Advertisement

ರಂಗೇರಿದ ಸಿಂದಗಿ ಉಪಚುನಾವಣೆ ಅಖಾಡ

01:20 PM Oct 24, 2021 | Shwetha M |

ಸಿಂದಗಿ: ಬಸವನ ನಾಡು ಎಂದೇ ಖ್ಯಾತಿ ಪಡೆದ ವಿಜಯಪುರ ಜಿಲ್ಲೆಯ ಸಿಂದಗಿ ವಿಧಾನಸಭಾ ಕ್ಷೇತ್ರದಲ್ಲಿ ಉಪಚುನಾವಣೆ ಕಾವು ತೀವ್ರಗೊಂಡಿದ್ದು, ಬಿಜೆಪಿ, ಕಾಂಗ್ರೆಸ್‌, ಜೆಡಿಎಸ್‌ನ ರಾಜ್ಯಮಟ್ಟದ ನಾಯಕರು ಹಳ್ಳಿ-ಹಳ್ಳಿಗಳಲ್ಲಿ, ಗಲ್ಲಿ-ಗಲ್ಲಿಗಳಲ್ಲಿ ಮತಯಾಚಿಸುತ್ತಿದ್ದಾರೆ.

Advertisement

ಕ್ಷೇತ್ರಕ್ಕೆ ಮೊದಲ ಉಪ ಚುನಾವಣೆ ಇದಾಗಿದ್ದು, ಚುನಾವಣೆ ಪ್ರಚಾರಕ್ಕೆ ಮಾಜಿ-ಹಾಲಿ ಮುಖ್ಯಮಂತ್ರಿಗಳು, ಮಂತ್ರಿಗಳು ಬಂದಿರುವುದು ಇದೇ ಮೊದಲಾಗಿದೆ. ಹೀಗಾಗಿ ಹಳ್ಳಿಗಳಲ್ಲಿ ಅಖಾಡ ರಂಗೇರಿದೆ. ಬಿಜೆಪಿ ಅಭ್ಯರ್ಥಿ ರಮೇಶ ಭೂಸನೂರ, ಕಾಂಗ್ರೆಸ್‌ ಅಭ್ಯರ್ಥಿ ಅಶೋಕ ಮನಗೂಳಿ, ಜೆಡಿಎಸ್‌ ಅಭ್ಯರ್ಥಿ ನಾಜಿಯಾ ಅಂಗಡಿ ಹಾಗೂ ಪಕ್ಷೇತರ ಅಭ್ಯರ್ಥಿಗಳು ಭರ್ಜರಿ ಪ್ರಚಾರದಲ್ಲಿ ತೊಡಗಿದ್ದಾರೆ.

ರಾಜ್ಯದಲ್ಲಿ ಬಿಜೆಪಿ ಸರ್ಕಾರವಿದ್ದು, ಕ್ಷೇತ್ರ ಉಳಿಸಿಕೊಳ್ಳುವ ಪ್ರಯತ್ನದಲ್ಲಿ ಬಿಜೆಪಿ ಇದ್ದರೆ, ಕಾಂಗ್ರೆಸ್‌ಗೆ ಅಸ್ತಿತ್ವ ಉಳಿಸಿಕೊಳ್ಳ ಬೇಕೆಂಬ ಪ್ರಯತ್ನ. ಮತ್ತೊಂದು ಕಡೆ ಕ್ಷೇತ್ರ ಮರಳಿ ಪಡೆಯಬೇಕೆಂಬ ಪ್ರಯತ್ನದಲ್ಲಿ ಜೆಡಿಎಸ್‌ ಇದೆ. ತಮ್ಮನ್ನು ಕಡೆಗಣಿಸಿದ ಪಕ್ಷಗಳಿಗೆ ತಕ್ಕ ಪಾಠ ಕಲಿಸಬೇಕೆಂಬ ಹುಮ್ಮಸ್ಸಿನಲ್ಲಿ ಪಕ್ಷೇತರ ಅಭ್ಯರ್ಥಿ ಇದ್ದಾರೆ.

ಕ್ಷೇತ್ರದ ರಾಜಕೀಯ

ಸಿಂದಗಿ ವಿಧಾನಸಭಾ ಕ್ಷೇತ್ರ 1957 ರಿಂದ 1983ರ ವರೆಗೆ ಕಾಂಗ್ರೆಸ್‌ ಪಕ್ಷದ ಪ್ರಾಬಲ್ಯ ಹೊಂದಿತ್ತು. ನಂತರ 1985 ಚುನಾವಣೆಯಲ್ಲಿ ಜನತಾ ಪಾರ್ಟಿ, 1989ರಲ್ಲಿ ಕಾಂಗ್ರೆಸ್‌, 1994ರಲ್ಲಿ ಜೆಡಿಎಸ್‌, 1999ರಲ್ಲಿ ಕಾಂಗ್ರೆಸ್‌ ಹೀಗೆ ಒಂದು ಸಲ ಜನತಾ ಪರಿವಾರ ಇನ್ನೊಂದು ಸಲ ಕಾಂಗ್ರೆಸ್‌ ಹೀಗೆ ಕ್ಷೇತ್ರದ ಅಧಿಕಾರದ ಚುಕ್ಕಾಣಿ ಹಿಡಿದವು. ನಂತರ 2004, 2008, 2013ರಲ್ಲಿ ನಿರಂತರ 14 ವರ್ಷಗಳ ಕಾಲ ಬಿಜೆಪಿ ಅಕಾರದ ಚುಕ್ಕಾಣಿ ಹಿಡಿಯಿತು. ನಂತರ ಅನುಕಂಪದ ಅಲೆಯಲ್ಲಿ ಅಲ್ಪ ಮತಗಳಿಂದ ಕ್ಷೇತ್ರ ಬಿಜೆಪಿಯಿಂದ ತಪ್ಪಿತು. ಪುನಃ ಜೆಡಿಎಸ್‌ ಅಧಿಕಾರ ಚುಕ್ಕಾಣಿ ಹಿಡಿಯಿತು. ನಂತರ ಶಾಸಕ ಎಂ.ಸಿ. ಮನಗೂಳಿ ಅವರ ನಿಧನದಿಂದ ಕ್ಷೇತ್ರಕ್ಕೆ ಉಪ ಚುನಾವಣೆ ಬಂದೊದಗಿತು. 2023ರ ಸಾರ್ವತ್ರಿಕ ವಿಧಾನಸಭಾ ಚುನಾವಣೆಯಲ್ಲಿ ಅಧಿಕಾರ ಪಡೆಯಬೇಕೆಂದರೆ 2021ರ ಉಪ ಚುನಾವಣೆಯಲ್ಲಿ ಗೆದ್ದು ಪಾಸಾಗಬೇಕು. ಆದ್ದರಿಂದ 2021ರ ಉಪಚುನಾವಣೆಯಲ್ಲಿ ಬಿಜೆಪಿ, ಕಾಂಗ್ರೆಸ್‌ ಹಾಗೂ ಜೆಡಿಎಸ್‌ ನಡುವೆ ತ್ರಿಕೋನ ಸ್ಪರ್ಧೆ ಏರ್ಪಟ್ಟು ಚುನಾವಣೆ ರಂಗೇರಿದೆ.

Advertisement

ಬಿಜೆಪಿ, ಕಾಂಗ್ರೆಸ್‌, ಜೆಡಿಎಸ್‌ ಪಕ್ಷಗಳ ಘಟಾನುಘಟಿ ನಾಯಕರ ಪ್ರಚಾರ ಹಾಗೂ ತಂತ್ರಗಾರಿಗೆ ಎಷ್ಟರ ಮಟ್ಟಿಗೆ ಯಾರಿಗೆ ಸಾಥ್‌ ನೀಡುತ್ತದೆ ಎಂಬುದನ್ನು ಕಾಯ್ದು ನೋಡಬೇಕಿದೆ. ಮತ್ತೂಂದು ಕಡೆಯಲ್ಲಿ ಜೆಡಿಎಸ್‌ ಮುಸ್ಲಿಂ ಅಭ್ಯರ್ಥಿಯನ್ನು ಕಣಕ್ಕಿಳಿಸಿರುವುದು ಮತ ವಿಭಜನೆಗೂ ಅವಕಾಶ ಕೊಡುವ ಸಾಧ್ಯತೆ ಹೆಚ್ಚಿದೆ. ಈ ನಿಟ್ಟಿನಲ್ಲಿ ಮುಸ್ಲಿಂ ಮತಗಳನ್ನು ಕ್ರೊಢೀಕರಿಸಲು ಕಾಂಗ್ರೆಸ್‌ ಪಕ್ಷದ ನಾಯಕರು ಗಲ್ಲಿ ಗಲ್ಲಿಗಳಲ್ಲಿ ತಮ್ಮದೇ ಆದ ರೀತಿಯ ಪ್ರಚಾರ ನಡೆಸುವ ಮೂಲಕ ಮುಸ್ಲಿಂ ಮತಗಳು ಜೆಡಿಎಸ್‌ ಪಾಲಾಗದಂತೆ ಪ್ರಯತ್ನ ನಡೆಸುತ್ತಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ, ನಿಕಟಪೂರ್ವ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಅನುಷ್ಠಾನಗೊಳಿಸಿದ ಅಭಿವೃದ್ಧಿ ಕಾರ್ಯಗಳು, ನನ್ನ 10 ವರ್ಷದ ಅಧಿಕಾರದ ಅವಧಿಯಲ್ಲಿ ಕ್ಷೇತ್ರದಲ್ಲಿ ಮಾಡಿದ ಅಭಿವೃದ್ಧಿ ಕಾರ್ಯಗಳು ನನ್ನ ಗೆಲುವಿಗೆ ಶ್ರೀರಕ್ಷೆಯಾಗಲಿವೆ. ನನಗೆ ಕ್ಷೇತ್ರದಲ್ಲಿ ಕೆಲಸ ಮಾಡಲು ಕೂಲಿ ಕೆಲಸ ಕೊಡಿ. -ರಮೇಶ ಭೂಸನೂರ, ಬಿಜೆಪಿ ಅಭ್ಯರ್ಥಿ

ಕೇಂದ್ರ ಮತ್ತು ರಾಜ್ಯದಲ್ಲಿ ಕಾಂಗ್ರೆಸ್‌ ಅಧಿಕಾರದ ಅವಧಿಯಲ್ಲಿ ಮಾಡಿದ ಪ್ರಗತಿಪರ ಕಾರ್ಯಗಳು, ನನ್ನ ತಂದೆ ಶಾಸಕ ದಿ.ಎಂ.ಸಿ. ಮನಗೂಳಿ ಅವರು ಕ್ಷೇತ್ರಕ್ಕೆ ನೀಡಿದ ಕೊಡುಗೆಗಳನ್ನು ಮತದಾರರಿಗೆ ಮನವರಿಕೆ ಮಾಡಿ ಮತಯಾಚಿಸುತ್ತಿದ್ದು ನನಗೆ ಕ್ಷೇತ್ರದ ಜನತೆ ಮತ ನೀಡುವ ಮೂಲಕ ಆಶೀರ್ವದಿಸಿ ಗೆಲ್ಲಿಸುತ್ತಾರೆಂಬ ಸಂಪೂರ್ಣ ಭರವಸೆಯಿದೆ. -ಅಶೋಕ ಮನಗೂಳಿ, ಕಾಂಗ್ರೆಸ್‌ ಅಭ್ಯಥಿ ಸಿಂದಗಿ

ಕ್ಷೇತ್ರದ ಅಭಿವೃದ್ಧಿಯಲ್ಲಿ ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡರು, ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಅವರ ಕೊಡುಗೆ ಅಪಾರ. ಅವರ ಅವಧಿಯಲ್ಲಿ ಮಾಡಿದ ನೀರಾವರಿ ಯೋಜನೆ ಮುಂತಾದ ಅಭಿವೃದ್ಧಿ ಯೋಜನೆಗಳನ್ನು ಜನತೆ ಮರೆತಿಲ್ಲ. ಕ್ಷೇತ್ರದ ಮತದಾರರ ಆಶೀರ್ವಾದದಿಂದ ನಾನು ಕ್ಷೇತ್ರದ ಮೊದಲ ಶಾಸಕಿಯಾಗಿ ಆಯ್ಕೆಯಾಗುತ್ತೇನೆ. -ನಾಜಿಯಾ ಅಂಗಡಿ, ಜೆಡಿಎಸ್‌ ಅಭ್ಯರ್ಥಿ.

-ರಮೇಶ ಪೂಜಾರ

Advertisement

Udayavani is now on Telegram. Click here to join our channel and stay updated with the latest news.

Next