ನೆಲಮಂಗಲ: ಬೇಸಿಗೆ ರಜೆ ಹಿನ್ನೆಲೆಯಲ್ಲಿ ತಾಲೂಕಿನ ಸಿದ್ದರಬೆಟ್ಟಕ್ಕೆ ಪ್ರವಾಸಕ್ಕೆ ಬಂದಿದ್ದ ಒಂದೇ ಕುಟುಂಬದ ಐವರು, ಇಲ್ಲಿನ ಕಲ್ಯಾಣಿಯಲ್ಲಿ ಕಾಲು ಜಾರಿ ಬಿದ್ದು ಮೃತಪಟ್ಟಿದ್ದಾರೆ.
ಉಸ್ಮಾನ್(14), ಮುಭೀನತಾಜ್(21), ಮುನೀರ್‌ಖಾನ್(49), ಯಾರಭ್(21), ರೇಷ್ಮಾ (22) ಮೃತ ದುರ್ದೈವಿಗಳು. ಒಂದೇ ಕುಟುಂಬದ ಈ ಐದು ಮಂದಿ ಬೆಂಗಳೂರಿನ ಥಣೀಸಂದ್ರದಿಂದ ಒಂದು ದಿನದ ಪ್ರವಾಸಕ್ಕೆಂದು ಸಿದ್ದರಬೆಟ್ಟಕ್ಕೆ ಬಂದಿದ್ದರು.
ಈ ವೇಳೆ, ಉಸ್ಮಾನ್ ಎಂಬ ಬಾಲಕ ಸ್ನಾನ ಮಾಡಲು ಸಿದ್ದರಬೆಟ್ಟದಲ್ಲಿರುವ ಕಲ್ಯಾಣಿಯಲ್ಲಿ ನೀರು ತೆಗೆದುಕೊಳ್ಳಲು ಇಳಿದ ವೇಳೆ ಕಾಲು ಜಾರಿ ಬಿದ್ದ. ಆತ ಮುಳುಗುತ್ತಿರುವಾಗ ಕೂಗಿಕೊಂಡ.
ಕೂಗು ಕೇಳಿ ತಕ್ಷಣ ಉಸ್ಮಾನ್ ರಕ್ಷಣೆಗೆ ಬಂದ ಕುಟುಂಬದ ನಾಲ್ವರು ಯಾವುದೇ ರಕ್ಷಣಾ ಕವಚವಿಲ್ಲದೆ ಕಲ್ಯಾಣಿಗೆ ಇಳಿದರು. ನಾಲ್ವರಿಗೂ ಈಜು ಬಾರದೆ, ಕಲ್ಯಾಣಿಯಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ.
ಬೆಂಗಳೂರು ಗ್ರಾಮಾಂತರ ಎಸ್ಪಿ ರಾಮ್ ನಿವಾಸ್ ಸಪೆಟ್, ಪೊಲೀಸ್ ಉಪಾಧೀಕ್ಷಕ ಆರ್.ಪಾಂಡುರಂಗ, ರೀನಾ ಸುವರ್ಣ, ಸಬ್ ಇನ್‌ಸ್ಪೆಕ್ಟರ್ ಶಂಕರ್ ನಾಯಕ್ ಸ್ಥಳಕ್ಕೆ ಧಾವಿಸಿ, ಪರಿಶೀಲನೆ ನಡೆಸಿದರು. ಮೃತ ದೇಹಗಳನ್ನು ಹೊರತೆಗೆಯಲಾಗಿದ್ದು, ಸಂಬಂಧಿಕರಿಗೆ ಹಸ್ತಾಂತರಿಸಲಾಗಿದೆ.
ಸಿದ್ದರಬೆಟ್ಟದಲ್ಲಿರುವ ಕಲ್ಯಾಣಿಯಲ್ಲಿ ಇನ್ನು ಮುಂದೆ ಇಂತಹ ಅವಘಡ ಸಂಬಂಧಿಸದಂತೆ ಎಚ್ಚರಿಕೆ ವಹಿಸುವ ನಿಟ್ಟಿನಲ್ಲಿ ನಾಮಫಲಕ ಹಾಗೂ ಬೇಲಿ ಹಾಕುವಂತೆ ಎಸ್ಪಿ, ರಾಮ್ ನಿವಾಸ್ ಸಪೆಟ್ ಸಂಬಂಧಪಟ್ಟವರಿಗೆ ಸೂಚನೆ ನೀಡಿದ್ದಾರೆ.