Advertisement

ಮದುಮಗಳಂತೆ ಸಿಂಗಾರಗೊಂಡ ಸಿಹಿಮೊಗೆ!

11:30 AM Jan 24, 2019 | |

ಶಿವಮೊಗ್ಗ: ಇಂದಿನಿಂದ ಆರಂಭವಾಗಲಿರುವ ಸಂಭ್ರಮದ ಸಹ್ಯಾದ್ರಿ ಉತ್ಸವಕ್ಕೆ ಶಿವಮೊಗ್ಗ ನಗರ ಮದುವಣಗಿತ್ತಿಯಂತೆ ಸಿಂಗಾರಗೊಂಡು ನಿಂತಿದೆ. ಹೌದು! ಅಕ್ಷರಶಃ ಶಿವಮೊಗ್ಗ ನಗರದ ಪ್ರಮುಖ ವರ್ತುಲಗಳು, ಕಟ್ಟಡಗಳು ವಿದ್ಯುದ್ದೀಪಗಳಿಂದ ಅಲಂಕೃತಗೊಂಡಿವೆ. ನಗರದ ಪ್ರಮುಖ ವರ್ತುಲಗಳಲ್ಲಿ ಫ್ಲೆಕ್ಸ್‌ಗಳು, ಬ್ಯಾನರ್‌- ಬಂಟಿಂಗ್ಸ್‌ಗಳು ಸಹ್ಯಾದ್ರಿ ಉತ್ಸವದ ಸಂಭ್ರಮವಕ್ಕೆ ಇನ್ನಷ್ಟು ಮೆರಗು ತಂದಿವೆ.

Advertisement

ಜ. 23ರಂದು ಆರಂಭವಾಗಬೇಕಾಗಿದ್ದ ಉತ್ಸವ ತುಮಕೂರಿನ ತ್ರಿವಿಧ ದಾಸೋಹಿ ಡಾ| ಶ್ರೀ ಶಿವಕುಮಾರ ಮಹಾಸ್ವಾಮಿಗಳವರ ನಿಧನದ ಹಿನ್ನೆಲೆಯಲ್ಲಿ ಜ. 24ರಿಂದ ಆರಂಭಗೊಳ್ಳಲಿದೆ. ಪೂರ್ವ ನಿಗದಿಯಂತೆ ಜ. 24ರಿಂದ 27ರವರೆಗೆ ನಗರದ ಹಳೆ ಜೈಲ್‌ ಆವರಣದಲ್ಲಿರುವ ಭವ್ಯವಾದ ಪ್ರಧಾನ ವೇದಿಕೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು, ಗೋಷ್ಠಿಗಳು, ಚಿಂತನ-ಮಂಥನಗಳು ನಡೆಯಲಿವೆ. ಅಲ್ಲದೇ ಹಲವು ಸಮನಾಂತರ ವೇದಿಕೆಗಳಲ್ಲಿ ಜನಪದ ಪ್ರಕಾರಗಳ ಕ್ರೀಡೆ, ಕವಿ ಗೋಷ್ಠಿಗಳು, ರಂಗಪ್ರದರ್ಶನಗಳು, ಚಿತ್ರ ಪ್ರದರ್ಶನಗಳು ನಡೆಯಲಿವೆ.

ಸಹ್ಯಾದ್ರಿ ಉತ್ಸವದ ಅಂಗವಾಗಿ ಜ. 24ರಂದು ಮಧ್ಯಾಹ್ನ 2ಗಂಟೆಗೆ ನಗರದ ಕುವೆಂಪು ರಂಗಮಂದಿರದ ಆವರಣದಿಂದ ರಾಜ್ಯದ ವಿವಿಧ ಭಾಗಗಳಿಂದ ಆಗಮಿಸುವ ಡೊಳ್ಳು, ಹಲಗೆ, ನಂದಿಕೋಲು, ಜಾಂಝ್ ಪಥಕ್‌, ಕಲಾ ತಂಡಗಳೊಂದಿಗೆ ಸ್ಥಬ್ಧಚಿತ್ರಗಳನ್ನೊಳಗೊಂಡ ಭವ್ಯ ಮೆರವಣಿಗೆಯು ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ, ಅಂತಿಮವಾಗಿ ಜೈಲ್‌ ಆವರಣದಲ್ಲಿ ಸಂಪನ್ನಗೊಳ್ಳಲಿದೆ. ಉತ್ಸವಕ್ಕೆ ಮೆರಗು ಹೆಚ್ಚಿಸುವಲ್ಲಿ ಪಾರಂಪರಿಕ ಶೈಲಿಯ ಉಡುಪು ಧರಿಸಿದ ನಗರದ ಕಾಲೇಜುಗಳ ಅಸಂಖ್ಯಾತ ವಿದ್ಯಾರ್ಥಿ-ವಿದ್ಯಾರ್ಥಿನಿಯರು ಮೆರವಣಿಗೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಇವರೊಂದಿಗೆ ನಗರದ ಎಲ್ಲಾ ಇಲಾಖೆಗಳ ಅಧಿಕಾರಿ-ಸಿಬ್ಬಂದಿ ಸಕ್ರಿಯವಾಗಿ ಪಾಲ್ಗೊಳ್ಳಲಿದ್ದಾರೆ. ಉತ್ತಮವಾಗಿ ಸಿಂಗಾರಗೊಂಡು ಮೆರವಣಿಗೆಯಲ್ಲಿ ಭಾಗವಹಿಸುವ ಶಾಲೆ-ಕಾಲೇಜುಗಳಿಗೆ ಆಕರ್ಷಕ ಬಹುಮಾನ ನೀಡಿ ಗೌರವಿಸಲಾಗುವುದು. ಮೆರವಣಿಗೆಯಲ್ಲಿ ಭಾಗವಹಿಸಿ, ಪ್ರಧಾನ ವೇದಿಕೆಯಲ್ಲಿ ನಡೆಯುವ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಳ್ಳುವ ನೌಕರರಿಗೆ ಅನ್ಯ ಕರ್ತವ್ಯ ನಿಮಿತ್ತ ಅರ್ಧ ದಿನದ ಸೌಲಭ್ಯವನ್ನು ಒದಗಿಸಲಾಗುವುದು.

ಪ್ರಧಾನ ವೇದಿಕೆಯ ಸುತ್ತಲೂ ಸುಮಾರು 200ಕ್ಕೂ ಹೆಚ್ಚಿನ ಮಳಿಗೆಗಳನ್ನು ತೆರೆಯಲಾಗಿದ್ದು, ವಿವಿಧ ಇಲಾಖೆಗಳ ಅಭಿವೃದ್ಧಿ ಕಾರ್ಯಕ್ರಮಗಳನ್ನು ಜನರಿಗೆ ಪರಿಚಯಿಸುವ ಪ್ರಚಾರ ಮಳಿಗೆಗಳನ್ನು ತೆರೆಯಲಾಗಿದೆ. ಇದರೊಂದಿಗೆ ಕೃಷಿ, ಕೈಗಾರಿಕೆ ಸೇರಿದಂತೆ ಹಲವು ಮಾಹಿತಿಯುಕ್ತ ಮಳಿಗೆಗಳು, ವಸ್ತ್ರ, ಆಟಿಕೆಗಳ ಮಳಿಗೆಗಳು ಇರಲಿವೆ.

ವಿನೂತನವಾಗಿ ಆಚರಿಸಲಿರುವ ಈ ಬಾರಿಯ ಸಹ್ಯಾದ್ರಿ ಉತ್ಸವದಲ್ಲಿ ಪ್ರತಿಭಾವಂತ ಯುವ ಕಲಾವಿದರಿಗೆ ಆದ್ಯತೆ ನೀಡಲಾಗುತ್ತಿದೆ. ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ತಯಾರಾಗುತ್ತಿರುವ ಯುವ ವಿದ್ಯಾರ್ಥಿಗಳಿಗೆ ಬೆಂಗಳೂರಿನಿಂದ ಆಗಮಿಸಿರುವ ಕೋಟಿಯೋಗ್ರಾಫರ್‌ ತರಬೇತಿ ನೀಡುತ್ತಿದ್ದಾರೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಪ್ರಾಯೋಜಿತ ಜನಪದ ಭಾರತ ಕಾರ್ಯಕ್ರಮಕ್ಕೆ ದೇಶದ ವಿವಿದ ರಾಜ್ಯಗಳ ಪ್ರತಿಭಾವಂತ 215ಕ್ಕೂ ಹೆಚ್ಚಿನ ಕಲಾವಿದರು ಭಾಗವಹಿಸಲಿದ್ದಾರೆ.

Advertisement

21 ಬಗೆಯ ವಾದ್ಯ ಪರಿಕರಗಳನ್ನೊಳಗೊಂಡ ಕಲಾವಿದರೆಲ್ಲ ಒಂದೆಡೆ ಕಲೆತು ಕರ್ನಾಟಕ ಮತ್ತು ಹಿಂದೂಸ್ತಾನಿ ಜುಗಲ್‌ಬಂದಿ ಕಾರ್ಯಕ್ರಮ ನಡೆಸಲಿದ್ದಾರೆ. ಇವರೊಂದಿಗೆ ಜಿಲ್ಲೆಯ ಪ್ರಖ್ಯಾತ ಕಲಾವಿದರು ಒಂದೇ ವೇದಿಕೆಯಲ್ಲಿ ಹಲವು ವಿಶಿಷ್ಟ ಕಾರ್ಯಕ್ರಮಗಳನ್ನು ನೀಡಲಿರುವುದು ವಿಶೇಷವಾಗಿದೆ. ಇದರೊಂದಿಗೆ 50-70ಜನಪದ ಕಲಾವಿದರ ಕಲಾ ಪ್ರದರ್ಶನವೂ ಇದರಲ್ಲಿ ಅಪರೂಪವೆನಿಸಿದೆ. ಇಂತಹ ಹಲವು ಕಾರ್ಯಕ್ರಮಗಳೊಂದಿಗೆ ರಘು ದೀಕ್ಷಿತರಂತಹ ಹಲವು ಖ್ಯಾತನಾಮರೂ ಕಾರ್ಯಕ್ರಮಕ್ಕೆ ಆಗಮಿಸುತ್ತಿದ್ದಾರೆ. ಈ ಸಾಂಸ್ಕೃತಿಕ ಉತ್ಸವದ ಅಂಗವಾಗಿ ಗೋಂದಿ ಚಟ್ನಳ್ಳಿಯಲ್ಲಿ ಕೆಸರುಗದ್ದೆ ಓಟ, ಡಾ| ಬಿ.ಆರ್‌.ಅಂಬೇಡ್ಕರ್‌ ಭವನದಲ್ಲಿ ದೇಹದಾಡ್ಯರ್ ಸ್ಪರ್ಧೆ, ಅಬ್ಬಲಗೆರೆ ಗ್ರಾಮದಲ್ಲಿ ಎತ್ತಿನಗಾಡಿ ಓಟ, ಗೋಪಾಳದಲ್ಲಿ ಈಜು ಸ್ಪರ್ಧೆ ಮತ್ತು ಸ್ಕೇಟಿಂಗ್‌ ಸ್ಪರ್ಧೆ ಹಾಗೂ ಲಾನ್‌ಟೆನ್ನಿಸ್‌ ಸ್ಪರ್ಧೆಗಳು ನಡೆಯಲಿವೆ.

ಇದೇ ಸಂದರ್ಭದಲ್ಲಿ 24ರಿಂದ 27ರವರೆಗೆ ನಗರದ ತೋಟಗಾರಿಕೆ ಇಲಾಖೆಯ ಆವರಣದಲ್ಲಿ ಫಲ- ಪುಷ್ಪ ಪ್ರದರ್ಶನವನ್ನು ಏರ್ಪಡಿಸಲಾಗಿದೆ. ಈ ಫಲ-ಪುಷ್ಪ ಪ್ರದರ್ಶನದಲ್ಲಿ ತೋಟಗಾರಿಕಾ ಬೆಳೆಗಳು, ಹೂವು, ಹಣ್ಣು, ತರಕಾರಿ, ತೋಟದ ಬೆಳೆಗಳು, ಕುಬ್ಜ ಗಿಡಗಳು ಹಾಗೂ ಔಷ ಸಸ್ಯಗಳ ಪ್ರದರ್ಶನ ಹಾಗೂ ಸ್ಪರ್ಧೆಯನ್ನು ಏರ್ಪಡಿಸಲಾಗುವುದು. ಆಸಕ್ತ ರೈತರು, ಸಾರ್ವಜನಿಕರು, ವಿದ್ಯಾರ್ಥಿಗಳು ವಿವಿಧ ಸಂಘ-ಸಂಸ್ಥೆಗಳು, ಕಾರ್ಖಾನೆಗಳು, ನಗರಪಾಲಿಕೆ ಸಂಸ್ಥೆಗಳು ಮತ್ತಿತರರು ಈ ಸ್ಪರ್ಧೆಯಲ್ಲಿ ಭಾಗವಹಿಸಬಹುದಾಗಿದೆ. ರೈತರು ಬೆಳೆದ ವಿವಿಧ ತೋಟಗಾರಿಕೆ ಉತ್ಪನ್ನಗಳ ಪ್ರದರ್ಶಿಕೆಗಳ ಸ್ಪರ್ಧೆ, ಹೂವು, ಹಣ್ಣು, ತರಕಾರಿ, ಸಾಂಬಾರು ಪದಾರ್ಥಗಳು, ದ್ವಿದಳ ಧಾನ್ಯಗಳು, ಎಲೆಗಳನ್ನು ಉಪಯೋಗಿಸಿ ಚಿತ್ರಿಸಿದ ತೋಟಗಾರಿಕೆ ರಂಗೋಲಿ ಸ್ಪರ್ಧೆಗಳು ನಡೆಯಲಿವೆ.

ಮಧ್ಯಾಹ್ನ 2ಕ್ಕೆ ಮೆರವಣಿಗೆ

ಜಿಲ್ಲಾಡಳಿತವು ಜ. 24ರಿಂದ 27ರವರೆಗೆ ಏರ್ಪಡಿಸಿರುವ ಸಹ್ಯಾದ್ರಿ ಉತ್ಸವದ ಅಂಗವಾಗಿ ಜ. 24ರಂದು ಮಧ್ಯಾಹ್ನ 2 ಗಂಟೆಯಿಂದ ನಗರದ ಕುವೆಂಪು ರಂಗಮಂದಿರದ ಆವರಣದಿಂದ ಮೆರವಣಿಗೆ ಹೊರಡಲಿದೆ. ಈ ಮೆರವಣಿಗೆಯಲ್ಲಿ ಶಿವಮೊಗ್ಗದ ಎಲ್ಲಾ ಇಲಾಖೆಗಳ ಅಧಿಕಾರಿ- ಸಿಬ್ಬಂದಿಗಳು ಕಡ್ಡಾಯವಾಗಿ ಭಾಗವಹಿಸುವಂತೆ ಜಿಲ್ಲಾಧಿಕಾರಿಗಳು ಸೂಚಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next