Advertisement

ಸಿದ್ರಾಮಣ್ಣ ಎನ್ನುತ್ತಲೇ ಬೆನ್ನಿಗೆ ಚೂರಿ ಹಾಕಿದ

09:57 AM Nov 29, 2019 | Lakshmi GovindaRaj |

ಹಿರೇಕೆರೂರು: “ನನ್ನನ್ನು ಸಿದ್ರಾಮಣ್ಣ, ಸಿದ್ರಾಮಣ್ಣ ಎನ್ನುತ್ತಿದ್ದ ಬಿ.ಸಿ.ಪಾಟೀಲ ಬೆನ್ನಿಗೆ ಚೂರಿ ಹಾಕುತ್ತಾನೆ ಎಂದು ನನಗೆ ಗೊತ್ತೇ ಆಗಿಲ್ಲ. ಅವನು ರಾಜಕಾರಣ ಅಂದರೆ ಪೊಲೀಸ್‌ ಕೆಲಸ ಎಂದು ತಿಳಿದುಕೊಂಡಿದ್ದಾನೆ. ಇನ್ನೂ ಅವನಿಗೆ ಪೊಲೀಸ್‌ ಬುದ್ಧಿ ಹೋಗಿಯೇ ಇಲ್ಲ’ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಆರೋಪಿಸಿದರು.

Advertisement

ಪಟ್ಟಣದಲ್ಲಿ ಬುಧವಾರ ಕಾಂಗ್ರೆಸ್‌ ಅಭ್ಯರ್ಥಿ ಬಿ.ಎಚ್‌.ಬನ್ನಿಕೋಡ ಪರ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, “ಮಿಸ್ಟರ್‌ ಬಿ.ಸಿ. ಪಾಟೀಲ, ನಾನು ಜೆಡಿಎಸ್‌ ಬಿಟ್ಟು ಕಾಂಗ್ರೆಸ್‌ ಸೇರಿರಲಿಲ್ಲ. ನನ್ನನ್ನು ದೇವೇಗೌಡರು ಪಕ್ಷದಿಂದ ಉಚ್ಛಾಟನೆ ಮಾಡಿದ್ದರು. ಬಳಿಕ ಒಂದು ವರ್ಷ “ಅಹಿಂದ’ ಸಂಘಟನೆ ಮಾಡಿದೆ. ಆಗ ಸೋನಿಯಾ ಗಾಂಧಿ ಪಕ್ಷಕ್ಕೆ ಕರೆದರು.

ಸುಳ್ಳು ಹೇಳಿ ಬಿಜೆಪಿಗೆ ಹೋದ ನಿಮಗೂ, ನನಗೂ ಸಂಬಂಧ, ಹೋಲಿಕೆ ಇದೆಯಾ? ಈ ಇತಿಹಾಸ ತಿಳಿದುಕೊ. ದುಡ್ಡು ಪಡೆದು ಬಿಜೆಪಿಗೆ ಹೋಗಿದ್ದನ್ನು ಹೇಳಿದರೆ ಮಾನನಷ್ಟ ಮೊಕದ್ದಮೆ ಹಾಕುವುದಾಗಿ ಹೇಳುತ್ತೀಯಾ? ದಯಮಾಡಿ ಮಾನನಷ್ಟ ಮೊಕದ್ದಮೆ ಹಾಕು. ಆಗ ನೀನೇ ಸಿಕ್ಕಿ ಬೀಳುತ್ತೀಯಾ; ನಾನಲ್ಲ’ ಎಂದು ಏಕವಚನದಲ್ಲಿ ಹರಿಹಾಯ್ದರು.

ಬಿಜೆಪಿಗೆ ಹೋಗಿದ್ದು ಏಕೆ?: ಬಿ.ಸಿ.ಪಾಟೀಲ ದುಡ್ಡು, ಅಧಿಕಾರಕ್ಕೆ ಹೋಗಿಲ್ಲ ಎಂದಾದರೆ ಬಿಜೆಪಿಗೆ ಏಕೆ ಹೋಗಿದ್ದಾನೆ. ಏನು ತೊಂದರೆ ಆಗಿತ್ತು ಅವನಿಗೆ. ಹೋಗುವಾಗ ತಮ್ಮನ್ನು ಗೆಲ್ಲಿಸಿದ ಮತದಾರರಿಗೆ, ಟಿಕೆಟ್‌ ಕೊಟ್ಟ ಪಕ್ಷದವರಿಗೆ ಕೇಳಿದ್ದೀರಾ? ಯಾರ ಅನುಮತಿ ಇಲ್ಲದೇ ಸ್ವಾರ್ಥಕ್ಕಾಗಿ, ದುಡ್ಡಿಗಾಗಿ, ಅಧಿಕಾರಕ್ಕಾಗಿ ಬಿಜೆಪಿ ಸೇರಿದರು. ಇಂಥವರು ಸಾರ್ವಜನಿಕ ರಂಗದಲ್ಲಿ ಇರಲು ಅರ್ಹರಾ, ಅನರ್ಹರಾ ಎಂದು ಕ್ಷೇತ್ರದ ಜನ ನೀವೇ ತೀರ್ಮಾನ ಮಾಡಿ ಎಂದು ಆಕ್ರೋಶಗೊಂಡರು.

ಕಳೆದ ಚುನಾವಣೆಯಲ್ಲಿ ಬಿ.ಸಿ.ಪಾಟೀಲರನ್ನು ಗೆಲ್ಲಿಸಿಕೊಡಿ ಎಂದು ನಾವು ನಿಮ್ಮಲ್ಲಿ ಮನವಿ ಮಾಡಿಕೊಳ್ಳದೇ ಇದ್ದಿದ್ದರೆ ಬಿ.ಸಿ. ಪಾಟೀಲ ಗೆಲ್ಲುತ್ತಿರಲಿಲ್ಲ. ಈಗ ಶಾಸಕನನ್ನಾಗಿ ಮಾಡಿದವರನ್ನು, ಟಿಕೆಟ್‌ ಕೊಟ್ಟವರನ್ನು ಕೇಳದೆ ಬಿಜೆಪಿಗೆ ಹೋಗಿದ್ದಾನೆ. ಸರ್ವಜ್ಞ ಪ್ರಾ ಧಿಕಾರ ಮಾಡಿದವನು, ಕೆರೆ ತುಂಬಿಸಲು ಹಣ ಕೊಟ್ಟವನು, ರಟ್ಟಿಹಳ್ಳಿ ತಾಲೂಕು ಮಾಡಿದವನು ನಾನು.

Advertisement

ಎಲ್ಲದನ್ನೂ ನಾನೇ ತಂದಿದ್ದೇನೆ ಎನ್ನುತ್ತೀಯಲ್ಲ, ನೀನೇನು ಹಣಕಾಸು ಸಚಿವನಾಗಿದ್ದಿಯಾ? ಈಗ ಬಿ.ಎಸ್‌.ಯಡಿಯೂರಪ್ಪ ಹೆಸರು ಹೇಳುತ್ತೀಯಾ? ಅಂದು ನನ್ನನ್ನು ಇಂದ್ರ- ಚಂದ್ರ, ಮಹಾನ್‌ ನಾಯಕ ಎಂದು ನಿನ್ನದೇ ನಾಲಿಗೆಯಿಂದ ಹೇಳಿ, ಈಗ ನನ್ನ ಬಗ್ಗೆ ಟೀಕೆ ಮಾಡುತ್ತಿದ್ದೀಯಲ್ಲ ನಾಚಿಕೆ ಆಗಲ್ವಾ ಎಂದು ಹರಿಹಾಯ್ದರು.

ಬಿ.ಸಿ.ಪಾಟೀಲ ಸ್ವಾರ್ಥಕ್ಕಾಗಿ ಬಿಜೆಪಿ ಸೇರಿದ್ದಾರೆ. ಯಡಿಯೂರಪ್ಪ ಮಂತ್ರಿ ಮಾಡುತ್ತೇನೆ ಎಂದು ಹೇಳಿರಬಹುದು. ಆದರೆ, 12 ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಗೆಲ್ಲುತ್ತದೆ. ಇದರಿಂದ ಬಿ.ಸಿ.ಪಾಟೀಲ ಕನಸು ಕನಸಾಗಿಯೇ ಉಳಿಯುತ್ತದೆ. ಬಿ.ಸಿ.ಪಾಟೀಲ ಸೋತ ಮೇಲೆ ಅಲ್ಲೇ ಇರುತ್ತಾರೆ ಎಲ್ಲಿಯೂ ಹೇಳ್ಳೋಕ್ಕಾಗಲ್ಲ ಎಂದು ಹೇಳಿದರು.

ಮುಂಬೈ ನೋಟು.. ಬನ್ನಿಕೋಡ್‌ಗೆ ಓಟು..!: “ಆಪರೇಶನ್‌ ಕಮಲ’ ಸಂದರ್ಭದಲ್ಲಿ ಬಿಜೆಪಿಯವರು ನಡೆಸಿದ ಸಂಭಾಷಣೆಯನ್ನು ರೆಕಾರ್ಡ್‌ ಮಾಡಿ ಇದೇ ಬಿ.ಸಿ.ಪಾಟೀಲ ಉಗ್ರಪ್ಪ ಅವರಿಗೆ ಕೊಟ್ಟಿದ್ದರು. ಅದರಲ್ಲಿ ನಾವು ನಾಲ್ಕು ಜನ ಬರುತ್ತೇವೆ. ಏನು ಕೊಡುತ್ತಿರೋ ಕೊಡಿ? ಎಂದಿದ್ದರು. ಏನು ಕೊಡುತ್ತಿರೋ ಕೊಡಿ ಎಂದರೆ ಏನರ್ಥ? ಕೋಲಾರದ ಶಾಸಕ ಶ್ರೀನಿವಾಸಗೌಡ ಅವರು ವಿಧಾನಸಭೆಯಲ್ಲಿಯೇ ಬಿಜೆಪಿಯವರು ಹಣದ ಆಮಿಷವೊಡ್ಡಿ ಮುಂಗಡ ಹಣ ಕಳುಹಿಸಿದ್ದರು.

ಅದನ್ನು ನಾನು ವಾಪಸ್‌ ಕಳುಹಿಸಿದ್ದೆ ಎಂದು ಹೇಳಿದ್ದು ದಾಖಲಾಗಿದೆ. ಹೀಗಿರುವಾಗ ಬಿ.ಸಿ.ಪಾಟೀಲ ಸುಮ್ಮನೇ ಹೋಗಿರುತ್ತಾರಾ? ಬಿ.ಸಿ.ಪಾಟೀಲರಿಗೆ ಆಸೆ ಜಾಸ್ತಿ. ಇನ್ನೂ ಹೆಚ್ಚೆ ತೆಗೆದುಕೊಂಡಿರಬಹುದು. ಪಾಟೀಲ ದುಡ್ಡು ಕೊಟ್ಟರೆ ತೆಗೆದುಕೊಳ್ಳಿ. ಅದು ಮುಂಬೈ ನೋಟು. ಅದನ್ನು ಪಡೆದು ಬನ್ನಿಕೋಡ್‌ಗೆ ಮತ ನೀಡಿ ಎಂದು ಸಿದ್ದರಾಮಯ್ಯ ಹೇಳಿದರು.

ಎಲ್ಲಿದೆ ಭಾರತದಲ್ಲಿ ಸಂತುಷ್ಟಿ?: ಪ್ರಧಾನಿ ಮೋದಿಯವರು ವಿದೇಶಕ್ಕೆ ಹೋದಲೆಲ್ಲ ಭಾರತೀಯರು ಸಂತುಷ್ಟರಾಗಿದ್ದಾರೆ ಎಂದು ಹೇಳುತ್ತಾರೆ. ಆದರೆ, ಜಾಗತಿಕ ಹಸಿವಿನ ಸೂಚ್ಯಂಕ ಸಮೀಕ್ಷೆ ಪ್ರಕಾರ 2017ರಲ್ಲಿ ನಮ್ಮ ದೇಶ 93ನೇ ಸ್ಥಾನದಲ್ಲಿದ್ದರೆ, 2019ರಲ್ಲಿ 102ನೇ ಸ್ಥಾನದಲ್ಲಿದೆ. ಪರಿಸ್ಥಿತಿ ಹೀಗಿದ್ದಾಗಿಯೂ ಮೋದಿಯವರು ಹೋದಲೆಲ್ಲ ಭಾರತೀಯರು ಸಂತುಷ್ಟರಾಗಿದ್ದಾರೆ ಎಂದು ಸುಳ್ಳು ಹೇಳುತ್ತಿದ್ದಾರೆ ಎಂದು ಸಿದ್ದರಾಮಯ್ಯ ಆರೋಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next