Advertisement

ಮೌನ ಮೋಹಿ ರುಮ್ಸ್

03:45 AM May 07, 2017 | Team Udayavani |

ತನ್ನೊಡಲ ಮೇಲಿನ ಪ್ರಾಕೃತಿಕ ಸೌಂದರ್ಯದಿಂದಲೇ ಪ್ರವಾಸಿಗರನ್ನು ಸೂಜಿಗಲ್ಲಿನಂತೆ ಸೆಳೆಯುವ ಹಿಮಾಚಲ ಪ್ರದೇಶದಲ್ಲಿದ್ದೂ, ಪ್ರವಾಸಿ ಸ್ಥಳವಾಗೇನು ಗುರುತಿಸಿಕೊಳ್ಳದ ರುಮ್ಸ್ ಎಂಬ ಹೆಸರಿನ ಊರು ನಮ್ಮ ಕಣ್ಣಿಗೆ ಕಟ್ಟಿಕೊಡುವ ತರಹೇವಾರಿ ದೃಶ್ಯಗಳ ಮೂಲಕವೇ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿಯುತ್ತದೆ. ಹಮಾr ಪಾಸ್‌ಗೆ ಚಾರಣ ಕೈಗೊಳ್ಳಲು ದೇಶದ ವಿವಿಧೆಡೆಯಿಂದ ಆಗಮಿಸುವ ಚಾರಣಿಗರನ್ನು ಮೊದಲೇ ಬರಮಾಡಿಕೊಳ್ಳುವ ರುಮ್ಸ್ ಗ್ರಾಮ, ಹಾಗೆ ಬರುವವರನ್ನು ಮುದಗೊಳಿಸದೆ ಬೀಳ್ಕೊಡಲಾರದು.

Advertisement

ನಡಿಗೆಯನ್ನೇ ನೆಚ್ಚಿಕೊಂಡವರೆ ಹೆಚ್ಚಿರುವ ಈ ಊರಿನ ಕಡಿದಾದ ರಸ್ತೆಗಳಲ್ಲಿ ವಾಹನಗಳು ಕಾಣಸಿಗುವುದೇ ಅಪರೂಪ. ಎಲ್ಲೆಂದರಲ್ಲಿ ಕಣ್ಣಿಗೆ ಬೀಳುವ ಸೇಬಿನ ಮರಗಳಲ್ಲಿನ ಹಣ್ಣುಗಳಷ್ಟೆ ಸುಂದರವಾಗಿರುವ ಅಲ್ಲಿನ ಜನರೂ ನೆನಪಿನಲ್ಲಿ ಉಳಿಯುವ ಚಿತ್ರಗಳಾಗುತ್ತಾರೆ.

ಸೇಬಿನ ಮರಗಳಂತೆ ಅಲ್ಲಲ್ಲಿ ಗಾಂಜಾ ಗಿಡಗಳು ಕೂಡ ಎದುರುಗೊಳ್ಳುತ್ತವೆ. ಅಪರೂಪಕ್ಕೊಮ್ಮೆಯಾದರೂ ಅಮಲಿನ ಮಹಲಿನಲ್ಲಿ ತೇಲಿಯೇ ಬಿಡೋಣವೆಂದುಕೊಳ್ಳುವ ಕೆಲವು ಚಾರಣಿಗರು, ಹಮಾr ಪಾಸ್‌ ಹಾದಿ ಹಿಡಿಯುವ ಮುನ್ನ ಗಾಂಜಾ ಹೊಗೆ ಹೀರಿ ಹಿಮಾಚಲದ ಚಳಿಗೆ ತತ್ತರಿಸುವ ಮೈ ಬೆಚ್ಚಗಾಗಿಸಿಕೊಳ್ಳುತ್ತಾರೆ. ಸ್ಥಳೀಯರೇನು ಪೊಲೀಸರ ಕಣ್ತಪ್ಪಿಸಿ ಗಾಂಜಾ ಗಿಡಗಳನ್ನು ಬೆಳೆಯುವ ಉಸಾಬರಿಗೆ ಹೋಗುವುದಿಲ್ಲ. ನಮ್ಮಲ್ಲಿ ಕಳೆ ಗಿಡಗಳು ಬೆಳೆಯುವಂತೆ ಇಲ್ಲಿ ಗಾಂಜಾ ಗಿಡಗಳು ತಮ್ಮ ಪಾಡಿಗೆ ತಾವು ಬೆಳೆದು ನಿಲ್ಲುತ್ತವಂತೆ. ಆಗಾಗ ಪೊಲೀಸರು ಕೂಡ ತಮ್ಮ ಕೈಲಾಗುವಷ್ಟು ಗಾಂಜಾ ಗಿಡಗಳನ್ನು ನಾಶ ಮಾಡುತ್ತಾರಂತೆ. 

ಪ್ರವಾಸಿ ಸ್ಥಳವೆಂಬ ಹಣೆಪಟ್ಟಿ ಹೊತ್ತುಕೊಂಡಿರದ ಕಾರಣ ರುಮುವಿನಲ್ಲಿ ಪ್ರವಾಸಿಗರು ಅಪೇಕ್ಷಿಸುವ ಯಾವ ಮೂಲಭೂತ ಸೌಲಭ್ಯಗಳೂ ದೊರೆಯಲಾರವು. ಹಮಾrಪಾಸ್‌ಗೆ ತೆರಳುವ ಚಾರಣಿಗರಿಗೆ ಮಾರ್ಗದರ್ಶಿಗಳಾಗಿ ದುಡಿಯುವ ಇಲ್ಲಿನ ಕೆಲ ಸ್ಥಳೀಯರು, ತಮ್ಮ ಮನೆಗಳಲ್ಲಿ ಕೆಲಕಾಲ ವಿಶ್ರಮಿಸಲು ಅನುವು ಮಾಡಿಕೊಡುತ್ತಾರೆ.

ರುಮ್ಸ್ ಗ್ರಾಮದಲ್ಲಿ ಕಣ್ಣಾಡಿಸಿದಲ್ಲೆಲ್ಲ ಕಾಣಸಿಗುವ ಗಿರಿ ಕಂದರಗಳು, ಮಂಜು ಮತ್ತು ಸೂರ್ಯನ ದೆಸೆಯಿಂದ ಹೊದ್ದುಕೊಳ್ಳುವ ನಾನಾ ರೂಪಗಳು ಅವಿಸ್ಮರಣೀಯ. ಕುಲು ಜಿಲ್ಲೆಗೆ ಸೇರುವ ರುಮ್ಸ್ ಗ್ರಾಮ, ಜಿಲ್ಲಾ ಕೇಂದ್ರದಿಂದ 21 ಕಿ.ಮೀ. ದೂರದಲ್ಲಿದೆ. ರುಮ್ಸ್ ತಲುಪಲು ಶಿಮ್ಲಾದಿಂದ 131 ಕಿ.ಮೀ. ಪಯಣಿಸಬೇಕಾಗುತ್ತದೆ.

Advertisement

ಎಚ್‌.ಕೆ. ಶರತ್‌
ಚಿತ್ರ: ನಿಖೀಲ್‌ ಪಿ.

Advertisement

Udayavani is now on Telegram. Click here to join our channel and stay updated with the latest news.

Next