Advertisement

ದೆಹಲಿಗೆ ತೆರಳಿದ ಸಿದ್ದು, ದಿನೇಶ್‌ ಗುಂಡೂರಾವ್‌

11:06 PM Sep 11, 2019 | Team Udayavani |

ಬೆಂಗಳೂರು: ಪ್ರತಿಪಕ್ಷದ ನಾಯಕನ ಆಯ್ಕೆ ಹಾಗೂ ಪಕ್ಷದ ಪದಾಧಿಕಾರಿಗಳ ಆಯ್ಕೆ ಕುರಿತು ಚರ್ಚಿಸಲು ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ ಹಾಗೂ ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಬುಧವಾರ ದೆಹಲಿಗೆ ತೆರಳಿದ್ದಾರೆ. ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿ 150 ನೇ ವರ್ಷಾಚರಣೆಯನ್ನು ಕಾಂಗ್ರೆಸ್‌ ವತಿಯಿಂದ ಆಚರಿಸುವ ಕುರಿತಂತೆ ಗುರುವಾರ ದೆಹಲಿಯಲ್ಲಿ ಚರ್ಚಿಸಲು ಎಲ್ಲಾ ರಾಜ್ಯಗಳ ಶಾಸಕಾಂಗ ಪಕ್ಷದ ನಾಯಕರು, ಕೆಪಿಸಿಸಿ ಅಧ್ಯಕ್ಷರನ್ನು ಸಭೆಗೆ ಆಹ್ವಾನಿಸಲಾಗಿದೆ.

Advertisement

ಹೀಗಾಗಿ ಪಕ್ಷದ ಅಧಿಕೃತ ಸಭೆಯಲ್ಲಿ ಪಾಲ್ಗೊಳ್ಳಲು ಇಬ್ಬರು ನಾಯಕರೂ ದೆಹಲಿಗೆ ತೆರಳಿದ್ದಾರೆ. ಇದೇ ವೇಳೆ, ರಾಜ್ಯದಲ್ಲಿ ನನೆಗುದಿಗೆ ಬಿದ್ದಿರುವ ಪ್ರತಿಪಕ್ಷದ ನಾಯಕನ ಆಯ್ಕೆ, ಪದಾಧಿಕಾರಿಗಳ ನೇಮಕ ಕುರಿತಂತೆ ಚರ್ಚೆ ನಡೆಸಲು ಇಬ್ಬರೂ ನಾಯಕರು ತೀರ್ಮಾನಿಸಿದ್ದಾರೆ. ಆದರೆ, ಪ್ರತಿಪಕ್ಷದ ನಾಯಕನ ಆಯ್ಕೆ ಕುರಿತು ಹೈಕಮಾಂಡ್‌ ಎಲ್ಲಾ ನಾಯಕರ ಅಭಿಪ್ರಾಯ ಪಡೆದು ತೀರ್ಮಾನಿಸುವ ಸಾಧ್ಯತೆಯಿದೆ. ಗುರುವಾರ ಈ ಕುರಿತು ಯಾವುದೇ ತೀರ್ಮಾನವಾಗುವ ಸಾಧ್ಯತೆ ಕಡಿಮೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ಪ್ರತಿಪಕ್ಷದ ನಾಯಕನ ಸ್ಥಾನಕ್ಕೆ ಸಿದ್ದರಾಮಯ್ಯ ಜೊತೆಗೆ ಮಾಜಿ ಸಚಿವ ಎಚ್‌.ಕೆ.ಪಾಟೀಲ್‌ ಅವರ ಹೆಸರು ಕೇಳಿ ಬರುತ್ತಿದ್ದು, ಮೂಲ ಕಾಂಗ್ರೆಸಿಗರಾದ ಮಲ್ಲಿಕಾರ್ಜುನ ಖರ್ಗೆ, ಕೆ.ಎಚ್‌.ಮುನಿಯಪ್ಪ, ಎಂ.ವೀರಪ್ಪ ಮೊಯ್ಲಿ, ಬಿ.ಕೆ.ಹರಿಪ್ರಸಾದ್‌ ಸೇರಿ ಹಿರಿಯ ನಾಯಕರು ಎಚ್‌.ಕೆ.ಪಾಟೀಲ್‌ ಪರ ಹೈಕಮಾಂಡ್‌ ಮುಂದೆ ವಾದ ಮಂಡಿಸಿದ್ದಾರೆ. ಇನ್ನೊಂದೆಡೆ ಕೆಲ ಶಾಸಕರು ಸಿದ್ದರಾಮಯ್ಯ ಅವರನ್ನೇ ಪ್ರತಿಪಕ್ಷದ ನಾಯಕರನ್ನಾಗಿ ಮಾಡುವಂತೆ ಒತ್ತಡ ಹೇರುತ್ತಿದ್ದಾರೆ ಎಂದು ತಿಳಿದು ಬಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next