Advertisement

ಚಾಮರಾಜನಗರ: ರಸ್ತೆಗೆ ಪುನೀತ್ ರಾಜ್ ಕುಮಾರ್ ಹೆಸರಿಡುವಂತೆ ಒತ್ತಾಯಿಸಿ ಮೌನ ಪ್ರತಿಭಟನೆ

09:26 PM Nov 04, 2021 | Team Udayavani |

ಚಾಮರಾಜನಗರ: ಇತ್ತೀಚೆಗೆ ನಿಧನ ಹೊಂದಿದ ಕನ್ನಡ ಖ್ಯಾತ ನಟ ಪುನೀತ್ ರಾಜ್‌ಕುಮಾರ್ ಅವರ ಹೆಸರನ್ನು ಅವರ ತವರು ಜಿಲ್ಲೆಯಾದ ಚಾಮರಾಜನಗರದ ಡೀವಿಯೇಷನ್ ರಸ್ತೆಗೆ ನಾಮಕರಣ ಮಾಡಬೇಕು ಹಾಗೂ ನೂತನ ಕಲಾಮಂದಿರಕ್ಕೆ ಡಾ.ರಾಜ್ ಕುಮಾರ್ ಅವರ ಹೆಸರು ನಾಮಕರಣ ಮಾಡುವಂತೆ ಒತ್ತಾಯಿಸಿ ನಗರದಲ್ಲಿ ಗುರುವಾರ ನಾನಾ ಸಂಘಟನೆಗಳು ಪ್ರತಿಭಟನೆ ನಡೆಸಿದವು.

Advertisement

ನಗರದ ಶ್ರೀಚಾಮರಾಜೇಶ್ವರ ದೇವಸ್ಥಾನದ ಆವರಣದಲ್ಲಿ ಪುನೀತ್ ರಾಜ್ ಕುಮಾರ್ ಅಭಿಮಾನಿ ಬಳಗ, ಈಶ್ವರಿ ಸಂಗೀತ ಶಾಲೆ, ಆಜಾದ್ ಹಿಂದೂ ಸೇನೆ, ಡಾ. ಅಂಬೇಡ್ಕರ್ ಸೇನೆ, ವೀರಶೈವ ಮಹಾಸಭಾ, ಭಾರತೀಯ ಪರಿವರ್ತನಾ ಸಂಘ, ಅಪ್ಪುಬ್ರಿಗೇಡ್, ಶಿವಸೈನ್ಯ, ಕನ್ನಡಪರ ಸಂಘಟನೆಗಳ ಒಕ್ಕೂಟ, ಡಾ.ರಾಜ್‌ಕುಮಾರ್ ಅಭಿಮಾನಿಗಳ ಒಕ್ಕೂಟ, ದರ್ಶನ್ ಮತ್ತು ಸುದೀಪ್ ಅಭಿಮಾನಿಗಳ ಸಂಘ ಸೇರಿ, ವಿವಿಧ ಸಂಘಟನೆಗಳ ಮುಖಂಡರು ಕಾರ್ಯಕರ್ತರು ಸಮಾವೇಶಗೊಂಡು ಅಲ್ಲಿಂದ ಮೌನ ಮೆರವಣಿಗೆ ಹೊರಟು ಭುವನೇಶ್ವರಿವೃತ್ತ, ಬಿ. ರಾಚಯ್ಯ ಜೋಡಿ ರಸ್ತೆ ಮೂಲಕ ಜಿಲ್ಲಾಡಳಿತ ಭವನಕ್ಕೆ ತೆರಳಿ ಧರಣಿ ನಡೆಸಿದರು.

ಪುನೀತ್ ರಾಜ್‌ಕುಮಾರ್ ಅವರು ಚಾಮರಾಜನಗರ ಜಿಲ್ಲೆಯವರು. ಅವರು ಚಾಮರಾಜನಗರ ಜಿಲ್ಲೆಯ ಸಾಂಸ್ಕೃತಿಕ ರಾಯಭಾರಿಯಾಗಿದ್ದರು. ರಾಷ್ಟ್ರಪ್ರಶಸ್ತಿ ಪಡೆದ ಕಲಾವಿದ. ನಟನೆಯಿಂದಾಚೆ ಅವರು ಸಾವಿರಾರು ವಿದ್ಯಾರ್ಥಿಗಳಿಗೆ, ಬಡ ಜನರಿಗೆ ನೆರವು ನೀಡಿದ್ದಾರೆ. ಅವರು ಅಕಾಲಿಕವಾಗಿ ನಿಧನರಾದಾಗ ಅಂತಾರಾಷ್ಟ್ರೀಯ ಮಟ್ಟದ ಸುದ್ದಿ ವಾಹಿನಿಗಳು ಅದನ್ನು ಬಿತ್ತರಿಸಿದವು. ಇಂಥ ಪ್ರಸಿದ್ಧ ಕಲಾವಿದನ ಹೆಸರನ್ನು ಅವರ ತವರು ಜಿಲ್ಲೆಯ ಜಿಲ್ಲಾ ಕೇಂದ್ರವಾದ ಚಾಮರಾಜನಗರದ ಡೀವಿಯೇಷನ್ ರಸ್ತೆಗೆ ನಾಮಕರಣ ಮಾಡಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.

ಜಿಲ್ಲಾಧಿಕಾರಿ ಡಾ. ಎಂ.ಆರ್. ರವಿ ಸ್ಥಳಕ್ಕೆ ಆಗಮಿಸಿ ಮನವಿ ಸ್ವೀಕರಿಸಿ ಮಾತನಾಡಿ, ಪುನೀತ್ ರಾಜ್‌ಕುಮಾರ್ ಅವರು ಚಾಮರಾಜನಗರ ಜಿಲ್ಲೆಯ ಸಾಂಸ್ಕೃತಿಕ ರಾಯಭಾರಿಯಾಗಲು ಕೇವಲ ಫೋನ್ ಕರೆಯಲ್ಲೇ ಒಪ್ಪಿಗೆ ನೀಡಿದರು. ಅವರು ಅತ್ಯಂತ ಸರಳ ನಡೆ ನುಡಿಯ ವ್ಯಕ್ತಿ. ಬೇರಾವ ಜಿಲ್ಲೆಗೂ ಪ್ರಸಿದ್ಧ ನಟರೊಬ್ಬರು ಸಾಂಸ್ಕೃತಿಕ ರಾಯಭಾರಿಯಾಗಿಲ್ಲ. ಇದೊಂದು ದಾಖಲೆ. ನಮ್ಮ ಜಿಲ್ಲೆಯ ಬಗ್ಗೆ ಅವರಿಗೆ ಅಪಾರ ಹೆಮ್ಮೆ ಇತ್ತು. ಅವರ ಹೆಸರನ್ನು ಡೀವಿಯೇಷನ್ ರಸ್ತೆಗೆ ನಾಮಕರಣ ಮಾಡಲು ಕ್ರಮ ವಹಿಸಲಾಗುವುದು. ನಗರಸಭೆಯಲ್ಲಿ ಈ ಬಗ್ಗೆ ಅನುಮೋದನೆ ಪಡೆಯಬೇಕಿದೆ. ಕಲಾಮಂದಿರಕ್ಕೆ ಡಾ. ರಾಜ್‌ಕುಮಾರ್ ಅವರ ಹೆಸರು ಇಡುವುದು ಈಗಾಗಲೇ ನಿಶ್ಚಿತವಾಗಿದೆ. ಈ ಬಗ್ಗೆ ಪುನೀತ್ ಅವರು ಸಹ ಮನವಿ ಮಾಡಿದ್ದರು ಎಂದರು.

ಪ್ರತಿಭಟನೆಯಲ್ಲಿ ನಗರಸಭಾ ಸದಸ್ಯರಾದ ಶಿವರಾಜ್, ಸುರೇಶ್, ಮಾಜಿ ಅಧ್ಯಕ್ಷ ಸುರೇಶ್ ನಾಯಕ, ಜಿ.ಪಂ.ಮಾಜಿ ಅಧ್ಯಕ್ಷ ಸಿ.ಎ.ಮಹದೇವಶೆಟ್ಟಿ, ಸಿಂಹ ಚಿತ್ರಮಂದಿರದ ಮಾಲೀಕ ಎ.ಜಯಸಿಂಹ, ಈಶ್ವರಿ ಸಂಗೀತ ಶಾಲೆಯ ಅಧ್ಯಕ್ಷ ಸಿ.ಎಂ. ವೆಂಕಟೇಶ್, ರಂಗವಾಹಿನಿ ಅಧ್ಯಕ್ಷ ಸಿ.ಎಂ.ನರಸಿಂಹಮೂರ್ತಿ, ರಂಗಜಂಗಮ ಅಧ್ಯಕ್ಷ ಮಹೇಶ್, ಅಖಿಲ ವೀರಶೈವ ಮಹಾಸಭಾದ ಜಿಲ್ಲಾಧ್ಯಕ್ಷ ಮೂಡ್ಲುಪುರ ನಂದೀಶ್, ಭಾರತೀಯ ಪರಿವರ್ತನಾ ಸಂಘದ ಅಧ್ಯಕ್ಷ ಆಲೂರುಮಲ್ಲು, ಬಿಜೆಪಿ ಮುಖಂಡ ನಟರಾಜ್, ಮಾರ್ಕೇಟ್ ಗಿರೀಶ್, ಡಾ. ರಾಜ್‌ಕುಮಾರ್ ಸಾಂಸ್ಕೃತಿಕ ವೇದಿಕೆ ಅಧ್ಯಕ್ಷ ಎಲೆಕ್ಟ್ರಿಕಲ್ ಚಂದ್ರು, ಎಸ್.ಪಿ ಬಾಲಸುಬ್ರಹ್ಮಣ್ಯ ಸಂಘ ಶಿವಣ್ಣ, ಬುಲೆಟ್ ಚಂದ್ರು, ಅಜಾದ್ ಹಿಂದೂ ಸೇನೆಯ ರಾಜ್ಯಾಧ್ಯಕ್ಷ ಎಂ.ಎಸ್. ಪೃಥ್ವಿರಾಜ್, ಜಿಲ್ಲಾಧ್ಯಕ್ಷ ಶಿವುವಿರಾಟ್. ಅವತಾರ್ ಡ್ರ್ಯಾನ್‌ಸ್ ಪ್ರವೀಣ್, ರಾಜರತ್ನ ಅಭಿಮಾನಿ ಬಳಗ, ನಗರಸಭಾ ಸದಸ್ಯ ಚಂದ್ರಶೇಖರ್, ಅಪ್ಪು ಬ್ರಿಗೇಡ್ ನ ಮಣಿಕಂಠ, ಅರ್ಜುನ್ ಗೌಡ, ಚಾಮರಾಜೇಶ್ವರ ಕಲಾಬಳಗದ ಮನು ಗೌರವ ಅಧ್ಯಕ್ಷ ಚಂದ್ರಶೇಖರ್, ಟೌನ್ ಅಧ್ಯಕ್ಷ ಶಿವು ಪುನೀತ್ ಅಭಿಮಾನಿ ಬಳಗದ ನವೀನ್ ಕ್ವಾಲಿಟಿ, ಅಜೇಯ್, ಬುಲೆಟ್ ಚಂದ್ರು, ನಗು, ಬಾಬು, ವಾಸು, ಅಂಬೇಡ್ಕರ್ ಸೇನೆಯ ಅಧ್ಯಕ್ಷ ಗಣೇಶ್ ಪ್ರಸಾದ್ , ನಟ, ವೆಂಕಿ, ಮಹೇಶ್ ಮಾರ್ಕೆಟ್ ಕ್ಯಾಂಟೀನ್ ಮಂಜು ಉಪ್ಪಾರ ಸಂಘಟನೆಗಳ ಕಾರ್ಯಕರ್ತರು, ದರ್ಶನ್ ಮತ್ತು ಸುದೀಪ್ ಅಭಿಮಾನಿಗಳ ಸಂಘದ ಸದಸ್ಯರು ಭಾಗವಹಿಸಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next