Advertisement

ಸಿದ್ದು ಪುತ್ರನ ಕ್ಷೇತ್ರದಲ್ಲಿ ಕುಟುಂಬಕ್ಕೆ ಬಹಿಷ್ಕಾರ

11:48 AM Dec 14, 2018 | Team Udayavani |

ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿಗೆ ಹೊಂದಿಕೊಂಡಂತಿರುವ ನಂಜನಗೂಡು ತಾಲೂಕಿನ ತಗಡೂರು ಗ್ರಾಮದಲ್ಲಿ ದೇವರಿಗೆ ಬಿಟ್ಟಿದ್ದ ಬಸವನೊಂದಿಗೆ ಭಿಕ್ಷಾಟನೆ ಮಾಡಿ ಜೀವನ ಸಾಗಿಸುತ್ತಿದ್ದ ಕುಟುಂಬವೊಂದಕ್ಕೆ ಸಾಮಾಜಿಕ ಬಹಿಷ್ಕಾರ ಹಾಕಿರುವ ಅಮಾನವೀಯ ಘಟನೆ ನಡೆದಿದೆ.

Advertisement

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಈ ಹಿಂದೆ ಪ್ರತಿನಿಧಿಸಿದ್ದ ವರುಣಾ ಕ್ಷೇತ್ರ ವ್ಯಾಪ್ತಿಗೆ ಬರುವ ತಗಡೂರು ಗ್ರಾಮದ ವಯಯೋವೃದ್ಧ ಮಹದೇವೇಗೌಡ ಅವರ ಕುಟುಂಬ ದೇವರರಿಗೆ ಬಿಟ್ಟ ಬಸವನನ್ನು ಮೇಯಿಸಿಕೊಂಡು ಜೀವನ ಸಾಗಿಸುತ್ತಿತ್ತು. ಕೌಟುಂಬಿಕ ಕಾರಣಕ್ಕೆ ಮಾವ ಮತ್ತು ಅಳಿಯನ ನಡುವೆ ಜಗಳವಾಗಿದೆ.

ಇದನ್ನೆ ನೆಪವಾಗಿಸಿಕೊಂಡು ಪದೇ ಪದೆ ನೀವು ಜಗಳ ಆಡುತ್ತೀರಿ ಎಂದು ಗ್ರಾಮದ ಯಜಮಾನರು ಸೇರಿ ಬಡ ಕುಟುಂಬಕ್ಕೆ ಬಹಿಷ್ಕಾರ ಹಾಕಿದ್ದು, 10 ಸಾವಿರ ರೂ. ದಂಡ ಪಡೆದುಕೊಂಡಿದ್ದಾರೆ. ಇದಕ್ಕೆ ಮಹದೇವೇಗೌಡರ ಅಳಿಯನ ಪಿತೂರಿಯೂ ಕಾರಣ ಎನ್ನಲಾಗಿದೆ. 

ಗ್ರಾಮದ ಯಜಮಾನರು ಈ ಕುಟುಂಬ ಕಳೆದ 15 ವರ್ಷಗಳಿಂದ ಮೇಯಿಸುತ್ತಿದ್ದ ಗ್ರಾಮದ ದೇವಸ್ಥಾನದ ಬಸವನನ್ನೂ ಅವರಿಂದ ಕಿತ್ತುಕೊಳ್ಳಲಾಗಿದೆ. ಸಾಮಾಜಿಕ ಬಹಿಷ್ಕಾರಕ್ಕೆ ಒಳಗಾಗಿರುವ ಈ ಕುಟುಂಬದವರು ಗ್ರಾಮದ ದೇವಸ್ಥಾನಕ್ಕೆ ಹೋಗುವಂತಿಲ್ಲ, ಗ್ರಾಮದ ಸಾರ್ವಜನಿಕ ನಲ್ಲಿಯಲ್ಲಿ ನೀರು ಹಿಡಿದುಕೊಳ್ಳುವಂತಿಲ್ಲ, ಅಂಗಡಿಗಳಲ್ಲಿ ದಿನಸಿ ಖರೀದಿಸುವಂತಿಲ್ಲ,

ಯಾರೂ ಇವರನ್ನು ಕೂಲಿಗೆ ಕರೆಯುವಂತಿಲ್ಲ, ಯಾರ ಮನೆಯವರೂ ಇವರಿಗೆ ಉಪ್ಪು, ನೀರು ಕೊಡುವಂತಿಲ್ಲ. ಜೊತೆಗೆ ಯಾರಾದರೂ ಇವರನ್ನು ಮಾತನಾಡಿಸಿದರೂ 1,101 ರೂ. ದಂಡ ಕಟ್ಟಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಲಾಗಿದೆ. 

Advertisement

ಎರಡು ತಿಂಗಳ ಹಿಂದೆ ಸಾಮಾಜಿಕ ಬಹಿಷ್ಕಾರ ಹಾಕಿ, ನೀವು ಮಾಡಿದ್ದು ತಪ್ಪು ಎಂದು ದಂಡ ಕಟ್ಟಿಸಿಕೊಂಡ ನಂತರವೂ ಬಹಿಷ್ಕಾರ ಹಿಂಪಡೆಯದೆ ದೌರ್ಜನ್ಯ ನಡೆಸುತ್ತಿರುವುದರಿಂದ ಕೂಲಿಯನ್ನೇ ನಂಬಿ ಜೀವನ ಸಾಗಿಸುತ್ತಿದ್ದ ಈ ಕುಟುಂಬ ಇದೀಗ ಬೀದಿಗೆ ಬೀಳುವಂತಾಗಿದೆ. ಗ್ರಾಮದ ಯಜಮಾನರ ಈ ದೌರ್ಜನ್ಯದಿಂದ ನಮಗೆ ನ್ಯಾಯ ಕೊಡಿಸಿ ಎಂದು  ಈ ಬಡ ಕುಟುಂಬ ಇದೀಗ ಕಚೇರಿಗಳನ್ನು ಅಲೆಯುವಂತಾಗಿದೆ. 

15 ವರ್ಷಗಳಿಂದ ನಮ್ಮೂರ ದೇವರ ಬಸವನನ್ನು ಮೇಯಿಸುತ್ತಿದ್ದು, ನೀವು ಜಗಳ ಆಡುತ್ತೀರಿ ಎಂದು ಹೇಳಿ ನಮ್ಮಿಂದ ಬಸವನನ್ನು ಕಿತ್ತುಕೊಂಡಿದ್ದಾರೆ. ಗ್ರಾಮದ ದೇವಸ್ಥಾನಕ್ಕೆ ಹೋಗುವಂತಿಲ್ಲ, ನಲ್ಲಿಯಲ್ಲಿ ನೀರು ಹಿಡಿಯದಂತೆ ಬಹಿಷ್ಕಾರ ಹಾಕಿದ್ದಾರೆ. ನಮ್ಮಿಂದ 10 ಸಾವಿರ ರೂ. ದಂಡ ಕಟ್ಟಿಸಿಕೊಂಡರೂ ಬಹಿಷ್ಕಾರ ವಾಪಸ್‌ ತೆಗೆದುಕೊಂಡಿಲ್ಲ.
-ದೊಡ್ಡಮ್ಮ, ಬಹಿಷ್ಕಾರಕ್ಕೆ ಒಳಗಾದ ಕುಟುಂಬದ ಮಹಿಳೆ

ಕುಟುಂಬಸ್ಥರು ಮನವಿ ಕೊಟ್ಟ ಹಿನ್ನೆಲೆಯಲ್ಲಿ ಗ್ರಾಮಕ್ಕೆ ರಾಜಸ್ವ ನಿರೀಕ್ಷಕರನ್ನು ಕಳುಹಿಸಿ ವಸ್ತು ಸ್ಥಿತಿ ಏನೆಂದು ಪರಿಶೀಲಿಸಿ ವರದಿ ನೀಡುವಂತೆ ತಿಳಿಸಲಾಗಿದ್ದು, ಆ ವರದಿಯನ್ನು ಜಿಲ್ಲಾಧಿಕಾರಿ ಹಾಗೂ ಸಮಾಜ ಕಲ್ಯಾಣ ಇಲಾಖೆಗೆ ಸಲ್ಲಿಸಲಾಗುವುದು.
-ಬಾಲಸುಬ್ರಹ್ಮಣ್ಯ, ಉಪ ತಹಶೀಲ್ದಾರ್‌, ನಂಜನಗೂಡು

Advertisement

Udayavani is now on Telegram. Click here to join our channel and stay updated with the latest news.

Next