Advertisement

ನೀವೂ ತಡರಾತ್ರಿಯವರೆಗೂ ಸ್ಮಾರ್ಟ್ ಪೋನ್‌ ಬಳಸುತ್ತೀರಾ ? : ನಿಮ್ಮಲ್ಲಿ ಈ ಸಮಸ್ಯೆಗಳಿರಬಹುದು

12:34 PM Apr 07, 2021 | Team Udayavani |

ಇದು ಸ್ಮಾರ್ಟ್ ಫೋನ್ ಯುಗ. 2021 ರ ಅಂಕಿಅಂಶಗಳ ಪ್ರಕಾರ ಭಾರತದಲ್ಲಿ ಅಂದಾಜು 760 ಮಿಲಿಯನ್ ಜನರು ಮೊಬೈಲ್ ಬಳಸುತ್ತಿದ್ದಾರೆ. ಮೊದಮೊದಲು ಫೋನ್ ಕರೆಗಳಿಗೆ ಸೀಮಿತವಾಗಿದ್ದ ಮೊಬೈಲ್ ಗಳು, ಸ್ಮಾರ್ಟ್ ಪೋನ್ ಗಳು ಬಂದ ನಂತರ ಮನರಂಜನೆಯ ಸಾಧನವಾಗಿ ಬದಲಾಗಿವೆ. ಇದರ ಮೂಲಕ ಪ್ರತಿನಿತ್ಯ ಕರೆ, ಸಂದೇಶ, ವಿಡಿಯೋ ಕರೆ, ಸಾಮಾಜಿಕ ಜಾಲತಾಣಗಳ ಬಳಕೆ ಮುಂತಾದವುಗಳ ಕ್ರಿಯೆಯಲ್ಲಿ ಜನರು ನಿರತರಾಗಿದ್ದಾರೆ.

Advertisement

ಇಂದಿನ ಕಾಲಮಾನದಲ್ಲಿ ಸ್ಮಾರ್ಟ್ ಫೋನ್ ಗಳಿಂದ ಎಷ್ಟು ಉಪಯೋಗವಿದೆಯೋ ಅಷ್ಟೇ ಪ್ರಮಾಣದಲ್ಲಿ ಅಪಾಯಕಾರಿ ಅಂಶಗಳು ಅಡಗಿವೆ.  ಓದಿನ ಕಡೆ ಗಮನಹರಿಸಬೇಕಾದ ಹಲವು ಮಕ್ಕಳು, ಗೇಮಿಂಗ್ ಆಡುವುದರಲ್ಲಿ ನಿರತರಾಗಿದ್ದಾರೆ. ಭವಿಷ್ಯಕ್ಕೆ ಭದ್ರಬುನಾದಿಯನ್ನು ಹಾಕಿಕೊಳ್ಳಬೇಕಾದ ಯುವಕ ಯುವತಿಯರು ಸ್ಮಾರ್ಟ್ ಫೋನ್ ಎಂಬ ಮಾಯಾಜಾಲಕ್ಕೆ ಸಿಲುಕಿದ್ದಾರೆ.  ಹಿರಿಯರು ಕೂಡ ಸ್ಮಾರ್ಟ್ ಯುಗಕ್ಕೆ ತಮ್ಮನ್ನು ತಾವು ಒಗ್ಗಿಸಿಕೊಂಡಿದ್ದಾರೆ.

ಕೋವಿಡ್ ಲಾಕ್ ಡೌನ್ ನಂತರದಲ್ಲಿ ನಮ್ಮ ದೇಶದಲ್ಲಿ ಪ್ರತಿನಿತ್ಯ ಕನಿಷ್ಠ 4.3 ಗಂಟೆ ಗಳ ಕಾಲ ಜನರು ಸ್ಮಾರ್ಟ್ ಫೋನ್ ನಲ್ಲೇ ಕಳೆಯುತ್ತಿದ್ದಾರೆ. ಇನ್ನು ಕೆಲವು ವರದಿಗಳ ಪ್ರಕಾರ ದಿನವೊಂದಕ್ಕೆ 7 ರಿಂದ 8 ಗಂಟೆಗಳ ಕಾಲವೂ ಮೊಬೈಲ್ ಬಳಸುವವರು ಇದ್ದಾರೆ. ರಾತ್ರಿ ಸಮಯದಲ್ಲೂ ಮೊಬೈಲ್ ಬಳಸುವವವರ ಸಂಖ್ಯೆ ಅಧಿಕವಾಗುತ್ತಿದೆ. ಅತೀಯಾದ ಮೊಬೈಲ್ ಬಳಕೆಯಿಂದ ಅನೇಕ ಕಾಯಿಲೆಗಳು ನಮಗರಿವಿಲ್ಲದಂತೆ ವಕ್ಕರಿಸಿಕೊಳ್ಳುತ್ತವೆ. ಮುಖ್ಯವಾಗಿ ಸ್ಮಾರ್ಟ್ ಫೋನ್ ನಿಂದ ಹೊರಸೂಸುವ ವಿಕಿರಣಗಳು ವ್ಯಕ್ತಿಯೊಬ್ಬರ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತದೆ ಎಂದು ಅಧ್ಯಯನ ವರದಿ ತಿಳಿಸುತ್ತವೆ. ಹಾಗಾದರೆ ರಾತ್ರಿ ಸಮಯದಲ್ಲಿ ಸ್ಮಾರ್ಟ್ ಫೋನ್ ಬಳಸುವುದರಿಂದ ಯಾವೆಲ್ಲಾ ಅಪಾಯಗಳು ಎದುರಾಗುತ್ತವೆ ಎಂಬ ಮಾಹಿತಿ ಇಲ್ಲಿದೆ.

ಆತಂಕ ಮತ್ತು ಖಿನ್ನತೆಯಿಂದ ಬಳಲುವವರ ಪ್ರಮಾಣ ಹೆಚ್ಚಳ: ಸಾಮಾನ್ಯವಾಗಿ ಮೊಬೈಲ್‌ ಅನ್ನು ಹೆಚ್ಚಾಗಿ ಅವಲಂಬಿಸಿರುವುದು ಖಿನ್ನತೆಯ ಸಮಸ್ಯೆಗೆ ಕಾರಣವಾಗುತ್ತದೆ. ಕೆಲವೊಮ್ಮೆ ಮಾನಸಿಕ ಸ್ಥಿಮಿತವನ್ನೂ ಕಳೆದುಕೊಳ್ಳುವ ಸಾಧ್ಯತೆಯನ್ನೂ ಅಲ್ಲಗಳೆಯುವಂತಿಲ್ಲ. ಸಮೀಕ್ಷೆಯ ಪ್ರಕಾರ ವಿಡಿಯೋ ಗೇಮ್‌ ನಲ್ಲಿ ಸದಾ ತೊಡಗಿರುವವರಲ್ಲಿ ಆತಂಕ ಹೆಚ್ಚಾಗಿ ಕಂಡುಬರುತ್ತದೆ. ಸ್ನೇಹಿತರಿಂದ ದೂರಾಗುವುದು, ಸದಾ ಮೊಬೈಲ್‌ ತನ್ನ ಸಂಗಾತಿ ಎಂದು ಭಾವಿಸುವುದು ಖಿನ್ನತೆಗೆ ಎಡೆಮಾಡಿಕೊಡುತ್ತದೆ.

ಬೆನ್ನು ಹುರಿಯ ಸಮಸ್ಯೆ ತೀವ್ರಗೊಳ್ಳುತ್ತದೆ:  ಸಮೀಕ್ಷೆಯೊಂದರ ಪ್ರಕಾರ  ಶೇ.25 ರಷ್ಟು ಮೊಬೈಲ್‌ ಬಳಕೆದಾರರಲ್ಲಿ ಬೆನ್ನು ಹುರಿಯ ಸಮಸ್ಯೆ ಕಾಣಿಸಿಕೊಳ್ಳುತ್ತಿರುವುದು ಸಾಮಾನ್ಯ ಎಂಬಂತಾಗಿದೆ. 16 ರಿಂದ 24 ವರ್ಷದ ಯುವಕರು ಬೆನ್ನು ಹುರಿಯ ನೋವಿನಿಂದ ಹೆಚ್ಚಾಗಿ ಬಳಲುತ್ತಿದ್ದಾರೆ ಎಂಬುದನ್ನೂ ವರದಿ ತಿಳಿಸಿದೆ.

Advertisement

ನಿದ್ರಾಹೀನತೆ ಎಂಬ ಸಂಕಷ್ಟ: ಯುವಜನಾಂಗದಲ್ಲಿ ಹೆಚ್ಚಾಗಿ ಈ ಸಮಸ್ಯೆ ಕಂಡುಬರುತ್ತಿದೆ. ತಡರಾತ್ರಿಯವರೆಗೂ ಮೊಬೈಲ್‌ ಬಳಸುವುದು ಆರೋಗ್ಯದ ಮೇಲೆ ಗಂಭೀರ ಪರಿಣಾಮವನ್ನುಂಟುಮಾಡುತ್ತದೆ. ಪ್ರತಿ ವ್ಯಕ್ತಿಯು ೬ ರಿಂದ ೮ ಗಂಟೆ ನಿದ್ರಿಸುವುದು ಉತ್ತಮ. ಸಮೀಕ್ಷೆಯೊಂದು  ಇಂದು ಶೇ. ೬೮% ಜನರು ನಿದ್ರಾಹೀನತೆ ಸಮಸ್ಯೆಯಿಂದ ಬಳಲುತ್ತಿದ್ದಾರೆ ಎಂದು ತಿಳಿಸಿದೆ.

ಕಣ್ಣಿನ ಸಮಸ್ಯೆ ಕಾಣಿಸಿಕೊಳ್ಳುತ್ತದೆ: ಸಂಶೋಧನೆಯ ಪ್ರಕಾರ ಮೊಬೈಲ್‌ ಮೊಬೈಲ್‌ ಡಿಸ್‌ ಪ್ಲೇಯಿಂದ ಹೊರಹೊಮ್ಮುವ ಬೆಳಕು ಕಣ್ಣಿನ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮವನ್ನು ಉಂಟುಮಾಡುತ್ತದೆ. ಈ ಬೆಳಕು ರೆಟಿನಾದ ಮೇಲೆ ನೇರವಾಗಿ ಬೀಳುವುದರಿಂದ ಕಣ್ಣಿಗೆ ಹೆಚ್ಚಿನ ಒತ್ತಡ ಉಂಟಾಗುತ್ತದೆ.

ಒತ್ತಡದ ಸಮಸ್ಯೆ: ಮೊಬೈಲ್‌ ನ ನಿರಂತರ ಬಳಕೆಯಿಂದ  ಅಥವಾ ಸತತವಾಗಿ ಬರುವ ಕರೆ, ಸಂದೇಶ, ನೋಟಿಫಿಕೇಶನ್‌ ಗಳಿಂದ ಹೆಚ್ಚಿನ ಜನರು ಮಾನಸಿಕ ಒತ್ತಡಕ್ಕೆ ಸಿಲುಕುತ್ತಾರೆ ಎಂದು ಸಂಶೋಧನೆ ತಿಳಿಸಿದೆ.

ಕಿವುಡುತನದ ಸಮಸ್ಯೆ: ವಿಪರೀತ ಫೋನ್‌ ಕರೆಗಳಲ್ಲಿ ತೊಡಗಿಕೊಳ್ಳುವುದು ಮತ್ತು ಇಯರ್‌ ಫೋನ್‌ ಗಳಿಂದ ಬರುವ ಹೆಚ್ಚಿನ ಶಬ್ದದಿಂದ ಕಿವುಡುತನ ಉಂಟಾಗುತ್ತದೆ. ಅಮೆರಿಕವೊಂದರಲ್ಲೇ ೨೬ ಮಿಲಿಯನ್‌ ಜನರು ಈ ಸಮಸ್ಯೆಗೆ ತುತ್ತಾಗಿದ್ದಾರೆ ಎಂದು ಸಮೀಕ್ಷೆಯೊಂದರ ವರದಿ ತಿಳಿಸಿದೆ.

ರೇಡಿಯೇಷನ್ ಅಪಾಯ: ಮೊಬೈಲ್‌ ನಿಂದ ಹೊರಹೊಮ್ಮುವ ತರಂಗಗಳು ಅಥವಾ ವಿಕಿರಣಗಳು ಮನುಷ್ಯನ ಮೆದುಳಿನ ಮೇಲೆ ನೇರವಾದ ಪರಿಣಾಮ ಬೀರುತ್ತದೆ. ಇದು ಹಲವು ಸಮಸ್ಯೆಗೆಳಿಗೆ ಎಡೆಮಾಡಿಕೊಡುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ.

ಇದರ ಹೊರತಾಗಿಯೂ ಸ್ಮಾರ್ಟ್‌ ಫೋನ್‌ ಬಳಕೆಯಿಂದ ಹಲವು ಸಮಸ್ಯೆಗಳು ಎದುರಾಗುತ್ತದೆ. ಸಮಾಜದೊಂದಿಗೆ ಬೆರೆಯುವುದು ಕಡಿಮೆಯಾಗುತ್ತದೆ.  ವ್ಯಕ್ತಿಯೊಬ್ಬನಿಗೆ ಏಕಾಂಗಿತನ ಕಾಡಲು ಆರಂಭವಾಗುತ್ತದೆ. ಮುಖ್ಯವಾಗಿ ಖಾಸಗಿ ಅಥವಾ ವ್ಯಯಕ್ತಿಕ ಮಾಹಿತಿಗಳ ಸೋರಿಕೆಯನ್ನು ಅಲ್ಲಗಳೆಯುವಂತಿಲ್ಲ. ಹಿತಮಿತವಾದ ಸ್ಮಾರ್ಟ್‌ ಫೋನ್‌ ಬಳಕೆಯಿಂದ ಉತ್ತಮ ಆರೋಗ್ಯ ಹಾಗೂ ಮಾನಸಿಕ ನೆಮ್ಮದಿಯನ್ನು ಗಳಿಸಿಕೊಳ್ಳಬಹುದು.

 

 ಸಂಗ್ರಹ 

Advertisement

Udayavani is now on Telegram. Click here to join our channel and stay updated with the latest news.

Next