Advertisement

ನಗರಸಭೆ ಅಧ್ಯಕರ ಕೊಠಡಿಗೆ ಮುತ್ತಿಗೆ

06:11 PM May 18, 2022 | Team Udayavani |

ಗದಗ: ಗದಗ-ಬೆಟಗೇರಿ ನಗರಸಭೆಯಲ್ಲಿ ಈ ಹಿಂದೆ ಹೊರಗುತ್ತಿಗೆಯಡಿ ನೇಮಿಸಿಕೊಂಡಿರುವ 92 ಜನ ಪೌರ ಕಾರ್ಮಿಕರ ಬಗ್ಗೆ ಚರ್ಚಿಸಲು ನಗರಸಭೆ ಅಧ್ಯಕ್ಷೆ ಉಷಾ ಮಹೇಶ್‌ ದಾಸರ ಅಧ್ಯಕ್ಷತೆಯಲ್ಲಿ ನಡೆದ ಉಪ ಸಮಿತಿ ಸಭೆಗೆ ಗಂಟಿ ಗಾಡಿ ಮಹಿಳೆಯರು ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದ ಹಿನ್ನೆಲೆಯಲ್ಲಿ, ನಗರಸಭೆ ಸದಸ್ಯರ ಮಧ್ಯೆ ವಾಗ್ವಾದ ನಡೆದು ಕೆಲಕಾಲ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು.

Advertisement

ನಗರಸಭೆ ಅಧ್ಯಕ್ಷರ ಕೊಠಡಿಯಲ್ಲಿ ಮಂಗಳವಾರ ಸಂಜೆ ನಗರಸಭೆ ಅಧ್ಯಕ್ಷೆ ಉಷಾ ದಾಸರ ಅಧ್ಯಕ್ಷತೆಯಲ್ಲಿ ನಗ ರಸಭೆ ಸರ್ವ ಪಕ್ಷ ಸದಸ್ಯರನ್ನೊಳಗೊಂಡ ಉಪ ಸಮಿತಿ ಸಭೆ ನಡೆಯುತ್ತಿತ್ತು. ಈ ವೇಳೆ ನಗರಸಭೆಗೆ ಪೌರ ಕಾರ್ಮಿಕರ ಕೊರತೆ ಹಿನ್ನೆಲೆಯಲ್ಲಿ ಹೊಸದಾಗಿ ನೇಮಿಸಿಕೊಳ್ಳುವ ಬಗ್ಗೆ ಪ್ರಸ್ತಾಪವಾಯಿತು. ಅದಕ್ಕೆ ಧ್ವನಿಗೂಡಿಸಿದ ನಗರಸಭೆ ಕಾಂಗ್ರೆಸ್‌ ಸದಸ್ಯ ಕೃಷ್ಣ ಪರಾಪುರ, ಈಗಿರುವ ಗಂಟಿಗಾಡಿ ಮಹಿಳೆಯರನ್ನು ಹೊರ ಗುತ್ತಿಗೆ ಬದಲಾಗಿ ಒಳಗುತ್ತಿಗೆಗೆ ತಂದು ನೇರವಾಗಿ ವೇತನ ಪಾವತಿಸಬೇಕೆಂದು ಒತ್ತಾಯಿಸಿದರು.

ಈ ವಿಷಯವನ್ನು ನಗರಸಭೆ ಅಧ್ಯಕ್ಷರು ತಿರಸ್ಕರಿಸುತ್ತಿದ್ದಂತೆ, ಉಪ ಸಮಿತಿ ಸಭೆಯಲ್ಲಿ ಆಡಳಿತ ಮತ್ತು ವಿಪಕ್ಷ ಸದಸ್ಯರ ಮಧ್ಯೆ ವಾಗ್ವಾದ ಆರಂಭವಾಯಿತು. ಇದೇ ವೇಳೆ ಕೃಷ್ಣ ಪರಾಪುರ ಪರ ಗಂಟಿ ಗಾಡಿ ಮಹಿಳೆಯರು ನಗರಸಭೆ ಅಧ್ಯಕ್ಷರ ಕೊಠಡಿಗೆ ಮುತ್ತಿಗೆ ಹಾಕಿ ಧರಣಿ ನಡೆಸಿದರು. ಈ ವೇಳೆ ಬಿಗುವಿನ ವಾತಾವರಣ ಸೃಷ್ಟಿಯಾಗುತ್ತಿದ್ದಂತೆ ಬೆಟಗೇರಿ ಬಡಾವಣೆ ಠಾಣೆ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಸ್ಥಿತಿ ತಿಳಿಗೊಳಿಸಿದರು.

ಈ ವೇಳೆ ಮಾತನಾಡಿದ ಕೃಷ್ಣ ಪರಾಪುರ, ನಗರಸಭೆಯಲ್ಲಿ ಮಹಿಳಾ ಅಧ್ಯಕ್ಷರ, ಸದಸ್ಯೆಯರ ಆಡಳಿತವನ್ನು ಅವರ ಪತಿರಾಯರೇ ಚಲಾಯಿಸುತ್ತಿದ್ದಾರೆ. ಪೌರ ಕಾರ್ಮಿಕರು, ಗಂಟಿಗಾಡಿ ಮಹಿಳೆಯರಿಗೆ ನ್ಯಾಯ ಕೇಳಿದರೆ, ರೌಡಿ ಶೀಟರ್‌ ಗಳನ್ನು ಕರೆಸಿ ಬೆದರಿಕೆ ಹಾಕಿಸುತ್ತಿದ್ದಾರೆ. ಮಹೇಶ ದಾಸರ, ಕೆಲ ರೌಡಿಶೀಟರ್‌ಗಳು ನಗರಸಭೆಗೆ ಯಾವುದೇ ಸಂಬಂಧವಿಲ್ಲದಿದ್ದರೂ ಉಪ ಸಮಿತಿ ಸಭೆಯಲ್ಲಿ ಭಾಗವಹಿಸಿದ್ದಾರೆ. ಈ ಮೂಲಕ ನಮ್ಮ ಹಕ್ಕುಗಳನ್ನು ಕಸಿದುಕೊಳ್ಳುತ್ತಿದ್ದಾರೆ. ನಗರಸಭೆ ಅಧ್ಯಕ್ಷರೂ ಸಹ ಓರ್ವ ದಲಿತ ಮಹಿಳೆಯಾಗಿದ್ದರೂ ದಲಿತ ಮಹಿಳೆಯರ ಬೇಡಿಕೆಗಳಿಗೆ ಸ್ಪಂದಿಸುತ್ತಿಲ್ಲ ಎಂದು ಆರೋಪಿಸಿದರು.

ಈ ಕುರಿತು ಪ್ರತಿಕ್ರಿಯಿಸಿದ ನಗರಸಭೆ ಅಧ್ಯಕ್ಷೆ ಉಷಾ ದಾಸರ, ಈ ಹಿಂದೆ ಜಿಲ್ಲಾ ಧಿಕಾರಿಗಳು ನಗರಸಭೆ ಆಡಳಿತಾಧಿಕಾರಿಯಾಗಿದ್ದ ಅವಧಿಯಲ್ಲಿ 92 ಜನರು ಒಳ ಗುತ್ತಿಗೆಯಡಿ ನೇಮಕಗೊಂಡಿದ್ದರು. ಅದಕ್ಕಿರುವ ಕಾನೂನು ತೊಡಕು ನಿವಾರಣೆಗಾಗಿ ನಗರಸಭೆ ಸದಸ್ಯರನ್ನೊಳಗೊಂಡ ಉಪ ಸಮಿತಿ ರಚಿಸಲಾಗಿದೆ. ಉಪ ಸಮಿತಿ ಸಭೆ ನಡೆಯುತ್ತಿರುವಾಗ ಅನಗತ್ಯವಾಗಿ ಗಂಟಿ ಗಾಡಿ ಮಹಿಳೆಯರು ಪ್ರತಿಭಟನೆ ನಡೆಸಿದ್ದಾರೆ. ಇತ್ತೀಚೆಗೆ ಅವರ ಸಂಬಳವನ್ನು 5 ಸಾವಿರ ರೂ.ನಿಂದ 6,500 ರೂ.ಗೆ ಹೆಚ್ಚಿಸಿದರೂ, ಲೆಕ್ಕಿಸದೇ ಯಾರದೋ ಮಾತು ಕೇಳಿ ಗಲಾಟೆ ಮಾಡಿರುವುದು ಸರಿಯಲ್ಲ ಎಂದು ತಮ್ಮ ಕ್ರಮ ಸಮರ್ಥಿಸಿಕೊಂಡರು.

Advertisement
Advertisement

Udayavani is now on Telegram. Click here to join our channel and stay updated with the latest news.

Next