Advertisement

ಸಿದ್ದು ಸರ್ಕಾರಕ್ಕೆ ಧರ್ಮ ಸಂಕಟ

07:30 AM Jul 27, 2017 | Team Udayavani |

ಬೆಂಗಳೂರು: ಲಿಂಗಾಯತ ವೀರಶೈವ ಪ್ರತ್ಯೇಕ ಧರ್ಮದ ವಿಷಯದಲ್ಲಿ ರಾಜ್ಯ ಸರ್ಕಾರ ಗೊಂದಲಕ್ಕೆ ಬಿದ್ದಿದೆಯಾ ಎಂಬ ಅನುಮಾನ ಮೂಡುತ್ತಿವೆ. ಸಿಎಂ ಸಿದ್ದರಾಮಯ್ಯ ಅವರಿಗೆ ವೀರಶೈವ ಲಿಂಗಾಯತ ಮಹಾಸಭೆಯಿಂದ “ವೀರಶೈವ ಲಿಂಗಾಯತ’ ಪ್ರತ್ಯೇಕ ಧರ್ಮಕ್ಕಾಗಿ ಮನವಿ ಸಲ್ಲಿಸಲಾಗಿದೆ.

Advertisement

ಮಾತೆ ಮಹಾದೇವಿ ಪೀಠಾಧ್ಯಕ್ಷರಾಗಿರುವ ಬಸವ ಧರ್ಮ ಪೀಠದಿಂದ “ಲಿಂಗಾಯತ ಧರ್ಮಕ್ಕಾಗಿ ಮನವಿ ಸಲ್ಲಿಸಲಾಗಿದೆ. ಹೀಗಿದ್ದರೂ ಸಿಎಂ ಸಿದ್ದರಾಮಯ್ಯ ಪ್ರತ್ಯೇಕ ಧರ್ಮಕ್ಕೆ ಯಾವುದೇ ಮನವಿ ಬಂದಿಲ್ಲ. ಮನವಿ ಬಂದ ಮೇಲೆ ನೋಡೋಣ ಎಂದು ಹೇಳಿರುವುದು ಸರ್ಕಾರ ಗೊಂದಲದಲ್ಲಿದೆಯಾ ಎಂಬ ಅನುಮಾನಕ್ಕೆ ಕಾರಣವಾಗಿದೆ.

ಮುಖ್ಯಮಂತ್ರಿಗೆ ಸಲ್ಲಿಕೆಯಾಗಿರುವ ಪ್ರತ್ಯೇಕ ಮನವಿಗಳಲ್ಲಿ ವೈರುಧ್ಯ ಇದ್ದು, ಇದರಲ್ಲಿ ಯಾವುದನ್ನು ಪರಿಗಣಿಸಬೇಕು ಎಂಬ ಗೊಂದಲ ದಲ್ಲಿ ಸರ್ಕಾರ ಸಿಲುಕಿದಂತಿದೆ.

ಇರುವವರೆಲ್ಲಾ ಲಿಂಗಾಯತರೇ: ಮಾತೆ ಮಹಾದೇವಿ ಮಾಡಿರುವ ಮನವಿಯಲ್ಲಿ ಕರ್ನಾಟಕದಲ್ಲಿ ಯಾರೂ ವೀರಶೈವರಿಲ್ಲ. ಇಲ್ಲಿರುವ ವರೆಲ್ಲರೂ ಲಿಂಗಾಯತ ಧರ್ಮದ ಅನುಯಾಯಿಗಳೇ. ವೀರಶೈವ ಎಂಬುದು ಶೈವದ ಒಂದು ಪಂಥವಾಗಿರುವುದರಿಂದ ವೀರಶೈವ ಮತ್ತು ಲಿಂಗಾಯತ ಒಂದೇ ಅಲ್ಲ. ವೀರಶೈವ ಮಹಾಸಭಾ ಲಿಂಗಾಯತರ ಪ್ರಾತಿನಿಧಿಕ ಸಂಸ್ಥೆಯಲ್ಲ. ವೀರಶೈವ ಪದವನ್ನು ಲಿಂಗಾಯತ ಪದಕ್ಕೆ ಪರ್ಯಾಯವಾಗಿ ಬಳಸುವುದರಿಂದ ಅದಕ್ಕೆ ಮಾನ್ಯತೆ ಸಿಗಲು ಸಾಧ್ಯವಿಲ್ಲ ಎಂದು ಮನವಿಯಲ್ಲಿ ತಿಳಿಸಿದ್ದಾರೆ.

ಅವರ ಮನವಿಗೆ ಮುಖ್ಯಮಂತ್ರಿ ಕಚೇರಿಯಿಂದ ಪ್ರತಿಕ್ರಿಯೆಯೂ ದೊರೆತಿದ್ದು, ಮುಖ್ಯಮಂತ್ರಿ ಅಧೀನ ಕಾರ್ಯದರ್ಶಿ ಲಿಂಗಾಯತ ಮಹಾಸಭಾ ಅಧ್ಯಕ್ಷರಿಗೆ ಪತ್ರ ಬರೆದು,ಹಿಂದುಳಿದ ವರ್ಗಗಳ ಇಲಾಖೆಯ ಕಾರ್ಯದರ್ಶಿಗೆ ಕಳುಹಿಸಿ ಕೊಡಲಾಗಿದೆ ಎಂದು ಪತ್ರದಲ್ಲಿ ತಿಳಿಸಿದ್ದಾರೆ.

Advertisement

ಆದರೆ, ಮುಖ್ಯಮಂತ್ರಿ ಯಾವುದೇ ಮನವಿ ಬಂದಿಲ್ಲ ಎಂದು ಹೇಳಿರುವುದು ಸಂಶಯಕ್ಕೆ ಎಡೆ ಮಾಡಿಕೊಡು ವಂತಿದೆ. ವೀರಶೈವ ಮಹಾಸಭೆಯೂ ಪ್ರತ್ಯೇಕವಾಗಿ ಮನವಿ ಸಲ್ಲಿಸಿದ್ದು, ವೀರಶೈವ ಲಿಂಗಾಯತ ಧರ್ಮ, ಸಮಾನತೆ,
ಸಾಮಾಜಿಕ ನ್ಯಾಯ ತತ್ವಗಳ ಆಧಾರದಲ್ಲಿ ನಿರ್ಮಾಣವಾಗಿದೆ.

ಇಷ್ಟಲಿಂಗ ಧಾರಣೆಯ ವಿಶಿಷ ಸಂಸ್ಕೃತಿ ಹೊಂದಿರುವ ಈ ಧರ್ಮಕ್ಕೆ ಪ್ರತ್ಯೇಕ ಧರ್ಮದ ಸ್ಥಾನ ನೀಡುವಂತೆ ಮನವಿ ಮಾಡಿಕೊಂಡಿದ್ದಾರೆ.

ಆದರೆ, ಅವರ ಮನವಿಗೆ ಸಿಎಂ ಕಚೇರಿಯಿಂದ ಯಾವುದೇ ಉತ್ತರ ಹೋಗಿಲ್ಲ. ಹೀಗಾಗಿ ವೀರಶೈವ ಮಹಾಸಭಾದ ಮುಖಂಡರು ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಮತ್ತೂಂದು ಮನವಿ ಸಲ್ಲಿಸಿ, ತಮ್ಮ ಮನವಿಯನ್ನು ಕೇಂದ್ರ ಸರ್ಕಾರಕ್ಕೆ
ಕಳುಹಿಸಿಕೊಡುವಂತೆ ಕೋರಲು ತೀರ್ಮಾನಿಸಿದ್ದಾರೆ.

ವೀರಶೈವ ಲಿಂಗಾಯತ ಸ್ವತಂತ್ರ ಧರ್ಮದ ಬಗ್ಗೆ ನಮಗೆ ಮನವಿಯೇ ಬಂದಿಲ್ಲ. ಮನವಿ ಬಾರದಿದ್ದರೆ ನಾವು ಎಲ್ಲಿ ಶಿಫಾರಸ್ಸು ಮಾಡೋದು. ಮೊದಲು ಅವರು ಸ್ವತಂತ್ರ ಧರ್ಮಕ್ಕೆ ಮನವಿ ಮಾಡಲಿ, ಆಮೇಲೆ ನೋಡೋಣ.
– ಸಿದ್ದರಾಮಯ್ಯ, ಸಿಎಂ

ಮಾತೆ ಮಹಾದೇವಿ ವೀರಶೈವರೊಂದಿಗೆ ಸಂಬಂಧ ಇಲ್ಲ ಎಂದು ಗೊಂದಲ ಸೃಷ್ಟಿಸಲು ಪ್ರಯತ್ನಿಸುತ್ತಿದ್ದಾರೆ.
ಶೀಘ್ರವೇ ಸ್ವಾಮೀಜಿಗಳ ಸಭೆ ಕರೆದು ಈ ಬಗ್ಗೆ ಚರ್ಚೆ ಮಾಡ್ತೀವಿ.

– ಶಾಮನೂರು
ಶಿವಶಂಕರಪ್ಪ, ಅಖೀಲ ಭಾರತ ವೀರಶೈವ ಮಹಾಸಭಾ ಅಧ್ಯಕ್ಷ

Advertisement

Udayavani is now on Telegram. Click here to join our channel and stay updated with the latest news.

Next