Advertisement

ತೇಜಸ್‌ ಏರಿ ಹಾರಿದ ಸಿಂಧು

10:53 AM Feb 24, 2019 | |

ಬೆಂಗಳೂರು: ಏರೋ ಇಂಡಿಯಾ-2019 ವೈಮಾನಿಕ ಪ್ರದರ್ಶನದಲ್ಲಿ ಶನಿವಾರ “ಮಹಿಳಾ ದಿನಾಚರಣೆ” ಅಂಗವಾಗಿ ಖ್ಯಾತ ಬ್ಯಾಡ್ಮಿಂಟನ್‌ ತಾರೆ ಪಿ.ವಿ.ಸಿಂಧು ಅವರು, ತೇಜಸ್‌ ಲಘು ಯುದ್ಧ ವಿಮಾನದಲ್ಲಿ ಹಾರಾಟ ನಡೆಸಿದರು.

Advertisement

ಬೆಳಗ್ಗೆ 12 ಗಂಟೆಯಿಂದ ಸುಮಾರು 20 ನಿಮಿಷಗಳ ಕಾಲ ವಿಂಗ್‌ ಕಮಾಂಡರ್‌ ಸಿದ್ಧಾರ್ಥ ಅವರೊಂದಿಗೆ ತೇಜಸ್‌ನಲ್ಲಿ ಸಹ ಪೈಲಟ್‌ ಆಗಿ ಬಾನಂಗಳದಲ್ಲಿ ಹಾರಾಟ ನಡೆಸಿದರು. ಈ ಮೂಲಕ ಚಿಕ್ಕ ವಯಸ್ಸಿನಲ್ಲಿ ತೇಜಸ್‌ ಯುದ್ಧ ವಿಮಾನ ಏರಿದ ಮೊದಲ ಮಹಿಳಾ ಕ್ರೀಡಾಪಟು ಎಂಬ ಹೆಗ್ಗಳಿಗೆ ಪಾತ್ರವಾದರು.

ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಪಿ.ವಿ.ಸಿಂಧು, ತೇಜಸ್‌ ಏರಿದ್ದು ಅದ್ಭುತ ಅನುಭವ. ವಿಮಾನದ ಹಾರಾಟದ ಜತೆಗೆ, ಹಲವು ಕಸರತ್ತುಗಳನ್ನು ನಡೆಸಿದ್ದು ರೋಮಾಂಚಕವಾಗಿತ್ತು. ಈ ಅನುಭವವನ್ನು ಎಂದಿಗೂ ಮರೆಯುವುದಿಲ್ಲ. ಮಹಿಳಾ ದಿನದ ಅಂಗವಾಗಿ ನನಗೆ ಈ
ಅವಕಾಶ ನೀಡಿದ ರಕ್ಷಣಾ ಸಂಶೋಧನಾ ಅಭಿವೃದ್ಧಿ ನಿಗಮ (ಡಿಆರ್‌ ಡಿಒ) ಹಾಗೂ ವಾಯುಪಡೆಗೆ ಧನ್ಯವಾದ ಹೇಳಬಯಸುತ್ತೇನೆ ಎಂದರು. 

ತೇಜಸ್‌ ವಿಂಗ್‌ ಕಮಾಂಡರ್‌ ಸಿದ್ಧಾರ್ಥ ಮಾತನಾಡಿ, ಮೊದಲು ಸಿಂಧು ಅವರಿಗೆ ಹಾರಾಟದ ಕುರಿತು ಸಾಮಾನ್ಯ ಮಾಹಿತಿಗಳು ಹಾಗೂ ಉಪಪರಣಗಳ ಕುರಿತು ತಿಳಿಸಲಾಯಿತು. ಆ ನಂತರ ಅವರು ವೈಮಾನಿಕ ಯಾನಕ್ಕೆ ಹೊಂದಿಕೊಳ್ಳುತಾರೆಯೇ ಎಂದು ಪರಿಶೀಲಿಸಲು ಹಾರಾಟ ಆರಂಭಿಸುತ್ತಿದ್ದಂತೆ ಐದು ನಿಮಿಷ ಸಣ್ಣ ಪುಟ್ಟ ಕಸರತ್ತುಗಳನ್ನು ನಡೆಸಿದೆವು. ಆದರೆ, ಅವರು ಬಹುಬೇಗ ಆ ಕಸರತ್ತುಗಳಿಗೆ ಹೊಂದಿಕೊಂಡಿದ್ದರಿಂದ ಮುಂದಿನ 15 ನಿಮಿಷ ಕಠಿಣ ಕಸರತ್ತುಗಳನ್ನು ನಡೆಸಿದೆವು ಎಂದರು.

ಏರೋ ಇಂಡಿಯಾದ ಎರಡನೇ ದಿನವಾದ ಗುರುವಾರ ಸೇನಾ ಮುಖ್ಯಸ್ಥ “ಜನರಲ್‌ ಬಿಪಿನ್‌ ರಾವತ್‌’ ಕೂಡ ಇದೇ ಯುದ್ಧ ವಿಮಾನದಲ್ಲಿ ಹಾರಾಟ ನಡೆಸಿದ್ದರು. ಡಿಆರ್‌ಡಿಒ ಹಾಗೂ ವಾಯುಪಡೆ ವೈಮಾನಿಕ ಪ್ರದರ್ಶನದ ನಾಲ್ಕನೇ ದಿನವನ್ನು ಮಹಿಳಾ ದಿನವಾಗಿ ಆಚರಿಸುತ್ತಿದ್ದು, ಇದರ ಅಂಗವಾಗಿ ಮೂವರು ಮಹಿಳಾ ಪೈಲಟ್‌ಗಳು ಹಾಕ್‌-1 ಸುಧಾರಿತ ಜೆಟ್‌ ವಿಮಾನಗಳನ್ನು ಹಾರಿಸಿದರು.

Advertisement

ಜತೆಗೆ ವಾಯುಪಡೆಯ ಮಹಿಳಾ ಸಾಧಕರನ್ನು ಸನ್ಮಾನಿಸುವ ಜೊತೆಗೆ, ‘ವಾಯುಯಾನದಲ್ಲಿ ಮಹಿಳೆ ‘ ಎಂಬ ಲಾಂಛನ  ಬಿಡುಗಡೆಗೊಳಿಸಲಾಯಿತು. 

Advertisement

Udayavani is now on Telegram. Click here to join our channel and stay updated with the latest news.

Next