ದೇಶದಲ್ಲಿ ಸಿಮ್ ಕಾರ್ಡ್‌ಗಳನ್ನು ಬಳಸಿ ನಡೆಸುತ್ತಿರುವ ವಂಚನೆಗಳಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಸಿಮ್‌ಗಳ ಖರೀದಿ ಮತ್ತು ಮಾರಾಟಕ್ಕೆ ಸರ್ಕಾರ ಕೆಲ ನಿರ್ಬಂಧಗಳನ್ನು ವಿಧಿಸಿದೆ. ಅಲ್ಲದೇ, ನಿಯಮಗಳನ್ನೂ ಕಠಿಣಗೊಳಿಸಿದೆ. ದೂರಸಂಪರ್ಕ ಇಲಾಖೆಯು ಈ ಸಂಬಂಧಿಸಿದಂತೆ ರೂಪಿಸಿರುವ ನಿಯಮಗಳನ್ನು ಡಿಸೆಂಬರ್ 1 ರಿಂದ ಜಾರಿಗೊಳಿಸಲಾಗುತ್ತಿದೆ. ಸಿಮ್ ಮಾರಾಟಗಾರರು ಮತ್ತು ಖರೀದಿದಾರರು ಇನ್ನುಮುಂದೆ ಈ ನಿಯಮಗಳನ್ನು ಅನುಸರಿಸುವುದು ಅಗತ್ಯವಾಗಿದೆ.
ಹೊಸ ನಿಯಮಗಳಿವು
ಸಮಗ್ರ ಪರಿಶೀಲನೆ ಕಡ್ಡಾಯ: ಸಿಮ್ ಕಾರ್ಡ್‌ಗಳನ್ನು ಮಾರಾಟ ಮಾಡುವವರು ಸಮಗ್ರ ಪರಿಶೀಲನೆಗೆ ಒಳಪಡುವ ಅಗತ್ಯವಿದೆ. ಪೊಲೀಸ್ ಪರಿಶೀಲನೆ ಜವಾಬ್ದಾರಿಯನ್ನು ಆಯಾ ಟೆಲಿಕಾಮ್ ಸಂಸ್ಥೆಗಳು ವಹಿಸಿಕೊಳ್ಳಬೇಕಿದೆ. ಅಲ್ಲದೇ, ಸಿಮ್ ಮಾರಾಟ ಮಾಡಿದ ಕ್ಷಣವೇ ನೋಂದಣಿಯನ್ನೂ ಮಾಡಬೇಕಿದ್ದು ಈ ನಿಯಮ ಪಾಲನೆಯಲ್ಲಿ ವಿಫಲರಾದರೆ 10 ಲಕ್ಷ ರೂ.ಗಳ ದಂಡ ಪಾವತಿಸಬೇಕಾಗುತ್ತದೆ.
ಆಧಾರ್ ಸಲ್ಲಿಕೆ: ಅಸ್ತಿತ್ವದಲ್ಲಿರುವ ಮೊಬೈಲ್ ಸಂಖ್ಯೆಗೆ ನೂತನ ಸಿಮ್ ಕಾರ್ಡ್ ಪಡೆಯುವ ಗ್ರಾಹಕರು ಕೂಡ ಆಧಾರ್ ಕಾರ್ಡ್ ಮತ್ತು ಬಯೋಮೆಟ್ರಿಕ್ ಸಲ್ಲಿಸುವುದು ಕಡ್ಡಾಯವಾಗಿದೆ.
ಖರೀದಿಗೆ ಮಿತಿ: ವಾಣಿಜ್ಯ ಉದ್ದೇಶಕ್ಕಾಗಿ ವ್ಯವಹಾರ ಸಂಪರ್ಕದ ಮೂಲಕ ಮಾತ್ರವೇ ವ್ಯಕ್ತಿಗಳು ದೊಡ್ಡ ಪ್ರಮಾಣದಲ್ಲಿ ಸಿಮ್ ಕಾರ್ಡ್‌ಗಳನ್ನು ಖರೀದಿಸಬಹುದು. ಅದರ ಹೊರತಾಗಿ ಒಬ್ಬ ವ್ಯಕ್ತಿಯು ತನ್ನ ಐಡಿ ಕಾರ್ಡ್ ಆಧಾರದ ಮೇಲೆ ಕೇವಲ 9 ಸಿಮ್‌ಗಳನ್ನು ಮಾತ್ರ ಖರೀದಿಸಬಹುದೆಂಬ ಮಿತಿಯನ್ನು ವಿಧಿಸಲಾಗಿದೆ.
90 ದಿನದ ಅವಧಿ: ಸಿಮ್ ಕಾರ್ಡ್ ಒಂದು ನಿಷ್ಕ್ರಿಯಗೊಂಡ ತಕ್ಷಣ ಅದೇ ನಂಬರ್ ಅನ್ನು ಬೇರೆ ಯಾರಿಗೋ ಹಂಚಿಕೆ ಮಾಡುವಂತಿಲ್ಲ. ಸಿಮ್ ನಿಷ್ಕ್ರಿಯಗೊಂಡ 90 ದಿನಗಳ ಒಳಗೆ ಅದೇ ವ್ಯಕ್ತಿ ಬೇಕಿದ್ದರೆ ನವೀಕರಣ ಮಾಡಿಕೊಳ್ಳುವ ಅವಕಾಶವಿದೆ. ಅವಧಿ ಮೀರಿದ ಬಳಿಕ ಬೇಕಿದ್ದರೆ ಮತ್ತದೇ ಸಂಖ್ಯೆಯ ಹಂಚಿಕೆಗೆ ಅವಕಾಶವಿದೆ.
ಇಂದೇ ಕೊನೆ ಅವಕಾಶ: ಸಿಮ್ ಕಾರ್ಡ್‌ಗಳನ್ನು ಮಾರಾಟ ಮಾಡುವವರು ಮಾರಾಟಗಾರರ ಸಾಲಿನಲ್ಲಿ ನೋಂದಾಯಿಸಿಕೊಂಡಿರಬೇಕಾಗುತ್ತದೆ. ನವೆಂಬರ್ 30 ನೋಂದಣಿಗೆ ಕಡೆಯ ದಿನವಾಗಿದ್ದು ಆ ಬಳಿಕವೂ ನೋಂದಣಿ ಮಾಡಿಕೊಳ್ಳದೇ ಸಿಮ್ ಮಾರಾಟ ಮಾಡಿದರೆ ಅಂಥವರು 10 ಲಕ್ಷ ರೂ. ದಂಡಕ್ಕೆ ಗುರಿಯಾಗಲಿದ್ದಾರೆ.