರಸ್ತೆಯಂತೆ ನಾಟಕದ ನಿದಾನ ಗತಿ ಪ್ರಯೋಗಕ್ಕೆ ಅಲ್ಲಲ್ಲಿ ತೊಡಕಾಗಿದೆ.
ಆದರೆ ಇಡೀ ನಾಟಕವನ್ನು ಕಟ್ಟಿ ನಿಲ್ಲಿಸಿರುವುದು ರಂಗ ಪ್ರಸ್ತುತಿ. ಅರಮನೆಯಂಥ ವಾಡೆ ಮನೆಯ ರಂಗಸಜ್ಜಿಕೆ (ದಿವಾಕರ್), ಬೆಳಕು ವಿನ್ಯಾಸ (ಪ್ರದೀಪ್ ಬೆಳವಾಡಿ/ ಮಂಜು ನಾರಾಯಣ್), ಬಳಸಿಕೊಂಡ ಹಾಡುಗಳು. ಸಂಗೀತ (ಪುಣ್ಯೇಶ್ ಮತ್ತು ಸವಿತಾ) ಹಾಗೂ ನಟನೆ ನಾಟಕವನ್ನು ಆಸಕ್ತಿಕರವಾಗಿಸಿದೆ. ಇಡೀ ನಾಟಕ ಸಿಂಗಾರಿಯ ಕತೆಯಾದರೂ ಹೇಳುವುದು ಕಂಚುಕಿಯ ದೃಷ್ಟಿಕೋನದಿಂದ. ಕಂಚುಕಿ ಪಾತ್ರ ನಿರ್ವಹಿಸಿರುವ ಸವಿತಾ ಬಿ. ಅದ್ಭುತವಾಗಿ ಪಾತ್ರವನ್ನು ತಮ್ಮದಾಗಿಸಿಕೊಂಡಿದ್ದಾರೆ. ಓಡಾಡುತ್ತಾ, ಕುಣಿದಾಡುತ್ತಾ, ರೇಗುತ್ತಾ, ಕೋಪಗೊಳ್ಳುತ್ತಾ, ವಿರಹತಪೆ¤ಯಾಗುತ್ತಾ, ಮೌನಿಯೇ ಆಗುತ್ತಾ ಆ ಪಾತ್ರವಾಗಿ ಆವಾಹನೆಗೊಂಡಿದ್ದಾರೆ ಸವಿತಾ. ಅಷ್ಟೇ ಸಶಕ್ತವಾಗಿ ಆವಿರ್ಭವಿಸಿರುವುದು ಸಿಂಗಾರಿ ಪಾತ್ರದ ನಂದಿನಿ ಮೂರ್ತಿ. ಮೌನದಲ್ಲೇ ಹೆಚ್ಚು ಅಭಿವ್ಯಕ್ತಿಸಬಲ್ಲ ನಂದಿನಿ, ಕ್ರೌರ್ಯದ ಮುಳ್ಳುಗಳನ್ನು ಸರಿಸಿಕೊಂಡು ಅರಳುವ ಹೂವಂತೆ ರಂಗವನ್ನು ತುಂಬಿದ್ದಾರೆ. ದೇಸಾಯಿ ಪಾತ್ರದ ಎಲ್ಲಾ ನಾಜೂಕು, ಷಂಡತ್ವ, ನಾಟಕಾಸಕ್ತಿ, ಹೆಣ್ಣಿನ ಬಗ್ಗೆ ಭಯ, ಚಿಮಣಿ ಬಗ್ಗೆ ಆಕರ್ಷಣೆ- ಇವೆಲ್ಲವನ್ನೂ ಅಂಜನ್ ಭಾರಧ್ವಾಜ್ ಕಟ್ಟಿಕೊಟ್ಟಿದ್ದಾರೆ. ಮರಿಯಾ ಆಗಿ ಕೌಸ್ತುಭ್ ಜಯಕುಮಾರ್, ತಂದೆಯಾಗಿ ಸಂತೋಷ್ ಕರ್ಕಿ, ಗೌಡ್ತಿಯಾಗಿ ಸಂಧ್ಯಾ ನಾಗರಾಜ್, ಹುಚ್ಚಯ್ಯನಾಗಿ ನಿಶ್ಚಯ್ ಕಡೂರ್, ಶೆಟ್ಟಿಯಾಗಿ ಪ್ರಣವ್ ಭಾರಧ್ವಾಜ್ ಸೂಕ್ತ ಅಭಿನಯ.
ಒಂದು ಕ್ಲಾಸಿಕ್ ನಾಟಕವನ್ನು ಯಾಕೆ ಹೊಸ ನಿರ್ದೇಶಕರು ಎತ್ತಿಕೊಳ್ಳುತ್ತಾರೆ ಅನ್ನುವುದು ಆಸಕ್ತಿಕರ ಪ್ರಶ್ನೆ. ಅದಕ್ಕೆ ಹೊಸ ದೃಷ್ಟಿಕೋನ ಇದ್ದು, ಅದು ಸಮಕಾಲೀನವಾದಾಗ ಮಾತ್ರ ಆ ಪ್ರಶ್ನೆ ಆಸಕ್ತಿಕರವಾಗಿ ಉಳಿಯುತ್ತದೆ. “ಕಂಚುಕಿ’ಯನ್ನು ಅದೇ ಪ್ರಶ್ನೆ ಇಟ್ಟುಕೊಂಡು ನೋಡಬಹುದು.
ವಿಕಾಸ ನೇಗಿಲೋಣಿ