ಬೆಳ್ತಂಗಡಿ: ಮಹಾಶಿವರಾತ್ರಿ ಪ್ರಯುಕ್ತ ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥ ಸ್ವಾಮಿ ಸನ್ನಿಧಿಯಲ್ಲಿ ಶನಿವಾರ ಮುಂಜಾನೆ ಬೆಳ್ಳಿ ರಥೋತ್ಸವ ನಡೆಯಿತು. ಧರ್ಮಾಧಿಕಾರಿ ಡಾಣ ಡಿ. ವೀರೇಂದ್ರ ಹೆಗ್ಗಡೆ ಉಪಸ್ಥಿತರಿದ್ದರು.
ನಾಡಿನೆಲ್ಲೆಡೆಯ ಭಕ್ತರು ಶಿವನಾಮ ಸ್ಮರಣೆಗಾಗಿ ಸೇರಿದ್ದರು. ಡಾಣ ಹೆಗ್ಗಡೆ ಶುಕ್ರವಾರ ರಾತ್ರಿ ಅಹೋರಾತ್ರಿ ಶಿವ ಪಂಚಾಕ್ಷರಿ ಮಂತ್ರ ಪಠಣೆಗೆ ನಂದಾದೀಪ ಬೆಳಗಿ ಚಾಲನೆ ನೀಡಿದ್ದರು. ಸಾವಿರಾರು ಭಕ್ತರು ಕಲಾಸೇವೆಗೈದರು.
ಮಂಜುನಾಥ ಸ್ವಾಮಿ ಸನ್ನಿಧಿಗೆ ವಿಶೇಷ ಪುಷ್ಪಾಲಂಕಾರ ಮಾಡಿ ರಾತ್ರಿಯಿಡೀ ದೇವರ ದರ್ಶನದ ಬಳಿಕ ಮುಂಜಾನೆ ಸಂಪ್ರದಾಯದಂತೆ ಕಟ್ಟೆ ಪೂಜೆ, ದೇವರ ಬಲಿ ಉತ್ಸವ, ಬೆಳ್ಳಿ ರಥೋತ್ಸವ ನಡೆಯಿತು. ಲಕ್ಷಕ್ಕೂ ಅಧಿಕ ಮಂದಿ ಪಾದಯಾತ್ರಿಗಳು, ಭಕ್ತರು ಪಾಲ್ಗೊಂಡಿದ್ದರು.
ಶ್ರೀ ಮಂಜುನಾಥೇಶ್ವರ ಭಜನಾ ಪರಿಷತ್, ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಕಳೆದ ಮೂರು ದಿನಗಳಿಂದ ಶಿವರಾತ್ರಿ ಪ್ರಯುಕ್ತ ಮೂಡಿಗೆರೆ, ಚಾರ್ಮಾಡಿ, ಜನ್ನಾಪುರ, ಮುಂಡಾಜೆ, ಉಜಿರೆ ದೇವಸ್ಥಾನ, ಉಜಿರೆ ಪ್ರೌಢಶಾಲೆ, ಮರ್ದಾಳ ಸೇರಿದಂತೆ ಬೇರೆ ಬೇರೆ ಸ್ಥಳಗಳಲ್ಲಿ ಕ್ಯಾಂಪ್ ರಚಿಸಿ ಜಿಲ್ಲೆಯ ಸುಮಾರು 18 ಭಜನ ತಂಡಗಳನ್ನು ಆಹ್ವಾನಿಸಿತ್ತು. ಭಜನ ಮಂಡಳಿಗಳು ಕುಣಿತ ಭಜನೆ, ಭಜನೆ ನಡೆಸಿಕೊಟ್ಟಿದ್ದರು.
ಶಿವರಾತ್ರಿಯಲ್ಲಿ ರಾಜ್ಯದ ನಾನಾ ಕಡೆಯಿಂದ ವಿವಿಧ ಕಲಾ ಸೇವೆ ಗೈದವು. ಶಿವರಾತ್ರಿ ಮುಗಿದ ಬಳಿಕ ಸ್ವಯಂಸೇವಕರು ಶ್ರದ್ಧಾ ಕೇಂದ್ರ ಸುತ್ತಮುತ್ತ ಸ್ವತ್ಛತಾ ಕಾರ್ಯಕ್ರಮ ನಡೆಸಿರುವುದು ವಿಶೇಷವಾಗಿತ್ತು.