ಕೊಪ್ಪಳ: ಉದ್ಯೋಗ ಖಾತ್ರಿ ಕೆಲಸ ನೀಡಬೇಕು ಹಾಗೂ ಕೆಲಸ ಮಾಡಿದ ಬಾಕಿ ಹಣವನ್ನು ಕೂಡಲೇ ಬಿಡುಗಡೆ ಮಾಡಬೇಕೆಂದು ಒತ್ತಾಯಿಸಿ ತಾಲೂಕಿನ ಹೈದರ್ ನಗರದ ನಿವಾಸಿಗಳು ಶನಿವಾರ ಹಟ್ಟಿ ಗ್ರಾಪಂಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.
ಗ್ರಾಮ ಪಂಚಾಯತ್ ಅಧಿಕಾರಿಗಳು ಉದ್ಯೋಗ ಖಾತ್ರಿ ಯೋಜನೆಯಡಿ 500ಕ್ಕೂ ಹೆಚ್ಚು ಜನರಿಂದ ಕೆಲಸ ಮಾಡಿಸಿಕೊಂಡಿದ್ದಾರೆ. ಆದರೆ ತಿಂಗಳು ಕಳೆದರೂ ನಮಗೆ ಕೂಲಿ ಹಣವನ್ನು ಖಾತೆಗೆ ಜಮೆ ಮಾಡಿಲ್ಲ. ಇದರಿಂದ ನಾವು ನಿತ್ಯ ಜೀವನ ಮಾಡುವುದು ಕಷ್ಟವಾಗಲಿದೆ. ಮೊದಲೇ ಜಿಲ್ಲೆಯಲ್ಲಿ ಮಳೆಯಿಲ್ಲ. ಬರದ ಪರಿಸ್ಥಿತಿ ಆವರಿಸುತ್ತಿದೆ. ಹೊರಗಡೆ ಹೋಗಿ ದುಡಿಯಬೇಕು ಎಂದು ಮನಸ್ಸು ಮಾಡಿದರೂ ಗ್ರಾಪಂನಿಂದ ನರೇಗಾ ಕೆಲಸ ಸಿಗುತ್ತದೆ ಎಂಬ ಆಸೆಯಿಂದ ಇಲ್ಲಿಯೇ ಕೆಲಸ ಮಾಡುತ್ತಿದ್ದೇವೆ. ಆದರೆ ಕೆಲಸ ಮಾಡಿದ್ದಕ್ಕೆ ಸಕಾಲಕ್ಕೆ ಕೂಲಿ ಹಣ ಪಾವತಿ ಮಾಡುತ್ತಿಲ್ಲ ಎಂದು ಹೈದರ್ ನಗರದ ನಿವಾಸಿಗಳು ಅಸಮಾಧಾನ ವ್ಯಕ್ತಪಡಿಸಿದರು.
ಕೂಡಲೇ ಕೂಲಿ ಹಣ ಬಿಡುಗಡೆ ಮಾಡಬೇಕು. ಇನ್ನೂ ಹೈದರ್ ನಗರದಲ್ಲಿಯೇ ನಮಗೆ ಕೆಲಸ ಕೊಡಿ ಎಂದರೆ ಗ್ರಾಪಂ ಸಿಬ್ಬಂದಿ ನಮಗೆ ಹಟ್ಟಿ ಗ್ರಾಪಂನ ಮುರ್ಲಾಪುರ ಗ್ರಾಮದ ಕೆರೆಯ ಹೂಳೆತ್ತಲು ಕೆಲಸಕ್ಕೆ ಕರೆದುಕೊಂಡು ಹೋಗುತ್ತಾರೆ. ಇದರಿಂದ ನಮಗೆ ತೊಂದರೆಯಾಗುತ್ತಿದೆ. ಇನ್ನೂ ಕೆರೆಯಲ್ಲಿ ಹೊಸಲು ನೀರನ್ನೇ ನಾವು ಕುಡಿದು ಕೆಲಸ ಮಾಡಬೇಕಾದ ಪರಿಸ್ಥಿತಿ ಇದೆ. ಕೆಲಸ ಮಾಡಿ ಸ್ವಲ್ಪ ವಿಶ್ರಾಂತಿ ಪಡೆಯಲು ನೆರಳಿನ ವ್ಯವಸ್ಥೆಯಿಲ್ಲ. ಇನ್ನೂ ತಾಯಂದಿರು ತಮ್ಮ ಮಕ್ಕಳನ್ನು ಕರೆ ತರುತ್ತಿದ್ದು, ಮಕ್ಕಳಿಗೆ ಅಲ್ಲಿ ನೆರಳಿನ ವ್ಯವಸ್ಥೆಯಿಲ್ಲದಿರುವುದರಿಂದ ಮಕ್ಕಳು ಚಡಪಡಿಸುವೆ. ಕೂಡಲೇ ಕೆಲಸ ಮಾಡಿದ ಸ್ಥಳದಲ್ಲಿ ನೆರಳು, ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕೆಂದು ಒತ್ತಾಯ ಮಾಡಿದರು.
ನಮ್ಮ ಗ್ರಾಮದ ಸದಸ್ಯರು ನಮಗೆ ಸರಿಯಾಗಿ ಸ್ಪಂದನೆ ಮಾಡುತ್ತಿಲ್ಲ. ಗ್ರಾಪಂನಿಂದ ತಿಂಗಳಿಗೆ ಮೂರು ದಿನ ಮಾತ್ರ ಕೆಲಸ ಕೊಡುತ್ತಾರೆ. ಮತ್ತೆ ತಿಂಗಳುಗಟ್ಟಲೇ ನಮ್ಮನ್ನು ಕಾಯಿಸುತ್ತಾರೆ. ಇದರಿಂದ ನಮಗೆ ತೊಂದರೆಯಾಗುತ್ತಿದೆ. ಕೆಲಸವಿಲ್ಲದೇ ಮನೆಯಲ್ಲಿ ಕಾಲಿ ಕುಳಿತುಕೊಳ್ಳುವ ಪರಿಸ್ಥಿತಿ ಬಂದಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಸ್ಥಳಕ್ಕೆ ನರೇಗಾ ಅಧಿಕಾರಿಗಳು ಆಗಮಿಸಿ ಸಮಸ್ಯೆ ಬಗೆಹರಿಸುವ ಕುರಿತು ಭರವಸೆ ನೀಡಿದರಲ್ಲದೇ, ಬಾಕಿ ಹಣ ಕೂಡಲೇ ಪಾವತಿಗೆ ಕ್ರಮ ಕೈಗೊಳ್ಳುವ ಕುರಿತು ಭರವಸೆ ನೀಡಿದ ಬಳಿಕ ಜನರು ತಮ್ಮ ಧರಣಿಯನ್ನು ವಾಪಾಸ್ ಪಡೆದರು. ಮೀನಾಕ್ಷಿ ಬಡಿಗೇರ, ಸತ್ಯಪ್ಪ ಬಡಿಗೇರ, ಚೌಡಪ್ಪ ಹೈದರನಗರ, ವಾಲವ್ವ, ಲಚ್ಚಪ್ಪ, ರೇಖಪ್ಪ, ಪ್ರಭು, ಸಚಿನ, ಮಂಜುನಾಥ,ಚಂದ್ರು, ಸಂತೋಷ ಇತರರಿದ್ದರು.