Advertisement

ಕೆನಡಿಯನ್‌ ಓಪನ್‌ ಟೆನಿಸ್‌: ಮೂರನೇ ಪ್ರಶಸ್ತಿ ಗೆದ್ದ ಸಿಮೋನಾ ಹಾಲೆಪ್‌

10:57 PM Aug 15, 2022 | Team Udayavani |

ಟೊರೊಂಟೊ: ರೊಮೇನಿಯಾದ ಸಿಮೋನಾ ಹಾಲೆಪ್‌ ಮೂರನೇ ಬಾರಿಗೆ “ಕೆನಡಿಯನ್‌ ಓಪನ್‌’ ಟೆನಿಸ್‌ ಪ್ರಶಸ್ತಿ ಜಯಿಸಿದ್ದಾರೆ. ಫೈನಲ್‌ನಲ್ಲಿ ಅವರು ಬ್ರಝಿಲ್‌ನ ಬೀಟ್ರಿಝ್ ಹದ್ದಾದ್‌ ಮಯಾ ಅವರ ಹಾರಾಟವನ್ನು 6-3, 2-6, 6-3 ಅಂತರದಿಂದ ಕೊನೆಗೊಳಿಸಿದರು.

Advertisement

ಈ ಗೆಲುವಿನೊಂದಿಗೆ ಮಾಜಿ ನಂ.1 ಆಟಗಾರ್ತಿ ಸಿಮೋನಾ ಹಾಲೆಪ್‌ ಡಬ್ಲ್ಯುಟಿಎ ರ್‍ಯಾಂಕಿಂಗ್‌ನಲ್ಲಿ ಟಾಪ್‌-10 ಯಾದಿಗೆ ಮರಳಿದರು. ಮುಂದಿನ ವಾರ ಪ್ರಕಟಗೊಳ್ಳಲಿರುವ ರ್‍ಯಾಂಕಿಂಗ್‌ ಯಾದಿಯಲ್ಲಿ ಅವರಿಗೆ 6ನೇ ಸ್ಥಾನ ಲಭಿಸಲಿದೆ.

ಸುದೀರ್ಘ‌ ರ್‍ಯಾಲಿಗೆ ಹೆಸರುವಾಸಿಯಾದ ಹದ್ದಾದ್‌ ಮಯಾ ಫೈನಲ್‌ನ ನೆಚ್ಚಿನ ಆಟಗಾರ್ತಿ ಅಲ್ಲವಾದರೂ ಅಪಾಯಕಾರಿ ಆಟಗಾರ್ತಿಯಾಗಿ ಗೋಚರಿಸಿದ್ದರು. ಹಾಲೆಪ್‌ ಎದುರಿನ ಮೊದಲ ಸೆಟ್‌ ಕಳೆದುಕೊಂಡರೂ ದ್ವಿತೀಯ ಸೆಟ್‌ನಲ್ಲಿ ತಿರುಗಿ ಬಿದ್ದರು. ಆದರೆ ನಿರ್ಣಾಯಕ ಸೆಟ್‌ನಲ್ಲಿ ಅನುಭವಿ ಹಾಲೆಪ್‌ ಮುಂದೆ ಮಯಾ ಆಟ ನಡೆಯಲಿಲ್ಲ.

ಕಠಿನ ಸವಾಲು: “ಆರಂಭದಲ್ಲಿ ಬಹಳ ಕಷ್ಟವಾಯಿತು. ಆಕೆ ಎಡಗೈ ಆಟಗಾರ್ತಿಯಾಗಿದ್ದರಿಂದ ಚೆಂಡು ಹೆಚ್ಚು ಸ್ಪಿನ್‌ ಆಗುತ್ತಿತ್ತು. ಅಷ್ಟೇ ಪವರ್‌ಫ‌ುಲ್‌ ಆಗಿದ್ದರು. ಮಯಾ ವಿರುದ್ಧ ಆಡುವುದು ಸುಲಭವಾಗಿರಲಿಲ್ಲ…’ ಎಂದು 9ನೇ ಡಬ್ಲ್ಯುಟಿಎ-1000 ಪ್ರಶಸ್ತಿ ಗೆದ್ದ ಸಿಮೋನಾ ಹಾಲೆಪ್‌ ಪ್ರತಿಕ್ರಿಯಸಿದರು.

“ವರ್ಷದ ಆರಂಭದಲ್ಲಿ ನಾನು ಹೆಚ್ಚು ಆತ್ಮವಿಶ್ವಾಸ ಹೊಂದಿರಲಿಲ್ಲ. 2022 ಮುಗಿಯುವುದರೊಳಗೆ ಟಾಪ್‌-10 ರ್‍ಯಾಂಕಿಂಗ್‌ ಯಾದಿಯಲ್ಲಿ ಕಾಣಿಸಿಕೊಳ್ಳಬೇಕು ಎಂಬ ಗುರಿ ಹಾಕಿಕೊಂಡಿದ್ದೆ. ಅದು ಈಗಲೇ ಈಡೇರಿದೆ. ನನ್ನ ಪಾಲಿಗೆ ಇದೊಂದು ವಿಶೇಷ ಕ್ಷಣ. ಇದರ ಶ್ರೇಯಸ್ಸನ್ನು ನನಗೇ ಕೊಟ್ಟುಕೊಳ್ಳುತ್ತೇನೆ. ಇನ್ನೂ ಹೆಚ್ಚಿನ ಗೆಲುವಿನ ಗುರಿ ನನ್ನದು’ ಎಂದು ಹಾಲೆಪ್‌ ಹೇಳಿದರು.

Advertisement

ಪಾಬ್ಲೊ ಕರೆನೊ ಬುಸ್ಟ ಬೆಸ್ಟ್‌ ಶೋ
ಮೊದಲ ಮಾಸ್ಟರ್-1000 ಪ್ರಶಸ್ತಿ ಗೆಲುವು
ಮಾಂಟ್ರಿಯಲ್‌: ಪುರುಷರ ಸಿಂಗಲ್ಸ್‌ನಲ್ಲಿ ಸ್ಪೇನ್‌ನ ಶ್ರೇಯಾಂಕ ರಹಿತ ಆಟಗಾರ ಪಾಬ್ಲೊ ಕರೆನೊ ಬುಸ್ಟ ಚಾಂಪಿಯನ್‌ ಆಗಿ ಮೂಡಿಬಂದರು. ಫೈನಲ್‌ನಲ್ಲಿ ಅವರು 8ನೇ ಶ್ರೇಯಾಂಕದ ಪೋಲೆಂಡ್‌ ಆಟಗಾರ ಹ್ಯೂಬರ್ಟ್‌ ಹುರ್ಕಾಝ್ ವಿರುದ್ಧ 3-6, 6-3, 6-3 ಅಂತರದ ಗೆಲುವು ಒಲಿಸಿಕೊಂಡರು. ಇದು ಬುಸ್ಟ ಗೆದ್ದ ಮೊದಲ ಮಾಸ್ಟರ್ -1000 ಟೆನಿಸ್‌ ಪ್ರಶಸ್ತಿ. ಇದರೊಂದಿಗೆ ಅವರು ನೂತನ ಟೆನಿಸ್‌ ರ್‍ಯಾಂಕಿಂಗ್‌ನಲ್ಲಿ 23ರಿಂದ 14ನೇ ಸ್ಥಾನಕ್ಕೆ ಏರಲಿದ್ದಾರೆ.

ಫೈನಲ್‌ನಲ್ಲಿ ಕರೆನೊ ಬುಸ್ಟ ಅವರೇ ನೆಚ್ಚಿನ ಆಟಗಾರನಾಗಿದ್ದರು. 14ನೇ ರ್‍ಯಾಂಕಿಂಗ್‌ನ ಮ್ಯಾಟಿಯೊ ಬೆರೆಟಿನಿ, 12ನೇ ರ್‍ಯಾಂಕಿಂಗ್‌ನ ಜಾನಿಕ್‌ ಸಿನ್ನರ್‌ ಅವರನ್ನೆಲ್ಲ ಮಣಿಸಿ ಬಂದಿದ್ದರು.

ವರ್ಷಾಂತ್ಯದ ಯುಎಸ್‌ ಓಪನ್‌ ಗ್ರ್ಯಾನ್‌ಸ್ಲಾಮ್‌ನಲ್ಲಿ ಈ ಗೆಲುವು ಬುಸ್ಟ ಅವರಲ್ಲಿ ಹೆಚ್ಚಿನ ಉತ್ಸಾಹ ತುಂಬಿಸುವುದರಲ್ಲಿ ಅನುಮಾನವಿಲ್ಲ. 2017 ಮತ್ತು 2020ರ ನ್ಯೂಯಾರ್ಕ್‌ ಟೂರ್ನಿಯಲ್ಲಿ ಅವರು ಸೆಮಿಫೈನಲ್‌ ತನಕ ಸಾಗಿದ್ದರು.

“ನನಗೆ ಒಂದು ಸಾವಿರ ಅಂಕ ಸಿಕ್ಕಿದೆ. ಒಂದು ಟ್ರೋಫಿಯೂ ದೊರೆತಿದೆ. ಇದು ಬಹಳ ಪ್ರಮುಖ ಟ್ರೋಫಿ. ಈ ವಾರದುದ್ದಕ್ಕೂ ನನ್ನ ಗೇಮ್‌ ಉನ್ನತ ಮಟ್ಟದಲ್ಲೇ ಇತ್ತು. ಮೊದಲ ಪಂದ್ಯದಿಂದಲೇ ನಾನು ಉತ್ತಮ ಪ್ರದರ್ಶನ ನೀಡುತ್ತ ಬಂದೆ. ಫೈನಲ್‌ ತನಕವೂ ಇದನ್ನು ಉಳಿಸಿಕೊಂಡೆ…’ ಎಂದು 31 ವರ್ಷದ ಕರೆನೊ ಬುಸ್ಟ ಹೇಳಿದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next