ಕುಣಿಗಲ್: ಶ್ರೀ ಸಿದ್ಧರಾಮೇಶ್ವರರ ಜಯಂತಿ ಆಚರಣೆ ಮಾಡದೇ, ತಾಲೂಕು ಆಡಳಿತ ನಿರ್ಲಕ್ಷ್ಯತೆ ವಹಿಸಿದೆ ಎಂದು ಆರೋಪಿಸಿದ ದಲಿತ ಮುಖಂಡರು, ತಾಲೂಕು ಆಡಳಿತ ಸೌಧ ಎದುರು ಭಾನುವಾರ ಪ್ರತಿಭಟನೆ ನಡೆಸಿ ಆಡಳಿತ ವಿರುದ್ಧ ಧಿಕ್ಕಾರ ಕೂಗಿದರು.
ಸರ್ಕಾರದ ಆದೇಶದಂತೆ ತಾಲೂಕು ಆಡಳಿತ ಶ್ರೀ ಸಿದ್ಧರಾಮೇಶ್ವರ ಜಯಂತಿ ಆಚರಣೆ ಮಾಡಬೇಕಾಗಿತ್ತು. ಆದರೆ, ತಹಶೀಲ್ದಾರ್ ಅವರ ಬೇಜವಾಬ್ದಾರಿಯಿಂದ ಜಯಂತಿ ಕಾರ್ಯಕ್ರಮವನ್ನು ಮಾಡದೇ ಸಿದ್ಧರಾಮೇಶ್ವರ ಅವರಿಗೆ ಅಪಮಾನ ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ ದಲಿತ ಮುಖಂಡರು, ಆಡಳಿತ ಸೌಧ ಎದುರು ಕುಳಿತು ಪ್ರತಿಭಟನೆ ನಡೆಸಿದರು.
ತಾಲೂಕು ಆಡಳಿತಕ್ಕೆ ಆದೇಶ: ಭೋವಿ ಸಮಾಜ ಪರಿವರ್ತನಾ ಸಭಾ ಅಧ್ಯಕ್ಷ ಕೆ.ಎಸ್. ವೆಂಕಟಸುಬ್ಬಯ್ಯ ಮಾತನಾಡಿ, ಸರ್ಕಾರ ಸಿದ್ಧರಾಮೇಶ್ವರರ ಜಯಂತಿ ಕಾರ್ಯಕ್ರಮ ಆಚರಣೆ ಮಾಡುವಂತೆ ತಾಲೂಕು ಆಡಳಿತಕ್ಕೆ ಆದೇಶ ನೀಡಿದೆ. ಈ ನಿಟ್ಟಿನಲ್ಲಿ ತಹಶೀಲ್ದಾರ್ ಮಹಬಲೇಶ್ವರ ಅವರು ಕಾರ್ಯಕ್ರಮ ಆಚರಣೆ ಸಂಬಂಧ ಪೂರ್ವಭಾವಿ ಸಭೆ ಕರೆದಿದ್ದರೂ ಜ.15ರಂದು ತುಮಕೂರಿನಲ್ಲಿ ಸಿದ್ಧರಾಮೇಶ್ವರರ ಜಯಂತಿ ಆಚರಣೆ ಇದೆ. ಆ ಕಾರ್ಯಕ್ರಮದಲ್ಲಿ ಭೋವಿ ಸಮುದಾಯದವರು ಹೋಗುತ್ತಿದ್ದೇವೆ. ಹಾಗಾಗಿ ಜ.22 ರಂದು ಕಾರ್ಯಕ್ರಮ ಮಾಡುವಂತೆ ತಿಳಿಸಿದೆವು. ಆಗಾಗುವುದಿಲ್ಲ, ಸರ್ಕಾರದ ಆದೇಶದಂತೆ ಜ.15 ರಂದು ಮಾಡುತ್ತೇವೆ ಎಂದು ತಹಶೀಲ್ದಾರ್ ತಿಳಿಸಿದರು.
ಆದ ಕಾರಣ ತುಮಕೂರಿನ ಕಾರ್ಯಕ್ರಮಕ್ಕೆ ಹೋಗದೆ ತಾಲೂಕು ಕಚೇರಿಯಲ್ಲಿ ನಡೆಯುವ ಕಾರ್ಯಕ್ರಮಕ್ಕೆ ಭಾನುವಾರ ಬೆಳಗ್ಗೆ 10.30 ಕ್ಕೆ ಹೋದೆವು. ಆದರೆ ಕಾರ್ಯಕ್ರಮ ನಡೆಯುವ ತಹಶೀಲ್ದಾರ್ ಅವರ ನ್ಯಾಯಾಲಯದ ಸಭಾಂಗಣದಲ್ಲಿ ಸಿದ್ಧರಾಮೇಶ್ವರರ ಫೋಟೊ ಇಟ್ಟಿದ್ದರು, ಆ ಫೋಟೊಗೆ ಹೂ ಹಾಕಿರಲಿಲ್ಲ, ದೀಪ ಹಚ್ಚಿರಲಿಲ್ಲ, ಬಾಳೇ ಕಂದು ಕಟ್ಟಿರಲಿಲ್ಲ, ನಾವುಗಳು ಸುಮಾರು ಹೊತ್ತು ಕಾಯ್ದೆವು ಯಾವೊಬ್ಬ ಅಧಿಕಾರಿಯೂ ಬರಲಿಲ್ಲ. ಇದು ಸರ್ಕಾರದ ಆದೇಶಕ್ಕೆ ಅಪಮಾನ ಮಾಡಿ ದಂತಾಗಿದೆ ಎಂದು ದೂರಿದರು.
ಪ್ರತಿಭಟನೆಯಲ್ಲಿ ದಲಿತ ಮುಖಂಡರಾದ ವರದರಾಜು, ಎಸ್.ಟಿ.ಕೃಷ್ಣರಾಜು, ಬ್ಯಾಂಕ್ ನಾಗರಾಜು, ಮುನಿಯಪ್ಪ, ಪರಮಶಿವಯ್ಯ ಇದ್ದರು.
ಅಪಮಾನ ಮಾಡಿಲ್ಲ: ಸರ್ಕಾರದ ಆದೇಶದ ಅನ್ವಯ ಸಿದ್ಧರಾಮೇಶ್ವರರ ಜಯಂತಿ ಆಯೋಜನೆ ಮಾಡಲಾಗಿತ್ತು. ಕಾರ್ಯಕ್ರಮ ಮಾಡುವುದು ಹತ್ತು ನಿಮಿಷ ತಡವಾಗಿದೆ, ಅಷ್ಟಕ್ಕೆ ಕೆಲ ದಲಿತ ಮುಖಂಡರು, ಪ್ರತಿಭಟನೆ ನಡೆಸಿದ್ದಾರೆ. ಆದರೂ ಸಿದ್ಧರಾಮೇಶ್ವರ ಜಯಂತಿ ಆಚರಣೆ ಮಾಡಲಾಗಿದೆ, ಸರ್ಕಾರದ ಆದೇಶ ಉಲ್ಲಂಘನೆ ಮಾಡಿಲ್ಲ ಹಾಗೂ ಸಿದ್ದರಾಮೇಶ್ವರರಿಗೆ ಅಪಮಾನ ಮಾಡಿಲ್ಲ ಎಂದು ತಹಶೀಲ್ದಾರ್ ಮಹಬಲೇಶ್ವರ ಸ್ಪಷ್ಟಪಡಿಸಿದ್ದಾರೆ.