Advertisement

ಸಿದ್ಧಾರ್ಥ ಪರಮ ಸತ್ಯವನ್ನು ಬೋಧಿಸಿ ಮಹಾಗುರು ಬುದ್ಧನಾದ..!

02:32 PM May 26, 2021 | Team Udayavani |

ಬುದ್ಧನು ದೇವರಲ್ಲ, ದೇವದೂತನೂ ಅಲ್ಲ, ಮತ್ತು ಇತನು ದೈವಸಂಭೂತನೂ ಅಲ್ಲ ಆದರೆ ತನ್ನ ಸ್ವಸಾಮರ್ಥ್ಯದಿಂದ ,ಅತ್ಯುನ್ನತ ಜ್ಞಾನ ಪಡೆದು ಜಗತ್ತಿನ ಪರಮ ಸತ್ಯವನ್ನು ಬೋಧಿಸಿದ ಮಹಾಗುರು. ಮಧ್ಯಮ ಮಾರ್ಗದ ಮೂಲಕ ಮೈತ್ರಿ, ಕರುಣೆ, ದಯೇ, ಸಮತೆ, ಪ್ರೀತಿ, ಅನುಕಂಪ, ಮತ್ತು ಜ್ಞಾನದೊಂದಿಗೆ ಅಷ್ಟಾಂಗ ಮಾರ್ಗಗಳನ್ನು ತೋರಿಸಿಕೊಟ್ಟವನು. ಬುದ್ಧ ಎಂದರೆ ನಿದ್ದೆಯಿಂದ ಎದ್ದವನು, ಜಾಗೃತನಾದವ, ಜ್ಞಾನಿ, ವಿಕಸಿತ, ಎಲ್ಲವನ್ನು ತಿಳಿದವನು ಎಂದರ್ಥ. ಅವನು ಎಲ್ಲರಿಗೂ ಸಂಜೀವಿನಿಯಂಥ ಮಾಹಿತಿ ನೀಡಿದ ಮಹಾತ್ಮ.

Advertisement

ಇದನ್ನೂ ಓದಿ:ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಹೆಚ್.ಎಸ್ ದೊರೆಸ್ವಾಮಿ ಇನ್ನಿಲ್ಲ

ಗೌತಮ ಬುದ್ಧನ ಹುಟ್ಟು ಸ್ಥಳ ಲುಂಬಿನಿ ಗ್ರಾಮ. ತಂದೆ ಶುದ್ಧೋಧನ ತಾಯಿ ಮಾಯದೇವಿ. ಮೊದಲ ಹೆಸರು ಸಿದ್ದಾರ್ಥ. ಬಾಲ್ಯದಲ್ಲಿಯೇ ತಾಯಿಯನ್ನು ಕಳೆದುಕೊಂಡ ಬುದ್ಧನನ್ನು ಗೌತಮಿ ಎಂಬ ಸ್ತ್ರೀಯೊಬ್ಬಳು ಸಾಕುತ್ತಾಳೆ. ಆದುದರಿಂದ ಸಿದ್ದಾರ್ಥ ‘ಗೌತಮ’ನೆಂದು ಕರೆಯಲ್ಪಡುತ್ತಾನೆ. ಸಿದ್ದಾರ್ಥ ಜನಿಸಿದಾಗಲೇ ಅವನಲ್ಲಿ ಅಪೂರ್ವವಾದ ಮಾಹಾಪುರುಷನ ಲಕ್ಷಣ ಇರುವುದನ್ನು ದೈವಜ್ಞರು ಅರಿತಿದ್ದರು. ಸಿದ್ದಾರ್ಥನಿಗೆ 32 ಚಿನ್ಹೆಗಳಿದ್ದು, ನೀಳಬಾಹು, ವಿಶಾಲವಾದ ಎದೆ, ಊರ್ಧ್ವಮುಖ ರೋಮಧಾರೆ, ದೇಹವನ್ನು ಬಾಗಿಸದೆ ಮಂಡಿ ಮುಟ್ಟುವಷ್ಟು ನೀಳವಾದ ಕೈಗಳು, ಉದ್ದವಾದ ಬೆರಳುಗಳು, ಅತೀ ಮೃದುವಾದ ಹಸ್ತ ಮತ್ತು ನವಿರಾದ ಪಾದಗಳನ್ನು ಹೊಂದಿದ್ದನೆಂದು ವಿಭೂತಿ ಪುರುಷರಲ್ಲಿ ಇರಬೇಕಾದ ಸರ್ವಲಕ್ಷಣಗಳನ್ನು ದಿಗ್ಗನಿಕಾಯ ಎಂಬ ಬೌದ್ಧಗ್ರಂಥ ತಿಳಿಸುತ್ತದೆ.

ಜ್ಯೋತಿಷಿಗಳು ತಿಳಿಸಿದ ಸ್ವಪ್ನದ ಸಂಕೇತದಂತೆ, ಮಾಯಾದೇವಿ ಗಂಡು ಮಗುವಿಗೆ ಜನ್ಮವೀಯುವಳು. ಶಿಶುವು ರಾಜ್ಯಾಭಿಷಕ್ತನಾದರೆ ಚಕ್ರಾಧೀಶ್ವರನೂ, ಸಂಪದ್ಫರಿತನೂ ಆಗುವನು. ರಾಜ್ಯಕೋಶಗಳ ಅಧಿಕಾರ ತೊರೆದು ಯೋಗಿಯಾದರೆ, ಮಹಾಯೋಗಿಯೆನಿಸಿ ಜಗದ್ವಿಖ್ಯಾತ ವ್ಯಕ್ತಿಯಾಗುವನು ಎಂದು ತಿಳಿಸಿದ್ದರು.

ರಾಜ ಶುದ್ಧೋಧನನು ಚಕ್ರವರ್ತಿಯಾಗುವ ಲಕ್ಷಣಗಳಿವೆಯೆಂದು, ಬಹಳ ವಾತ್ಸಲ್ಯದಿಂದ ಸಿದ್ದಾರ್ಥನ ಶಿಕ್ಷಣದ ಬೆಳವಣಿಗೆಯಲ್ಲಿ ಹೆಚ್ಚುಆಸಕ್ತಿ ವಹಿಸಿದನು. ಸಿದ್ದಾರ್ಥನು ಸರ್ವ ವಿದ್ಯಾಪಾರಂಗತನಾಗುವಂತೆ, ಕುಲಗುರುವಿನಲ್ಲಿ ವಿದ್ಯೆ ಕೊಡಿಸಿ ತೃಪ್ತನಾಗದೆ, ರಾಮ, ಧಜ, ಲಕ್ಖಣ, ಮಂತಿಯಣ್ಣ, ಸುಯಾಮ, ಸುಭೋಗ, ಸುದತ್ತ, ಸುಮಿತ್ರ, ಸುಲಭ ಮುಂತಾದ ವಿವಿಧ ವಿದ್ಯಾಪಾರಂಗತರಾದ ವಿದ್ವಾಂಸರಲ್ಲಿ ಶಿಕ್ಷಣ ಕೊಡಿಸಿದನು. ಸಿದ್ದಾರ್ಥನು ಬುದ್ಧಿ ಬೆಳವಣಿಗೆಗೆ ಕೊಟ್ಟ ಪ್ರಾಧಾನ್ಯತೆಯನ್ನು ಹೃದಯ ವೈಶಾಲ್ಯತೆಗೂ ಕೊಟ್ಟಿದ್ದನು. ಇದಕ್ಕೊಂದು ನಿದರ್ಶನವೆಂದರೆ ಒಂದು ದಿನ ಸೋದರ ದೇವದತ್ತನು ಉದ್ಯಾನವನದಲ್ಲಿ ಹಾರಾಡುತ್ತಿದ್ದ ಹಂಸಪಕ್ಷಿಗೆ ಬಾಣ ಪ್ರಯೋಗ ಮಾಡಿದನು. ಕೆಳಗೆ ಬಿದ್ದ ಅದು ನೋವನ್ನು ತಾಳಲಾರದೆ ವಿಲವಿಲನೆ ಒದ್ದಾಡುತ್ತಿತ್ತು. ಇದನ್ನು ಕಂಡ
ಸಿದ್ಧಾರ್ಥ ಮನನೊಂದು ಅದನ್ನು ಶ್ರದ್ಧೆಯಿಂದ ಉಪಚರಿಸಿದನು. ಸಿದ್ಧಾರ್ಥನ ಔಷಧೋಪಚಾರಗಳಿಂದ ಹಂಸವು ಬದುಕಿತು.

Advertisement

ಇದನ್ನೂ ಓದಿ:ಅಲೋಪಥಿ ಬಗ್ಗೆ ಹೇಳಿಕೆ; ರಾಮ್ ದೇವ್ ಗೆ 1000 ಕೋಟಿ ರೂ. ಮಾನನಷ್ಟ ಮೊಕದ್ದಮೆ ನೋಟಿಸ್

ರಾಜ ಶುದ್ಧೋಧನನು ಮಗನು ವಿರಕ್ತನಾಗದಂತೆ ನೋಡಿಕೊಳ್ಳಲು ಸರ್ವ ಪ್ರಯತ್ನಗಳನ್ನು ಮಾಡುತ್ತಿದ್ದನು. ಹರೆಯದಲ್ಲಿ ಮದುವೆ ಮಾಡಿದರೆ ಅವನು ಸಂಸಾರಸುಖದಲ್ಲಿ ಮಗ್ನನಾಗಿರುತ್ತಾನೆಂದು ಬಗೆದು, ಮಗನಿಗೊಂದು ಸ್ವಯಂವರವನ್ನೇರ್ಪಡಿಸಿದನು. ಒಂದು ದಿನ ಊರಿನ ಎಲ್ಲ ಕನ್ಯೆಯರೂ ಬಂದು ರಾಜಕುಮಾರನಿಂದ ಆಭರಣಗಳನ್ನು ದಾನ ಪಡೆಯುವಂತೆ ಸಮಾರಂಭ ಏರ್ಪಡಿಸಲಾಗಿತ್ತು.

ಅಂತೆಯೇ ಊರಿನ ಎಲ್ಲಾ ಕನ್ಯೆಯರು ಬಂದು ಸಿದ್ಧಾರ್ಥನ ಕೈಯಿಂದ ಆಭರಣಗಳನ್ನು ಪಡೆದರು. ಆದರೆ ಶುದ್ಧೋಧನನ ಸಚಿವನಾದ ದಂಡಪಾಣಿಯ (ಯಶೋಧರೆಯ ತಂದೆ ಮಹಾಮಾನನೆಂದು, ಸುಪ್ರಬುದ್ಧನೆಂದು ಕೆಲವು ಗ್ರಂಥಗಳಲ್ಲಿ ಉಲ್ಲೇಖಿಸಲಾಗಿದೆ.) ಮಗಳು ಅಥವಾ ಯಶೋಮತಿ ಎಂಬುವವಳು ಅತೀ ಸುಂದರಳೂ, ಸುಸಂಸ್ಕೃತಳೂ ಆಗಿದ್ದು ಕಟ್ಟಕಡೆಯಲ್ಲಿ ಬಂದಳು. ಆಕೆಯ ಗಾಂಭಿರ್ಯ, ಘನತೆಗಳು ಸಿದ್ಧಾರ್ಥನನ್ನು ಮಂತ್ರಮುಗ್ಧಗೊಳಿಸಿದವು. ದಾನ ಮಾಡುತ್ತಿದ್ದ ಒಡವೆಗಳೆಲ್ಲ ಮುಗಿದು ಹೋಗಿದ್ದುವು. ಆಗ ಸಿದ್ಧಾರ್ಥನು ತನ್ನ ಬೆರಳಿನಲ್ಲಿದ್ದ ಉಂಗುರವನ್ನೇ ತೆಗೆದು ಕೊಡಲು ಹೋದನು. ಆದರವಳು ನಿಮ್ಮ ವಾತ್ಸಲ್ಯಮಯ ನೋಟವೇ ನನಗೊಂದು ಆಭರಣ, ಅದೇ ಸಾಕೆಂದು ಮುಂದೆ ಸಾಗಿದಳು. ಸಿದ್ಧಾರ್ಥನಿಗೆ ಯಶೋಧರೆಯಲ್ಲಿ ಮಮಕಾರ ಉಂಟಾಗಿದೆಯೆಂಬ ಗೂಢಚಾರ ವರದಿಯನ್ನಾಧರಿಸಿ, ಯಶೋಧರೆಯನ್ನು ವರಿಸಲು ಸಮ್ಮತಿಸಿದನು. ವಿವಾಹದ ನಂತರ ಇವರಿಬ್ಬರಿಗೆ ‘ರಾಹುಲ’ ಎನ್ನುವ ಪುತ್ರ ಜನಿಸಿದ. ಹೀಗೆ ಸುಖದಿಂದ ಸಂಸಾರ ಸಾಗಿತ್ತು.

ಇದನ್ನೂ ಓದಿ:ಮಾಸ್ಕ್ ಹಾಕಿಕೊಳ್ಳಲು ಹೇಳಿದ್ದಕ್ಕೆ ನಗರಸಭೆ ನೌಕರನನ್ನು ಇರಿದು ಹತ್ಯೆ ಮಾಡಿದ ದುಷ್ಕರ್ಮಿಗಳು

ಒಮ್ಮೆ ಸಿದ್ದಾರ್ಥ ಪೂರ್ವ ಸೂಚನೆಯನ್ನೂ ಕೊಡದೆ ತನ್ನ ಸಾರಥಿ ಚೆನ್ನ(ಛಂದಕ)ನೊಂದಿಗೆ ನಗರ ಸಂಚಾರಕ್ಕೆ ಹೊರಟು ಹಾದಿಯಲ್ಲಿ ಮುದುಕನನ್ನು, ರೋಗಿಯನ್ನು, ಒಂದು ಸಾವನ್ನು ಹಾಗೂ‌ ಸಂನ್ಯಾಸಿಯನ್ನು ಕಂಡು ವ್ಯಾಕುಲಗೊಳ್ಳುತ್ತಾನೆ. ಖಿನ್ನ ಮನಸ್ಕನಾಗಿ, ದುಃಖದಿಂದ ಕಂಗೆಟ್ಟು ಮನದಲ್ಲಿ ವಿರಕ್ತಿ ಹೊಂದುತ್ತಾನೆ. ಚಿಂತಾಕ್ರಾಂತನಾಗಿ ಕುಳಿತು ಆಲೋಚಿಸುವಾಗ ಅವನ ಮುಂದೆ ಸನ್ಯಾಸಿಯೊಬ್ಬ ಬರುತ್ತಾನೆ. ಅದುವರೆವಿಗೂ ಅಂತಹವನನ್ನು ಕಾಣದಿದ್ದ ಸಿದ್ದಾರ್ಥ ಆ ಸನ್ಯಾಸಿಯನ್ನು ಪ್ರಶ್ನಿಸಿದಾಗ ಅವನು- “ಜನನ-ಮರಣಗಳುಳ್ಳ ಪ್ರಪಂಚದಲ್ಲಿರುವ ಮಾನವನೂ ತಿಳಿದೂ ತಿಳಿದೂ ಕ್ಷಣಿಕ ಸುಖಕ್ಕಾಗಿ ಆಸೆ ಪಟ್ಟು, ಸಾಗರದಷ್ಟು ದುಃಖ ಪಡುತ್ತಿರುವುದನ್ನು ನೋಡಿ ಖೇದಗೊಂಡು ಕಾಡುಮೇಡು ಅಲೆಯುತ್ತಾ ನೆಮ್ಮದಿಯಾಗಿದ್ದೇನೆ. ನಾನು ಬಂಧು-ಬಾಂಧವರು, ಸುಖ-ಸಂಪತ್ತುಗಳೆಂಬ ಕೋಟಲೆಯಿಂದ ದೂರವಾದವನು. ನನಗೆ ಕಷ್ಟ ಬರುವುದೆಂಬ ಭಯವಿಲ್ಲ. ಸುಖ ಬೇಕೆಂಬ ಆಸೆಯಿಲ್ಲ. ಉರಿಬರಲಿ, ಸಿರಿಬರಲಿ, ಬೇಕು – ಬೇಡ ಎಂಬ ಗೊಂದಲಕ್ಕೆ ಒಳಗಾಗದವನು. ಆತ್ಮ ಸ್ವತಂತ್ರನು ನಾನು. ಭೂಮಿಯೇ ನನ್ನ ಮನೆ, ಆಕಾಶವೇ ನನಗೆ ಹೊದಿಕೆ. ಅನ್ಯರ ಹಂಗಿಲ್ಲದ ಈ ಅರಣ್ಯ ನನ್ನ ವಿಹಾರ ತಾಣ” ಎನ್ನುತ್ತಾನೆ. ಆ ಸನ್ಯಾಸಿಯ ಮಾತು ಸಿದ್ದಾರ್ಥನ ಮನವನ್ನು ಸೂರೆಗೊಂಡವು. ಅವನ ಮನಸ್ಸು ಒಮ್ಮೆಲೆ ಶಾಂತವಾಗಿ ಒಂದು ಡೃಢ ನಿರ್ಧಾರಕ್ಕೆ ಬಂದಿತು.

ವೃದ್ಧ, ರೋಗಿ, ಮೃತದೇಹ ಮತ್ತು ಸನ್ಯಾಸಿಯ ದರ್ಶನದಿಂದ ಸಿದ್ದಾರ್ಥನ ಜೀವನದಲ್ಲಿ ಅಗಾಧ ಮಾರ್ಪಾಡು ಆಗುತ್ತದೆ. ಜರಾಮರಣಗಳಿಗೆ, ದುಃಖಗಳಿಗೆ ಕಾರಣವನ್ನು ಹುಡುಕಬೇಕೆಂಬ ಹಂಬಲ ತೀವ್ರವಾಗುತ್ತದೆ. ತನ್ನ ಸಂಕಲ್ಪಸಿದ್ಧಿಗೆ ಇದುವರೆಗೂ ನಡೆಸಿದ ಜೀವನ ಸಲ್ಲದೆಂದು ತೀರ್ಮಾನಿಸುವನು. ಈ ಬಂಧನದ ಪರಿತ್ಯಾಗ ಮಾಡಿ ಏಕಾಂಗಿಯಾಗಿ ಕಾಡಿನತ್ತ ಹೋಗುವುದೇ ಸರಿಯಾದ ಮಾರ್ಗವೆಂದು ನಿರ್ಧರಿಸಿದನು. ಅರಮನೆಯಿಂದ ಹೊರಬಂದು ತನ್ನ ನೆಚ್ಚಿನ ಸೇವಕನಾದ ಛಂದಕ ಅಥವಾ ಚೆನ್ನನನ್ನು ಎಬ್ಬಿಸಿಕೊಂಡು, ಕಂಧಕ ವೆಂಬ ಕುದುರೆಯೊಂದಿಗೆ, ರಾಜತ್ಯಾಗ ಮಾಡಿ ಅರಣ್ಯದೆಡೆಗೆ ಪಯಣ ಬೆಳೆಸುತ್ತಾನೆ. ಕಾಡಿನ ಮಧ್ಯಭಾಗಕ್ಕೆ ಬಂದು ಕುದುರೆಯಿಂದ ಕೆಳಗಿಳಿದು, ಛಂದಕನಲ್ಲಿ ಕ್ಷಮೆ ಕೇಳಿ, ಅವನನ್ನು ಸಾಂತ್ವನಗೊಳಿಸಿ, ಸಾಧನೆಯ ಸಿದ್ಧಿಗಾಗಿ ಹೊರಡುತ್ತಾನೆ.

ಸಿದ್ದಾರ್ಥನು ಭಾರ್ಗವಾಶ್ರಮಕ್ಕೆ ಬಂದು, ಅಲ್ಲಿನ ಸಾಧಕರಿಂದ ತಪೋನಿಯಮಗಳನ್ನು ತಿಳಿಯಲೆತ್ನಿಸಿದನು. ನಂತರ ಮಗಧ ದೇಶದೆಡೆಗೆ ಪ್ರಯಾಣ ಆರಂಭಿಸಿದನು. ರಾಜವೈಭವವನ್ನು ಅನುಭವಿಸಿದ್ದ ಸಿದ್ದಾರ್ಥನು ಅರಣ್ಯ ಸಂಚಾರಕ್ಕೆ ಹೆದರದೆ, ಹಸಿವು, ತೃಷೆಗಳ ಪರಿವೆ ಇಲ್ಲದೆ, ರಾಜಗೃಹಕ್ಕೆ ಬಂದು ದೀನರ ಮನೆಯಲ್ಲಿ ಭಿಕ್ಷೆ ಎತ್ತಿ, ತನ್ನ ಜೀವನದಲ್ಲಿ ಮೊದಲ ಬಾರಿಗೆ ಭಿಕ್ಷಾನ್ನವನ್ನು ಸ್ವೀಕರಿಸಿದನು. ಸ್ವಲ್ಪ ಕಾಲ ಮಗಧ ರಾಜ್ಯದ ಆರಾಢಕಾಲಮನೆಂಬ ತಪಸ್ವಿಯ ಬಳಿ ಶಿಷ್ಯನಾಗಿ ಸೇರಿದನು. ಸಿದ್ದಾರ್ಥನು ತನ್ನ ರಾಜ್ಯವನ್ನು ಬಿಟ್ಟು ಬಂದಾಗ ಅವನಿಗೆ 29 ವರ್ಷ ವಯಸ್ಸಾಗಿತ್ತು. ‘ಉರುವೇಲ’ ಅವನ ತಪಸ್ಸಾಧನೆಗೆ ಉತ್ತಮ ಸ್ಥಳವಾಯಿತು. ಸಿದ್ದಾರ್ಥನು ಯಾವ ಸಾಧನೆಯಿಂದಲೂ ತೃಪ್ತನಾಗದೆ, ಕೊನೆಗೆ ನಿರಾಹಾರನಾಗಿ ತಪಸ್ಸನ್ನಾಚರಿಸ ತೊಡಗಿದನು.

ನಿರಾಹಾರ ವ್ರತದಿಂದ ದೇಹ ಕೃಶವಾಗಿ, ಅವನ ಚೈತನ್ಯವೇ ಉಡುಗಿ ಹೋಗಿ ಪ್ರಜ್ಞೆ ತಪ್ಪಿತು. ಕಾಯಕ್ಲೇಶ, ನಿರಾಹಾರ ನಿಯಮಗಳು ಸಾಧನೆಗೆ ಸಹಾಯವಲ್ಲವೆಂದು ಅರಿತನು. ಸುಜಾತೆ ತಂದು ಕೊಟ್ಟ ಪಾಯಸವನ್ನು ಸೇವಿಸಿ ಸಮಾಧಾನ ಚಿತ್ತದಿಂದ ಬೋಧಿವೃಕ್ಷದ ಕೆಳಗೆ, ಪೂರ್ವಾಭಿಮುಖವಾಗಿ, ಪದ್ಮಾಸನ ಹಾಕಿ ಧ್ಯಾನಾಸಕ್ತನಾದ ಸಿದ್ದಾರ್ಥನು ಏಳುವಾರಗಳ ಕಾಲ ಕುಳಿತಿದ್ದನು. ವೈಶಾಖ ಹುಣ್ಣಿಮೆಯ ದಿನ ಸಿದ್ದಾರ್ಥನಿಗೆ ಸಂಕಲ್ಪ
ಸಿದ್ಧಿಯಾಯಿತು. ಸೂರ್ಯೋದಯವಾಗುವುದರೊಳಗೆ ಸಿದ್ಧಾರ್ಥ ನಾಲ್ಕುಜಾವದ ಅನುಭವ ಪಡೆದು ‘ಬುದ್ಧ’ ಎಂಬ ಜ್ಞಾನಯೋಗಿಯಾದನು. ಆ ನಾಲ್ಕು ಜಾವದಲ್ಲಿನ ಅನುಭವಗಳೆಂದರೆ- ಜನ್ಮಾಂತರಗಳ ಅರಿಯುವಿಕೆ, ನಿತ್ಯಾನಿತ್ಯ ವಸ್ತುಗಳ ವಿವೇಕೋದಯ, ಜರಾಮರಣಗಳ ದುಃಖಕ್ಕೆ ಕ್ಷಣಿಕ ವಸ್ತುಗಳ ತೃಷೆಯೇ ಕಾರಣ ಹಾಗೂ ಆಧ್ಯಾತ್ಮ ತತ್ತ್ವದ ಸಾಕ್ಷಾತ್ಕಾರ.

ಸತತ ಎಚ್ಚರದ ಸ್ಥಿತಿಯನ್ನು ಸಾಧಿಸಿದ ಯಾರನ್ನು ಬೇಕಾದರೂ ಬುದ್ಧನೆಂದು ಕರೆಯಬಹುದು.ತಾನು ಅಂತಹ ಅರಿವಿನ ಸ್ಥಿತಿಯಲ್ಲಿರುವುದರಿಂದ ತನ್ನನ್ನು ಬುದ್ಧನೆಂದು ಸಂಬೋಧಿಸಲು ಅವನು ತನ್ನ ಶಿಷ್ಯರಿಗೆ ಸೂಚಿಸಿದ. ಸಂಶೋಧನೆ, ತಿಳುವಳಿಕೆ, ಅನುಭವಿಸುವಿಕೆ ಮತ್ತು ಅದನ್ನು ಮತ್ತೆ ಮನನ ಮಾಡಿಕೊಳ್ಳುವುದು – ಇದುವೇ ಬುದ್ಧ ಧರ್ಮ. ಅವನು ಬೋಧಿಸಿದ್ದು ದುಃಖದಿಂದ ಹೊರಬರುವ ಮಾರ್ಗವನ್ನು ಮಾತ್ರ. ಇದನ್ನೆ ಅವರು ಪಾಲಿ ಭಾಷೆಯಲ್ಲಿ “ಧಮ್ಮ” ಎಂದು ಕರೆದನು. ತಾನು ಬೋಧಿಸುತ್ತಿರುವುದರಲ್ಲಿ ಹೊಸದೇನೂ ಇಲ್ಲವೆಂದೂ ಹಾಗೂ ಈ ಸತ್ಯವನ್ನು ಕಂಡುಕೊಂಡವರಲ್ಲಿ ತಾನು ಮೊದಲನೆಯವನೂ ಅಲ್ಲ, ಕೊನೆಯವನೂ ಅಲ್ಲವೆಂದು ಸಾರಿದನು. ಯಾರು ಬೇಕಾದರೂ ಈ ಮಾರ್ಗವನ್ನು ಅನುಸರಿಸಿ ದುಃಖದಿಂದ ಮುಕ್ತರಾಗಬಹುದು ಮತ್ತು ತನ್ನಂತೆ ಎಚ್ಚರದ ಸ್ಥಿತಿಯನ್ನು ಹೊಂದಬಹುದು. ಆದರೆ ಈ ಸಿದ್ಧಿಗೆ ಸ್ವಂತ ಪ್ರಯತ್ನ, ಸಾಧನೆ ಮಾತ್ರ ಕಾರಣ ಎಂದು ಹೇಳಿದ. ಅವನು
ಎಲ್ಲರಿಗೂ ಸಂಜೀವಿನಿಯಂಥ ಮಾಹಿತಿ ನೀಡಿದ ಮಹಾತ್ಮ. “ಆಸೆಯೇ ದುಃಖಕ್ಕೆ ಮೂಲ” ಎಂಬುದು ಅವನ ಪ್ರಸಿದ್ಧ ತತ್ವ. ಪ್ರೀತಿ, ಕರುಣೆ, ದಯೆ, ಸಮಾನತೆ ಅವನು ಬೋಧಿಸಿದ ಮೂಲ ಮಂತ್ರ. ಈ ಕಾರಣಕ್ಕಾಗಿ ಬುದ್ಧ ಜಗತ್ತಿಗೆ ತುಂಬಾ ಹತ್ತಿರವಾದವನು. ಜಗತ್ತಿನ ಜನರ ಮನದಲ್ಲಿ ಚಿರಸ್ಥಾಯಿಯಾದವನು.

ಸದಾ ವೈಭೋಗವನ್ನು ಅನುಭವಿಸಿದ ಸಿದ್ಧಾರ್ಥ ಸತ್ಯದ ಅರಿವಿನ ಕಾರಣದಿಂದಾಗಿ ಬುದ್ಧನಾಗಲು ಸಾಧ್ಯವಾಗುವುದಾದರೆ ಪ್ರತಿದಿನ ಕಷ್ಟಸುಖಗಳನ್ನು ಸಮಾನವಾಗಿ ಅನುಭವಿಸಿ ಅರಿವು ಪಡೆಯುವ ನಮ್ಮಗಳಿಗೆ ಏಕೆ ಅದು ಸಾಧ್ಯವಾಗದು? ಖಂಡಿತಾ ಸಾಧ್ಯ ಆದರೆ ಒಮ್ಮೆ ಆ ನಿಟ್ಟಿನಲ್ಲಿ ಪ್ರಯತ್ನಿಸಬೇಕಷ್ಟೇ..!

ಕಿರಣಕುಮಾರ ವಿವೇಕವಂಶಿ

Advertisement

Udayavani is now on Telegram. Click here to join our channel and stay updated with the latest news.

Next