Advertisement

ಟಿಕೆಟ್‌ ವಂಚಿತರ ಆಕ್ರೋಶ: 

04:39 PM Apr 21, 2018 | |

ಹುಬ್ಬಳ್ಳಿ: ಜಿಲ್ಲೆಯಲ್ಲಿ ಬಾಕಿ ಇದ್ದ ಎರಡು ಕ್ಷೇತ್ರಗಳ ಟಿಕೆಟ್‌ನ್ನು ಬಿಜೆಪಿ ಪ್ರಕಟಿಸಿದ ಬೆನ್ನಲ್ಲೇ ಟಿಕೆಟ್‌ ವಂಚಿತರ ಆಕ್ರೋಶ ತೀವ್ರಗೊಂಡಿದೆ. ಜೆಡಿಎಸ್‌ ಕದ ತಟ್ಟಲು ಮುಂದಾಗಿದ್ದಾರೆನ್ನಲಾದ ಕಲಘಟಗಿ ಕ್ಷೇತ್ರದ ಟಿಕೆಟ್‌ ವಂಚಿತ ಸಿ.ಎಂ. ನಿಂಬಣ್ಣವರಿಗೆ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ತಾಳ್ಮೆಯ ಕಿವಿಮಾತು ಹೇಳಿದ್ದಾರೆನ್ನಲಾಗಿದೆ.

Advertisement

ಜಿಲ್ಲೆಯಲ್ಲಿ ಟಿಕೆಟ್‌ ಘೋಷಣೆ ಬೆನ್ನಲ್ಲೇ ಬಿಜೆಪಿ ಹಾಗೂ ಕಾಂಗ್ರೆಸ್‌ನಲ್ಲಿ ಅಸಮಾಧಾನ ಸ್ಫೋಟಗೊಂಡಿದ್ದು, ಬೂದಿ ಮುಚ್ಚಿದ ಕೆಂಡದಂತಿದೆ. ಟಿಕೆಟ್‌ ವಂಚಿತರ ಆಕ್ರೋಶ ಪಕ್ಷಕ್ಕೆ ವ್ಯತಿರಿಕ್ತವಾಗದಂತೆ ನೋಡಿಕೊಳ್ಳಲು ಎರಡು ಪಕ್ಷಗಳ ಮುಖಂಡರು ಹರಸಾಹಸಕ್ಕೆ ಮುಂದಾಗಿದ್ದಾರೆ.

ಬಿಜೆಪಿ ನಾಯಕರ ತಲೆ ಬಿಸಿ: ಜಿಲ್ಲೆಯ ಏಳು ಕ್ಷೇತ್ರಗಳಲ್ಲಿ ಬಿಜೆಪಿ ಮೊದಲ ಪಟ್ಟಿಯಲ್ಲಿ ಮೂರು ಕ್ಷೇತ್ರಗಳ ಟಿಕೆಟ್‌ ಪ್ರಕಟಿಸಿತ್ತು. ಎರಡನೇ ಮತ್ತು ಮೂರನೇ ಪಟ್ಟಿಯಲ್ಲಿ ತಲಾ ಎರಡು ಕ್ಷೇತ್ರಗಳ ಟಿಕೆಟ್‌ ಪ್ರಕಟಿಸಿದೆ. ಮೊದಲ ಪಟ್ಟಿಯಲ್ಲಿಯೇ ಧಾರವಾಡ ಕ್ಷೇತ್ರದಲ್ಲಿ ಕಾಣಿಸಿಕೊಂಡಿದ್ದ ಟಿಕೆಟ್‌ ವಂಚಿತರ ಆಕ್ರೋಶ, ಇದೀಗ ಕಲಘಟಗಿ, ಕುಂದಗೋಳ, ಹು-ಧಾ ಪೂರ್ವ ಕ್ಷೇತ್ರಕ್ಕೂ ಹಬ್ಬಿದ್ದು ಬಿಜೆಪಿ ನಾಯಕರ ತಲೆ ಬಿಸಿಯಾಗುವಂತೆ ಮಾಡಿದೆ.

ಕಲಘಟಗಿ ಕ್ಷೇತ್ರದಿಂದ ಬಿಜೆಪಿ ಟಿಕೆಟ್‌ ವಂಚಿತ ಸಿ.ಎಂ. ನಿಂಬಣ್ಣವರ, ಶುಕ್ರವಾರ ಬೆಂಗಳೂರಿಗೆ ತೆರಳಿ ಪಕ್ಷದ ರಾಜ್ಯಾಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಅಳಲು ತೋಡಿಕೊಂಡಿದ್ದಾರೆನ್ನಲಾಗಿದೆ. ಪಕ್ಷದ ಕೇಂದ್ರ ವರಿಷ್ಠರು ಟಿಕೆಟ್‌ ಅಂತಿಮಗೊಳಿಸಿದ್ದು, ಬದಲಾವಣೆ ಅಸಾಧ್ಯ ಎಂಬುದನ್ನು ಮನವರಿಕೆ ಮಾಡಿಕೊಟ್ಟ ಯಡಿಯೂರಪ್ಪ, ಪಕ್ಷದ ಅಭ್ಯರ್ಥಿ ಪರವಾಗಿ ಕೆಲಸ ಮಾಡಿ, ಮುಂದೆ ಸರಕಾರ ಬಂದಾಗ ಖಂಡಿತವಾಗಿಯೂ ಉತ್ತಮ ಸ್ಥಾನದ ಭರವಸೆ ನೀಡಿದ್ದಾರೆನ್ನಲಾಗಿದೆ. ಇದಕ್ಕೆ ನಿಂಬಣ್ಣವರ ಯಾವುದೇ ಪ್ರತಿಕ್ರಿಯೆ ನೀಡದೆ ತಟಸ್ಥ ನಿಲವು ತಾಳಿ ಹೊರಬಂದರು ಎಂದು ಹೇಳಲಾಗುತ್ತಿದೆ.

ಸಿ.ಎಂ. ನಿಂಬಣ್ಣವರ ಪಕ್ಷೇತರ ಹಾಗೂ ಜೆಡಿಎಸ್‌ನಿಂದ ಸ್ಪರ್ಧೆಗಿಳಿಯುವ ಗಂಭೀರ ಚಿಂತನೆಯಲ್ಲಿದ್ದು, ಜೆಡಿಎಸ್‌ ಕದ
ತಟ್ಟಿದ್ದಾರೆ ಎಂದು ಹೇಳಲಾಗುತ್ತಿದೆ. ಇದಕ್ಕೆ ಪುಷ್ಟಿ ಎನ್ನುವಂತೆ ಜೆಡಿಎಸ್‌ನ ಎರಡನೇ ಪಟ್ಟಿಯಲ್ಲಿ ಕಲಘಟಗಿ ಕ್ಷೇತ್ರದಿಂದ ‘ನಿಂಬಣ್ಣ’ ಎನ್ನುವವರಿಗೆ ಟಿಕೆಟ್‌ ನೀಡಲಾಗಿದೆ. ನಿಂಬಣ್ಣ ಕೂಬಿಹಾಳ ಎನ್ನುವವರಿಗೆ ಟಿಕೆಟ್‌ ಎಂದು ಸುದ್ದಿ ಹಬ್ಬಿದ್ದರೂ ಅವರು ಚುನಾವಣೆ ಸ್ಪರ್ಧೆಗೆ ಮುಂದಾಗುವವರಲ್ಲ. ಸಿ.ಎಂ. ನಿಂಬಣ್ಣನವರ ಹೆಸರನ್ನೇ ಸದ್ಯಕ್ಕೆ ನಿಂಬಣ್ಣ ಎಂದು ಪ್ರಕಟಿಸಲಾಗಿದೆ. ಏ. 21ರಂದು ಜೆಡಿಎಸ್‌ ನಾಮಪತ್ರ ಸಲ್ಲಿಕೆ ಮಾಡಲಿದ್ದಾರೆ ಎಂಬ ಸುದ್ದಿ ಕಲಘಟಗಿ ಕ್ಷೇತ್ರದಲ್ಲಿ ಬಲವಾಗಿ ಹರಿದಾಡುತ್ತಿದೆ.

Advertisement

ಕುಂದಗೋಳ ಕ್ಷೇತ್ರದಲ್ಲಿ ಎಸ್‌.ಐ. ಚಿಕ್ಕನಗೌಡ್ರ, ಎಂ.ಆರ್‌. ಪಾಟೀಲರ ನಡುವೆ ಟಿಕೆಟ್‌ ಪೈಪೋಟಿ ತಾರಕಕ್ಕೇರಿತ್ತು. ಹೈಕಮಾಂಡ್‌ ಅಂತಿಮವಾಗಿ ಚಿಕ್ಕನಗೌಡ್ರಗೆ ಮಣೆ ಹಾಕಿರುವುದು ಸಹಜವಾಗಿಯೇ ಎಂ.ಆರ್‌. ಪಾಟೀಲ ಅವರಿಗೆ ಆಘಾತ ತರಿಸಿದೆ. ಟಿಕೆಟ್‌ಗೆ ಒತ್ತಾಯಿಸಿ ಗುರುವಾರವಷ್ಟೇ ಶೆಟ್ಟರ ಅವರ ನಿವಾಸದೆದುರು ಪಾಟೀಲ ಬೆಂಬಲಿಗರು ಪ್ರತಿಭಟನೆ ನಡೆಸಿದ್ದು, ಬೆಂಬಲಿಗನೊಬ್ಬ ಆತ್ಮಹತ್ಯೆಗೆ ಯತ್ನಿಸಿದ್ದ. ಪಾಟೀಲರ ಇಡೀ ಕುಟುಂಬ ಆಗಮಿಸಿ ಶೆಟ್ಟರಗೆ ಕೈ ಮುಗಿದು ಟಿಕೆಟ್‌ ಗೆ ಬೇಡಿತ್ತು. ಇಷ್ಟಾದರೂ ಟಿಕೆಟ್‌ ತಪ್ಪಿರುವುದು ಪಾಟೀಲರನ್ನು ಘಾಸಿಗೊಳಿಸಿದೆ ಎನ್ನಲಾಗುತ್ತಿದೆ.

ಹು-ಧಾ ಪೂರ್ವ ಕ್ಷೇತ್ರಕ್ಕೆ ಬಿಜೆಪಿಯಿಂದ 14 ಜನ ಟಿಕೆಟ್‌ ಆಕಾಂಕ್ಷಿಗಳಿದ್ದು, ಅಂತಿಮವಾಗಿ ಚಂದ್ರಶೇಖರ ಗೋಕಾಕ ಅವರಿಗೆ ಟಿಕೆಟ್‌ ಅದೃಷ್ಟ ಖುಲಾಯಿಸಿದೆ. ಟಿಕೆಟ್‌ ಸ್ಪರ್ಧೆಯಲ್ಲಿ ತೀವ್ರ ಪೈಪೋಟಿ ನಡೆಸಿದ್ದ ಮಾಜಿ ಶಾಸಕ ವೀರಭದ್ರಪ್ಪ ಹಾಲಹರವಿ, ಶಂಕರಪ್ಪ ಬಿಜವಾಡ ಅವರ ಅಸಮಾಧಾನಕ್ಕೆ ಕಾರಣವಾಗಿದೆ. ಮಾದಿಗ ಸಮುದಾಯಕ್ಕೆ ಟಿಕೆಟ್‌ ತಪ್ಪಿರುವುದಕ್ಕೆ ಹಾಲಹರವಿ ಬೆಂಬಲಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮೊದಲ ಪಟ್ಟಿಯಲ್ಲಿ ಟಿಕೆಟ್‌ ವಂಚಿತ ಸೀಮಾ ಮಸೂತಿ ಈಗಾಗಲೇ ಬಂಡಾಯ ಬಾವುಟ ಬೀಸಿದ್ದಾರೆ.

ಬಿಜೆಪಿ ನಾಯಕರಿಗೆ ಟಿಕೆಟ್‌ ವಂಚಿತರನ್ನು ಸಂತೈಯಿಸುವುದು ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಟಿಕೆಟ್‌ ವಂಚಿತರನ್ನು ಸಮಾಧಾನ ಪಡಿಸಲು ಸಾಧ್ಯವಾಗದೆ ಎಲ್ಲಿಯಾದರೂ ಬಂಡಾಯ, ಬೇರೆ ಪಕ್ಷ ಹಾಗೂ ಪಕ್ಷೇತರರಾಗಿ ಸ್ಪರ್ಧೆಗಿಳಿದರೆ ಫ‌ಲಿತಾಂಶ ದೃಷ್ಟಿಯಿಂದ ಪಕ್ಷಕ್ಕೆ ಮುಳುವಾಗುವ ಆತಂಕ ನಾಯಕರನ್ನು ಕಾಡತೊಡಗಿದೆ.

ಬೂದಿ ಮುಚ್ಚಿದ ಕೆಂಡದ ಸ್ಥಿತಿ: ಕಾಂಗ್ರೆಸ್‌ನಲ್ಲಿಯೂ ಸ್ಥಿತಿ ಭಿನ್ನವಾಗಿಲ್ಲ. ನವಲಗುಂದ, ಹು-ಧಾ ಪಶ್ಚಿಮ ಕ್ಷೇತ್ರದಲ್ಲಿ ಟಿಕೆಟ್‌ ವಂಚಿತರ ಆಕ್ರೋಶ ತೀವ್ರಗೊಂಡಿದೆ. ಹು.ಧಾ. ಪಶ್ಚಿಮ ಕ್ಷೇತ್ರದಲ್ಲಿ ಕಾಂಗ್ರೆಸ್‌ ಹಿರಿಯ ಮುಖಂಡರಾದ ಎಸ್‌.ಆರ್‌. ಮೋರೆ, ದೀಪಕ ಚಿಂಚೋರೆ ಟಿಕೆಟ್‌ ಕೈ ತಪ್ಪಿದ್ದಕ್ಕೆ ಆಕ್ರೋಶಗೊಂಡಿದ್ದು, ಪಕ್ಷ ತೊರೆಯುವ, ಪಕ್ಷೇತರ ಸ್ಪರ್ಧೆಯ ಇಚ್ಛೆ ವ್ಯಕ್ತಪಡಿಸಿದ್ದಾರೆ.

ನವಲಗುಂದ ಕ್ಷೇತ್ರದಲ್ಲಿ ಕಾಂಗ್ರೆಸ್‌ ಟಿಕೆಟ್‌ ವಂಚಿತ ಜಿ.ಪಂ. ಉಪಾಧ್ಯಕ್ಷ ಶಿವಾನಂದ ಕರಿಗಾರ, ಪ್ರಕಾಶ ಅಂಗಡಿ ಬಂಡಾಯ ಸ್ಪರ್ಧೆಗೆ ಮುಂದಾಗಿದ್ದು, ಟಿಕೆಟ್‌ ವಂಚಿತ ಮಾಜಿ ಸಚಿವ ಕೆ.ಎನ್‌. ಗಡ್ಡಿ ಪಕ್ಷ ತೊರೆಯಲು ಮುಂದಾದರೆ, ಜಿಪಂ ಮಾಜಿ ಅಧ್ಯಕ್ಷ ಸುಭಾಸ ದ್ಯಾಮಕ್ಕನವರ ಆಕ್ರೋಶ ತೋರಿದ್ದಾರೆ.

ಹು.ಧಾ. ಪಶ್ಚಿಮ ಕ್ಷೇತ್ರದಲ್ಲಿ ಟಿಕೆಟ್‌ ವಂಚಿತ ಎಸ್‌. ಆರ್‌. ಮೋರೆ, ದೀಪಕ ಚಿಂಚೊರೆ ಬಹಿರಂಗವಾಗಿ ಅಸಮಾಧಾನ ತೋಡಿಕೊಂಡಿರುವುದು ಅಭ್ಯರ್ಥಿ ಇಸ್ಮಾಯಿಲ್‌ ತಮಟಗಾರ ಅವರಿಗೆ ಇರಿಸುಮುರುಸು ತರಿಸುವಂತಾಗಿದೆ.

ಅಮರೇಗೌಡ ಗೋನವಾರ

Advertisement

Udayavani is now on Telegram. Click here to join our channel and stay updated with the latest news.

Next