Advertisement

ಸಿಂದಗಿ –ಹಾನಗಲ್‌ ಉಪ ಚುನಾವಣೆ : ಇಂದು ಬಹಿರಂಗ ಪ್ರಚಾರ ಅಂತ್ಯ

08:11 AM Oct 27, 2021 | Team Udayavani |

ಬೆಂಗಳೂರು: ಕಳೆದ ಹದಿನೈದು ದಿನಗಳಿಂದ ರಾಜ್ಯದ ಎಲ್ಲರ ಗಮನವನ್ನು ತಮ್ಮೆಡೆಗೆ ಸೆಳೆದಿದ್ದ ಸಿಂದಗಿ ಹಾಗೂ ಹಾನಗಲ್‌ ವಿಧಾನ ಸಭಾ ಕ್ಷೇತ್ರಗಳ ಉಪ ಚುನಾವಣೆಯ ಬಹಿರಂಗ ಪ್ರಚಾರಕ್ಕೆ ಬುಧವಾರ ಸಂಜೆ ತೆರೆ ಬೀಳಲಿದೆ.

Advertisement

ಅ.13ರಿಂದ ರಾಜ್ಯದ ಎಲ್ಲ ಪಕ್ಷಗಳ ಘಟಾನುಘಟಿ ನಾಯ ಕರು ಸರತಿಯಲ್ಲಿ ಎರಡೂ ಕ್ಷೇತ್ರಗಳಲ್ಲಿ ತಮ್ಮ ಪಕ್ಷಗಳ ಅಭ್ಯರ್ಥಿಗಳ ಪರ ಬಿರುಸಿನ ಪ್ರಚಾರ ನಡೆಸಿದ್ದಾರೆ. ಬುಧವಾರ ಕೊನೇ ದಿನದ ಪ್ರಚಾರದ ಹಿನ್ನೆಲೆಯಲ್ಲಿ ಎಲ್ಲ ನಾಯಕರೂ ಕೊನೇ ಕ್ಷಣದಲ್ಲಿ ತಮ್ಮ ಭಾಷಣಗಳ ಮೂಲಕ ಜನರ ಮನಸ್ಸು ಸೆಳೆಯುವ ಕಸರತ್ತು ನಡೆಸಲಿದ್ದಾರೆ. ಸಿಎಂ ಬೊಮ್ಮಾಯಿ, ಪ್ರತಿ ಪಕ್ಷ ನಾಯಕ ಸಿದ್ದರಾಮಯ್ಯ, ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ.ಕುಮಾರ ಸ್ವಾಮಿ, ಮಾಜಿ ಪ್ರಧಾನಿ ಎಚ್‌.ಡಿ.ದೇವೇ ಗೌಡ, ಮಾಜಿ ಸಿಎಂ ಬಿ.ಎಸ್‌. ಯಡಿ ಯೂರಪ್ಪ ಪ್ರಚಾರದಲ್ಲಿ ಮುಂಚೂಣಿಯಲ್ಲಿ ಕಾಣಿಸಿಕೊಂಡಿದ್ದಾರೆ.

ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್‌ ಹಾಗೂ ಬಿಜೆಪಿ ಉಪಚುನಾವಣೆಗೆ ವ್ಯವಸ್ಥಿತ ಪ್ರಚಾರ ಕಾರ್ಯತಂತ್ರಗಳನ್ನು ರೂಪಿಸಿ, ಎರಡೂ ವಿಧಾನಸಭಾ ಕ್ಷೇತ್ರಗಳಲ್ಲಿ ಉಸ್ತುವಾರಿಗಳ ತಂಡವನ್ನೇ ರಚಿಸಿ ಅಬ್ಬರದ ಪ್ರಚಾರ ನಡೆಸಿವೆ. ಆಡಳಿತ ಪಕ್ಷ ಬಿಜೆಪಿ ವತಿಯಿಂದ ಎರಡೂ ಕ್ಷೇತ್ರಗಳಿಗೆ ಹಿರಿಯ ಸಚಿವರು ಹಾಗೂ ಪಕ್ಷದ ಪ್ರಧಾನ ಕಾರ್ಯದರ್ಶಿಗಳನ್ನೊಳಗೊಂಡ ಚುನಾವ ಣಾ ಉಸ್ತುವಾರಿ ತಂಡ ರಚಿಸಿ, ಆ ತಂಡಗಳ ಮೂಲಕ ಸ್ಥಳೀಯವಾಗಿ ಬೂತ್‌ ಮಟ್ಟದವರೆಗೂ ವಿವಿಧ ತಂಡಗಳನ್ನು ರಚಿಸಿ ಚುನಾವಣಾ ಪ್ರಚಾರ ಕಾರ್ಯ ನಡೆಸಿದ್ದಾರೆ.

ಜಿಲ್ಲಾ ಪಂಚಾಯಿತಿ ವ್ಯಾಪ್ತಿಗೊಬ್ಬ ಸಚಿವರ ಜವಾಬ್ದಾರಿ ವಹಿಸಿ, ಗ್ರಾಮ ಪಂಚಾಯಿತಿಗೆ ಇಬ್ಬರು ಶಾಸಕರಿಗೆ ಜವಾ ಬ್ದಾರಿ ನೀಡುವ ಮೂಲಕ ಪ್ರತಿ ಮನೆಯನ್ನೂ ಪ್ರತಿ ದಿನ ಸಂಪರ್ಕ ಮಾಡುವ ಮೂಲಕ ಚುನಾವಣಾ ಪ್ರಚಾರವನ್ನು ನಡೆಸಿದ್ದಾರೆ. ಮುಖ್ಯಮಂತ್ರಿ ಬೊಮ್ಮಾಯಿಯವರು ಎರಡೂ ಕ್ಷೇತ್ರದಲ್ಲಿ ಕಾಲಿಗೆ ಚಕ್ರ ಕಟ್ಟಿಕೊಂಡು ಒಂದು ವಾರ ಬಿಡುವಿಲ್ಲದೇ ಪ್ರಚಾರ ನಡೆಸಿದರು.

ವಿಶೇಷವಾಗಿ ಹಾನಗಲ್‌ ಕ್ಷೇತ್ರದಲ್ಲಿ ತಮ್ಮ ಶಕ್ತಿಯನ್ನೆಲ್ಲ ಧಾರೆ ಎರೆದು ಪ್ರಚಾರ ನಡೆಸಿದ್ದಾರೆ. ಅವರಿಗೆ ಪೂರಕವಾಗಿ ಮಾಜಿ ಸಿಎಂ ಬಿ.ಎಸ್‌.ಯಡಿಯೂರಪ್ಪ ಕೂಡ ಎರಡೂ ಕ್ಷೇತ್ರಗಳಲ್ಲಿ ತಲಾ ಎರಡು ದಿನ ಪ್ರಚಾರ ನಡೆಸಿ ಬಿಜೆಪಿ ಅಭ್ಯರ್ಥಿಗಳಿಗೆ ಶಕ್ತಿ ತುಂಬುವ ಕೆಲಸ ಮಾಡಿದರು. ಸ್ಥಳೀಯವಾಗಿ ಸಂಪುಟದ ಎಲ್ಲ ಸಚಿವರೂ ಆಯಾ ಸಮುದಾಯಗಳ ಮತದಾರರನ್ನು ಸೆಳೆಯಲು ಸರತಿಯಲ್ಲಿ ಪ್ರಚಾರ ನಡೆಸುವ ಮೂಲಕ ಪಕ್ಷದ ಅಭ್ಯರ್ಥಿಗಳ ಗೆಲುವಿಗೆ ಶ್ರಮವಹಿಸಿದ್ದಾರೆ. ಕಾಂಗ್ರೆಸ್‌ ಕೂಡ ಈ ಬಾರಿ ಚುನಾವಣೆಯಲ್ಲಿ ಮುಂಚೆಯೇ ವ್ಯವಸ್ಥಿತವಾಗಿ ಕಾರ್ಯತಂತ್ರ ರೂಪಿಸಿ ಪ್ರತಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಪಕ್ಷದ ಪ್ರಮುಖ ನಾಯಕರನ್ನೊಳಗೊಂಡ ಹಾಲಿ ಶಾಸಕರನ್ನೆಲ್ಲ ಉಸ್ತುವಾರಿಯನ್ನಾಗಿ ಮಾಡಿ ತಳ ಮಟ್ಟದಲ್ಲಿಯೂ ಎಲ್ಲ ಮತದಾರರನ್ನು ತಲುಪುವ ಪ್ರಯತ್ನ ನಡೆಸಿತು.

Advertisement

ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಅವರು ಎರಡೂ ಕ್ಷೇತ್ರಗಳಲ್ಲಿ ಬಿಡುವಿಲ್ಲದೇ ಪ್ರಚಾರ ಮಾಡಿ ತಮ್ಮ ಪಕ್ಷದ ಅಭ್ಯರ್ಥಿಗಳ ಗೆಲುವಿಗೆ ಕಸರತ್ತು ನಡೆಸಿದ್ದಾರೆ. ಆದರೆ, ಜೆಡಿಎಸ್‌ ನಾಯಕರು ಹಾನಗಲ್‌ ಕ್ಷೇತ್ರಕ್ಕಿಂತ ಸಿಂದಗಿಯಲ್ಲಿ ಹೆಚ್ಚಿನ ಶ್ರಮ ಹಾಕಿದ್ದು ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ಅವರು ಸಿಂದಗಿ ಕ್ಷೇತ್ರದಲ್ಲಿಯೇ ಒಂದು ವಾರ ಠಿಕಾಣಿ ಹೂಡುವ ಮೂಲಕ ಎರಡೂ ರಾಷ್ಟ್ರೀಯ ಪಕ್ಷಗಳಿಗೆ ಸಮನಾದ ಪೈಪೋಟಿ ನೀಡುವ ಕಸರತ್ತು ನಡೆಸಿದರು.

ಅವರಿಗೆ ಬೆಂಬಲವಾಗಿ ಮಾಜಿ ಸಿಎಂ ಎಚ್‌ .ಡಿ.ಕುಮಾರಸ್ವಾಮಿ, ಸಂಸದ ಪ್ರಜ್ವಲ್‌ ರೇವಣ್ಣ, ನಿಖೀಲ್‌ ಕುಮಾರಸ್ವಾಮಿ ಸಿಂದಗಿ ವಿಧಾನಸಭಾ ಕ್ಷೇತ್ರದಲ್ಲಿಯೇ ಪ್ರಚಾರಕ್ಕೆ ಹೆಚ್ಚಿನ ಸಮಯ ನೀಡುವ ಮೂಲಕ ತಮ್ಮ ಪಕ್ಷದ ಅಭ್ಯರ್ಥಿ ಗೆಲುವಿಗಾಗಿ ಶ್ರಮವಹಿಸಿದ್ದಾರೆ. ಹದಿನೈದು ದಿನಗಳ ಕಾಲ ರಾಜಕೀಯ ನಾಯಕರ ಪ್ರಚಾರದ ಭರಾಟೆ, ಮಾತಿನ ಸಮರ, ಏಟಿಗೆ ಎದುರೇಟುಗಳ ವಾಗ್ಬಾಣಗಳಿಗೆ ಬುಧವಾರ ಸಂಜೆ ತೆರೆ ಬೀಳಲಿದ್ದು, ಸ್ಥಳೀಯ ಮತದಾರರನ್ನು ಹೊರತುಪಡಿಸಿ ಉಳಿದ ನಾಯಕರು ಕ್ಷೇತ್ರ ತೊರೆಯಬೇಕಿರುವುದರಿಂದ ರಾಜಕೀಯ ನಾಯಕರ ಅಬ್ಬರದ ಮಾತುಗಳಿಗೆ ತೆರೆ ಬೀಳಲಿದೆ.

 

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next