Advertisement

ಶಾಶ್ವತ ನೀರಿಗಾಗಿ ಸಹಿ ಸಂಗ್ರಹ

12:26 PM Sep 02, 2019 | Team Udayavani |

ಗಜೇಂದ್ರಗಡ: ಶಾಶ್ವತ ಕುಡಿಯುವ ನೀರು ಪೂರೈಸುವ ಉದ್ದೇಶಿತ ಜಿಗಳೂರು ಕೆರೆ ನಿರ್ಮಾಣ ಕಾಮಗಾರಿಯನ್ನು ಮೂರು ತಿಂಗಳಿನಲ್ಲಿ ಪೂರ್ಣಗೊಳಿಸುವಂತೆ ಒತ್ತಾಯಿಸಿ ಭಾರತ ಪ್ರಜಾಸತ್ತತ್ಮಕ ಯುವಜನ ಫೆಡರೇಶನ್‌ ತಾಲೂಕು ಸಮಿತಿ ಪಟ್ಟಣದ 1ನೇ ವಾರ್ಡನ ರಾಜವಾಡೆ ಮನೆ ಮನೆಗೆ ತೆರಳಿ ಕರ ಪತ್ರ ನೀಡಿ ಸಹಿ ಸಂಗ್ರಹಕ್ಕೆ ರವಿವಾರ ಚಾಲನೆ ನೀಡಲಾಯಿತು.

Advertisement

ಈ ವೇಳೆ ಮಾತನಾಡಿದಸಿಪಿಐಎಂ ಮುಖಂಡ ಎಂ.ಎಸ್‌ ಹಡಪದ, ನವೀಲುತೀರ್ಥ ಜಲಾಶಯದಿಂದ ಗಜೇಂದ್ರಗಡ, ರೋಣ ಹಾಗೂ ನರೇಗಲ್ಲ ಪಟ್ಟಣಗಳಿಗೆ ಶಾಶ್ವತ ಕುಡಿಯುವ ನೀರು ಒದಗಿಸುವ ಉದ್ದೇಶದಿಂದ ಜಿಗಳೂರು ಗ್ರಾಮದ ಬಳಿ 2008ರಲ್ಲಿಯೇ 307 ಎಕರೆ ಜಮೀನಿನಲ್ಲಿ ಕೆರೆ ನಿರ್ಮಿಸಲು ಪ್ರಾರಂಭಿಸಿ ಹತ್ತು ವರ್ಷ ಕಳೆದಿದೆ. ಯೋಜನೆಗೆ 110 ಕೋಟಿಗೂ ಅಧಿಕ ಅನುದಾನ ವ್ಯಯಿಸಲಾಗಿದೆ. ಆದರೂ ಯೋಜನೆ ನಿಗದಿತ ಕಾಲಮಿತಿಯಲ್ಲಿ ಪೂರ್ಣಗೊಳ್ಳುವ ಲಕ್ಷಣಗಳು ಇನ್ನೂ ಗೋಚರಿಸುತ್ತಿಲ್ಲ. ಈಚೆಗೆ ಸುರಿದ ಮಳೆಯಿಂದಾಗಿ ನವಿಲು ತೀರ್ಥ ಜಲಾಶಯ ಭರ್ತಿಯಗಿ ಹೆಚ್ಚುವರಿ ನೀರನ್ನು ಮಲಪ್ರಭಾ ನದಿಗೆ ಹರಿಬಿಟ್ಟಿದ್ದರಿಂದ ಕೆಳ ಭಾಗದ ಹಲವು ಗ್ರಾಮಗಳು ಹಾನಿಯಾಗಿವೆ. ಇದೇ ನೀರನ್ನು ಉದ್ದೇಶಿತ ಜಿಗಳೂರ ಕೆರೆಗೆ ಹಾಯಿಸಿದ್ದರೆ ಬೇಸಿಗೆ ಸಂದರ್ಭದಲ್ಲಿ ಕುಡಿಯುವ ನೀರಿನ ಬವಣೆ ನೀಗುತ್ತಿತ್ತು. ಆದರೆ ನಮ್ಮನ್ನಾಳುವ ಸರ್ಕಾರಗಳು, ಈ ಭಾಗದ ಶಾಸಕ, ಸಂಸದರ ನಿರ್ಲಕ್ಷ್ಯವೇ ಯೋಜನೆ ವಿಳಂಬಕ್ಕೆ ಕಾರಣವಾಗಿದೆ. ಈ ನಿಟ್ಟಿನಲ್ಲಿ ಡಿವೈಎಫ್‌ಐ ನೇತೃತ್ವದಲ್ಲಿ ಸಹಿ ಸಂಗ್ರಹ ಅಭಿಯಾನ ಪ್ರಾರಂಭಿಸಿದ್ದು, ಸಾರ್ವಜನಿಕರು ಕುಡಿಯುವ ನೀರಿನ ಹೋರಾಟಕ್ಕೆ ಸಂಘಟನೆ ಕರೆ ನೀಡಿದಾಗ ಎಲ್ಲರೂ ಪಾಲ್ಗೊಳ್ಳಬೇಕು ಎಂದು ಮನವಿ ಮಾಡಿದರು.

ಡಿವೈಎಫ್‌ಐ ತಾಲೂಕು ಅಧ್ಯಕ್ಷ ಫಯಾಜ್‌ ತೋಟದ ಮಾತನಾಡಿ, 30 ಸಾವಿರಕ್ಕೂ ಅಧಿಕ ಜನಸಂಖ್ಯೆಯುಳ್ಳ ಗಜೇಂದ್ರಗಡ ಜನರ ಕುಡಿಯುವ ನೀರಿನ ಸಮಸ್ಯೆ ನೀಗಿಸಲು ಯಾವೊಂದು ಜಲಮೂಲಗಳಿಲ್ಲ. ಈ ಭಾಗದ ಜನಪ್ರತಿನಿಧಿಗಳು ಕೇವಲ ಚುನಾವಣೆ ಸಂದರ್ಭದಲ್ಲಿ ಜನರನ್ನು ಬಳಕೆ ಮಾಡಿಕೊಳ್ಳುತ್ತಾರೆ ಹೊರತು ಶಾಶ್ವತ ಕುಡಿಯುವ ನೀರಿನ ಸಮಸ್ಯೆಗೆ ಪರಿಹಾರ ಕಂಡುಕೊಂಡಿಲ್ಲ. ಕುಡಿಯುವ ನೀರಿನ ಸಮಸ್ಯೆಗೆ ಶಾಶ್ವತವಾಗಿ ಮುಕ್ತಿ ನೀಡುವ ಉದ್ದೇಶದಿಂದ ಡಿವೈಎಫ್‌ಐ ನೇತೃತ್ವದಲ್ಲಿ ಹೋರಾಟ ರೂಪಿಸಲಾಗಿದೆ. ಪಕ್ಷಾತೀತವಾಗಿ ಸಾರ್ವಜನಿಕರು ಪಾಲ್ಗೊಂಡು ಶಾಶ್ವತ ಕುಡಿಯುವ ನೀರಿನ ಯೋಜನೆ ಪೂರ್ಣಗೊಳ್ಳಬೇಕು ಎಂದು ಮನವಿ ಮಾಡಿದರು.

ಇದೇ ವೇಳೆ 1ನೇ ವಾರ್ಡ್‌ನ ಪ್ರತಿ ಮನೆಗೆ ತೆರಳಿ ಯೋಜನೆ ಕುರಿತು ಜಾಗೃತಿ ಮೂಡಿಸಲಾಯಿತು. ಅಲ್ಲದೇ ಸಹಿ ಸಂಗ್ರಹಿಸಲಾಯಿತು.

ಬಾಲು ರಾಠೊಡ, ಪೀರು ರಾಠೊಡ, ಮೈಬುಸಾಬ್‌ ಹವಾಲ್ದಾರ, ಕಾರ್ತಿಕ ಸಿಂಧೆ, ನಜೀರಸಾಬ್‌ ನಾಲಬಂದ, ರಜಾಕ್‌ ಗೋಡೇಕಾರ, ಚಂದ್ರು ರಾಠೊಡ ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next