ರಬಕವಿ-ಬನಹಟ್ಟಿ: ತೇರದಾಳ ಶಾಸಕ ಸಿದ್ದು ಸವದಿ ಆದಾಯಕ್ಕೂ ಮೀರಿ ಅಕ್ರಮವಾಗಿ 150 ಎಕರೆಗೂ ಅಧಿಕ ಆಸ್ತಿ ಸಂಪಾದಿಸಿದ್ದಾರೆ, ಜೊತೆಗೆ ಸರ್ಕಾರದ ಬೊಕ್ಕಸಕ್ಕೆ ಕೋಟ್ಯಾಂತರ ರೂ. ಮೋಸ ಮಾಡಿದ್ದಾರೆಂದು ಜ.೧೮ ರಂದು ಲೋಕಾಯುಕ್ತದಲ್ಲಿ ದೂರು ದಾಖಲಾಗಿದೆ.
ಶಾಸಕ ಸಿದ್ದು ಸವದಿ ಮತ್ತು ಕುಟುಂಬಸ್ಥರ ವಿರುದ್ಧ ಹಳಿಂಗಳಿ ಗ್ರಾಮದ ರಾಜು ದೇಸಾಯಿ ದೂರು ನೀಡಿದ್ದು, ಮೊದಲ ಆರೋಪಿಯನ್ನಾಗಿಸಿ ತೇರದಾಳ ಕ್ಷೇತ್ರದ ಶಾಸಕ ಸಿದ್ದು ಸವದಿ, ಸಹೋದರ ಏಗಪ್ಪ ಸವದಿ, ಮಕ್ಕಳಾದ ವಿದ್ಯಾಧರ ಸವದಿ ಹಾಗು ರಾಮಣ್ಣ ಸವದಿ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
ತಮ್ಮ ಆಪ್ತ ವಲಯದವರ ಹೆಸರಿನಲ್ಲಿ ಬೇನಾಮಿಯಿಂದ ಕೃಷಿ ಹಾಗು ಕೃಷಿಯೇತರ ಭೂಮಿಗಳನ್ನು ಖರೀದಿ ಮಾಡಿಕೊಂಡಿದ್ದರ ಬಗ್ಗೆ ದಾಖಲೆಗಳನ್ನು ಒದಗಿಸಿರುವ ರಾಜು ದೇಸಾಯಿ. ಇದೆಲ್ಲದರ ಕುರಿತು ಸಮಗ್ರ ತನಿಖೆಯೊಂದಿಗೆ ಅಕ್ರಮ ಗಳಿಕೆದಾರರಿಗೆ ಶಿಕ್ಷೆಯಾಗಬೇಕೆಂದು ದೇಸಾಯಿ ತಿಳಿಸಿದರು.
ಹತಾಶೆ ಭಾವನೆಯಲ್ಲಿ ಆರೋಪ-ಸವದಿ ಪ್ರತಿಕ್ರಿಯೆ
ಬೊಗಳೋ ನಾಯಿ ಕಚ್ಚಲ್ಲ, ಕಾಂಗ್ರೆಸ್ ಕುತಂತ್ರ ರಾಜಕಾರಣದಿಂದ ನನ್ನ ಮೇಲೆ ಯಾವದೇ ಆರೋಪಗಳನ್ನು ಮಾಡುವ ನೈತಿಕತೆಯಿಲ್ಲದೆ ಹತಾಶೆ ಭಾವನೆಯಲ್ಲಿ ಲೋಕಾಯುಕ್ತ ದೂರು ಸಲ್ಲಿಸಿರುವ ಆರೋಪವನ್ನು ಖಡಾಖಂಡಿತ ತಳ್ಳಿ ಹಾಕುತ್ತೇನೆಂದು ತೇರದಾಳ ಶಾಸಕ ಸಿದ್ದು ಸವದಿ ಹೇಳಿದರು.
Related Articles
ಶಾಸಕ ಸವದಿ ವಿರುದ್ಧ ಅಕ್ರಮ ಆಸ್ತಿ ಆರೋಪದ ಹಿನ್ನಲೆಯಲ್ಲಿ ಲೋಕಾಯುಕ್ತಕ್ಕೆ ಕಾಂಗ್ರೆಸ್ ಮುಖಂಡ ರಾಜು ನಂದೆಪ್ಪನವರ(ದೇಸಾಯಿ) ದೂರು ನೀಡಿದ್ದಕ್ಕೆ ಪತ್ರಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ಸಮಯ ಬಂದಾಗ ಉತ್ತರ ನೀಡುವೆ. ಆರೋಪ ಮಾಡಿರುವ ವ್ಯಕ್ತಿ ವಿರುದ್ಧ ಮಾನನಷ್ಟ ಮೊಕದ್ದಮೆ ಹಾಕುವ ಯೋಚನೆ ನನ್ನದಾಗಿದೆ ಎಂದು ಸವದಿ ಹೇಳಿದರು.