Advertisement

ಈಗಲೂ ಸಕ್ರಿಯವಾಗಿದೆಯೇ ಸಿಮಿ? ಭಾರತವನ್ನು ಇಸ್ಲಾಂ ದೇಶ ಮಾಡಲು ಹೊರಟಿದ್ದ ಸಿಮಿ

09:55 PM Jan 18, 2023 | Team Udayavani |

ನವದೆಹಲಿ: ಹಲವಾರು ವರ್ಷಗಳ ಹಿಂದೆಯೇ ನಿಷೇಧಕ್ಕೊಳಗಾಗಿರುವ “ಸಿಮಿ’ ಸಂಘಟನೆಯ ಸದಸ್ಯರು ಈಗಲೂ ಬೇರೆ ಬೇರೆ ಹೆಸರುಗಳ ಸಂಘಟನೆಗಳೊಂದಿಗೆ ಸಕ್ರಿಯವಾಗಿದ್ದಾರೆ ಎಂಬ ಅಂಶವನ್ನು ಸುಪ್ರೀಂಕೋರ್ಟ್‌ಗೆ ಕೇಂದ್ರ ಸರ್ಕಾರ ಸಲ್ಲಿಸಿರುವ ಅಫಿಡವಿಟ್‌ನಲ್ಲಿ ಉಲ್ಲೇಖಿಸಲಾಗಿದೆ.

Advertisement

2019ರಲ್ಲಿ ಸಿಮಿ ಸಂಘಟನೆಯನ್ನು ಕಾನೂನುಬಾಹಿರ ಚಟುವಟಿಕೆಗಳ ನಿಯಂತ್ರಣ ಕಾಯ್ದೆ – 1967ರಂತೆ ನಿಷೇಧಿಸಲಾಗಿದ್ದು, ಇದನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಕೆ ಮಾಡಲಾಗಿದೆ. ಈ ಸಂಬಂಧ ನ್ಯಾ.ಕಿಶನ್‌ ಕೌಲ್‌ ಅವರ ನೇತೃತ್ವದ ಪೀಠವು ವಿಚಾರಣೆ ನಡೆಸುತ್ತಿದ್ದು, ಕೇಂದ್ರ ಸರ್ಕಾರವು ನಿಷೇಧ ಮಾಡಿದ್ದು ಏಕೆ ಎಂದು ಸಮರ್ಥಿಸಿ ಅಫಿಡವಿಟ್‌ ಸಲ್ಲಿಸಿದೆ.

ತಮಿಳುನಾಡು, ಕರ್ನಾಟಕ, ಕೇರಳ, ಉತ್ತರ ಪ್ರದೇಶ, ದೆಹಲಿ, ಗುಜರಾತ್‌, ಆಂಧ್ರ ಪ್ರದೇಶ, ಬಿಹಾರ, ಮಧ್ಯಪ್ರದೇಶ, ಮಹಾರಾಷ್ಟ್ರ, ರಾಜಸ್ಥಾನ ಮತ್ತು ಪಶ್ಚಿಮ ಬಂಗಾಳದಲ್ಲಿ ಸಿಮಿ ಸದಸ್ಯರು ಬೇರೆ ಬೇರೆ ಹೆಸರುಗಳೊಂದಿಗೆ ಪುನರ್‌ಸಂಘಟಿತರಾಗುತ್ತಿದ್ದಾರೆ. ಕರ್ನಾಟಕದಲ್ಲಿ ಇಂಡಿಯನ್‌ ಮುಜಾಹಿದೀನ್‌ ಮತ್ತು ಅನ್ಸಾರುಲ್ಲಾ ಎಂಬ ಬೇರೆ ಹೆಸರುಗಳಿಂದಲೂ ಸಿಮಿ ಕಾರ್ಯಕರ್ತರು ಪುನರ್‌ ಸಂಘಟಿತರಾಗಿದ್ದಾರೆ ಎಂದೂ ಕೋರ್ಟ್‌ಗೆ ಹೇಳಿದೆ.

ಹಾಗೆಯೇ, “ಇಸ್ಲಾಂ ವಿರುದ್ಧದ ಬೆದರಿಕೆಗಳನ್ನು ಎದುರಿಸಲು ಕೇರಳದ ‘ಕರುಣಾ ಫೌಂಡೇಶನ್‌’ ಅನ್ನು ಮಾಜಿ ಸಿಮಿ ಸದಸ್ಯರು ಬಳಸಿದ್ದಾರೆ ಎಂದು ಹೇಳಲಾಗುತ್ತಿದೆ. ‘ಅಮಾನತ್‌ ಫೌಂಡೇಶನ್‌’ ಎಂಬ ಮತ್ತೂಂದು ಸಂಘಟನೆ ಕೂಡ ಸಿಮಿ ಪರ ಒಲವು ತೋರಿಸಿದೆ. ಅಖೀಲ ಭಾರತ ಮಟ್ಟದಲ್ಲಿ ಸಿಮಿಯನ್ನು ‘ತಹ್ರೀಕ್‌-ಇ-ಇಹ್ಯಾ-ಎ-ಉಮ್ಮತ್‌’, ‘ತೆಹ್ರೀಕ್‌-ತಲಾಬಾ-ಎ-ಅರೇಬಿಯಾ’  ‘ತೆಹ್ರಿಕ್‌ ತಹಫ‌ು#ಜ್‌-ಶಯರ್‌ ಇಸ್ಲಾಂ’ ಸೇರಿದಂತೆ ವಿವಿಧ ಹೆಸರುಗಳಲ್ಲಿ ಮರುಸಂಘಟಿಸಲಾಗಿದೆ. ಇದಲ್ಲದೆ, ಮೂರು ಡಜನ್‌ಗೂ ಹೆಚ್ಚು ಇತರ ಮುಂಚೂಣಿ ಸಂಘಟನೆಗಳು ಸಿಮಿಯನ್ನು ಮುಂದುವರಿಸುತ್ತಿವೆ’ ಎಂದು ಕೇಂದ್ರ ಸರ್ಕಾರ ಹೇಳಿದೆ.

ಜತೆಗೆ ಸಿಮಿಯ ಧ್ಯೇಯೋದ್ಧೇಶಗಳು ಸಂವಿಧಾನ ಬಾಹಿರವಾಗಿದ್ದವು. ಇದರ ಪ್ರಮುಖ ಗುರಿಯು ಮುಸ್ಲಿಂ ಯುವಕರು ಮತ್ತು ವಿದ್ಯಾರ್ಥಿಗಳನ್ನು ಸಂಘಟಿಸಿ, ಜಿಹಾದ್‌ಗಾಗಿ ಹೋರಾಟ ಮಾಡಲು ತಯಾರು ಮಾಡುವುದಾಗಿತ್ತು. ಇಸ್ಲಾಮಿ ಇಂಕಿಲಾಬ್‌ ಮೂಲಕ ಶರಿಯತ್‌ ಆಧಾರಿತ ಇಸ್ಲಾಮಿಕ್‌ ನಿಯಮಗಳನ್ನು ಜಾರಿಗೆ ತರಲು ಹೊರಟಿತ್ತು. ಈ ಸಂಘಟನೆಯು ಭಾರತದ ಸಂವಿಧಾನ ಸೇರಿದಂತೆ ಯಾವುದೇ ಸಂಸ್ಥೆಗಳು ಹಾಗೂ ಭಾರತದ ಜಾತ್ಯತೀತ ಮೌಲ್ಯಗಳ ಮೇಲೂ ನಂಬಿಕೆ ಇರಲಿಲ್ಲ ಎಂದು ಹೇಳಿದೆ. ಅಲ್ಲದೆ, ಮೂರ್ತಿ ಪೂಜೆಯನ್ನು ಪಾಪವೆಂದು ಪರಿಗಣಿಸಿ, ಇಂಥ ಪದ್ಧತಿಗಳನ್ನು ಕೊನೆಗಾಣಿಸಬೇಕು ಎಂದು ಹೊರಟಿತ್ತು ಎಂದಿದೆ.

Advertisement

ಎಚ್‌ಎಂ, ಎಲ್‌ಇಟಿ ಉಗ್ರರಿಗೆ ನೆರಳು
ಸಿಮಿಗೆ ಗಲ್ಫ್ ದೇಶಗಳಿಂದ ಹಣಕಾಸಿನ ಸಹಾಯ ಸಿಗುತ್ತಿತ್ತು. ಹಾಗೆಯೇ, ಪಾಕಿಸ್ತಾನ, ಆಫ್ಘಾನಿಸ್ತಾನ, ಸೌದಿ ಅರೆಬಿಯ, ಬಾಂಗ್ಲಾದೇಶ ಮತ್ತು ನೇಪಾಳದ ಸದಸ್ಯರ ಜತೆಗೂ ಸಂಪರ್ಕದಲ್ಲಿತ್ತು. ಭಯೋತ್ಪಾದನಾ ಸಂಘಟನೆಗಳಾದ ಹಿಜ್‌ಬುಲ್‌ ಮುಜಾಹಿದೀನ್‌ ಮತ್ತು ಲಷ್ಕರ್‌ ಎ ತೊಯ್ಬಾ ಸಂಘಟನೆಗಳು ತಮ್ಮ ಉಗ್ರರನ್ನು ಸಿಮಿ ಸಂಘಟನೆಯೊಳಗೆ ತೂರಿಸಿ ದೇಶದ್ರೋಹಿ ಕೆಲಸಗಳನ್ನು ಮಾಡಿಸುತ್ತಿದ್ದವು ಎಂದು ಅಫಿಡವಿಟ್‌ನಲ್ಲಿ ಉಲ್ಲೇಖೀಸಲಾಗಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next