ಭಟ್ಕಳ: ಮಾವಿನಕುರ್ವೆ ಬಂದರಿನಲ್ಲಿ ಹೂಳೆತ್ತದ ಪರಿಣಾಮ ಬೋಟೊಂದು ಮಗುಚಿಕೊಂಡಿದ್ದು, ಉಳಿದಂತೆ 6-7 ಬೋಟ್‌ಗಳು ಒಂದಕ್ಕೊಂದು ಪರಸ್ಪರ ತಾಗಿ ಹಾನಿಗೀಡಾಗಿವೆ.
ತಾಲೂಕಿನ ನೈಸರ್ಗಿಕ ಬಂದರಾದ ಮಾವಿನಕುರ್ವೆ ಬಂದರಿನಲ್ಲಿ ಹೂಳೆತ್ತಬೇಕು ಎನ್ನುವ ಕೂಗು ಬಹಳವರ್ಷಗಳಿಂದ ಕೇಳಿ ಬಂದಿದ್ದರೂ ಇನ್ನೂ ತನಕ ಸರಕಾರಹಣ ಮಂಜೂರು ಮಾಡಿಲ್ಲ. ಈಗಾಗಲೇ 4.85 ಲಕ್ಷದ ಅಂದಾಜು ಪತ್ರ ಸರಕಾರದ ಮೀನುಗಾರಿಕಾ ಇಲಾಖೆಯಲ್ಲಿ ಬಾಕಿ ಇದ್ದು, ಮಂಜೂರಿಯಾಗದೇ ಮೀನುಗಾರರು ಸಂಕಷ್ಟಕ್ಕೆ ಸಿಲುಕುವಂತಾಗಿದೆ.
ಒಮ್ಮೊಮ್ಮೆ ಸಮುದ್ರದಲ್ಲಿ ಭಾರೀ ಇಳಿತ ಉಂಟಾಗುವುದರಿಂದ ಬೋಟ್‌ಗಳು ಕೆಲವು ಒಂದಕ್ಕೊಂದು ತಾಗಿ ಹಾನಿಯಾಗುತ್ತ ವಲ್ಲದೇ ಬೋಟ್‌ಗಳು ಮಗುಚಿ ನೀರು ನುಗ್ಗುವ ಸಂಭವ ಇರುತ್ತದೆ. ಸೋಮವಾರ ಕೂಡಾ ಜಯಲಕ್ಷ್ಮೀ ಎನ್ನುವ ಬೋಟ್ ಮಗುಚಿದ್ದು, ಯಾವ ಸಮಯದಲ್ಲಿಯೂ ನೀರು ನುಗ್ಗುವ ಸಾಧ್ಯತೆ ಇದೆ ಎನ್ನಲಾಗಿದೆ.
ಭಟ್ಕಳ ತಾಲೂಕಿನಲ್ಲಿ ಮೀನುಗಾರಿಕಾ ಇಲಾಖೆಯ ಅಂಕಿ ಅಂಶಗಳನ್ನು ನೋಡಿದಾಗ ವರ್ಷದಿಂದ ವರ್ಷಕ್ಕೆ ಮೀನುಗಾರಿಕಾ ಇಳುವರಿ ಕಡಿಮೆಯಾಗುತ್ತಾ ಬಂದಿದ್ದು,ಮೀನುಗಾರರಿಗೆ ಇನ್ನಷ್ಟು ಸಂಕಷ್ಟ ಎದುರಾದಂತಾಗಿದೆ. ಕಳೆದ ಹಲವಾರು ವರ್ಷಗಳಿಂದ ಬಂದರಿನ ಅಳಿವೆಯಲ್ಲಿಹೂಳು ತುಂಬಿ ಬೋಟ್‌ಗಳಿಗೆ ಹಾನಿಯಾಗುತ್ತಿದ್ದು,ನೈಸರ್ಗಿಕ ಬಂದರಾಗಿದ್ದರೂ ಮೀನುಗಾರರು ಸಮಯ ಸಂದರ್ಭಗಳನ್ನು ನೋಡಿಯೇ ಮೀನುಗಾರಿಕೆಗೆ ತೆರಳುವ ಅನಿವಾರ್ಯತೆಯಿದೆ. ಮೀನುಗಾರರು ಸಂಕಷ್ಟದಲ್ಲಿದ್ದು, ರಾಜ್ಯದ ಮೀನುಗಾರಿಕಾ ಮಂತ್ರಿಗಳಾದ ಕೋಟ ಶ್ರೀನಿವಾಸ ಪೂಜಾರಿಯವರು ಕಳೆದ ಒಂದು ತಿಂಗಳ ಹಿಂದೆ ಭೇಟಿ ನೀಡಿದಾಗ ಬಂದರದ ಹೂಳೆತ್ತುವ ಕಾರ್ಯಕ್ಕೆ ಒಂದು ವಾರದೊಳಗೆ ಚಾಲನೆ ನೀಡುವುದಾಗಿ ಭರವಸೆ ನೀಡಿದ್ದರು. ಆದರೆ ಇನ್ನೂ ತನಕ ಯಾವುದೇ ಕೆಲಸ ಆಗದೆ ಇರುವುದು ತೀವ್ರ ಅಸಮಾಧಾನಕ್ಕೆ ಕಾರಣವಾಗಿದೆ.
ಮಾವಿನಕುರ್ವೆ ಬಂದರದಲ್ಲಿ ಹೂಳು ತುಂಬಿದ್ದು, ಬೋಟ್‌ಗಳು ಹಾನಿಗೊಳಗಾಗುತ್ತಿವೆ. ಈ ಕುರಿತು ಸರಕಾರದ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ. ತಕ್ಷಣ ಸರಕಾರ ಎರಡು ಕೋಟಿ ರೂ. ಬಿಡುಗಡೆ ಮಾಡಿ ಹೂಳೆತ್ತುವ ಕಾರ್ಯಕ್ಕೆ ಚಾಲನೆ ನೀಡಬೇಕು. ಬ್ರೇಕ್ ವಾಟರ್ ಕಾರ್ಯ ಮಾಡಬೇಕು. ಇಲ್ಲವಾದಲ್ಲಿ ಕರಾವಳಿಯ ಮೀನುಗಾರರೂ ರೈತರ ಪ್ರತಿಭಟನೆಯಂತೆ ಬೀದಿಗಿಳಿಯುವುದು ಅನಿವಾರ್ಯವಾಗುವುದು.
– ಎನ್.ಡಿ. ಖಾರ್ವಿ, ಹಿರಿಯ ಮುಖಂಡ
ಮಾವಿನಕುರ್ವೆ ಬಂದರಿನಲ್ಲಿ ನೂರಾರು ಬೋಟ್‌ಗಳು ಆಶ್ರಯ ಪಡೆಯುತ್ತವೆ. ನೀರಿನ ಇಳಿತದ ಸಮಯದಲ್ಲಿ ಬೋಟ್‌ಗಳು ಅತಂತ್ರವಾಗುತ್ತಿದ್ದು, ಒಂದಕ್ಕೊಂದು ಡಿಕ್ಕಿಯಾಗಿ ಹಾನಿಯಾಗುತ್ತಿದೆ. ಡ್ರಜ್ಜಿಂಗ್ ಕಾರ್ಯ ಕೈಗೆತ್ತಿಕೊಳ್ಳದಿದ್ದರೆ ಮೀನುಗಾರರು ತೀವ್ರ ಸಂಕಷ್ಟಕ್ಕೊಳಗಾಗಲಿದ್ದಾರೆ. ಮೀನುಗಾರಿಕಾ ಮಂತ್ರಿಗಳು ಹಾಗೂ ಶಾಸಕರು ಕಳೆದ ಒಂದು ತಿಂಗಳ ಹಿಂದೆ ನೀಡಿದ ಭರವಸೆ ಹಾಗೆಯೇ ಉಳಿದಿದ್ದು, ತಕ್ಷಣ ಕಾಮಗಾರಿ ಮಾಡಿಕೊಡಬೇಕಾಗಿದೆ. –
ಮಹೇಶ ಖಾರ್ವಿ, ಮೀನುಗಾರರ ಪ್ರಮುಖ