ಹಂಪನಕಟ್ಟೆ: ಪಾರ್ಶ್ವವಾಯು ರೋಗವನ್ನು ತತ್‌ಕ್ಷಣದ ಚಿಕಿತ್ಸೆಯಿಂದ ಸಂಪೂರ್ಣ ಗುಣಪಡಿಸುವುದು ಸಾಧ್ಯ. ಈ
ಬಗ್ಗೆ ಜನರಿಂದ ಜನರಿಗೆ ಮಾಹಿತಿ ಹರಡಿ ಜಾಗೃತಿ ಮೂಡಿಸುವುದು ಅವಶ್ಯ ಎಂದು ಹಿರಿಯ ನರರೋಗ ತಜ್ಞ ಡಾ| ಐ. ಜಿ. ಭಟ್ ಹೇಳಿದರು.
ಪಾರ್ಶ್ವವಾಯು ದಿನಾಚರಣೆ ಅಂಗವಾಗಿ ಕೆಎಂಸಿ ಮಂಗಳೂರು ವತಿಯಿಂದ ಆಸ್ಪತ್ರೆಯ ಎರಡನೇ ಟವರ್‌ನಿಂದ ಲೈಟ್ ಹೌಸ್ ಹಿಲ್ ರಸ್ತೆಯಲ್ಲಿರುವ ಕಸ್ತೂರ್ಬಾ ಮೆಡಿಕಲ್ ಕಾಲೇಜು ತನಕ ಹಮ್ಮಿಕೊಂಡ ಪಾರ್ಶ್ವವಾಯು ಜಾಗೃತಿ ನಡಿಗೆ ಕಾರ್ಯಕ್ರಮಕ್ಕೆ ಅವರು ಬುಧವಾರ ಚಾಲನೆ ನೀಡಿದರು.
ನೂತನ ತಂತ್ರಜ್ಞಾನಗಳ ಸಹಾಯದಿಂದ ಯಾವುದೇ ರೋಗಗಳ ಬಗ್ಗೆ ಮುನ್ನೆಚ್ಚರಿಕೆ ತೆಗೆದುಕೊಳ್ಳಲು ಸಾಧ್ಯವಾಗುತ್ತದೆ. ಪಾರ್ಶ್ವ ವಾಯು ರೋಗಕ್ಕೂ ಇದು ಅನ್ವಯವಾಗುತ್ತದೆ. ರೋಗ ಲಕ್ಷಣ ಕಂಡು ಬಂದ ತತ್ ಕ್ಷಣ ರೋಗಿಯನ್ನು ಆಸ್ಪತ್ರೆಗೆ ಕೊಂಡೊಯ್ದು ಸೂಕ್ತ ಚಿಕಿತ್ಸೆ ನೀಡಿದ್ದಲ್ಲಿ ಸಂಪೂರ್ಣ ಗುಣ ಮುಖರಾಗಲು ಸಾಧ್ಯ ಎಂದು ಹೇಳಿದರು.
ಕೆಎಂಸಿ ಡೀನ್ ಡಾ| ಎಂ. ವಿ. ಪ್ರಭು ಮಾತನಾಡಿ, ಪಾರ್ಶ್ವವಾಯು ರೋಗ ಕಂಡು ಬಂದ ಮೂರೂವರೆ ಗಂಟೆಯೊಳಗೆ ರೋಗಿಯನ್ನು ಆಸ್ಪತ್ರೆಗೆ ಕರೆ ತಂದು ಚಿಕಿತ್ಸೆ ನೀಡಿದರೆ ರೋಗದಿಂದ ಸಂಪೂರ್ಣ ಗುಣಮುಖರಾಗಬಹುದು. ಈ ಬಗ್ಗೆ ಎಲ್ಲೆಡೆ ಜನ ಜಾಗೃತಿ ನಡೆಯಬೇಕು ಎಂದರು.
ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ| ಆನಂದ್ ವೇಣುಗೋಪಾಲ್, ರೀಜನಲ್ ಸಿಒಒ ಸಘೀರ್ ಸಿದ್ಧಿಕಿ, ನರರೋಗ ವಿಭಾಗ ಮುಖ್ಯಸ್ಥ ಡಾ| ಝಡ್. ಕೆ. ಮಿಸ್ರಿ, ತುರ್ತು ಚಿಕಿತ್ಸಾ ವಿಭಾಗ ಮುಖ್ಯಸ್ಥ ಡಾ| ಜೀಡು ರಾಧಾಕೃಷ್ಣನ್, ನರರೋಗ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಡಾ| ಶಿವಾನಂದ ಪೈ, ಡಾ| ರೋಹಿತ್ ಪೈ ಉಪಸ್ಥಿತರಿದ್ದರು.