Advertisement

ಸಿದ್ಧಗಂಗಾ ಶ್ರೀಗಳು ದ್ವಿಶತಮಾನದ ಸಂತ

12:55 AM Jul 30, 2019 | Team Udayavani |

ಬೆಂಗಳೂರು: ಸಿದ್ಧಗಂಗಾ ಮಠದ ಶಿವಕುಮಾರ ಶ್ರೀಗಳು ದ್ವಿಶತಮಾನದ ಸಂತ. ಅವರ ಸೇವಾ ಕಾರ್ಯಗಳು ಅವಿಸ್ಮರಣೀಯವಾಗಿದ್ದು, ಮುಂದಿನ ಶತಮಾನಗಳಿಗೂ ಮಾದರಿಯಾಗಲಿವೆ ಎಂದು ಸುಪ್ರೀಂಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ಎಂ.ಎನ್‌.ವೆಂಕಟಾಚಲಯ್ಯ ಅಭಿಪ್ರಾಯಪಟ್ಟರು. ಗಂಗ ಪ್ರಕಾಶನ ಹಾಗೂ ಸ್ನೇಹ ಬುಕ್‌ ಹೌಸ್‌ ವತಿಯಿಂದ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಸೋಮವಾರ ಹಮ್ಮಿಕೊಂಡಿದ್ದ ನೇ.ಭ.ರಾಮಲಿಂಗ ಶೆಟ್ಟಿ ಅವರ ಸಿದ್ಧಗಂಗಾ ಮಠದ ಶಿವಕುಮಾರ ಸ್ವಾಮೀಜಿಗಳ ಕುರಿತ “ಶತಮಾನದ ಸಂತ’ ಕೃತಿ ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡಿದರು.

Advertisement

ಈ ಶತಮಾನವು ತಂತ್ರಜ್ಞಾನ ವಿಚಾರದಲ್ಲಿ ಸಾಕಷ್ಟು ಮುಂದುವರೆಯುತ್ತಿದೆ. ಆದರೆ ಜನರಲ್ಲಿ ಮಾನವೀಕ ಮೌಲ್ಯ, ಸೇವಾ ಮನೋಭಾವ ಮರೆಯಾಗುತ್ತಿವೆ. ಇಂದು ಭಾರತದಲ್ಲಿ ಶೇ.55ರಷ್ಟು ಯುವಕರಿದ್ದು, ಬಹುತೇಕರು ಮಾನವೀಯತೆ, ನೈತಿಕತೆಯ ಪಾಠದಿಂದ ವಂಚಿತರಾಗುತ್ತಿದ್ದಾರೆ. ಕಾರಣ ಅದಕ್ಕೆ ಪೂರಕವಾದ ಶಿಕ್ಷಣ ಲಭ್ಯವಾಗದಿರುವುದು. ಆದರೆ, ಸಿದ್ಧಗಂಗಾ ಮಠವು ಪ್ರಪಂಚವೇ ತಿರುಗಿ ನೋಡುವಂತೆ ಅನ್ನ, ಅಕ್ಷರ, ಆಶ್ರಯ ದಾಸೋಹ ನಡೆಯುತ್ತಿದ್ದು, ಮಕ್ಕಳನ್ನು ಸ್ನೇಹ ಜೀವಿಯಾಗಿ ಬೆಳಸುತ್ತಿದೆ. ಅದಕ್ಕಾಗಿಯೇ ಇಲ್ಲಿ ಓದದ ಅನೇಕರು ಸಮಾಜದ ಉನ್ನತ ಸ್ಥಾನದಲ್ಲಿದ್ದಾರೆ. ಮಠದಲ್ಲಿ ಮಾನವೀಯತೆ ಒಳಗೊಂಡು ಶಿಸ್ತು, ಹೊಣೆಗಾರಿಕೆಯಂತ ಜೀವನ ಮೌಲ್ಯವನ್ನು ಕಲಿಸಲಾಗುತ್ತಿದೆ ಎಂದರು.

ಮಾನವವೀಯ ಮೌಲ್ಯ ಹಾಗೂ ಸೇವಾ ಮನೋಭಾವ ಎಂದರೆ ಏನು? ಅದನ್ನು ಜೀವನದಲ್ಲಿ ಅಳವಡಿಸಿಕೊಳ್ಳುವುದು ಹೇಗೆ? ಎಂಬ ಕುರಿತು ಇಂದು ವಿಶ್ವದ ನಾನು ಪ್ರಮುಖ ಸಂಸ್ಥೆಗಳು ನೌಕರಿಗೆ ತರಬೇತಿ ಕೊಡಿಸುತ್ತಿವೆ. ಈ ಅಂಶಗಳನ್ನು ಕಲಿತುಕೊಳ್ಳಲು ನಮ್ಮ ಸಿದ್ಧಗಂಗಾ ಮಠಕ್ಕಿಂತ ಬೇರೆ ಸ್ಥಳ ಮತ್ತೂಂದಿಲ್ಲ. ಈ ಕುರಿತು ಅವಕಾಶ ಕಲ್ಪಿಸಿದರೆ ಉತ್ತಮ ಸಮಾಜ ನಿರ್ಮಾಣಕ್ಕೆ ಸಹಕಾರಿಯಾಗುತ್ತದೆ. ಹಿಂದೊಮ್ಮೆ ಸಿದ್ಧಗಂಗಾ ಮಠಕ್ಕೆ ತೆರಳಿದ್ದಾಗ ಸ್ವಾಮೀಜಿಗಳು ಮಾತನಾಡುತ್ತಾ ನನ್ನ ಬಳಿ “ನೀವು ದೇಶ ದೇಶ ಎನ್ನುತ್ತೀರಾ, ಆದರೆ ಜನ ಇಂದು ಹಣ ಹಣ ಎನ್ನುತ್ತಿದ್ದಾರೆ’ ಎಂದು ಹೇಳಿ ಸದ್ಯದ ಜನರ ಮನಸ್ಥಿತಿಯ ಕುರಿತು ಅಭಿಪ್ರಾಯ ಹಂಚಿಕೊಂಡಿದ್ದರು. ಶಿವಕುಮಾರ ಶ್ರೀಗಳಿಗೆ ಎಷ್ಟೇ ವಯಸ್ಸಾಗಿದ್ದರೂ ಕೂಡ ಸಮಾಜ ವಿಚಾರದಲ್ಲಿ ಕಳಕಳಿ ಹಾಗೂ ಆಗುತ್ತಿರುವ ಬದಲಾವಣೆಗಳ ಅರಿವಿತ್ತು ಎಂದರು.

ತುಮಕೂರು ಸಿದ್ಧಗಂಗಾ ಮಠದ ಶ್ರೀ ಸಿದ್ಧಲಿಂಗ ಸ್ವಾಮೀಜಿ ಮಾತನಾಡಿ, ದೇಶದಲ್ಲಿಯೇ ಅತೀ ಹೆಚ್ಚು ಮಠಗಳನ್ನು ಹೊಂದಿರುವ ಪುಣ್ಯ ಭೂಮಿ ಕರ್ನಾಟಕವಾಗಿದೆ. ಹೀಗಾಗಿಯೇ, ಹೊರ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದಲ್ಲಿ ಶಾಂತಿ ನೆಲಸಿದ್ದು, ಜ್ಞಾನಕ್ಕೂ ಹೆಸರಾಗಿದೆ. ಶಿವಕುಮಾರ ಸ್ವಾಮೀಜಿ ಅವರ ಜೀವನ ತೆರೆದ ಪುಸ್ತಕವಾಗಿತ್ತು. ಚಿಕ್ಕ ವಯಸ್ಸಿನಲ್ಲಿ ದೀಕ್ಷೆ ಪಡೆದು ಇತಿಹಾಸದಲ್ಲಿ ದಾಖಲಾಗುವಂತೆ 89 ವರ್ಷಗಳ ಕಾಲ ತ್ರಿವಿಧ ದಾಸೋಹ ಮಾಡಿದ್ದಾರೆ. ಮಕ್ಕಳಿಗೆ ಆಶ್ರಯ ಕಲ್ಪಿಸಲು ಶ್ರೀಗಳು ಕಲ್ಲು ಮಣ್ಣು ಹೊತ್ತಿದ್ದಾರೆ, ಭೂಮಿ ಭಿತ್ತಿದ್ದಾರೆ. ಅವರಿಗೆ ಇಷ್ಟವಿಲ್ಲದಿದ್ದರೂ ಮಕ್ಕಳ ದಾಸೋಹಕ್ಕೆ ಅನುಕೂಲವಾಗುತ್ತದೆ ಎಂದು ಸನ್ಮಾನ, ಪ್ರಶಸ್ತಿ ಸ್ವೀಕರಿಸುತ್ತಿದ್ದರು, ಶತಮಾನೋತ್ಸವ, ಬೆಳ್ಳಿ ಹಬ್ಬ ಸಭೆ ಸಮಾರಂಭಗಳಲ್ಲಿ ಭಾಗವಹಿಸುತ್ತಿದ್ದರು ಎಂದು ತಿಳಿಸಿದರು.

ನಾಡೋಜ ಡಾ.ಮಹೇಶ್‌ ಜೋಶಿ ಮಾತನಾಡಿ, ವಾಜಪೇಯಿ ಅವರು ಸಿದ್ಧಗಂಗಾ ಮಠಕ್ಕೆ ಬಂದಾಗ ಶತಮಾನ ಪೂರೈಸಿದ ಶಿವಕುಮಾರ ಸ್ವಾಮೀಜಿಯ ಚಟುವಟಿಕೆಗಳು, ಹುಮ್ಮಸ್ಸು ಕಂಡು “ನಾನು ರೋಗಿ ಇವರು ನಿಜವಾದ ಯೋಗಿ’ ಎಂದಿದ್ದರು. ಶಿಶುನಾಳ ಶರೀಫರು ಭವಿಷ್ಯ ನುಡಿಯುತ್ತಿದ್ದು, 200 ವರ್ಷಗಳ ಹಿಂದೆಯೇ ಅವರ ತತ್ವ ಪದದಲ್ಲಿ ಶಿವಕುಮಾರ ಸ್ವಾಮೀಜಿಗಳ ಕುರಿತು ಹೇಳಿದ್ದರು ಎಂದ ಜೋಶಿ ಅವರು “ಶಿವಲೋಕದಿಂದ ಸಾಧು ಬಂದಾನೋ’ ಎಂಬ ತತ್ವ ಪದವನ್ನು ಹಾಡಿದರು. ಈ ವೇಳೆ ಜಾಗೃತ ಕನ್ನಡ ಪತ್ರಿಕೆಯ 25ನೇ ವರ್ಷದ ವಿಶೇಷ ಸಂಚಿಕೆಯನ್ನು ಬಿಡುಗಡೆ ಮಾಡಲಾಯಿತು. ವಿಮರ್ಶಕ ಬೈರಮಂಗಲ ರಾಮೇಗೌಡ, ಕರ್ನಾಟಕ ರಕ್ಷಣ ವೇದಿಕೆ ಟಿ.ನಾರಾಯಣಗೌಡ, ಸಾಹಿತಿ ನೇ.ಭ.ರಾಮಲಿಂಗ ಶೆಟ್ಟಿ ಮತ್ತಿತರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next