Advertisement

ಗೆಲುವೇ ಕಾಣದ ಸಿಂಧನೂರು ಕ್ಷೇತ್ರದಲ್ಲಿ ಬಿಜೆಪಿ ರಣತಂತ್ರ

12:02 AM Mar 27, 2023 | Team Udayavani |

ರಾಯಚೂರು: ಬಿಜೆಪಿಗೆ ಒಮ್ಮೆಯೂ ಗೆಲ್ಲಲು ಅವಕಾಶ ನೀಡದ ಸಿಂಧನೂರು ಕ್ಷೇತ್ರ ಈ ಬಾರಿ ಮೂರು ಪಕ್ಷಗಳ ಜಿದ್ದಾಜಿದ್ದಿನ ಕಣವಾಗಿ ಮಾರ್ಪಡುವ ಸಾಧ್ಯತೆಗಳು ದಟ್ಟವಾಗುತ್ತಿವೆ. ಕಾಂಗ್ರೆಸ್‌, ಬಿಜೆಪಿ ನಡುವೆ ಟಿಕೆಟ್‌ ಫೈಟ್‌ ಜೋರಾಗುತ್ತಿದ್ದು, ಪ್ರಬಲ ಆಕಾಂಕ್ಷಿಗಳು ಕಣ ಸಿದ್ಧಗೊಳಿಸುತ್ತಿದ್ದಾರೆ.

Advertisement

ಕಳೆದ ನಾಲ್ಕು ಚುನಾವಣೆಗಳಲ್ಲಿ ಒಮ್ಮೆ ಕಾಂಗ್ರೆಸ್‌ ಮತ್ತೂಮ್ಮೆ ಜೆಡಿಎಸ್‌ ಗೆದ್ದು ಕೊಂಡು ಬಂದಿರುವುದು ಇಲ್ಲಿನ ವಿಶೇಷ. ಆ ಸಂಪ್ರದಾಯ ಮುಂದುವರಿದರೆ ಈ ಬಾರಿ ಗೆಲುವಿನ ಸರದಿ ಕಾಂಗ್ರೆಸ್‌ನದ್ದಾಗಿದೆ. ಆದರೆ ಈಗಿನ ರಾಜಕೀಯ ಚಿತ್ರಣ ಸಂಪೂರ್ಣ ಬದಲಾಗಿದ್ದು, ಈ ಬಾರಿ ಬಿಜೆಪಿಯೂ ಪೈಪೋಟಿ ನೀಡಲು ಮುಂದಾಗಿದ್ದು, ಯಾವ ಪಕ್ಷಕ್ಕೆ ಜಯಭೇರಿ ಎನ್ನುವ ಕುತೂಹಲ ಹೆಚ್ಚಿಸಿದೆ.

ಈಗ ಜೆಡಿಎಸ್‌ನ ವೆಂಕಟರಾವ್‌ ನಾಡ ಗೌಡ ಶಾಸಕರಾಗಿದ್ದಾರೆ. ಕಳೆದ ಚುನಾವಣೆ ಯಲ್ಲಿ ಅವರ ವಿರುದ್ಧ ಕಾಂಗ್ರೆಸ್‌ನ ಹಂಪನಗೌಡ ಬಾದರ್ಲಿ ತೀವ್ರ ಪೈಪೋಟಿ ನೀಡಿ ಸೋಲುಂಡಿದ್ದರು. 2023ರ ಸಾರ್ವತ್ರಿಕ ಚುನಾವಣೆಗೆ ಹಾಲಿ ಶಾಸಕರಿಗೆ ಜೆಡಿಎಸ್‌ ಟಿಕೆಟ್‌ ಖಚಿತ ಮಾಡಿದೆ. ಆದರೆ ಕಾಂಗ್ರೆಸ್‌ನಲ್ಲಿ ಟಿಕೆಟ್‌ಗೆ ಪೈಪೋಟಿ ಏರ್ಪಟ್ಟಿದ್ದು, ಮೂವರು ಪ್ರಬಲ ಆಕಾಂಕ್ಷಿಗಳಾಗಿದ್ದಾರೆ. ಈಚೆಗೆ ಕಾಂಗ್ರೆಸ್‌ ಸ್ಕ್ರೀನಿಂಗ್‌ ಕಮಿಟಿ ಮಾಜಿ ಶಾಸಕ ಹಂಪನಗೌಡ ಬಾದರ್ಲಿ ಅವರಿಗೆ ಟಿಕೆಟ್‌ ನೀಡಲು ಒಲವು ತೋರಿದೆ ಎನ್ನಲಾಗುತ್ತಿದೆ. ಆದರೆ ಯುವ ಕಾಂಗ್ರೆಸ್‌ ಮಾಜಿ ಅಧ್ಯಕ್ಷ ಬಸನಗೌಡ ಬಾದರ್ಲಿ ಕೂಡ ಸಿಂಧನೂರು ಕ್ಷೇತ್ರದಿಂದ ಸ್ಪರ್ಧೆ ಬಯಸಿ ಅರ್ಜಿ ಸಲ್ಲಿಸಿದರೆ, ಮುಖಂಡ ಕೆ.ಕರಿಯಪ್ಪ ಕೂಡ ಕಾಂಗ್ರೆಸ್‌ ಟಿಕೆಟ್‌ ಮೇಲೆ ಕಣ್ಣಿಟ್ಟಿದ್ದಾರೆ.

ಇನ್ನು ಬಿಜೆಪಿಯಲ್ಲೂ ಸದ್ಯಕ್ಕೆ ಇದೇ ಪರಿಸ್ಥಿತಿ ನಿರ್ಮಾಣ ಗೊಂಡಿದ್ದು, ಟಿಕೆಟ್‌ಗೆ ಒಳಗೊಳಗೆ ಪೈಪೋಟಿ ಜೋರಾಗಿದೆ. ಮಾಜಿ ಸಂಸದ ಕೆ.ವಿರೂಪಾಕ್ಷಪ್ಪ ಮತ್ತೆ ಬಿಜೆಪಿ ಸೇರಿರುವುದು ಕ್ಷೇತ್ರದಲ್ಲಿ ಹೊಸ ಹುಮ್ಮಸ್ಸು ಮೂಡಿಸಿದೆ. ಕುರುಬ ಸಮಾಜದ ಪ್ರಮುಖ ನಾಯಕರಾಗಿದ್ದು, ತಮ್ಮದೇ ವರ್ಚಸ್ಸಿನೊಂದಿಗೆ ವೋಟ್‌ ಬ್ಯಾಂಕ್‌ ಹೊಂದಿರುವ ನಾಯಕರಾಗಿದ್ದಾರೆ. ಕೆಪೆಕ್‌ ಅಧ್ಯಕ್ಷ ಸ್ಥಾನ ನೀಡುವ ಮೂಲಕ ಬಿಜೆಪಿ ಕೂಡ ಅವರನ್ನು ಗಣನೆಗೆ ತೆಗೆದುಕೊಂಡಿದೆ. ವಿರೂಪಾಕ್ಷಪ್ಪರಿಗೆ ಟಿಕೆಟ್‌ ಸಿಕ್ಕರೆ ಪಕ್ಷಕ್ಕೆ ತೂಕ ಬರಬಹುದು ಎಂದೇ ವಿಶ್ಲೇಷಿಸಲಾಗಿತ್ತು. ಈಗ ಬಿಜೆಪಿಯಲ್ಲೂ ಆಕಾಂಕ್ಷಿಗಳು ಹುಟ್ಟಿಕೊಂಡಿದ್ದು, ಉದ್ಯಮಿ ರಾಜೇಶ ಹಿರೇಮಠ ಕೂಡ ಪ್ರಬಲ ಆಕಾಂಕ್ಷಿ ಸಾಲಿನಲ್ಲಿದ್ದಾರೆ. ಆರ್‌ಎಸ್‌ಎಸ್‌ ಹಿನ್ನೆಲೆ ಬಿಜೆಪಿಯಲ್ಲಿ ತಮ್ಮದೇ ಆಪ್ತ ವಲಯ ಹೊಂದಿರುವ ರಾಜೇಶ ಹಿರೇಮಠ ಕೂಡ ಟಿಕೆಟ್‌ಗೆ ಇನ್ನಿಲ್ಲದ ಕಸರತ್ತು ನಡೆಸಿದ್ದಾರೆ ಎನ್ನುತ್ತವೆ ಪಕ್ಷದ ಮೂಲಗಳು.

ಲಿಂಗಾಯತ, ಕುರುಬ ಪ್ರಾಬಲ್ಯ: ಸಿಂಧನೂರು ಕ್ಷೇತ್ರದಲ್ಲಿ ಲಿಂಗಾಯತ ಮತ್ತು ಕುರುಬ ಸಮಾಜದ ಪ್ರಾಬಲ್ಯವಿದೆ. ಇಷ್ಟು ವರ್ಷ ಲಿಂಗಾಯತರ ನಡುವೆಯೇ ನೇರ ಹಣಾಹಣಿ ಏರ್ಪ ಡುತ್ತಿದುದರಿಂದ ಕುರುಬ ಮತಗಳು ಇಬ್ಭಾಗವಾಗುತ್ತಿದ್ದವು. ಈಗ ಬಿಜೆಪಿಗೆ ವಿರೂಪಾಕ್ಷರ ಬಲ ಬಂದ ಮೇಲೆ ಕುರುಬ ಸಮಾಜ ಬಿಜೆಪಿ ಕಡೆ ಒಲವು ತೋರಬಹುದು ಎನ್ನಲಾಗುತ್ತಿದೆ. ಇದರಿಂದ ಕಾಂಗ್ರೆಸ್‌, ಜೆಡಿಎಸ್‌ ಲಿಂಗಾಯತ ಮತಗಳನ್ನು ನೆಚ್ಚಿಕೊಳ್ಳಬೇಕಾಗುತ್ತದೆ.

Advertisement

ರೆಡ್ಡಿ ಪಕ್ಷದ ಪ್ರಭಾವ ಗೌಣ: ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಮೂಲಕ ರಾಜಕೀಯದ ಸೆಕೆಂಡ್‌ ಇನ್ನಿಂಗ್ಸ್‌ ಆರಂಭ ಮಾಡಿರುವ ಗಾಲಿ ಜನಾರ್ದನ ರೆಡ್ಡಿ, ಸಿಂಧನೂರು ಕ್ಷೇತ್ರದಲ್ಲೂ ತಮ್ಮ ಅಭ್ಯರ್ಥಿಯನ್ನು ಕಣಕ್ಕಿಳಿಸಿದ್ದಾರೆ. ಬಳ್ಳಾರಿ ಮೂಲದ ನೆಕ್ಕಂಟಿ ಮಲ್ಲಿಕಾರ್ಜುನರನ್ನು ಅಭ್ಯರ್ಥಿಯನ್ನಾಗಿ ಘೋಷಿಸಿದ್ದಾರೆ. ಆದರೆ ಸ್ಥಳೀಯರ ಪ್ರಭಾವದ ಮಧ್ಯೆ ರೆಡ್ಡಿ ಕಮಾಲ್‌ ಮಾಡುವುದು ಕಷ್ಟ ಎನ್ನಲಾಗುತ್ತಿದೆ. ಆಂಧ್ರ ವಲಸಿಗ ಮತಗಳು ಸೆಳೆಯಬಹುದು. ಸೋಲು, ಗೆಲುವಿನ ಮೇಲೆ ಪ್ರಭಾವ ಬೀರಬಹುದಷ್ಟೇ ಎನ್ನಲಾಗುತ್ತಿದೆ.

ಹಿರಿಯರ ನಡುವೆ ಕಾದಾಟ
ಕಳೆದ ನಾಲ್ಕು ಚುನಾವಣೆಗಳಲ್ಲಿ ವೆಂಕಟರಾವ್‌ ನಾಡಗೌಡ ಮತ್ತು ಹಂಪನಗೌಡ ಬಾದರ್ಲಿ ನಡುವೆ ಕಾದಾಟ ಕಂಡುಬಂದಿ ತ್ತು. ಈಗ ಕಾಂಗ್ರೆಸ್‌ ಹಂಪನಗೌಡ ಬಾದರ್ಲಿಗೆ, ಬಿಜೆಪಿ ಕೆ.ವಿರೂಪಾಕ್ಷರಿಗೆ ಟಿಕೆಟ್‌ ನೀಡಿದರೆ ಕ್ಷೇತ್ರದಲ್ಲಿ ತ್ರಿಕೋನ ಸ್ಪರ್ಧೆ ಏರ್ಪಡಲಿದೆ. ಅಲ್ಲದೇ ಮೂವರು ಹಿರಿಯ ನಾಯಕರ ಸೆಣಸಾಟಕ್ಕೆ ಕ್ಷೇತ್ರ ವೇದಿಕೆಯಾಗಲಿದೆ. ಪಕ್ಷ ಸಂಘಟನೆಯಲ್ಲಿ ಹಿಂದುಳಿದ ಕಾರಣಕ್ಕೆ ಹಿಂದಿನ ಚುನಾವಣೆಯಲ್ಲಿ ಮೂರನೇ ಸ್ಥಾನಕ್ಕೆ ಬಿಜೆಪಿ ತೃಪ್ತಿಪಟ್ಟುಕೊಳ್ಳಬೇಕಿತ್ತು. ಆದರೆ ವಿರೂಪಾಕ್ಷಪ್ಪ ಕೆ., ರಾಜೇಶ ಹಿರೇಮಠ, ಅಮರೇಗೌಡ ಸಹಿತ ಅನೇಕ ಮುಖಂಡರು ಪಕ್ಷ ಸಂಘಟನೆಗೆ ಒತ್ತು ನೀಡಿದ್ದು, ಈ ಬಾರಿ ಬಿಜೆಪಿ ಸಾಕಷ್ಟು ಚೇತರಿಸಿಕೊಂಡಿದೆ. ಮತದಾರ ಬದಲಾವಣೆ ಬಯಸಿದ್ದೇ ಆದರೆ ಕ್ಷೇತ್ರ ಫಲಿತಾಂಶ ಕೂಡ ಬದಲಾಗಬಹುದು.

-ಸಿದ್ದಯ್ಯಸ್ವಾಮಿ ಕುಕುನೂರು

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next