ಸಿಂಧನೂರು: ನಗರದಲ್ಲಿನ ತಾಲೂಕು ಸರ್ಕಾರಿ ಆಸ್ಪತ್ರೆ ಕಲ್ಯಾಣ ಕರ್ನಾಟಕ ಭಾಗದಲ್ಲೇ ದೊಡ್ಡ ಸರ್ಕಾರಿ ಆಸ್ಪತ್ರೆ ಎಂಬ ಹೆಗ್ಗಳಿಕೆ ಹೊಂದಿದೆ. ಆದರೆ ಆಸ್ಪತ್ರೆ ಒಳಹೊಕ್ಕರೆ ಮೂಲ ಸೌಕರ್ಯಗಳಿಲ್ಲದೇ ಅವ್ಯವಸ್ಥೆ, ಅಸ್ವಚ್ಛತೆ, ಹಣಕ್ಕಾಗಿ ಸಿಬ್ಬಂದಿಗಳ ಹಪಾಹಪಿತನಕ್ಕೆ ರೋಗಿಗಳು ಬೇಸರಗೊಳ್ಳುವಂತಾಗಿದೆ.
Advertisement
ಸಿಂಧನೂರು ಸರ್ಕಾರಿ ಆಸ್ಪತ್ರೆಗೆ ನಿತ್ಯ ಅತೀ ಹೆಚ್ಚು ಬಡ ರೋಗಿಗಳು, ಗರ್ಭಿಣಿಯರು, ಮಕ್ಕಳು, ವಯೋವೃದ್ಧರು ಚಿಕಿತ್ಸೆಗೆ ಬರುತ್ತಾರೆ. ಆಸ್ಪತ್ರೆಯಲ್ಲಿ ಸ್ವಚ್ಛತೆಯೇ ಇಲ್ಲದಾಗಿದೆ. ಕುಡಿಯುವ ನೀರು, ಕುಳಿತುಕೊಳ್ಳಲು ಆಸನ, ಶೌಚಾಲಯ ವ್ಯವಸ್ಥೆ ಇಲ್ಲದೇ ರೋಗಿಗಳು, ಸಾರ್ವಜನಿಕರು ಪರದಾಡುವಂತಾಗಿದೆ. ಆಸ್ಪತ್ರೆ ಆವರಣದಲ್ಲಿ ತ್ಯಾಜ್ಯ ತುಂಬಿಕೊಂಡಿದ್ದು, ಜನ ದುರ್ವಾಸನೆಗೆ ಬೇಸತ್ತಿದ್ದಾರೆ. ಸೊಳ್ಳೆಗಳ ಹಾವಳಿಯಂತೂ ಹೇಳತೀರದಾಗಿದೆ.
Related Articles
Advertisement
ಶಾಸಕರ-ಅಧಿಕಾರಿಗಳ ಆದೇಶಕ್ಕೂ ಇಲ್ಲ ಬೆಲೆ: ಸುಮಾರು ತಿಂಗಳ ಹಿಂದೆ ಆಸ್ಪತ್ರೆಗೆ ಶಾಸಕ ವೆಂಕಟರಾವ್ ನಾಡಗೌಡ ಹಾಗೂ ಜಿಪಂ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ, ಡಿಎಚ್‌ಒ ಭೇಟಿ ನೀಡಿದ್ದರು. ಇಲ್ಲಿನ ಅವ್ಯವಸ್ಥೆ ಕಂಡು ವೈದ್ಯಾಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದರು. ಆಸ್ಪತ್ರೆಯಲ್ಲಿ ಸ್ವತ್ಛತೆಗೆ ಆದ್ಯತೆ ನೀಡಲು, ಕುಡಿಯುವ ನೀರಿನ ಸೌಲಭ್ಯ ಕಲ್ಪಿಸಲು, ರೋಗಿಗಳಿಗೆ ಸಮರ್ಪಕ ಚಿಕಿತ್ಸೆ ನೀಡಲು ಮತ್ತು ರೋಗಿಗಳ ಬಳಿ ಹಣ ವಸೂಲಿ ಮಾಡದಂತೆ ವೈದ್ಯರು, ಸಿಬ್ಬಂದಿಗೆ ತಾಕೀತು ಮಾಡಿದ್ದರು. ಹಣ ಕೇಳುವ ಸಿಬ್ಬಂದಿ ಮೇಲೆ ಶಿಸ್ತು ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದರು. ಆದರೆ ಈವರೆಗೆ ಇಲ್ಲಿ ಯಾವುದೇ ಸುಧಾರಣೆ ಆಗಿಲ್ಲ. ಸಿಬ್ಬಂದಿ ತಮ್ಮ ಹಳೇ ಛಾಳಿಯನ್ನೇ ಮುಂದುವರಿಸಿದ್ದಾರೆ ಎಂದು ರೋಗಿಗಳು ದೂರಿದ್ದಾರೆ.
ಬ್ಯಾಟರಿ ಕಳವು: ಆಸ್ಪತ್ರೆಯಲ್ಲಿ ಜನರೇಟರ್ ಕೆಟ್ಟಿದ್ದರಿಂದ ಕರೆಂಟ್ ಹೋದರೆ ರೋಗಿಗಳು ಕತ್ತಲಲ್ಲಿ ಕಾಲ ಕಳೆಯಬೇಕಾಗುತ್ತಿದೆ. ಇತ್ತೀಚೆಗೆ ಜನರೇಟರ್‌ಗಾಗಿ ತಂದ ಹೊಸ ಬ್ಯಾಟರಿ ಕೂಡ ಕಳ್ಳತನವಾಗಿದೆ. ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಸಿಬ್ಬಂದಿ ಬೇಜವಾಬ್ದಾರಿಯಿಂದಾಗಿ ಆಸ್ಪತ್ರೆಯಲ್ಲಿ ಇಂತಹ ಘಟನೆಗಳು ನಡೆಯುತ್ತಿವೆ ಎಂದು ಜನ ದೂರಿದ್ದಾರೆ.