ಹುಬ್ಬಳ್ಳಿ: ಸದ್ಗುರು ಶ್ರೀ ಸಿದ್ಧಾರೂಢಸ್ವಾಮಿ ಮಠದಲ್ಲಿ ಕಾರ್ತಿಕ ಮಾಸದ ಲಕ್ಷದೀಪೋತ್ಸವ ನ. 26ರಂದು ಸಂಜೆ 6:30 ಗಂಟೆಗೆ ನಡೆಯಲಿದೆ. ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಮಠದ ಟ್ರಸ್ಟ್ ಕಮಿಟಿ ಚೇರ್ಮನ್ ದೇವೇಂದ್ರಪ್ಪ ಮಾಳಗಿ, ಲಕ್ಷದೀಪೋತ್ಸವ ಕಾರ್ಯಕ್ರಮಕ್ಕೆ ಟ್ರಸ್ಟ್ ಕಮಿಟಿ ಮುಖ್ಯ ಆಡಳಿತಾಧಿಕಾರಿ, ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಈಶಪ್ಪ ಕೆ. ಭೂತೆ ಚಾಲನೆ ನೀಡಲಿದ್ದಾರೆ.
ಶ್ರೀಮಠದಲ್ಲಿ ಲಕ್ಷದೀಪೋತ್ಸವವನ್ನು ಕಳೆದ 25 ವರ್ಷಗಳಿಂದ ಆಚರಿಸಿಕೊಂಡು ಬರಲಾಗುತ್ತಿದೆ. ಪ್ರಸಕ್ತ ವರ್ಷ ರಾಜ್ಯದಲ್ಲಿ ಪ್ರವಾಹವುಂಟಾಗಿದ್ದರಿಂದ ವಿಶೇಷ ಕಾರ್ಯಕ್ರಮ ಹಮ್ಮಿಕೊಂಡಿಲ್ಲ. ವಾಹನಗಳ ಸಂಚಾರಕ್ಕೆ ಅಡಚಣೆಯಾಗುತ್ತಿರುವ ಹಿನ್ನೆಲೆಯಲ್ಲಿ ಶ್ರೀಮಠದ ಮುಂಭಾಗದ ಆವರಣದಲ್ಲಿ ಮಾತ್ರ ದೀಪೋತ್ಸವ ನಡೆಸಲಾಗುವುದು. 25-30 ಸಾವಿರ ಭಕ್ತರು ಪಾಲ್ಗೊಳ್ಳುವ ನಿರೀಕ್ಷೆಯಿದೆ ಎಂದರು.
ಸದ್ಗುರುವಿನ ಶಯನ ಮಂದಿರಕ್ಕೆ ನಿವೃತ್ತ ಅಧಿಕಾರಿ ಮುರಗೋಡ ಅವರು ಅಂದಾಜು 3.50 ಲಕ್ಷ ರೂ. ವೆಚ್ಚದಲ್ಲಿ ಬೆಳ್ಳಿ ಮತ್ತು ತಾಮ್ರದ ಚೌಕಟ್ಟು ನಿರ್ಮಿಸುತ್ತಿದ್ದಾರೆ. ಗೋಕಾಕದ ವಕೀಲರಾದ ಸೀಗಿಹಳ್ಳಿ ಅವರು ಅಂದಾಜು 85 ಕೆಜಿ ತೂಕದ ಬೆಳ್ಳಿ ರಥ, ಆನೆ ಅಂಬಾರಿ ನಿರ್ಮಿಸಿಕೊಟ್ಟಿದ್ದು, ಮೇ 14ರಿಂದ ಪ್ರತಿ ಸೋಮವಾರ ಸಿದ್ಧಾರೂಢ ಹಾಗೂ ಗುರುನಾಥರೂಢರ ಉತ್ಸವ ಮೂರ್ತಿಯ ಪ್ರದಕ್ಷಿಣೆ ಹಾಗೂ ತುಲಾಭಾರ ನಡೆಸಲಾಗುತ್ತಿದೆ. ಭಕ್ತರು 11 ಸಾವಿರ ರೂ. ಪಾವತಿಸಿದರೆ ಒಂದು ತಕ್ಕಡಿಯಲ್ಲಿ ಸಂಗಮುರಿ ಕಲ್ಲಿನಿಂದ ನಿರ್ಮಿಸಿದ 105 ಕೆಜಿ ತೂಕವುಳ್ಳ ಸಿದ್ಧಾರೂಢರ ಮೂರ್ತಿಯಿಟ್ಟು ನಾಣ್ಯದಲ್ಲಿ ತುಲಾಭಾರ ಮಾಡಲಾಗುತ್ತಿದೆ. ಭಕ್ತರ ಇಚ್ಛಾನುಸಾರ ಮುಂದಿನ ತಿಂಗಳ ಮೊದಲ ವಾರದಿಂದ ದವಸಧಾನ್ಯದ ತುಲಾಭಾರ ಆರಂಭಿಸಲಾಗುವುದು ಎಂದು ತಿಳಿಸಿದರು.
ಕವಿವಿಯ ತತ್ವಶಾಸ್ತ್ರ ವಿಭಾಗದ ಮುಖ್ಯಸ್ಥ ಜುಕ್ತಿ ಹಿರೇಮಠ ಅವರು ಎಂಎ ಫಲಿತಾಂಶ ಬಂದ ನಂತರ ಶೈಕ್ಷಣಿಕ ವರ್ಷದಿಂದ ಪಿಎಚ್‌ಡಿ ಮಾಡಲಿಚ್ಛಿಸುವವಿದ್ಯಾರ್ಥಿಗಳಿಗೆ ಸಿದ್ಧಾರೂಢರ ಇತಿಹಾಸ, ಚರಿತ್ರೆ ಕುರಿತು ಅಧ್ಯಯನ ಮಾಡಲು ಒಂದು ವಿಷಯ ನೀಡುವುದಾಗಿ ತಿಳಿಸಿದ್ದಾರೆ. ಸಿದ್ಧಾರೂಢರ ಕುರಿತು ಪಿಎಚ್‌ಡಿ ಅಧ್ಯಯನ ಮಾಡಲಿಚ್ಛಿಸುವವರು ಇದರ ಸದುಪಯೋಗ ಪಡೆದುಕೊಳ್ಳಬೇಕು. ಕೆರೆಯ ಮಧ್ಯಭಾಗದಲ್ಲಿ ಅಂದಾಜು 36ಲಕ್ಷ ರೂ. ವೆಚ್ಚದಲ್ಲಿ ಸಿದ್ಧಾರೂಢ-ಗುರುನಾಥರೂಢರ ಮಂಟಪ ಹಾಗೂ ಅದರ ಸುತ್ತಲು ಕಾರಂಜಿ ನಿರ್ಮಿಸಲು ಯೋಜಿಸಲಾಗಿದೆ. ಬೋಟ್ ವ್ಯವಸ್ಥೆ ಮೂಲಕ ಭಕ್ತರಿಗೆ ಮಂಟಪದ ದರ್ಶನ ಮಾಡಿಸಲು ಚಿಂತನೆ ನಡೆದಿದೆ. ಕೆರೆಗೆ ಗಲೀಜು ನೀರು ಬಾರದಂತೆ ಈಗಾಗಲೇ ಕೆರೆಯ ಸುತ್ತಲು ರಿಟೇನಿಂಗ್ ವಾಲ್ ಪೂರ್ಣಗೊಳಿಸಲಾಗಿದೆ. ಪಕ್ಕದಲ್ಲಿಯೇ ಉದ್ಯಾನವನ ನಿರ್ಮಿಸಲು ಯೋಜಿಸಲಾಗಿದೆ ಎಂದು ಹೇಳಿದರು.
ಧರ್ಮದರ್ಶಿಗಳಾದ ನಾರಾಯಣಪ್ರಸಾದಪಾಠಕ, ಜಗದೀಶ ಮಗಜಿಕೊಂಡಿ, ಗಣಪತಿ ನಾಯಕ, ಶ್ರೀಮಠದ ವ್ಯವಸ್ಥಾಪಕ ಈರಣ್ಣ ತುಪ್ಪದ, ತುಕಾರಾಮ ಗಣಾಚಾರಿ ಇದ್ದರು.