Advertisement

ರೋಗಿಗಳಿಂದ ಹಣ ಸುಲಿಗೆ ತಡೆಗೆ ತಾಕೀತು

03:35 PM Aug 02, 2019 | Naveen |

ಸಿಂಧನೂರು: ನಗರದ ಸರ್ಕಾರಿ ಆಸ್ಪತ್ರೆಗೆ ಗುರುವಾರ ಭೇಟಿ ನೀಡಿದ್ದ ಶಾಸಕ ವೆಂಕಟರಾವ್‌ ನಾಡಗೌಡ, ಆಸ್ಪತ್ರೆಯಲ್ಲಿ ರೋಗಿಗಳು, ಬಾಣಂತಿಯರ ಸಂಬಂಧಿಕರಿಂದ ಹಣ ವಸೂಲಿ ಮಾಡುವುದನ್ನು ತಕ್ಷಣವೇ ನಿಲ್ಲಿಸಬೇಕೆಂದು ಅಧಿಕಾರಿಗಳಿಗೆ ತಾಕೀತು ಮಾಡಿದರು.

Advertisement

ಸರ್ಕಾರಿ ಆಸ್ಪತ್ರೆಯಲ್ಲಿ ಸೌಲಭ್ಯ ಪರಿಶೀಲಿಸಿ ವೈದ್ಯಾಧಿಕಾರಿಗಳೊಂದಿಗೆ ಚರ್ಚೆ ನಡೆಸಿ ಅವರು ಮಾತನಾಡಿದರು. ನಗರ ಹಾಗೂ ಗ್ರಾಮೀಣ ಪ್ರದೇಶದ ಬಡ ರೋಗಿಗಳು ಸರ್ಕಾರಿ ಆಸ್ಪತ್ರೆ ವೈದ್ಯರನ್ನು ನಂಬಿ ಚಿಕಿತ್ಸೆಗೆ ಬರುತ್ತಾರೆ. ಅವರಿಗೆ ಸಕಾಲಕ್ಕೆ ಮತ್ತು ಸಮರ್ಪಕ ಚಿಕಿತ್ಸೆ ನೀಡಬೇಕು. ಹೆರಿಗೆಯಾದಾಗ ಹಣ ವಸೂಲಿ ಮಾಡುವುದನ್ನು ತಕ್ಷಣ ನಿಲ್ಲಿಸಬೇಕು. ಸರ್ಕಾರಿ ಆಸ್ಪತ್ರೆ ವೈದ್ಯರು ಖಾಸಗಿ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸುವುದನ್ನು ನಿಲ್ಲಿಸಬೇಕು. ಇಲ್ಲದಿದ್ದರೆ ಅಂತಹ ವೈದ್ಯರ ಮೇಲೆ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಸಿದರು.

ಆಸ್ಪತ್ರೆಯಲ್ಲಿ ರೋಗಿಗಳಿಗೆ, ಜನತೆಗೆ ಯಾವುದೇ ತೊಂದರೆ ಆಗದಂತೆ ನೋಡಿಕೊಳ್ಳಬೇಕು. ಔಷಧಿಗಳು ಸಮರ್ಪಕವಾಗಿ ಲಭ್ಯವಿರುವಂತೆ ನೋಡಿಕೊಳ್ಳಬೇಕು. ಕುಡಿಯುವ ನೀರು, ಶೌಚಾಲಯ, ಕರೆಂಟ್ ಹೋದಾಗ ಜನರೇಟರ್‌ ಸೌಲಭ್ಯಕ್ಕೆ ಸರ್ಕಾರದಿಂದ ಹಣ ಮಂಜೂರು ಮಾಡಿಸಲಾಗಿದೆ. ಶಾಸಕರ ಅನುದಾನದಲ್ಲೂ ಹಣ ನೀಡಲು ಸಿದ್ಧವಿದ್ದೇನೆ. ಆದರೂ ಆಸ್ಪತ್ರೆಯಲ್ಲಿ ಸೌಲಭ್ಯ ಕಲ್ಪಿಸಲು ನಿರ್ಲಕ್ಷ್ಯ ವಹಿಸಿದ್ದಕ್ಕೆ ವೈದ್ಯರನ್ನು ತರಾಟೆಗೆ ತೆಗೆದುಕೊಂಡರು.

ಎಂಟು ವರ್ಷದ ಹಿಂದೆ ಶಾಸಕನಾಗಿದ್ದಾಗ ಇರುವ ಸಮಸ್ಯೆ ಈಗಲೂ ಇವೆ. ಇದೇ ಮುಂದುವರಿದರೆ ಕ್ರಮ ಎದುರಿಸಬೇಕಾಗುತ್ತದೆ. ಡಿ. ಗ್ರೂಪ್‌ ನೌಕರರು ಹೆಚ್ಚಿದ್ದರೂ ಆಸ್ಪತ್ರೆಯಲ್ಲಿ ಸ್ವಚ್ಛತೆ ಕಾಪಾಡುವ ಕೆಲಸ ಆಗುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ ಅವರು, 100 ಹಾಸಿಗೆ ಇರುವ ಮೇಲಿನ ಜಾಗವನ್ನು ಕೂಡಲೇ ರೋಗಿಗಳಿಗಾಗಿ ಬಳಸಿಕೊಳ್ಳಬೇಕು ಎಂದು ತಾಕೀತು ಮಾಡಿದರು.

ಜಿಪಂ ಸಿಇಒ ಲಕ್ಷ್ಮೀಕಾಂತ ರೆಡ್ಡಿ ಮಾತನಾಡಿ, ಬಡವರಿಗಾಗಿ ಸರ್ಕಾರ ಅನೇಕ ಸೌಲಭ್ಯಗಳನ್ನು ಒದಗಿಸಿದೆ. ಸರ್ಕಾರದಿಂದ ಬರುವ ಸೌಲಭ್ಯಗಳು ಜನಸಾಮಾನ್ಯರಿಗೆ ಮುಟ್ಟಿಸಬೇಕು ಎಂದು ಸೂಚಿಸಿದರು.

Advertisement

ಈ ವೇಳೆ ಬೂದಗುಂಪಾ ಗ್ರಾಮಸ್ಥ ಶಶಿಧರ ಎಂಬವರು ಆಸ್ಪತ್ರೆಯಲ್ಲಿ ಯಾವುದೇ ಔಷಧಿಗಳನ್ನು ನೀಡುವುದಿಲ್ಲ. ಪ್ರತಿ ಬಾರಿ ಚಿಕಿತ್ಸೆಗೆ ಬಂದಾಗ ಹೊರಗಡೆ ಔಷಧ ಬರೆದುಕೊಡುತ್ತಾರೆ. ಅಷ್ಟೊಂದು ಹಣ ಕಟ್ಟಿ ಔಷಧ ಪಡೆಯಲು ಸಾಧ್ಯವಾಗುತ್ತಿಲ್ಲ ಎಂದು ಅಳಲು ತೋಡಿಕೊಂಡರು.

ಉದಯವಾಣಿ ವರದಿ ಪ್ರಸ್ತಾಪಿಸಿದ ನಾಡಗೌಡ: ಕಳೆದ ಎರಡು ದಿನಗಳ ಹಿಂದೆ ಉದಯವಾಣಿಯಲ್ಲಿ ಸಾರ್ವಜನಿಕ ಆಸ್ಪತ್ರೆಯಲ್ಲಿನ ಅವ್ಯವಸ್ಥೆ, ಲಂಚದ ಹಾವಳಿ ಬಗ್ಗೆ ಪ್ರಕಟಗೊಂಡ ವರದಿ ಪ್ರಸ್ತಾಪಿಸಿ, ಅಧಿಕಾರಿಗಳು ತಮ್ಮ ಮರ್ಯಾದೆಯನ್ನು ಕಳೆದುಕೊಳ್ಳುವ ಜೊತೆಗೆ ನಮ್ಮ ಮರ್ಯಾದೆಯನ್ನು ಹಾಳು ಮಾಡುತ್ತಿರಿ. ಇದೇ ತರಹ ಮುಂದುವರಿದರೆ ನೋಟಿಸ್‌ ಜಾರಿ ಮಾಡಲಾಗುತ್ತದೆ ಎಂದು ಎಚ್ಚರಿಸಿದರು.

ಐಎಎಸ್‌ ಪ್ರೊಬೇಷ್ನರಿ ಅಧಿಕಾರಿ ಮುಖೇಶಕುಮಾರ, ನಗರ ವೈದ್ಯಾಧಿಕಾರಿ ನರಸಿಂಹಲು, ತಾಲೂಕು ವೈದ್ಯಾಧಿಕಾರಿ ನಾಗರಾಜ ಬಿ. ಪಾಟೀಲ, ಜೆಡಿಎಸ್‌ ವಕ್ತಾರ ಬಸವರಾಜ ನಾಡಗೌಡ, ನಗರಸಭೆ ಸದಸ್ಯರಾದ ಚಂದ್ರು ಮೈಲಾರ, ಹನುಮೇಶ, ವೀರೇಶ, ಡಾ| ನಾಗರಾಜ ಕಾಟ್ವಾ ಇತರರು ಇದ್ದರು.

ಸರ್ಕಾರಿ ಆಸ್ಪತ್ರೆ ವೈದ್ಯರು ಸರ್ಕಾರಿ ಕೆಲಸದ ಸಮಯದಲ್ಲಿ ಖಾಸಗಿ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸುವುದು ಕಂಡುಬಂದರೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು. ಹೆರಿಗೆ ವಿಭಾಗದಲ್ಲಿ ಕಾರ್ಯ ನಿರ್ವಹಿಸುವ ಸಿಬ್ಬಂದಿ ಬದಲಿಸಲಾಗುವುದು.
ಎಂ.ಕೆ.ಎಸ್‌. ನಾಸೀರ್‌,
ಜಿಲ್ಲಾ ಆರೋಗ್ಯಾಧಿಕಾರಿ

Advertisement

Udayavani is now on Telegram. Click here to join our channel and stay updated with the latest news.

Next