ಬೀಜಿಂಗ್: ರೊಮೇನಿಯಾದ ಸಿಮೋನಾ ಹಾಲೆಪ್ ಮೊದಲ ಬಾರಿಗೆ ವಿಶ್ವದ ನಂ.1 ಟೆನಿಸ್ ಆಟಗಾರ್ತಿಯಾಗಿ ಮೂಡಿಬಂದಿದ್ದಾರೆ.
ಚೀನ ಓಪನ್ ವನಿತಾ ಸಿಂಗಲ್ಸ್ ಫೈನಲ್ ಪ್ರವೇಶಿಸಿದ ಸಾಧನೆಯಿಂದಾಗಿ ಹಾಲೆಪ್ ಈ ಎತ್ತರ ತಲುಪಿದರು. ಸೆ#àನಿನಾ ಗಾರ್ಬಿನ್ ಮುಗುರುಜಾ ಅಗ್ರಸ್ಥಾನದಿಂದ ಕೆಳಗಿಳಿದರು. ನೂತನ ಅಧಿಕೃತ ರ್‍ಯಾಂಕಿಂಗ್ ಯಾದಿ ಸೋಮವಾರ ಪ್ರಕಟಗೊಳ್ಳಲಿದೆ.
ಚೀನ ಓಪನ್ ಸೆಮಿಫೈನಲ್‌ನಲ್ಲಿ ಸಿಮೋನಾ ಹಾಲೆಪ್ 6-2, 6-4 ಅಂತರದಿಂದ ಲಾತ್ವಿಯಾದ ಜೆಲೆನಾ ಒಸ್ಟಾಪೆಂಕೊ ಅವರಿಗೆ ಸೋಲುಣಿಸಿದರು. ಇದರಿಂದ ಫ್ರೆಂಚ್ ಓಪನ್ ಫೈನಲ್‌ನಲ್ಲಿ ಅನುಭವಿಸಿದ ಸೋಲಿಗೆ ಹಾಲೆಪ್ ಸೇಡು ತೀರಿಸಿಕೊಂಡಂತಾಯಿತು.
26ರ ಹರೆಯದ ಹಾಲೆಪ್ ನಂ.2 ಸ್ಥಾನದೊಂದಿಗೆ ಚೀನ ಓಪನ್ ಆಡಲಿಳಿದಿದ್ದರು. ರವಿವಾರದ ಫೈನಲ್‌ನಲ್ಲಿ ಅವರು ಫ್ರಾನ್ಸ್‌ನ ಕ್ಯಾರೋಲಿನ್ ಗಾರ್ಸಿಯಾ ಸವಾಲನ್ನು ಎದುರಿಸಲಿದ್ದಾರೆ. ಇನ್ನೊಂದು ಸೆಮಿಫೈನಲ್‌ನಲ್ಲಿ ಗಾರ್ಸಿಯಾ ಜೆಕ್ ಗಣರಾಜ್ಯದ ಪೆಟ್ರಾ ಕ್ವಿಟೋವಾ ಅವರನ್ನು 6-3, 7-5 ಅಂತರದಿಂದ ಮಣಿಸಿದರು. ಹಾಲೆಪ್ ಈವರೆಗೆ ಯಾವುದೇ ಗ್ರ್ಯಾನ್‌ಸ್ಲಾಮ್ ಪ್ರಶಸ್ತಿ ಗೆಲ್ಲದೆ ವಿಶ್ವದ ಅಗ್ರಸ್ಥಾನಿಯಾಗಿ ಮೂಡಿಬರುತ್ತಿರುವುದೊಂದು ವಿಶೇಷ.
ಪ್ರಶಸ್ತಿ ಸುತ್ತಿಗೆ ನಡಾಲ್: ಪುರುಷರ ಸಿಂಗಲ್ಸ್‌ನಲ್ಲಿ ಸ್ಪೇನಿನ ರಫೆಲ್ ನಡಾಲ್ ಪ್ರಶಸ್ತಿ ಸುತ್ತಿಗೆ ನೆಗೆದಿದ್ದಾರೆ. ಸೆಮಿಫೈನಲ್‌ನಲ್ಲಿ ಅವರು ಬಲ್ಗೇರಿಯಾದ ಗ್ರಿಗರ್ ಡಿಮಿಟ್ರೋವ್ ವಿರುದ್ಧ 6-3, 4-6, 6-1 ಅಂತರದಿಂದ ಗೆದ್ದು ಬಂದರು. ಜರ್ಮನಿಯ ಅಲೆಕ್ಸಾಂಡರ್ ಜ್ವೆರೇವ್ ಅಥವಾ ಆಸ್ಟ್ರೇಲಿಯದ ನಿಕ್ ಕಿರ್ಗಿಯೋಸ್ ವಿರುದ್ಧ ನಡಾಲ್ ಫೈನಲ್ ಸ್ಪರ್ಧೆ ನಡೆಯಲಿದೆ.