Advertisement

ಮುದ್ದು ಮಕ್ಕಳ ಜಾತ್ರೆಗೆ ಸಹಸ್ರ ಭಕ್ತ ದರ್ಶನ

11:37 PM Aug 17, 2019 | Team Udayavani |

ಹೆಬ್ರಿ: ಉಡುಪಿ ತಾಲೂಕಿನ ಪೆರ್ಡೂರು ಶ್ರೀ ಅನಂತಪದ್ಮನಾಭ ಸ್ವಾಮಿ ದೇವಸ್ಥಾನದಲ್ಲಿ ಆ. 17 ಸಿಂಹ ಸಂಕ್ರಮಣ ಮದುಮಕ್ಕಳ ಜಾತ್ರೆ ಎಂದೇ ಪ್ರಸಿದ್ಧಿಯಾಗಿದ್ದು, ಮದುಮಕ್ಕಳು ಸೇರಿದಂತೆ ಸಹಸ್ರಾರು ಭಕ್ತರು ದೇವರ ದರ್ಶನ ಪಡೆದರು.

Advertisement

ಬೆಳಗ್ಗೆ 4 ಗಂಟೆಯಿಂದ ಸರತಿ ಸಾಲಿನಲ್ಲಿ ಜನಕಂಡು ಬಂದರೂ ಕಳೆದ ವರ್ಷದಷ್ಟು ಜನಸಾಗರವಿರಲಿಲ್ಲ. ಉಡುಪಿ ಜಿಲ್ಲೆಯಿಂದ ಮಾತ್ರವಲ್ಲದೆ ದಕ್ಷಿಣ ಕನ್ನಡ, ಶಿವಮೊಗ್ಗ, ಚಿಕ್ಕಮಗಳೂರು, ಜಿಲ್ಲೆಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಶ್ರೀ ಕ್ಷೇತ್ರದ ದರ್ಶನಕ್ಕೆ ಬರುವುದು ಇಲ್ಲಿಯ ವಿಶೇಷವಾಗಿದ್ದರೂ ಈ ಬಾರಿ ಶಿವಮೊಗ್ಗ, ಚಿಕ್ಕಮಗಳೂರು ಹಾಗೂ ಬೈಂದೂರು ಪ್ರದೇಶದಿಂದ ಭಕ್ತರ ಸಂಖ್ಯೆ ಕಡಿಮೆ ಇತ್ತು. 12 ಸಂಕ್ರಮಣಗಳೂ ಇಲ್ಲಿ ವಿಶೇಷ. ಸಿಂಹ ಸಂಕ್ರಮಣ ಮದುಮಕ್ಕಳ ಜಾತ್ರೆ ಎಂದು ಪ್ರಸಿದ್ಧಿ ಪಡೆದಿದ್ದು, ಹೊಸದಾಗಿ ಮದುವೆ ಯಾದ ಮದುಮಕ್ಕಳು ದೇವರ ದರ್ಶನ ಮಾಡಿ ಹೋಗುವ ಸಂಪ್ರದಾಯವಿದೆ.

ಧಾರ್ಮಿಕ ಕಾರ್ಯಕ್ರಮ, ಅನ್ನಸಂತರ್ಪಣೆ

ಸಿಂಹ ಸಂಕ್ರಮಣ ಅಂಗವಾಗಿ ಸತ್ಯನಾರಾಯಣ ಪೂಜೆ ಮೊದಲಾದ ಧಾರ್ಮಿಕ ಕಾರ್ಯಕ್ರಮಗಳು ಅರ್ಚಕ ಜಗದೀಶ್‌ ಅಡಿಗ ಅವರ ನೇತೃತ್ವದಲ್ಲಿ ನಡೆದವು. ಮಧ್ಯಾಹ್ನ ನಡೆದ ಅನ್ನಸಂತರ್ಪಣೆಯಲ್ಲಿ ಸುಮಾರು 8 ಮಂದಿ ಸಾವಿರ ಭಕ್ತರು ಅನ್ನ ಪ್ರಸಾದ ಸೇವಿಸಿದರು.

ಸರತಿಯಲ್ಲಿ ನಿಂತು ದೇವರ ದರ್ಶನ ಪಡೆಯುವಾಗ ನೂಕುನುಗ್ಗಲಿನ ಮತ್ತು ಮಳೆಯ ಸಮಸ್ಯೆಯಾಗದಂತೆ ದೇವಸ್ಥಾನ ಒಳಾಂಗಣದ ಸುತ್ತ ತಗಡಿನ ಚಪ್ಪರ ವ್ಯವಸ್ಥೆ ಮಾಡಲಾಗಿತ್ತು. ಈ ಬಾರಿ ಮಳೆ ಕಡಿಮೆ ಇರುವುದರಿಂದ ಸಮಸ್ಯೆಯಾಗಲಿಲ್ಲ. ಟ್ರಾಫಿಕ್‌ ಸಮಸ್ಯೆ ನೀಗಸಲು ಹಿರಿಯಡಕ ಹಾಗೂ ಬ್ರಹ್ಮಾವರ ಸರ್ಕಲ್ ಠಾಣೆಗಳಿಂದ ವಿಶೇಷ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ. ಭಕ್ತರು ಸರತಿ ಸಾಲಿನಲ್ಲಿ ಸಾಗುವಲ್ಲೂ ಊರಿನವರು ಹಾಗೂ ಸಂಘ ಸಂಸ್ಥೆಯ ನೆರವಿನಿಂದ ಹೋಮ್‌ ಗಾರ್ಡ್‌ ವ್ಯವಸ್ಥೆ ಮಾಡಲಾಗಿತ್ತು ಎಂದು ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಪ್ರಮೋದ್‌ ರೈ ಪಳಜೆ ಹೇಳಿದ್ದಾರೆ.

Advertisement

ದೇವಸ್ಥಾನದ ಕಾರ್ಯ ನಿರ್ವಹಣಾಧಿಕಾರಿ ಕೆ. ರಾಜಗೋಪಾಲ ಉಪಾಧ್ಯಾಯ, ವ್ಯವಸ್ಥಾಪನ ಸಮಿತಿಯ ಸದಸ್ಯರಾದ ಶಿವರಾಮ ಶೆಟ್ಟಿ ಬುಕ್ಕಿಗುಡ್ಡೆ, ರಾಜ್‌ಕುಮಾರ್‌ ಶೆಟ್ಟಿ ದೊಡ್ಮನೆ, ದಿನೇಶ್‌ ಪೂಜಾರಿ ಗರಡಿಮನೆ, ರಾಜು ಮೂಲ್ಯ ಬಣ್ಣಂಪಳ್ಳಿ, ರಾಮಯ್ಯ ನಾಯ್ಕ ಮಟ್ಟಿಬೈಲು, ಶುಭಲಕ್ಷ್ಮೀ ಭಂಡಾರ್‌ಕರ್‌ ಪೆರ್ಡೂರು, ಆಶಾ ಜಿ. ಭಂಡಿ ಪೆರ್ಡೂರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next