Advertisement

ವ್ಯಾಮೋಹವಿಲ್ಲದ ಸರಳ ಜೀವನ

01:13 AM Jan 13, 2021 | Team Udayavani |

ಸರಳ ಜೀವನ ನಡೆಸಲು ಆವಶ್ಯಕತೆ ಗಳೇನಿಲ್ಲ, ಅರ್ಹತೆಗಳಿಲ್ಲ. ನಾವು ಸರಳ ವಾಗಿ ಬದುಕುವುದು ಒಂದು ದಾರಿ; ಅದನ್ನು ಹೇರಿಕೊಳ್ಳುವುದು ಇನ್ನೊಂದು ದಾರಿ. ಒತ್ತಾಯಪೂರ್ವಕವಾಗಿ ಹೇರಿ ಕೊಂಡರೆ ಬದುಕು ಕಠಿನವಾಗುತ್ತದೆ. ಐಶಾರಾಮಿ ಬಂಗಲೆಯಲ್ಲಿದ್ದರೂ ಸರಳ, ವಿರಕ್ತ, ಅಂಟಿಕೊಳ್ಳದ ಜೀವನ ನಡೆಸಲು ಸಾಧ್ಯ.

Advertisement

ತ್ಸು ತ್ಸೆರಿಂಗ್‌ ಒಬ್ಬ ಸನ್ಯಾಸಿ. ಅವನ ಸರಳ ಜೀವನ, ವೈರಾಗ್ಯ ಗುಣಗಳ ಬಗ್ಗೆ ಆ ರಾಜ್ಯದ ಅರಸ ತುಂಬಾ ಕೇಳಿದ್ದ, ಅವನಿಂದ ಬಹಳ ಪ್ರಭಾವಿತನಾಗಿದ್ದ.

ಒಂದು ದಿನ ಆತ ತ್ಸೆರಿಂಗ್‌ನ ಆಶ್ರ ಮಕ್ಕೆ ಹೋಗಿ ವಂದಿಸಿದ. “ನೀವು ನನ್ನ ಜತೆಗೆ ಬರ ಬಾರದೇಕೆ? ಅರಮನೆಯಲ್ಲೇ ಇರ ಬಾರದೇಕೆ?’ ಎಂದು ಪ್ರಶ್ನಿಸಿದ.ತ್ಸೆರಿಂಗ್‌ “ಸರಿ’ ಎಂದು ಒಪ್ಪಿಕೊಂಡ. ಅಲ್ಲದೆ, “ಹೋಗುವುದು ಹೇಗೆ? ರಥ ಸಿದ್ಧವಾ ಗಿದೆಯೇ?’ ಎಂದು ಕೇಳಿದ.

ತ್ಸೆರಿಂಗ್‌ ಅರಮನೆಗೆ ಬರಲು ಒಪ್ಪಲಾರ ಎಂದು ದೊರೆಯ ಮನ ದಾಳದಲ್ಲಿತ್ತು. ಆದರೆ ಆತ ಒಂದೇಟಿಗೆ ಒಪ್ಪಿಕೊಂಡದ್ದು ನಿರಾಶೆ ಉಂಟು ಮಾಡಿತು. ಪ್ರಯಾಣಕ್ಕಾಗಿ ರಥವನ್ನು ಕೇಳಿದ್ದು ಸಂಶಯವನ್ನೂ ಮೂಡಿಸಿತು.

ಅರಸ ಮತ್ತು ತ್ಸೆರಿಂಗ್‌ ರಥವನ್ನೇರಿ ದರು. ಸನ್ಯಾಸಿ ಪ್ರಯಾಣವನ್ನು ಆನಂದಿ ಸುತ್ತಿದ್ದರೆ ದೊರೆಯ ಮನಸ್ಸಿನಲ್ಲಿ ಬೇಗುದಿ. ತ್ಸೆರಿಂಗ್‌ನ ಖುಷಿ ಹೆಚ್ಚುತ್ತಿ ದ್ದಂತೆ ಅರಸನ ಮುಖ ಕಳೆಗುಂದುತ್ತಿತ್ತು. ಸನ್ಯಾಸಿ ಉತ್ಸಾಹದಲ್ಲಿದ್ದರೆ ದೊರೆ ದುಃಖದಿಂದಿದ್ದ.

Advertisement

ಅರಮನೆಯಲ್ಲಿ ಸನ್ಯಾಸಿ ಸಕಲ ಸೌಕರ್ಯಗಳುಳ್ಳ ಕೊಠಡಿಯನ್ನು ವಾಸಕ್ಕೆ ಆರಿಸಿಕೊಂಡ. ಚೆನ್ನಾಗಿ ಉಂಡು ತಿಂದು ಸಂತೋಷದಿಂದ ದಿನಗಳೆಯ ತೊಡಗಿದ. ದಿನಗಳು ಕಳೆಯುತ್ತಿದ್ದಂತೆ ಅರಸನ ಬೇಗುದಿ ಮೇರೆ ಮೀರುತ್ತಿತ್ತು. “ಈತ ವಿರಾಗಿ ಎಂದು ಎಷ್ಟು ಸುಲಭ ವಾಗಿ ನಂಬಿಬಿಟ್ಟೆ, ಎಷ್ಟು ಚೆನ್ನಾಗಿ ನನ್ನನ್ನು ಮೋಸಗೊಳಿಸಿದ’ ಎಂದೆಲ್ಲ ದೊರೆ ದಿನವೂ ಆಲೋಚಿಸುತ್ತಿದ್ದ.

ಕೊನೆಗೊಂದು ದಿನ ಅರಸನಿಗೆ ತಡೆಯದಾಯಿತು. ಆ ದಿನ ಸನ್ಯಾಸಿ ಬೆಳಗ್ಗೆ ಉದ್ಯಾನದಲ್ಲಿ ನಡೆದಾಡುತ್ತಿದ್ದ. ರಾಜ ಅಲ್ಲಿಗೆ ಆಗಮಿಸಿ ತ್ಸೆರಿಂಗ್‌ನನ್ನು ಉದ್ದೇಶಿಸಿ “ನನಗೆ ನಿಮ್ಮಲ್ಲಿ ಮಾತನಾ ಡುವುದಿದೆ’ ಎಂದ.

ತ್ಸೆರಿಂಗ್‌ ಹೇಳಿದ, “ನೀನು ಹೇಳಲಿ ರುವುದು ಏನು ಎಂಬುದು ನನಗೆ ಯಾವಾಗಲೋ ಗೊತ್ತಾಗಿದೆ. ನಿಜ ಹೇಳ ಬೇಕು ಎಂದರೆ, ನಾನು ಅರಮನೆಗೆ ಬರಲು ಒಪ್ಪಿಕೊಂಡಾಗಲೇ ನಿನ್ನ ಮನಸ್ಸಿನ ಒಳಗೆ ಸಂಶಯದ ಹುಳು ಹೊಕ್ಕಿತ್ತು. ಆದರೆ ಅದನ್ನು ಹೇಳಲು ಇಷ್ಟು ಸಮಯ ಕಾದದ್ದೇಕೆ? ನೀನು ಕೇಳಲಿರುವುದು ಏನು ಎಂಬುದು ನನಗೆ ಗೊತ್ತಿದೆ. ಆದರೂ ಅದು ನಿನ್ನ ಬಾಯಿಯಿಂದಲೇ ಬರಲಿ, ಹೇಳು…’

“ನೀವು ಎಲ್ಲವನ್ನೂ ಪರಿತ್ಯಜಿಸಿದವರು, . ವಿರಾಗಿ ಎಂದು ನಂಬಿದ್ದೆ. ಆದರೆ ಈಗ ನನಗೂ ನಿಮಗೂ ವ್ಯತ್ಯಾಸವೇನು ಉಳಿದಿದೆ? ನೀವು ವಿಲಾಸಿ ಜೀವನವನ್ನು ನನಗಿಂತ ಚೆನ್ನಾಗಿ ಅನುಭವಿಸುತ್ತಿದ್ದೀರಿ. ನನಗೆ ನಿಮ್ಮ ಬಗ್ಗೆ ತುಂಬಾ ನಿರಾಶೆಯಾಗಿದೆ’ ದೊರೆ ಹೇಳಿದ.

ತ್ಸು ತ್ಸೆರಿಂಗ್‌ ಗಹಗಹಿಸಿ ನಕ್ಕು, “ನಾನು ಮಾತಿನಲ್ಲಿ ಉತ್ತರಿಸುವುದಿಲ್ಲ. ನೀನು ನನ್ನ ಹಿಂದೆ ಬಾ’ ಎಂದ.

ತ್ಸು ತ್ಸೆರಿಂಗ್‌ ಅರಮನೆಯಿಂದ ಹೊರಗೆ ಹೊರಟ. ಅರಸ ಹಿಂಬಾಲಿ ಸಿದ. ಅವರು ನಗರವನ್ನು ದಾಟಿದರು, ಬಹುದೂರ ನಡೆದು ಆ ರಾಜ್ಯದ ಗಡಿ ಯನ್ನು ತಲುಪಿದರು. ಅಲ್ಲಿ ತ್ಸೆರಿಂಗ್‌ ದೊರೆಯನ್ನು ಉದ್ದೇಶಿಸಿ ಹೇಳಿದ, “ನಾನೀಗ ನಿನ್ನ ಅರಮನೆ ಮಾತ್ರವಲ್ಲ, ನಿನ್ನ ರಾಜ್ಯವನ್ನೇ ತ್ಯಜಿಸಿ ಹೋಗಲಿದ್ದೇನೆ. ಈಗಲೂ ನನ್ನನ್ನು ಅನುಸರಿಸಲು ನಿನಗೆ ಸಾಧ್ಯವಿದೆಯೇ?’

ದೊರೆ ಅರಮನೆಯನ್ನು, ರಾಜ್ಯ ವನ್ನು ಬಿಟ್ಟು ಬಿಡುವುದೇ! ತ್ಸೆರಿಂಗ್‌ ಏನೋ ರಾಜ್ಯದ ಗಡಿಯನ್ನು ದಾಟಿ ಹೋದನು. ಅವನಿಗೆ ಆಶ್ರಮ ಅಥವಾ ಅರಮನೆಯ ಹಂಗೇ ಇರಲಿಲ್ಲ. ಆದರೆ ರಾಜನಿಗೆ ಅರಮನೆ, ವಿಲಾಸಿ ಜೀವನವೇ ಸರ್ವಸ್ವ. ಸರಳ ಬದುಕು ಎಂದರೇನು ಎಂಬುದು ರಾಜನಿಗೀಗ ಅರ್ಥವಾ ಯಿತು. ತ್ಸೆರಿಂಗ್‌ನ ಶ್ರೇಷ್ಠತೆ ಏನು ಎಂಬ ಅರಿವು ಅರಸನಿಗಾಯಿತು. ಆದರೆ ಕಾಲ ಮಿಂಚಿತ್ತು.

 (ಸಾರ ಸಂಗ್ರಹ)

Advertisement

Udayavani is now on Telegram. Click here to join our channel and stay updated with the latest news.

Next