Advertisement

ಸಿದ್ರಾಮಾವಲೋಕನ’ಬಿಡುಗಡೆ 

03:45 AM Jan 01, 2017 | Team Udayavani |

ಬೆಂಗಳೂರು: ರಾಜ್ಯ ಸರ್ಕಾರದ 2016ನೇ ಸಾಲಿನ ವೈಫ‌ಲ್ಯಗಳ ಕುರಿತು ಬಿಜೆಪಿ ಪಟ್ಟಿಯೊಂದನ್ನು ಬಿಡುಗಡೆ ಮಾಡಿದ್ದು, ಇದಕ್ಕೆ “ಸಿದ್ರಾಮಾವಲೋಕನ’ ಎಂದು ಹೆಸರಿಟ್ಟಿದೆ.

Advertisement

2016ನೇ ಕ್ಯಾಲೆಂಡರ್‌ ವರ್ಷದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರ ವೈಫ‌ಲ್ಯಗಳಲ್ಲೇ ಕಾಲ ಕಳೆದಿದ್ದು, ಹಲವು ವಿವಾದ, ಭ್ರಷ್ಟಾಚಾರ ಪ್ರಕರಣಗಳಲ್ಲೇ ದಿನ ದೂಡಿದೆ. ಹೀಗಾಗಿ ಸರ್ಕಾರದ ವೈಫ‌ಲ್ಯಗಳ ಕುರಿತು “ಸಿದ್ರಾಮಾವಲೋಕನ’ ಎಂಬ ಆರೋಪಗಳ ಪಟ್ಟಿ ಬಿಡುಗಡೆ ಮಾಡಲಾಗುತ್ತಿದೆ ಎಂದು ರಾಜ್ಯ ಬಿಜೆಪಿ ವಕ್ತಾರರೂ ಆಗಿರುವ ಶಾಸಕ ಎಸ್‌. ಸುರೇಶ್‌ಕುಮಾರ್‌ ಹೇಳಿದ್ದಾರೆ.

ವಿಧಾನಸೌಧದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ದುಬಾರಿ ವಾಚ್‌ ಹಗರಣದೊಂದಿಗೆ 2016ರ ಕ್ಯಾಲೆಂಡರ್‌ ವರ್ಷ ಆರಂಭವಾಯಿತು. ಆದರೆ ವರ್ಷ ಮುಗಿದರೂ ವಾಚ್‌ ಹಗರಣ ಬಗೆಹರಿಯುವ ಲಕ್ಷಣ ಕಾಣಿಸುತ್ತಿಲ್ಲ. ಇದರಿಂದ ಸರ್ಕಾರದ “ಟೈಂ’ ಚೆನ್ನಾಗಿಲ್ಲ ಎಂಬುದು ಸ್ಪಷ್ಟವಾಗಿದ್ದು, ದಿನಕ್ಕೊಂದು ವಿವಾದ, ಹಗರಣ, ಆರೋಪಗಳಲ್ಲೇ ಕಾಲ ಕಳೆಯುವಂತಾಗಿದೆ ಎಂದು ವ್ಯಂಗ್ಯವಾಡಿದರು.

ಸರ್ಕಾರದ ಕಾರ್ಯವೈಖರಿಯನ್ನು ರಾಜಕೀಯ ಪ್ರಮಾದ, ಅಧಿಕಾರಶಾಹಿ ಪ್ರಮಾದ ಮತ್ತು ಕಾರ್ಯವೈಖರಿ ಪ್ರಮಾದ ಎಂದು ಮೂರು ಹಂತಗಳಲ್ಲಿ ವಿಶ್ಲೇಷಿಸಬಹುದು. ಡಿವೈಎಸ್ಪಿ ಅನುಪಮಾ ಶೆಣೈ ರಾಜೀನಾಮೆ ಪ್ರಕರಣ ನಡೆಯಿತು. ಅದಕ್ಕೆ ಸಂಬಂಧಿಸಿದಂತೆ ಪರಮೇಶ್ವರ ನಾಯ್ಕ ಸಚಿವ ಸ್ಥಾನ ಕಳೆದುಕೊಳ್ಳಬೇಕಾಯಿತು. ಅದೇ ರೀತಿ ಡಿವೈಎಸ್ಪಿ ಗಣಪತಿ ಪ್ರಕರಣದಲ್ಲಿ ಸಚಿವ ಕೆ.ಜೆ. ಜಾರ್ಜ್‌ ಅಧಿಕಾರ ಕಳೆದುಕೊಂಡು, ಹೈಕಮಾಂಡ್‌ ಕೃಪಾಕಟಾಕ್ಷ ಇದ್ದುದರಿಂದ ಮತ್ತೆ ಸಚಿವ ಸ್ಥಾನ ಪಡೆಯುವಂತಾಯಿತು ಎಂದು ಹೇಳಿದರು.
ಅದೇ ರೀತಿ ಟಿಪ್ಪು ಜಯಂತಿ ಆಚರಣೆ ವೇಳೆ ಸಚಿವ ತನ್ವೀರ್‌ ಸೇs… ಅವರು ಮೊಬೈಲ್‌ನಲ್ಲಿ ಅಶ್ಲೀಲ ಚಿತ್ರ ವೀಕ್ಷಿಸಿದ ಪ್ರಕರಣ, ಸಚಿವರಾಗಿದ್ದ ಎಚ್‌.ವೈ.ಮೇಟಿ ಅವರ ರಾಸಲೀಲೆ ಪ್ರಕರಣಗಳು ನಡೆದು ಮುಜುಗರದ ಪ್ರಸಂಗಗಳು ಎದುರಾದರೆ, ಮುಖ್ಯಮಂತ್ರಿಗಳು ಮತ್ತು ಸಚಿವರಿಗೆ ಆಪ್ತರಾದವರು ಅಕ್ರಮ ನೋಟು ದಂಧೆ ಪ್ರಕರಣದಲ್ಲಿ ಸಿಲುಕಿ ಈ ಸರ್ಕಾರ ಎಷ್ಟರ ಮಟ್ಟಿಗೆ ಭ್ರಷ್ಟಾಚಾರಕ್ಕೆ ಕುಮ್ಮಕ್ಕು ನೀಡುತ್ತಿದೆ ಎಂಬುದು ಸಾಬೀತಾಯಿತು. ಮುಖ್ಯಮಂತ್ರಿಗಳ ಆಪ್ತ ಮರಿಗೌಡ ಅವರು ಜಿಲ್ಲಾಧಿಕಾರಿಗಳಿಗೆ ಬೆದರಿಕೆ ಹಾಕುವ ಮೂಲಕ ಒಳ್ಳೆಯ ಅಧಿಕಾರಿಗಳಿಗೆ ಕಾಲವಿಲ್ಲ ಎಂಬುದನ್ನು ತೋರಿಸಿಕೊಟ್ಟರು ಎಂದು ಆರೋಪಿಸಿದರು.

ಅದೇ ರೀತಿ ಹಿಂದೂ ನಾಯಕರ ಹತ್ಯೆ ಪ್ರಕರಣ, ಎಸ್‌ಡಿಪಿಐ ವಿರುದ್ಧ ಕ್ರಮ ಕೈಗೊಳ್ಳುವಲ್ಲಿ ಸರ್ಕಾರ ವಿಫ‌ಲವಾಗಿದ್ದು, ಕಾವೇರಿ ವಿವಾದ ಸಂದರ್ಭದಲ್ಲಿ ನಡೆದ ಹೋರಾಟದಲ್ಲಿ ಇಬ್ಬರು ಮೃತಪಟ್ಟಿರುವುದು, ಮಹದಾಯಿ ವಿವಾದದ ವೇಳೆ ಯಮಲೂರಿನಲ್ಲಿ ಪೊಲೀಸರು ನಡೆಸಿದ ದೌರ್ಜನ್ಯ, ಕೆಪಿಎಸ್‌ಸಿಯಲ್ಲಿ ನಡೆದಿರುವ ವಿದ್ಯಮಾನಗಳು, ಸ್ಟೀಲ್‌ ಬ್ರಿಡ್ಜ್ ವಿವಾದದಲ್ಲಿ ಸಂವೇದನಾರಹಿತವಾಗಿ ವರ್ತಿಸಿದ ಸರ್ಕಾರದ ವೈಖರಿ, ಲೋಕಾಯುಕ್ತ ನೇಮಕ ಬದಲು ಭ್ರಷ್ಟಾಚಾರ ನಿಗ್ರಹ ದಳ ರಚನೆ ಮೂಲಕ ಲೋಕಾಯುಕ್ತ ಸಂಸ್ಥೆಯನ್ನೇ ನಿಗ್ರಹ ಮಾಡಿ ಭ್ರಷ್ಟಾಚಾರಿಗಳಿಗೆ ನೆರವಾಗಿದ್ದು… ಹೀಗೆ ಹತ್ತಾರು ಪ್ರಕರಣಗಳನ್ನು ಸುರೇಶ್‌ಕುಮಾರ್‌ ಉದಾಹರಿಸಿದರು.

Advertisement

2017ರಲ್ಲಾದರೂ ಸರ್ಕಾರ ನಡೆಸುವವರಿಗೆ ಒಳ್ಳೆಯ ಬುದ್ಧಿ ಬಂದು ಆಡಳಿತದಲ್ಲಿರುವವರು ಆಪ್ತ ವಲಯದಿಂದ ದೂರವಾಗಿ ಜನರ ಭಾವನೆಗಳಿಗೆ ಸ್ಪಂದಿಸುವ ರೀತಿ ಆಡಳಿತ ನಡೆಸಲಿ ಎಂದು ರಾಜ್ಯದ ಜನರ ಪರವಾಗಿ ವಿನಂತಿಸಿಕೊಳ್ಳುತ್ತೇನೆ ಎಂದು ಹೇಳಿದರು.

ಸಿದ್ದರಾಮಯ್ಯ ಅವರ ದುಬಾರಿ ವಾಚ್‌ ಹಗರಣದೊಂದಿಗೆ 2016ರ ಕ್ಯಾಲೆಂಡರ್‌ ವರ್ಷ ಆರಂಭವಾಯಿತು. ಆದರೆ ವರ್ಷ ಮುಗಿದರೂ ವಾಚ್‌ ಹಗರಣ ಬಗೆಹರಿಯುವ ಲಕ್ಷಣ ಕಾಣಿಸುತ್ತಿಲ್ಲ. ಇದರಿಂದ ಸರ್ಕಾರದ “ಟೈಂ’ ಚೆನ್ನಾಗಿಲ್ಲ ಎಂಬುದು ಸ್ಪಷ್ಟವಾಗಿದ್ದು, ದಿನಕ್ಕೊಂದು ವಿವಾದ, ಹಗರಣ, ಆರೋಪಗಳಲ್ಲೇ ಕಾಲ ಕಳೆಯುವಂತಾಗಿದೆ.
– ಸುರೇಶ್‌ ಕುಮಾರ್‌, ಬಿಜೆಪಿ ವಕ್ತಾರ

Advertisement

Udayavani is now on Telegram. Click here to join our channel and stay updated with the latest news.

Next