Advertisement

ಧರ್ಮಕ್ಕೆ ಸರಳ ವ್ಯಾಖ್ಯಾನ ನೀಡಿದ ಭಾರತ

12:32 PM Apr 16, 2017 | Harsha Rao |

ಉಡುಪಿ: ಸತ್ಯವೇ ಧರ್ಮ, ತನಗೆ ಬೇಡವಾದದ್ದನ್ನು ಯಾರಿಗೂ ಕೊಡಬೇಡ, ಪುಣ್ಯ ಸಂಪಾದನೆ ಬೇಕೋ ಪರೋಪಕಾರ ಮಾಡು ಇತ್ಯಾದಿ ಸರಳವಾದ ವ್ಯಾಖ್ಯಾನವನ್ನು ಧರ್ಮದ ಕುರಿತು ನೀಡಿದ ದೇಶ ಭಾರತ. ಭಾರತದ ಪ್ರಾಣವೇ ಭಕ್ತಿ ಮತ್ತು ಜ್ಞಾನ ಎಂದು ಬೆಂಗಳೂರು ಕೈಲಾಸಾಶ್ರಮದ ಶ್ರೀ ಜಯೇಂದ್ರಪುರಿ ಸ್ವಾಮೀಜಿಯವರು ಹೇಳಿದರು. 

Advertisement

12 ವರ್ಷ ಸತ್ಯ ಹೇಳಿದರೆ…?
ಶ್ರೀಕೃಷ್ಣಮಠದ ರಾಜಾಂಗಣದಲ್ಲಿ ಶನಿವಾರ ಪರ್ಯಾಯ ಶ್ರೀಪೇಜಾವರ ಮಠದ ಆಶ್ರಯದಲ್ಲಿ ಆರಂಭಗೊಂಡ ವಸಂತ ಮಾಸದ ಸಂತ ಸಂದೇಶ ಮಾಲೆಯಲ್ಲಿ ಮೊದಲ ದಿನ ಸಂದೇಶವನ್ನು ನೀಡಿದ ಸ್ವಾಮೀಜಿಯವರು, 12 ವರ್ಷ ಪೂರ್ಣವಾಗಿ ಸತ್ಯವನ್ನೇ ಹೇಳಿದರೆ 13ನೆಯ ವರ್ಷದ ಮೊದಲ ದಿನದಿಂದ ಅವರು ಹೇಳಿದ್ದೇ ಆಗುತ್ತದೆ. ಆದ್ದರಿಂದ ಹಿಂದೆ ಋಷಿಗಳು ಹೇಳಿದ್ದೇ ಭವಿಷ್ಯವಾಗಿತ್ತು. ಈಗಲೂ ನಾವು ಭವಿಷ್ಯವನ್ನು ಹೇಳುವುದು ಎಂದು ಹೇಳುವುದಿದೆ ಎಂದರು. 

ಭೂಮಂಡಲದ ಸಮತೋಲನ
ಸೂರ್ಯ, ಚಂದ್ರ ಸಮಯಕ್ಕೆ ಸರಿಯಾಗಿ ಸುತ್ತುವುದು, ಋತುವಿಗೆ ಸರಿಯಾಗಿ ಮಳೆ, ಚಳಿ, ಬೇಸಗೆ ಕಾಲ ಬರುವುದು ಒಟ್ಟಾರೆಯಾಗಿ ಸಮಗ್ರ ಭೂಮಂಡಲ ಸಮತೋಲನದಲ್ಲಿ ನಿಂತಿರುವುದು ಧರ್ಮದಿಂದ. ಕಷ್ಟ ಬಂದಾಗ ವೆಂಕಟರಮಣ ಎಂದು ಹೇಳುವ ನಾವು ಭಗವಂತ ನಮ್ಮಿಂದ ಏನನ್ನು ನಿರೀಕ್ಷೆ ಮಾಡುತ್ತಾನೆಂದು ತಿಳಿದದ್ದು ಇದೆಯೆ ಎಂದು ಸ್ವಾಮೀಜಿ ಪ್ರಶ್ನಿಸಿದರು. 

ಧರ್ಮನಿರಪೇಕ್ಷ-ಸಾಪೇಕ್ಷ
ಕೆಲವರು ಧರ್ಮನಿರಪೇಕ್ಷ ಎಂದು ಹೇಳುವುದಿದೆ. ಧರ್ಮ ಯಾವತ್ತೂ ಸಾಪೇಕ್ಷ. ಧರ್ಮ ಇಲ್ಲದೆ ಬದುಕುವುದು ಹೇಗೆ? ವೇದವ್ಯಾಸರು ಒಂದು ಕಡೆ “ನಿನಗೆ ಯಾವುದು ಹಿಡಿಸುವುದಿಲ್ಲವೋ ಅದನ್ನು ಇತರರಿಗೆ ಮಾಡಬೇಡ’ ಎಂದು ಹೇಳಿದ್ದರು. ಇತರರು ಮೋಸ ಮಾಡುವುದು, ಜಗಳ ಮಾಡುವುದು ನಿನಗೆ ಹಿಡಿಸುವುದಿಲ್ಲವಾದರೆ ನೀನು ಅದನ್ನು ಇತರರಿಗೆ ಮಾಡಬೇಡ ಎಂದರ್ಥ. ಪುಣ್ಯ ಸಂಪಾದನೆ ಮಾಡಬೇಕೆಂದರೆ ಪರೋಪಕಾರ ಮಾಡು ಎನ್ನುವ ಮಾತು ಎಷ್ಟು ಸರಳ ಎಂದು ಸ್ವಾಮೀಜಿ ಹೇಳಿದರು. 

ತಮ್ಮಂತೆ ಪರರ ಬಗೆದೊಡೆ…
ತಮ್ಮಂತೆ ಇತರರನ್ನು ಕಾಣಬೇಕು. ಮತ್ತೂಬ್ಬರ ದುಃಖಕ್ಕೆ ಸ್ಪಂದಿಸುವುದೇ ಪೂಜೆ ಎಂದು ತಿಳಿಸಿದ ಶ್ರೀಪೇಜಾವರ ಶ್ರೀಗಳು, ಶಿವ ಬೇರೆಯವರಿಗೆ ಅಮೃತ ಉಣಿಸಲು ತಾನು ವಿಷ ಕುಡಿದ. ಆದರೆ ನಾವು ಅಮೃತ ಉಣ್ಣಲು ಇತರರಿಗೆ ವಿಷ ಕುಡಿಸುತ್ತಿದ್ದೇವೆ ಎಂದರು. 
ಶ್ರೀಪೇಜಾವರ ಕಿರಿಯ ಶ್ರೀಗಳು ಆಶೀರ್ವಚನ ನೀಡಿದರು. ವಾಸುದೇವ ಭಟ್‌ ಕಾರ್ಯಕ್ರಮ ನಿರ್ವಹಿಸಿದರು. 

Advertisement
Advertisement

Udayavani is now on Telegram. Click here to join our channel and stay updated with the latest news.

Next