ಬೆಂಗಳೂರು :ಕೊರಗ ಸಮುದಾಯದ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿರುವ ವಿಚಾರಕ್ಕೆ ಸಂಬಂಧಪಟ್ಟಂತೆ ಸಿದ್ದರಾಮಯ್ಯ ಹಾಗೂ ರಾಜ್ಯ ಬಿಜೆಪಿ ಐಟಿ ಸೆಲ್ ಮಧ್ಯೆ ಜಟಾಪಟಿ ಮುಂದುವರಿದಿದೆ.
ಶುಕ್ರವಾರ ಬೆಳಗ್ಗೆ ಸರಣಿ ಟ್ವೀಟ್ ಮಾಡಿದ್ದ ಸಿದ್ದರಾಮಯ್ಯ “ ಹಿಂದುಗಳೆಲ್ಲ ಒಂದು ಎಂದು ಉದ್ಘೋಷಿಸುತ್ತಿರುವ ಬಿಜೆಪಿ ಬ್ರಾಂಡಿನ ಹಿಂದು ಧರ್ಮದಲ್ಲಿ ಕೊರಗ ಸಮುದಾಯ ಸೇರಿಲ್ಲವೇ ? ದಲಿತರನ್ನು ಅಸ್ಪೃಶ್ಯರನ್ನಾಗಿಯೇ ಉಳಿಸುವುದು ಇವರ ಗುಪ್ತ ಅಜೆಂಡವೇ ?
“ಹಿಂದುಗಳ ರಕ್ಷಣೆಗಾಗಿಯೇ ಅವತಾರವೆತ್ತಿ ಬಂದವರಂತೆ ಬೊಬ್ಬಿಡುತ್ತಿರುವ ಸ್ಥಳೀಯ ಲೋಕಸಭಾ ಸದಸ್ಯರೂ ಆಗಿರುವ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರ ಮೌನವನ್ನು ಕೊರಗರ ಮೇಲಿನ ಪೊಲೀಸ್ ಸೌರ್ಜನ್ಯಕ್ಕೆ ಮೌನ ಸಮ್ಮತಿ ಎಂದು ಅರ್ಥೈಸೋಣವೇ ? ಅಥವಾ ಇದು ವ್ಯವಸ್ಥಿತ ಸಂಚಿನ ಮುಂದುವರಿದ ಭಾಗವೇ ? ಎಂದು ಪ್ರಶ್ನಿಸಿದ್ದರು.
ಇದಕ್ಕೆ ತಿರುಗೇಟು ನೀಡಿರುವ ಬಿಜೆಪಿ, “ ಈ ರೀತಿಯ ಹೇಳಿಕೆಗಳ ಮೂಲಕ ಒಂದು ಸಮುದಾಯದ ನೈತಿಕ ಶಕ್ತಿಯನ್ನು ಅಡಗಿಸುವುದು ಸಿದ್ದರಾಮಯ್ಯ ಅವರ ಉದ್ದೇಶವಾಗಿದೆ. ಒಂದು ಘಟನೆಯನ್ನು ವ್ಯವಸ್ಥಿತ ಷಡ್ಯಂತ್ರ ಇತ್ಯಾದಿ ಎಂದು ಬಿಂಬಿಸಿ ಬೇಳೆ ಬೇಯಿಸಿಕೊಳ್ಳುವುದು ಎಷ್ಟು ಸರಿ ? ಮಾನ್ಯ ಸಿದ್ದರಾಮಯ್ಯನವರೇ ಈ ಪ್ರಕರಣ ನಡೆದಾಗ ನೀವೇನು ಗಾಢ ನಿದ್ದೆಯಲ್ಲಿದ್ದಿರಾ ? ಪ್ರಕರಣ ನಡೆದು 24ಗಂಟೆಯೊಳಗೆ ಕರ್ತವ್ಯ ಲೋಪ ಎಸಗಿದ ಪೊಲೀಸರನ್ನು ಅಮಾನತು ಮಾಡಲಾಗಿದೆ. ಹೇಳಿಕೊಟ್ಟ ಮಾತು, ಬರೆದು ಕೊಟ್ಟ ಟ್ವೀಟು ಎಷ್ಟು ದಿನ ಬಾಳಿಕೆ ಬರುತ್ತದೆ ? ಎಂದು ವ್ಯಂಗ್ಯವಾಡಿದೆ.