Advertisement

ಅಳಿವೆಬಾಗಿಲು ಕಡಳಾಲದಲ್ಲಿ ಮಹತ್ವದ ಡ್ರೆಜ್ಜಿಂಗ್‌

03:36 PM Nov 22, 2022 | Team Udayavani |

ಮಹಾನಗರ: ನೇತ್ರಾವತಿ-ಫಲ್ಗುಣಿ ಕಡಲು ಸೇರುವ ಅಳಿವೆಬಾಗಿಲಿನಲ್ಲಿ ಮೀನುಗಾರರ ಹಾಗೂ ವಾಣಿಜ್ಯ ವ್ಯವಹಾರದ ಬೋಟ್‌ಗಳಿಗೆ ನಿತ್ಯ ಸಮಸ್ಯೆ ಆಗುತ್ತಿರುವ ಮರಳನ್ನು ಡ್ರೆಜ್ಜಿಂಗ್‌(ಬೃಹತ್‌ ಗಾತ್ರದ ಯಂತ್ರದ) ಮಾಡುವ ಮಹತ್ವದ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ.

Advertisement

ಸುಮಾರು 1 ಕೋ.ರೂ. ವೆಚ್ಚ ದಲ್ಲಿ ಅಳಿವೆಬಾಗಿಲು ಕಡಲಿನ ವಾಣಿಜ್ಯ ಚಾನಲ್‌ನ 80 ಮೀ. ಅಗಲಕ್ಕೆ ಸುಮಾರು 350 ಮೀಟರ್‌ ಉದ್ದ ಹಾಗೂ ತಳದಿಂದ 4 ಮೀ. ಆಳದವರೆಗೆ ಹೂಳೆತ್ತುವ ಕಾಮಗಾರಿ ಆರಂಭಿಸಲಾಗಿದೆ. ಈ ಮೂಲಕ ವಾಣಿಜ್ಯ ನೌಕೆ ಹಾಗೂ ಮೀನುಗಾರಿಕೆ ಬೋಟ್‌ ಗಳ ಸುಗಮ ಸಂಚಾರಕ್ಕೆ ಅನುಕೂಲವಾಗಲಿದೆ. ನಾಲ್ಕು ದಿನಗಳ ಹಿಂದೆ ಕಾಮಗಾರಿ ಆರಂಭವಾಗಿದ್ದು, ಮುಂದಿನ 3 ತಿಂಗಳವರೆಗೆ ಈ ಕಾಮಗಾರಿ ನಡೆಯಲಿದೆ. ಶಾಸಕ ವೇದವ್ಯಾಸ ಕಾಮತ್‌ ಅವರು ಕಾಮಗಾರಿಗೆ ಇತ್ತೀಚೆಗೆ ಚಾಲನೆ ನೀಡಿದ್ದರು.

ಗುಜರಾತ್‌ ಮೂಲದ ಸಂಸ್ಥೆಯ ಬೃಹತ್‌ ಯಂತ್ರದಿಂದ ಹೂಳೆತ್ತುವ ಕೆಲಸ ನಡೆಯುತ್ತಿದೆ. ಈ ವೇಳೆ ಬೋಟ್‌ ಸಂಚಾರಕ್ಕೆ ಯಾವುದೇ ಸಮಸ್ಯೆ ಆಗದಂತೆ ನೋಡಿಕೊಳ್ಳಲಾಗುತ್ತಿದೆ. ಹೂಳೆತ್ತಿದ ಮರಳನ್ನು ಬಾರ್ಜ್‌ ಮೂಲಕ ಸೋಮೇಶ್ವರ ಕಡೆಗೆ ಕೊಂಡೊಯ್ಯಲಾಗುತ್ತದೆ.

ಹೂಳು ಭಾರೀ ಡೇಂಜರ್‌!

ಮೀನುಗಾರಿಕೆ ದೋಣಿಗಳ ಸಂಚಾರ, ಲಕ್ಷದ್ವೀಪಕ್ಕೆ ಮಿನಿ ಹಡಗುಗಳ ಸಂಚಾರಕ್ಕೆ ಅಳಿವೆಬಾಗಿಲಿನಲ್ಲಿ ತುಂಬಿರುವ ಬೃಹತ್‌ ಪ್ರಮಾಣದ ಹೂಳು ಬಹಳಷ್ಟು ಅಪಾಯಕಾರಿ. ಇದರಿಂದ ಹಲವು ಅವಘಡಗಳು ಸಂಭವಿಸಿದ ಉದಾಹರಣೆಯಿದೆ. ಪ್ರತೀ ವರ್ಷ ಅಳಿವೆಬಾಗಿಲು ಪ್ರದೇಶ ಬೋಟುಗಳಿಗೆ ಆತಂಕದ ಜಾಗವಾಗಿ ಪರಿಣಮಿಸಿದೆ. ಜತೆಗೆ ಈ ಹಿಂದೆ ಒಂದೆರಡು ಬೋಟ್‌ಗಳು ಅಳಿವೆಬಾಗಿಲು ಸಮೀಪ ಅವಘಡಕ್ಕೀಡಾಗಿ ಇನ್ನೂ ಅದರ ಅವಶೇಷವನ್ನು ತೆರವು ಮಾಡದ ಹಿನ್ನೆಲೆಯಲ್ಲಿ ಮೀನುಗಾರಿಕೆ ದೋಣಿಗಳು ಅಪಾಯ ಎದುರಿಸುತ್ತಿವೆ.

Advertisement

ಆಳ ಡ್ರೆಜ್ಜಿಂಗ್‌ ಉದ್ದೇಶ

ಮೀನುಗಾರಿಕೆ ಬೋಟ್‌ಗಳಿಗೆ ಅಳಿವೆಬಾಗಿಲಿನಲ್ಲಿ 3 ಮೀಟರ್‌ ಆಳಕ್ಕೆ ಡ್ರೆಜ್ಜಿಂಗ್‌ ಮಾಡಿದರೆ ಸಾಕಾಗುತ್ತದೆ. ಆದರೆ ಲಕ್ಷದ್ವೀಪಕ್ಕೆ ತೆರಳುವ (ಗೂಡ್ಸ್‌) ವಾಣಿಜ್ಯ ಬೋಟು, ಮಂಜಿಗಳಿಗೆ 4 ಮೀಟರ್‌ ಆಳ ಡ್ರೆಜ್ಜಿಂಗ್‌ ಮಾಡಬೇಕು. ಹೀಗಾಗಿ ಪ್ರತೀ ವರ್ಷ 4 ಮೀಟರ್‌ಗಳಷ್ಟು ಡ್ರೆಜ್ಜಿಂಗ್‌ ಮಾಡಲಾಗುತ್ತದೆ. ಆದರೆ ನೀರಿನ ಹರಿಯುವ ವೇಗಕ್ಕೆ ಮರಳು ತುಂಬುವುದರಿಂದ ಪ್ರತೀ ವರ್ಷವೂ ಸಮಸ್ಯೆ ಮುಂದುವರಿಯುತ್ತಿದೆ. ಆದರೆ ಕಳೆದ ವರ್ಷ ಡ್ರೆಜ್ಜಿಂಗ್‌ ಮಾಡಿರಲಿಲ್ಲ.

ಸಿಎಂ ಅಂಕಿತದ ನಿರೀಕೆಯಲ್ಲಿ 29 ಕೋ.ರೂ. ಡ್ರೆಜ್ಜಿಂಗ್‌! ಮಂಗಳೂರಿನ ಅಳಿವೆಬಾಗಿಲು ವ್ಯಾಪ್ತಿಯಲ್ಲಿ ತುಂಬಿರುವ ಹೂಳನ್ನು ಪೂರ್ಣ ಪ್ರಮಾಣದಲ್ಲಿ ಮೇಲಕ್ಕೆತ್ತುವ 29 ಕೋ.ರೂ.ಗಳ ಮಹತ್ವದ ಯೋಜನೆ ಅನುಷ್ಠಾನ ನಿರೀಕ್ಷೆ ಕಂಡು ಕೆಲವು ವರ್ಷವಾದರೂ ಇನ್ನೂ ಟೆಂಡರ್‌ ಹಂತದಲ್ಲಿಯೇ ಬಾಕಿಯಾಗಿದೆ. ಇದು ಸಾಧ್ಯವಾಗುತ್ತಿದ್ದರೆ, ಅಳಿವೆಬಾಗಿಲಿನಲ್ಲಿ ಹೂಳು ಸಮಸ್ಯೆಯನ್ನು ಶಾಶ್ವತವಾಗಿ ಪರಿಹರಿಸಲು -7 ಮೀ.(ಮೈನಸ್‌ 7)ನಷ್ಟು ಆಳಕ್ಕೆ ಡ್ರೆಜ್ಜಿಂಗ್‌ (ಈಗ -4) ಮಾಡಬಹುದಾಗಿದೆ. ಈ ಯೋಜನೆಗೆ 5 ಬಾರಿ ಟೆಂಡರ್‌ ಆಗಿದ್ದರೂ ಕಾನೂನಾತ್ಮಕ ಹಾಗೂ ತಾಂತ್ರಿಕ ಕಾರಣದಿಂದ ಯಾರಿಗೂ ಟೆಂಡರ್‌ ನೀಡಲು ಸಾಧ್ಯವಾಗಿಲ್ಲ. ಇದೀಗ 6ನೇ ಬಾರಿ ಟೆಂಡರ್‌ ಕರೆಯಲಾಗಿದೆ. ಈಗಲೂ ಕೆಲವು ತಾಂತ್ರಿಕ ಸಮಸ್ಯೆ ಎದುರಾಗಿದೆ. ಹೀಗಾಗಿ, ಸಿಎಂ ಅಧ್ಯಕ್ಷತೆಯ ಮೆರಿಟೈಮ್‌ ಬೊರ್ಡ್‌ನಲ್ಲಿ ವಿಶೇಷ ಅನುಮತಿ ಪಡೆದು ಟೆಂಡರ್‌ ಒಪ್ಪಿಗೆ ಪಡೆಯಬೇಕಿದೆ.

ಕಾಮಗಾರಿ ಆರಂಭ ಅಳಿವೆಬಾಗಿಲಿನಲ್ಲಿ ಹೂಳೆತ್ತುವ ಕಾಮಗಾರಿ ಆರಂಭಿಸಲಾಗಿದೆ. ಸುಮಾರು 350 ಮೀಟರ್‌ ಉದ್ದ -4 ಮೀ. ಆಳದವರೆಗೆ ಹೂಳೆತ್ತಲಾಗುತ್ತದೆ. ಈ ಮೂಲಕ ನೌಕೆ ಹಾಗೂ ಮೀನುಗಾರಿಕೆ ಬೋಟ್‌ಗಳ ಸುಗಮ ಸಂಚಾರಕ್ಕೆ ಅನುಕೂಲವಾಗಲಿದೆ. –ಪ್ರವೀಣ್‌, ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌, ಬಂದರು ಇಲಾಖೆ

Advertisement

Udayavani is now on Telegram. Click here to join our channel and stay updated with the latest news.

Next