Advertisement

ಸಿಲಿಕಾನ್‌ಸಿಟಿ ಮತ್ತೆ ಪುಷ್ಪನಗರಿಯಾಗಲಿ

11:33 AM Jan 20, 2018 | Team Udayavani |

ಬೆಂಗಳೂರು: ಹಿಂದೆ “ಪುಷ್ಪನಗರಿ’ಯಾಗಿದ್ದ ಬೆಂಗಳೂರಿಂದು “ಸಿಲಿಕಾನ್‌ ಸಿಟಿ’ ಯಾಗಿದ್ದು, “ಸಿಲಿಕಾನ್‌ ಸಿಟಿ’ಯನ್ನು ಮತ್ತೆ “ಪುಷ್ಪನಗರಿ’ಯಾಗಿಸಲು ಸರ್ಕಾರ ಮುಂದಾಗಬೇಕು ಎಂದು ಧರ್ಮಸ್ಥಳ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆ ಅವರು ಅಭಿಪ್ರಾಯಪಟ್ಟರು.

Advertisement

ತೋಟಗಾರಿಕೆ ಇಲಾಖೆ ಹಾಗೂ ಮೈಸೂರು ಉದ್ಯಾನ ಕಲಾ ಸಂಘದಿಂದ ಶ್ರವಣಬೆಳಗೋಳದಲ್ಲಿ ಫೆಬ್ರವರಿಯಲ್ಲಿ ನಡೆಯಲಿರುವ “88ನೇ ಮಹಾಮಸ್ತಕಾಭಿಷೇಕ’ ಸವಿನೆನಪಿಗಾಗಿ ಲಾಲ್‌ಬಾಗ್‌ನಲ್ಲಿ ಹತ್ತುದಿನಗಳ ಕಾಲ ಏರ್ಪಡಿಸಿರುವ “ಗಣರಾಜ್ಯೋತ್ಸವ ಫ‌ಲಪುಷ್ಪ ಪ್ರದರ್ಶನ’ ಉದ್ಘಾಟಿಸಿ ಅವರು ಮಾತನಾಡಿದರು. 

ನೂರಾರು ವರ್ಷಗಳಿಂದ ಲಾಲ್‌ಬಾಗ್‌ ಕರ್ನಾಟಕದ ಕಲಶಪ್ರಾಯವಾಗಿದ್ದು, ಬೆಂಗಳೂರಿಗೆ ಬಂದರೆ ಕೇವಲ ಬಾರು, ಹೋಟೆಲ್‌, ದೊಡ್ಡ ಕಟ್ಟಡಗಳನ್ನು ನೋಡದೆ, ಮೂಲವಾಗಿ ಬೆಂಗಳೂರಿನ ಸೌಂದರ್ಯವನ್ನು ನೋಡಬೇಕಿದೆ ಎಂದರು.

ಶಾಂತಿಧೂತ ಬಾಹುಬಲಿಯನ್ನು ಕೇಂದ್ರವಾಗಿಸಿಕೊಂಡು ರೂಪುಗೊಂಡಿರುವ ಫ‌ಲಪುಷ್ಪ ಪ್ರದರ್ಶನ ಸುಂದರವಾಗಿ ಮೂಡಿಬಂದಿದೆ. ಬೆಂಗಳೂರಿನಲ್ಲಿ ಅದ್ಭುತವಾದ ಕಲಾವಿದರಿದ್ದು, ಹೂವುಗಳನ್ನು ಅಲಂಕಾರಗೊಳಿಸಿರುವ ಕಾರ್ಮಿಕರಿಗೆ ವಂದಿಸಬೇಕು ಎಂದರು.

ಆದಿಚುಂಚನಗಿರಿ ಪೀಠಾಧ್ಯಕ್ಷ ಡಾ.ನಿರ್ಮಲಾನಂದನಾಥ ಸ್ವಾಮೀಜಿ, ಜಗತ್ತು ದಳ್ಳೂರಿಯ ಮೇಲೆ ನಿಂತಿರುವ ಗಳಿಗೆಯಲ್ಲಿ ಶಾಂತಿ ಹಾಗೂ ತ್ಯಾಗಮೂರ್ತಿ ಬಾಹುಬಲಿಯನ್ನು ಕೇಂದ್ರವಾಗಿರಿಸಿಕೊಂಡು ಫ‌ಲಪುಷ್ಪ ಪ್ರದರ್ಶನ ಆಯೋಜಿಸಿರುವುದು ಅರ್ಥಪೂರ್ಣವಾಗಿದೆ ಎಂದರು.

Advertisement

ಸಚಿವರಾದ ಎಸ್‌.ಎಸ್‌.ಮಲ್ಲಿಕಾರ್ಜುನ್‌, ಎಚ್‌.ಸಿ.ಮಹದೇವಪ್ಪ, ಮೇಯರ್‌ ಆರ್‌.ಸಂಪತ್‌ರಾಜ್‌, ವಿಧಾನಪರಿಷತ್‌ ಸದಸ್ಯ ನಾರಾಯಣ ಸ್ವಾಮಿ, ಶಾಸಕ ರಾಜೇಶ್‌, ಸಾಹಿತಿ ಪ್ರೊ.ಹಂಪ. ನಾಗರಾಜಯ್ಯ, ಪರಿಸರವಾದಿ ಯಲ್ಲಪ್ಪರೆಡ್ಡಿ ಸೇರಿ ಪ್ರಮುಖರು ಹಾಜರಿದ್ದರು. 

ವಿಐಪಿಯಾಗಿ ಬಂದರೆ ಏನೂ ಸಿಗುವುದಿಲ್ಲ: ಶ್ರೀಸಾಮಾನ್ಯನಾಗಿ 50 ವರ್ಷಗಳ ಹಿಂದೆ ಲಾಲ್‌ಬಾಗ್‌ಗೆ ಬಂದಾಗ ಆರಾಮವಾಗಿ ತಿರುಗಾಡಿದ್ದೆ. ಆದರಿಂದು ವಿಐಪಿಯಾಗಿ ಬಂದು ಬಹಳ ಒದೆ ತಿಂದೆ. ಅಲ್ಲಿ ಇಲ್ಲಿ ತಳ್ಳಾಡಿದ್ದರಿಂದ ನನ್ನ ಶಾಲು ಸಹ ಬಿದ್ದು ಹೋಯಿತು. ಸರಿಯಾಗಿ ಏನನ್ನೂ ನೋಡಲು ಸಾಧ್ಯವಾಗಲಿಲ್ಲ.

ಬಹುಶಃ ವಿಐಪಿಯಾಗಿ ಬಂದರೆ ಏನು ಸಿಗುವುದಿಲ್ಲ. ಶ್ರೀಸಾಮಾನ್ಯನಾಗಿ ಬಂದರೆ ಎಲ್ಲವೂ ಸಿಗುತ್ತದೆ ಎಂದು ವೀರೇಂದ್ರ ಹೆಗ್ಗಡೆಯವರು ಮುಗುಳ್ನಕ್ಕರು. ಜತೆಗೆ ಈ ಹಿಂದೆ ಲಾಲ್‌ಬಾಗ್‌ ಅಧಿಕಾರಿಯಾಗಿದ್ದ ಮರಿಗೌಡರು ಎಲ್ಲರ ಬಾಯಲ್ಲಿ ಲಾಲ್‌ಬಾಗ್‌ ಬರುವಂತೆ ಮಾಡಿದರು ಎಂದು ಸ್ಮರಿಸಿದರು.

ಮುಂದಿನ ತಿಂಗಳು ಶ್ರವಣಬೆಳಗೋಳದಲ್ಲಿ 88ನೇ ಮಹಾಮಸ್ತಕಾಭಿಷೇಕ ನಡೆಯಲಿದ್ದು, ಅದಕ್ಕೆ ಪೂರ್ವಭಾವಿಯಾಗಿ ಲಾಲ್‌ಬಾಗ್‌ನಲ್ಲಿ “ಕರ್ಟನ್‌ ರೈಸರ್‌’ ಸಿದ್ಧವಾಗಿದೆ. ಅದರಂತೆ ಲಾಲ್‌ಬಾಗ್‌ ಇದೀಗ “ಬಾಹುಬಲಿ ಬಾಗ್‌’ ಆಗಿ ಪರಿವರ್ತನೆಯಾಗಿದೆ. 
-ಹಂಪ ನಾಗರಾಜಯ್ಯ, ಸಾಹಿತಿ

Advertisement

Udayavani is now on Telegram. Click here to join our channel and stay updated with the latest news.

Next