ಸಿಂಧನೂರು: ಒಂದೇ ಒಂದು ದಿನ ತಡವಾಗಿ ಖಜಾನೆಗೆ ಬಿಲ್‌ಗಳನ್ನು ಸಲ್ಲಿಕೆ ಮಾಡಿದ ತಪ್ಪಿಗೆ ತಾಲೂಕಿಗೆ ಸಿಕ್ಕ 1 ಕೋಟಿ 23 ಲಕ್ಷ ರೂ. ಅನುದಾನ ವಾಪಸ್ ಹೋಗಿದ್ದು, ಬಿಲ್‌ಗಳ ವಿಳಂಬದ ಕಾರಣಕ್ಕೆ ಸಿಂಧನೂರು ತಾಪಂ ಭಾರೀ ತಲೆದಂಡಕ್ಕೆ ಗುರಿಯಾಗಿದೆ.
ತಾಪಂನಿಂದ ಕೈಗೊಂಡ ಅಭಿವೃದ್ಧಿ ಕಾಮಗಾರಿಗಳಿಗೆ ಸಂಬಂಧಿಸಿ ಸಲ್ಲಿಕೆ ಮಾಡಬೇಕಿದ್ದ ಬಿಲ್‌ಗಳನ್ನು ವರ್ಷದ ಕೊನೆಯಲ್ಲಿ ನೀಡಿದ್ದರಿಂದ ಇಂತಹ ಸಮಸ್ಯೆ ಉಂಟಾಗಿದೆ. ರಾಜ್ಯದ ಎಲ್ಲ ತಾಲೂಕುಗಳಿಗೆ ಬಿಡುಗಡೆಯಾದಂತೆ ತಾಲೂಕಿಗೂ 2019-20ನೇ ಸಾಲಿನಲ್ಲಿ 2 ಕೋಟಿ ರೂ. ಅನುದಾನ ಬಿಡುಗಡೆಯಾಗಿತ್ತು. ಸಿಸಿ ರಸ್ತೆ, ಶಾಲೆ ಕಾಂಪೌಂಡ್, ಚರಂಡಿ, ಕುಡಿಯುವ ನೀರಿನ ಪೈಪ್‌ಲೈನ್ ಸೇರಿದಂತೆ ಇತರೆ ಕಾಮಗಾರಿ ಕೈಗೊಳ್ಳಲು ಕ್ರಿಯಾಯೋಜನೆ ರೂಪಿಸಿ ಒಪ್ಪಿಗೆ ಪಡೆಯಲಾಗಿತ್ತು. ಟೆಂಡರ್ ಬಳಿಕ ಹಲವೆಡೆ ರಸ್ತೆ, ಚರಂಡಿ ನಿರ್ಮಾಣ ಒಳಗೊಂಡು ಇತರೆ ಕೆಲಸ ನಿರ್ವಹಿಸಲಾಗಿತ್ತು. ಸಕಾಲದಲ್ಲಿ ಬಿಲ್‌ಗಳನ್ನು ಖಜಾನೆ ಇಲಾಖೆಗೆ ಸಲ್ಲಿಸುವ ಬದಲು ವರ್ಷದಕೊನೆಯವರೆಗೆ ಕಾದು ಕುಳಿತ ಹಿನ್ನೆಲೆಯಲ್ಲಿ ಬಂದ ಹಣ ಕೈ ತಪ್ಪಿದೆ.
ಏನಾಗಿತ್ತು?: ಕಳೆದ ವರ್ಷ ಮಂಜೂರಾಗಿದ್ದ ಅನುದಾನ ಪ್ರಮಾಣ ಆಧರಿಸಿ ತಾಪಂನಲ್ಲಿ ಅನುಮೋದನೆ ಕೊಟ್ಟ ನಂತರ 30 ತಾಪಂ ಕ್ಷೇತ್ರ ವ್ಯಾಪ್ತಿಗಳಲ್ಲಿ ಅಭಿವೃದ್ಧಿ ಕೆಲಸ ಮಾಡಲಾಗಿತ್ತು. ಸಿಂಧನೂರು ತಾಲೂಕಿನ 26 ತಾಪಂ ಕ್ಷೇತ್ರಗಳು, ಮಸ್ಕಿ ತಾಲೂಕಿನ 4 ತಾಪಂ ಕ್ಷೇತ್ರಗಳಲ್ಲಿ ತ್ವರಿತವಾಗಿ ಕಾಮಗಾರಿ ಮುಗಿಸಲು ಸೂಚಿಸಲಾಗಿತ್ತು.ಪಂಚಾಯತ್ ರಾಜ್ ಎಂಜಿನಿಯರಿಂಗ್ ಇಲಾಖೆ ಪರಿಶೀಲಿಸಿ, ಪ್ರಗತಿ ವರದಿ ಪ್ರಕಾರ ಬಿಲ್ ಸಲ್ಲಿಕೆ ಮಾಡಬೇಕಿತ್ತು. ವರ್ಷದ ಕೊನೆಯ ತನಕ ವಿಳಂಬ ತೋರಿದ ಜಿಪಂ ಎಂಜಿನಿಯರಿಂಗ್ ಇಲಾಖೆ ಅಧಿಕಾರಿಗಳು ಮಾರ್ಚ್ ಕೊನೆಯ ವಾರ ಎಚ್ಚೆತ್ತುಕೊಂಡಿದ್ದರು.
ಸರ್ಕಾರ ಮಾ.24, 2020ರಂದು ಏಕಾಏಕಿ ಖಜಾನೆಯಲ್ಲಿ ಉಳಿದಿದ್ದ 1 ಕೋಟಿ 23 ಲಕ್ಷ ರೂ. ಬಳಕೆಯಾಗದ ಎಲ್ಲ ಅನುದಾನ ವಾಪಸ್ ಪಡೆಯಿತು. ಅದಕ್ಕೂ ಒಂದು ದಿನ ಮೊದಲಷ್ಟೇ ಬಿಲ್ ಸಲ್ಲಿಸಿದ್ದ ಅಧಿಕಾರಿಗಳು, ಸರ್ಕಾರದ ನಡೆಯಿಂದ ಪೇಚಿಗೆ ಸಿಲುಕಿದರು. ಬೇರೆ ಮಾರ್ಗವೇ ಇಲ್ಲದ್ದರಿಂದ ಮತ್ತೆ ಅನುದಾನಕ್ಕೆ ಬೇಡಿಕೆ ಸಲ್ಲಿಸಿ, ಇದೀಗ ಕಾದು ಕುಳಿತಿದ್ದಾರೆ.
ಕಾಯುವ ಶಿಕ್ಷೆ: ಮುಖ್ಯಮಂತ್ರಿಗಳ ಅನುದಾನ ಬಳಕೆ ಮಾರ್ಗಸೂಚಿಯಲ್ಲಿ ಮುಂದುವರಿದ ಕಾಮಗಾರಿಗಳನ್ನಾಗಿ ಹಿಂದಿನ ಕೆಲಸಗಳನ್ನು ಸೇರಿಸಲು ಅವಕಾಶ ಕೊಟ್ಟ ನಂತರ ಬಹುತೇಕರು ನಿರಾಳವಾಗಿದ್ದರು. 2020-21ನೇ ಸಾಲಿನಲ್ಲಿಬಂದ 1.50 ಕೋಟಿ ರೂ. ಗಳನ್ನು ಹಳೇ ಅಭಿವೃದ್ಧಿ ಕೆಲಸಗಳಿಗೆ ಜೋಡಿಸಲಾಗಿದೆ. ತಾಪಂನಿಂದ ಕ್ರಿಯಾಯೋಜನೆ ಸಲ್ಲಿಕೆಯಾಗಿದ್ದು, ಜಿಪಂನಿಂದ ಒಪ್ಪಿಗೆ ದೊರೆಯಬೇಕಿದೆ. ಏಳು ತಿಂಗಳ ಹಿಂದೆಯೇ ಬಿಲ್ ಪಡೆದುಕೊಳ್ಳಬೇಕಿದ್ದ ಗುತ್ತಿಗೆದಾರರು ಮಾತ್ರ ವಿಳಂಬಕ್ಕೆ ಸಿಲುಕಿ ಪರದಾಡುವಂತಾಗಿದೆ. ತಾಪಂ ಸದಸ್ಯರು ಸಾಮಾನ್ಯ ಸಭೆಗಳಲ್ಲಿ ಬಾಕಿ ಹಣಕ್ಕಾಗಿ ಬೇಡಿಕೆ ಸಲ್ಲಿಸುತ್ತಿದ್ದು, ಅಧಿಕಾರಿಗಳು ಉತ್ತರಿಸಿ ಸುಸ್ತಾಗುವಂತಾಗಿದೆ.
ವ್ಯತಿರಿಕ್ತ ಸನ್ನಿವೇಶ : ತಾಪಂಗಳು ಅನುದಾನವಿಲ್ಲದೇ ಸೊರಗುತ್ತಿವೆ ಎಂಬ ಮಾತುಗಳು ಎಲ್ಲೆಡೆ ಕೇಳಿಬರುತ್ತಿವೆ. ಮುಖ್ಯಮಂತ್ರಿಗಳಿಂದಲೇ ಅನುದಾನ ಭಾಗ್ಯ ಕಲ್ಪಿಸಿದಾಗಲೂ ಅದನ್ನು ಬಳಸಿಕೊಳ್ಳುವಲ್ಲಿ ವಿಫಲವಾಗಿದ್ದು ಟೀಕೆಗೆ ಗುರಿಯಾಗಿದೆ. ಎರಡನೇ ವರ್ಷದ ಅನುದಾನದಲ್ಲಿ ಹೆಚ್ಚಿನ ಅಭಿವೃದ್ಧಿ ಕೈಗೊಳ್ಳಬಹುದಾಗಿದ್ದ ಅವಕಾಶವನ್ನೇ ಕಳೆದುಕೊಂಡಿರುವ ಆಡಳಿತವರ್ಗ ಸಮಯದ ಪಾಠ ಅರಿಯಬೇಕಿದೆ.
–ಯಮನಪ್ಪ ಪವಾರ