ಸಿಂಧನೂರು: ವಿಶ್ವದಾದ್ಯಂತ ವ್ಯಾಪಕವಾಗಿ ಹರಡುತ್ತಿರುವ ಮಹಾಮಾರಿ ಕೋವಿಡ್ ಹಾವಳಿ ತಡೆಗಟ್ಟಲು ಜಿಲ್ಲೆಯಲ್ಲಿಯೇ ಮೊದಲ ಬಾರಿಗೆ ಸ್ಲ್ಯಾಬ್ ಪರೀಕ್ಷೆ ಕೈಗೊಂಡು ಸುಮಾರು 900ಕ್ಕೂ ಅಧಿಕ ಜನರನ್ನು ಪರೀಕ್ಷೆ ಮಾಡಿ, ಕೋವಿಡ್-19 ತಡೆಗಟ್ಟಲು ಸಿಂಧನೂರಿನ ವೈದ್ಯರು ಹಾಗೂ ಸಿಬ್ಬಂದಿ ತಂಡ ಯಶಸ್ವಿಯಾಗಿ ಶ್ರಮಿಸುತ್ತಿದೆ.
ಜನಮನ್ನಣೆ: ಕೋವಿಡ್-19 ವಿರುದ್ಧ ತಾಲೂಕು ಆಸ್ಪತ್ರೆಯಲ್ಲಿ ವಿವಿಧ ತಂಡಗಳನ್ನಾಗಿ ಮಾಡಿಕೊಂಡು ಹಗಲಿರುಳೆನ್ನದೇ ತಮ್ಮ ಕುಟುಂಬ ವರ್ಗ ತೊರೆದು ಕಾಯಕ ನಿಷ್ಠೆ ನಿಭಾಯಿಸುತ್ತಿರುವುದಕ್ಕೆ ತಾಲೂಕಿನಾದ್ಯಂತ ಜನಮನ್ನಣೆ ಗಳಿಸುತ್ತಿದೆ. ತಾಲೂಕು ಆಸ್ಪತ್ರೆಯಲ್ಲಿ ಒಟ್ಟು ಮುಖ್ಯ ವೈದ್ಯಾಕಾರಿಗಳು ಸೇರಿದಂತೆ 83 ಸಿಬ್ಬಂದಿಗಳಿದ್ದು, ಇದರಲ್ಲಿ 58 ಜನರು ನಿತ್ಯ ಕಾಯಕದಲ್ಲಿ ತೊಡಗುತ್ತಿದ್ದಾರೆ. ಆದರೆ ಇನ್ನೂ 25 ಸಿಬ್ಬಂದಿ ಕೊರತೆಯೂ ಕಂಡು ಬರುತ್ತಿದೆ. ಹಾಗೂ 25ಕ್ಕೂ ಹೆಚ್ಚು ಜನರು ಹೊರಗುತ್ತಿಗೆ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತಿದ್ದಾರೆ.
ಸಾರ್ವಜನಿಕ ಆಸ್ಪತ್ರೆಯಲ್ಲಿ ನಗರ-ಗ್ರಾಮೀಣ ಪ್ರದೇಶದಿಂದ ನಿತ್ಯ ಸುಮಾರು ಜನರು ಚಿಕಿತ್ಸೆಗಾಗಿ ಬಂದು ಹೋಗುತ್ತಿದ್ದಾರೆ. ಆದರೆ ವೈದ್ಯರು ಹಾಗೂ ಸಿಬ್ಬಂದಿ ಸೇರಿದಂತೆ ಸಾರ್ವಜನಿಕರಿಗೂ ಕುಡಿಯುವ ನೀರಿನ ಸಮಸ್ಯೆ, ಆಸನಗಳು ಸೇರಿದಂತೆ ಇತರ ಆಸ್ಪತ್ರೆಯ ತಾಂತ್ರಿಕ ಸಮಸ್ಯೆ ನಡುವೆಯೂ ವೈದ್ಯರು ಹಾಗೂ ಸಿಬ್ಬಂದಿ ಕಾರ್ಯ ನಿರ್ವಹಿಸುತ್ತಿರುವುದು ಅವರ ಕಾಯಕನಿಷ್ಠೆಗೆ ಉತ್ತಮ ನಿದರ್ಶನ. ಅದರಂತೆಯೇ ಕೋವಿಡ್-19 ಬಗ್ಗೆ ಶ್ರಮಿಸಿದ ಎಲ್ಲ ಕೋವಿಡ್ ವಾರಿಯರ್ಗಳಿಗೆ ತಾಲೂಕಿನಲ್ಲಿ ಅಭೂತಪೂರ್ವ ಬೆಂಬಲ ಸಿಗುತ್ತಿದೆ.
ಜಿಲ್ಲಾಧಿಕಾರಿ ಆದೇಶ ಹಾಗೂ ಜನಪ್ರತಿನಿಧಿಗಳ ಸಹಕಾರದಿಂದ ನಮ್ಮ ಎಲ್ಲ ವೈದ್ಯರು ಹಾಗೂ ಸಿಬ್ಬಂದಿ ತಾಲೂಕಿನಲ್ಲಿ ಉತ್ತಮ ಕೆಲಸ ಮಾಡುತ್ತಿದ್ದಾರೆ. ಇದುವರೆಗೂ ಸಿಂಧನೂರು ತಾಲೂಕಿನಲ್ಲಿ ಯಾವುದೇ ಕೋವಿಡ್ ಪಾಸಿಟಿವ್ ಪ್ರಕರಣ ಕಂಡು ಬಂದಿಲ್ಲ. ಕೋವಿಡ್ ನಿಯಂತ್ರಿಸಲು ತಾಲೂಕಿನ ಎಲ್ಲ ವೈದ್ಯರು ಹಾಗೂ ಸಿಬ್ಬಂದಿ ಶ್ರಮಿಸಿದ್ದಾರೆ.
ರಾಮಕೃಷ್ಣ,
ಜಿಲ್ಲಾ ಆರೋಗ್ಯಾಧಿಕಾರಿ, ರಾಯಚೂರು
ತಂಡೋಪತಂಡವಾಗಿ ಕೋವಿಡ್-19 ವಿರುದ್ಧ ಎಲ್ಲ ವೈದ್ಯರು-ಸಿಬ್ಬಂದಿ ಸೇರಿ ಮೇಲಾಧಿಕಾರಿಗಳ ಆದೇಶದನ್ವಯ ಕೆಲಸ ಮಾಡುತ್ತಿದ್ದೇವೆ. ಜಿಲ್ಲೆಯಲ್ಲಿಯೇ ಮೊದಲ ಬಾರಿಗೆ ನಮ್ಮ ಆಸ್ಪತ್ರೆಯಿಂದ ಕೋವಿಡ್ ಸ್ಲ್ಯಾಬ್ ಪರೀಕ್ಷೆ ಕೈಗೊಂಡು ಸುಮಾರು 900ಕ್ಕೂ ಹೆಚ್ಚು ಜನರಿಗೆ ಪರೀಕ್ಷೆ ಮಾಡಿದ್ದೇವೆ.
ನಾಗರಾಜ ಕಾಟ್ವಾ,
ನಗರ ವೈದ್ಯಾಧಿಕಾರಿ, ಸಿಂಧನೂರು
ಚಂದ್ರಶೇಖರ್ ಯರದಿಹಾಳ