Advertisement

ಸರಕಾರಿ ಕಾಲೇಜಿಗಾಗಿ ಸಹಿ ಸಂಗ್ರಹ

11:11 AM Feb 23, 2018 | Team Udayavani |

ವಾಡಿ: ಹದಿನೈದಕ್ಕೂ ಹೆಚ್ಚು ಪ್ರೌಢಶಾಲೆಗಳಿರುವ ಪಟ್ಟಣದಲ್ಲಿ ಸರಕಾರಿ ಕಾಲೇಜಿನ ಸೌಲಭ್ಯವಿಲ್ಲ. ಹತ್ತು ವರ್ಷಗಳಿಂದ ಹೋರಾಡುತ್ತಿದ್ದರೂ ಮೊಂಡ ಸರಕಾರಕ್ಕೆ ಕಿವಿಯೇ ಕೇಳಿಸುತ್ತಿಲ್ಲ. ಸರಕಾರಕ್ಕೆ ಸಮಸ್ಯೆ ಬಿಸಿ ಮುಟ್ಟಿಸಲು ನಿಮ್ಮ ಸಹಿ ಕೊಡಿ ಎಂದು ಸಂಘಟಕರು ಧ್ವನಿವರ್ಧಕದಲ್ಲಿ ಕೇಳಿಕೊಳ್ಳುತ್ತಿದ್ದಂತೆ, ಮಾರುಕಟ್ಟೆಗೆ ಬಂದಿದ್ದ ವಿದ್ಯಾವಂತರೂ ಸೇರಿದಂತೆ ಅನಕ್ಷರಸ್ಥರೂ ಮುಗಿಬಿದ್ದು ತಮ್ಮ ಹೆಬ್ಬಟ್ಟಿನ ಸಹಿ ನೀಡಿ ಶಿಕ್ಷಣ ಇಲಾಖೆ ನಿರ್ಲಕ್ಷಕ್ಕೆ ಆಕ್ರೋಶದ ಪೆಟ್ಟು ನೀಡಿದರು.

Advertisement

ಪಟ್ಟಣದಲ್ಲಿ ಸರಕಾರಿ ಪದವಿ ಪೂರ್ವ ಹಾಗೂ ಪದವಿ ಮಹಾವಿದ್ಯಾಲಯ ಸ್ಥಾಪಿಸುವಂತೆ ಆಗ್ರಹಿಸಿ ಕಳೆದ ಹತ್ತು ವರ್ಷಗಳಿಂದ ಹಂತ ಹಂತವಾಗಿ ಹೋರಾಡುತ್ತಿರುವ ಎಐಡಿಎಸ್‌ಒ ಹಾಗೂ ಎಐಡಿವೈಒ ಸಂಘಟಕರು, ಅದೇ ಬೇಡಿಕೆಗೆ ಸಂಬಂಧಿಸಿದಂತೆ ಗುರುವಾರ ಪಟ್ಟಣದ ಅಂಬೇಡ್ಕರ್‌ ವೃತ್ತದಲ್ಲಿ ಹಮ್ಮಿಕೊಂಡಿದ್ದ ಸಹಿ ಸಂಗ್ರಹ ಚಳವಳಿಗೆ ಸಾರ್ವಜನಿಕರಿಂದ ವ್ಯಾಪಕ ಬೆಂಬಲ ವ್ಯಕ್ತವಾಯಿತು. ಮಹಿಳೆಯರು, ಯುವಕರು, ವಿದ್ಯಾರ್ಥಿಗಳು, ಶಿಕ್ಷಣ ಪ್ರೇಮಿಗಳು, ವಿವಿಧ ಸಂಘ ಸಂಸ್ಥೆಗಳ ಕಾರ್ಯಕರ್ತರು, ಬೀದಿ ವ್ಯಾಪಾರಿಗಳು, ವಿವಿಧ ಇಲಾಖೆಗಳ ನೌಕರರು, ಕಾರ್ಮಿಕರು ಸಾವಿರಾರು ಸಖ್ಯೆಯಲ್ಲಿ ಸಹಿ ಮಾಡಿದರು.

ವಿಶೇಷವಾಗಿ ಅನಕ್ಷರಸ್ಥರೂ ಸಹ ಹೆಚ್ಚಿನ ಸಂಖ್ಯೆಯಲ್ಲಿ ಹೆಬ್ಬೆರಳಿನ ಸಹಿ ನಮೂದಿಸಿದ್ದು, ಗಮನ ಸೆಳೆಯಿತು. ಅನೇಕರು ಸಹಿಯೊಂದಿಗೆ ಹೋರಾಟಕ್ಕೆ ಧನ ಕಾಣಿಕೆ ನೀಡಿ ಸಂಘಟಕರ ಬೆನ್ನು ತಟ್ಟಿದರು.
 
ಸಹಿ ಸಂಗ್ರಹ ಚಳವಳಿ ಉದ್ದೇಶಿಸಿ ಮಾತನಾಡಿದ ಎಐಡಿಎಸ್‌ಒ ಜಿಲ್ಲಾಧ್ಯಕ್ಷ ಜಗನ್ನಾಥ ಎಸ್‌.ಎಚ್‌., ಕುಡಿಯುವ ನೀರು, ಶಿಕ್ಷಣ ಮತ್ತು ಆರೋಗ್ಯ ಇವುಗಳನ್ನು ಯಾರೂ ಹೋರಾಡಿ ಕೇಳಬಾರದು. ಸರಕಾರವೇ ಅವುಗಳನ್ನು ಗುರುತಿಸಿ ಜನರಿಗೆ ನೀಡಬೇಕು. ಅದು ಸರಕಾರದ ಮೊದಲ ಕರ್ತವ್ಯ. 

ಮೂಲಭೂತ ಸೌಲತ್ತುಗಳನ್ನೂ ಹೋರಾಡಿ ಕೇಳಬೇಕಾದ ಪರಿಸ್ಥಿತಿ ಬಂದಿದೆ. ಕಳೆದ ಒಂದು ದಶಕದಿಂದ ವಾಡಿ ಪಟ್ಟಣಕ್ಕೆ ಸರಕಾರಿ ಕಾಲೇಜು ಕೊಡಿ ಎಂದು ಹೋರಾಡುತ್ತಿದ್ದರೆ, ಸರಕಾರ, ಶಿಕ್ಷಣ ಇಲಾಖೆ ಹಾಗೂ ಜನಪ್ರತಿನಿಧಿ ಎನ್ನಿಸಿಕೊಂಡವರಿಗೆ ವಿದ್ಯಾರ್ಥಿಗಳ ಕೂಗು ಕೇಳಿಸಿಕೊಳ್ಳಲು ಸಮಯವಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಶಿಕ್ಷಣ ಉಳಿಸಿ ಸಮಿತಿ ಜಿಲ್ಲಾ ಸಂಚಾಲಕ ವೀರಭದ್ರಪ್ಪ ಆರ್‌.ಕೆ. ಮಾತನಾಡಿ, ಖಾಸಗಿ ಕಾಲೇಜುಗಳ ಸ್ಥಾಪನೆಗೆ ಪರವಾನಗಿ ನೀಡುತ್ತಿರುವ ಸರಕಾರ, ಬಡ ಮಕ್ಕಳ ಅಕ್ಷರ ಜ್ಞಾನಕ್ಕಾಗಿ ಒಂದು ಸರಕಾರಿ ಕಾಲೇಜು ಬೇಡಿಕೆ ಈಡೇರಿಸಲು ಹಿಂದೇಟು ಹಾಕುತ್ತಿದೆ ಎಂದು ದೂರಿದರು. ಎಐಡಿವೈಒ ಅಧ್ಯಕ್ಷ ರಾಘವೇಂದ್ರ ಅಲ್ಲಿಪುರ, ಎಐಡಿಎಸ್‌ಒ ಅಧ್ಯಕ್ಷ ಶರಣು ಹೇರೂರ, ಮುಖಂಡರಾದ ಶರಣು ವಿ.ಕೆ., ಗುಂಡಣ್ಣ ಎಂ.ಕೆ, ಶಿವುಕುಮಾರ ಆಂದೋಲಾ, ಮಲ್ಲಿಕಾರ್ಜುನ ಗಂದಿ, ಮಲ್ಲಣ್ಣ ದಂಡಬಾ, ಗೌತಮ ಪರತೂರಕರ, ಕೋಕಿಲಾ ಹೇರೂರ, ಶ್ರೀಶೈಲ, ದೌಲಪ್ಪ ದೊರೆ ಪಾಲ್ಗೊಂಡಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next