ಸಿಂಧನೂರು: ಬೇಸಿಗೆಯಲ್ಲಿ ತಾಲೂಕಿನ ಗ್ರಾಮೀಣ ಪ್ರದೇಶಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಆಗದಂತೆ ಈಗಲೇ ಮುಂಜಾಗ್ರತೆ ವಹಿಸಬೇಕು ಎಂದು ಶಾಸಕ ವೆಂಕಟರಾವ್ ನಾಡಗೌಡ ಅಧಿಕಾರಿಗಳಿಗೆ ಸೂಚಿಸಿದರು.
ನಗರದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಅಧ್ಯಕ್ಷೆ ಲಕ್ಷ್ಮೀ ಗುರಿಕಾರ ಅಧ್ಯಕ್ಷತೆಯಲ್ಲಿ ಶನಿವಾರ ನಡೆದ ಪ್ರಗತಿ ಪರಿಶೀಲನೆ ಸಭೆಯಲ್ಲಿ ಅವರು ಮಾತನಾಡಿದರು. ತಾಲೂಕಿನ ಗ್ರಾಮೀಣ ಭಾಗಗಳಲ್ಲಿ ಬೇಸಿಗೆಯಲ್ಲಿ ನೀರಿನ ಸಮಸ್ಯೆ ಆಗದಂತೆ ತಾಲೂಕು ಮತ್ತು ಗ್ರಾಮ ಪಂಚಾಯಿತಿ ಅಧಿಕಾರಿಗಳು ಈಗಲೇ ಮುಂಜಾಗ್ರತೆ ವಹಿಸಬೇಕು ಎಂದು ಸೂಚಿಸಿದರು.
ಪಶು ಸಂಗೋಪನೆ ಇಲಾಖೆಯಿಂದ ಆಕಳು, ಕುರಿ ನೀಡಲು ಅರ್ಹ ಪಲಾನುಭವಿಗಳನ್ನು ಆಯ್ಕೆ ಮಾಡಿಲ್ಲ. ಆಕಳು ಕೊಟ್ಟ ಯಾವ ರೈತರ ಹತ್ತಿರವೂ ಆಕಳುಗಳಿಲ್ಲ. ಈ ಬಗ್ಗೆ ಪರಿಶೀಲನೆ ಮಾಡಲು ಶಾಸಕರು ಸೂಚಿಸಿದರು. ಈ ವೇಳೆ ಮಾತನಾಡಿದ ಜಿಪಂ ಸದಸ್ಯರಾದ ಎನ್. ಶಿವನಗೌಡ ಗೊರೇಬಾಳ ಮತ್ತು ಬಸವರಾಜ ಹಿರೇಗೌಡರ, ಫಲಾನುಭವಿಗಳ ಆಯ್ಕೆ ಸಂದರ್ಭದಲ್ಲಿ ಜಿ.ಪಂ.ಸದಸ್ಯರು ಸೂಚಿಸಿದ ಹೆಸರುಗಳನ್ನು ಪರಿಗಣಿಸಿಲ್ಲ. ಹೈನುಗಾರಿಕೆ ಮಾಡುವವರಿಗೆ ಆಕಳುಗಳನ್ನು ನೀಡಿಲ್ಲ. ಬ್ಯಾಂಕ್ ಅಧಿಕಾರಿಗಳು ಹಾಗೂ ಇಲಾಖೆ ಅಧಿ ಕಾರಿಗಳು ಸೇರಿಕೊಂಡು ಫಲಾನುಭವಿಗಳ ಹೆಸರಿನಲ್ಲಿ ಅವ್ಯವಹಾರ ನಡೆಸಿದ್ದಾರೆ ಎಂದು ದೂರಿದರು. ಈ ವೇಳೆ ಶಾಸಕರು ಹಾಗೂ ಜಿ.ಪಂ. ಸದಸ್ಯರ ಮಧ್ಯೆ ವಾಗ್ವಾದ ನಡೆಯಿತು.
ಕ್ಯಾಶುಟೆಕ್ ಅಧಿಕಾರಿಗೆ ತರಾಟೆ: ತಾಲೂಕಿನ ಅಮರಾಪುರ ಗ್ರಾಮದಲ್ಲಿ ಅಂಗನವಾಡಿ ಕೇಂದ್ರ ನಿರ್ಮಾಣಕ್ಕೆ ಸಂಬಂಧಿಸಿದಂತೆ ಜಾಗದ ವಿವಾದವಿದ್ದು, ಕಾಮಗಾರಿ ಆರಂಭಕ್ಕೂ ಮುನ್ನವೇ ಕ್ಯಾಶುಟೆಕ್ ಅಧಿಕಾರಿ ಕಾಮಗಾರಿ ಪ್ರಗತಿಯಲ್ಲಿದೆ ಎನ್ನುವ ವರದಿಗೆ ಶಾಸಕರು, ಜಿ.ಪಂ. ಸದಸ್ಯರನ್ನು ಕೆರಳಿಸಿತು. ಕಾಮಗಾರಿಯೇ ಆರಂಭವಾಗಿಲ್ಲ. ನಮ್ಮನ್ನು ದಾರಿ ತಪ್ಪಿಸುತ್ತಿದ್ದೀರಾ ಎಂದು ಆಕ್ರೋಶ ವ್ಯಕ್ತಪಡಿಸಿದರು. ಸಂಪೂರ್ಣ ಮಾಹಿತಿಯೊಂದಿಗೆ ಬರಲು ಕಳೆದ ಸಭೆಯಲ್ಲಿಯೇ ಸೂಚನೆ ನೀಡಿದ್ದೆ. ಕೆಡಿಪಿ ಸಭೆಯನ್ನು ಹಗುರವಾಗಿ ತೆಗೆದುಕೊಂಡರೆ ಹೇಗೆ ಎಂದು ತರಾಟೆಗೆ
ತೆಗೆದುಕೊಂಡು, ಸಭೆಯಿಂದ ಹೊರಹೋಗುವಂತೆ ಅಧಿಕಾರಿಗೆ ಶಾಸಕರು ಸೂಚಿಸಿದರು.
ತಾಲೂಕಿನ ವಿವಿಧ ಪಂಚಾಯ್ತಿಗಳಲ್ಲಿ ಸಸಿಗಳನ್ನು ವಿತರಣೆ ಮಾಡಲಾಗಿದ್ದು, ಯ್ನಾವ್ಯಾವ ಪಂಚಾಯ್ತಿಗಳಲ್ಲಿ ಎಷ್ಟೆಷ್ಟು ಗಿಡಗಳನ್ನು ನೆಡಲಾಗಿದೆ. ನಿಮಗೇನಾದ್ರೂ ಮಾಹಿತಿ ಇದೆಯಾ ಎಂದು ಅರಣ್ಯ ಇಲಾಖೆ ಅಧಿಕಾರಿಗಳನ್ನು ಪ್ರಶ್ನಿಸಿದರು. ಸಮಾಜ ಕಲ್ಯಾಣ ಇಲಾಖೆಯಲ್ಲಿ ವಿದ್ಯಾರ್ಥಿಗಳು ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಅವರ ಸಮಸ್ಯೆಗಳಿಗೆ ಸ್ಪಂದಿಸುವ ಕೆಲಸ ಮಾಡುವಂತೆ ಇಲಾಖೆ ಅಧಿಕಾರಿಗೆ ಸೂಚಿಸಿದರು. ಉದ್ಯೋಗ ಖಾತ್ರಿ ಯೋಜನೆಯಡಿ ಸಮರ್ಪಕವಾಗಿ ಕೆಲಸ ಆಗಿಲ್ಲ, ಕೂಲಿ ಕಾರ್ಮಿಕರಿಗೆ ವೇತನ ಪಾವತಿಸಿಲ್ಲ ಎಂಬ ದೂರುಗಳು ಬರುತ್ತಿವೆ. ಇನ್ನೊಮ್ಮೆ ಇಂತಹ ದೂರು ಕೇಳಿಬಂದರೆ ಪಿಡಿಒಗಳ ವಿರುದ್ಧ ಕ್ರಮ ಜರುಗಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ಜಿಪಂ ಸ್ಥಾಯಿ ಸಮಿತಿ ಅಧ್ಯಕ್ಷ ಬಸವರಾಜ ಹಿರೇಗೌಡರ, ಜಿ.ಪಂ ಸದಸ್ಯ ಶಿವನಗೌಡ ಗೊರೇಬಾಳ, ಅಮರೇಗೌಡ ವಿರೂಪಾಪುರ, ಹಿಂದುಳಿದ ವರ್ಗಗಳ ತಾಲೂಕು ಅಧ್ಯಕ್ಷ ಎಂ.ದೊಡ್ಡಬಸವರಾಜ, ತಾ.ಪಂ ಇ.ಓ ಬಾಬು ರಾಠೊಡ ಸೇರಿದಂತೆ ತಾಲೂಕಿನ ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು.