Advertisement

ಬಿಜೆಪಿ ರಾಜ್ಯದಲ್ಲಿ ಉದ್ಯೋಗ ಸೃಷ್ಟಿಸುವ ಬದಲು ನಿರುದ್ಯೋಗ ಸೃಷ್ಟಿಸಿದೆ: ಸಿದ್ದು ಟೀಕೆ

08:37 PM Mar 23, 2023 | Team Udayavani |

ಬೆಂಗಳೂರು: ಬಿಜೆಪಿ ಸರ್ಕಾರ ಉದ್ಯೋಗ ಸೃಷ್ಟಿಸುವುದರ ಬದಲಿಗೆ ನಿರುದ್ಯೋಗವನ್ನು ಸೃಷ್ಟಿಸಿದೆ. ಜಾಹೀರಾತುಗಳ ಮೂಲಕ ಸುಳ್ಳು ಹೇಳಿ ನಿರುದ್ಯೋಗಿ ಯುವಜನರಿಗೆ ಅವಮಾನ ಮಾಡಿದೆ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಆರೋಪಿಸಿದ್ದಾರೆ.

Advertisement

ಈ ಕುರಿತು ಹೇಳಿಕೆ ನೀಡಿರುವ ಅವರು, ರಾಜ್ಯ ಮತ್ತು ಕೇಂದ್ರದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ಸರ್ಕಾರಗಳಿಗೆ ಒಂದು ಗುಲಗಂಜಿಯಷ್ಟಾದರೂ ನಾಚಿಕೆ ಇದೆಯೇ ಎಂದು ನನಗೆ ಅನುಮಾನ. ಜನರ ತೆರಿಗೆ ಹಣವನ್ನು ಬಳಸಿ ಜಾಹೀರಾತುಗಳ ಮೂಲಕ ಸುಳ್ಳು ಮಾರಾಟ ಮಾಡುವ ಹೀನಾತಿಹೀನ ರಾಜಕೀಯ ಬಿಜೆಪಿ ಸರ್ಕಾರ ಮಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನಾನು ಜಾಹೀರಾತುಗಳನ್ನು ಕೊಡಬೇಡಿ ಎಂದು ಹೇಳುತ್ತಿಲ್ಲ. ಆದರೆ ಸತ್ಯಸಂಗತಿಗಳನ್ನು ಮಾತ್ರ ಜನರಿಗೆ ಹೇಳಿ ಎಂದಷ್ಟೆ ಆಗ್ರಹ ಮಾಡುತ್ತಿದ್ದೇನೆ. ಸರ್ಕಾರ ಯುಗಾದಿ ದಿನ ಬಿಡುಗಡೆ ಮಾಡಿರುವ ಜಾಹೀರಾತಿನಲ್ಲಿ 68.5 ಲಕ್ಷ ಉದ್ಯೋಗಗಳನ್ನು ಸೃಷ್ಟಿಸಲಾಗಿದೆ ಎಂದು ಹೇಳಿಕೊಂಡಿದೆ. ಹಾಗಿದ್ದರೆ ವಾಸ್ತವದಲ್ಲಿ ನಿರುದ್ಯೋಗ ಕಡಿಮೆಯಾಗಬೇಕಿತ್ತಲ್ಲ. ಸೆಂಟರ್‌ ಫಾರ್‌ ಮಾನಿಟರಿಂಗ್‌ ಇಂಡಿಯನ್‌ ಎಕಾನಮಿ ಬಿಡುಗಡೆ ಮಾಡಿರುವ ದಾಖಲೆ ಪ್ರಕಾರ, 2022ರಲ್ಲಿ ಕಾರ್ಮಿಕರ ಪಾಲ್ಗೊಳ್ಳುವಿಕೆಯ ಒಟ್ಟಾರೆ ಪ್ರಮಾಣವು ಶೇ.37.88ರಷ್ಟಿದೆ. ರಾಜ್ಯದ ಜನಸಂಖ್ಯೆಯಲ್ಲಿ ಒಟ್ಟು ದುಡಿಮೆ ಮಾಡಲು ಬಯಸುವವರ ಸಂಖ್ಯೆ 2.49 ಕೋಟಿ ಎಂದು ಅಂದಾಜು ಮಾಡಿದ್ದಾರೆ. ಆದರೆ, ಯಾವುದೋ ಒಂದು ಉದ್ಯೋಗ ಲಭಿಸಿರುವುದು ಕೇವಲ 2.1 ಕೋಟಿ ಜನರಿಗೆ ಮಾತ್ರ. ಸುಮಾರು 30 ಲಕ್ಷ ಜನರಿಗೆ ಯಾವ ಉದ್ಯೋಗವೂ ಇಲ್ಲದೆ ಪರದಾಡುತ್ತಿದ್ದಾರೆ ಎಂದು ಹೇಳಿದ್ದಾರೆ.

ಉದ್ಯೋಗವೇ ಸಿಗುತ್ತಿಲ್ಲವೆಂದು ಉದ್ಯೋಗಕ್ಕಾಗಿ ಹುಡುಕಾಟ ನಿಲ್ಲಿಸಿರುವವರ ಸಂಖ್ಯೆ 23.71 ಲಕ್ಷ. ಉದ್ಯೋಗ ಸಿಗುತ್ತದೆ ಎಂಬ ಭರವಸೆಯನ್ನು ಕಳೆದುಕೊಂಡಿರುವ ಯುವಶಕ್ತಿಗೆ ಬಿಜೆಪಿ ಸರ್ಕಾರಗಳು ಏನು ಮಾಡಿವೆ. 67.9 ಲಕ್ಷ ಉದ್ಯೋಗ ಸೃಷ್ಟಿಸಿದ್ದೇವೆ ಎಂದು ಹೇಳಿಕೆ ನೀಡುವವರು ಯಾವ ಯಾವ ಕ್ಷೇತ್ರದಲ್ಲಿ ಉದ್ಯೋಗ ಸೃಷ್ಟಿ ಮಾಡಿದ್ದೇವೆ ಎಂದೂ ಸಹ ಹೇಳಬೇಕಲ್ಲ ಎಂದು ಪ್ರಶ್ನಿಸಿದ್ದಾರೆ.

ಈ ಕುರಿತು ಬೊಮ್ಮಾಯಿಯವರ ಸರ್ಕಾರ ಸ್ಪಷ್ಟವಾದ ದಾಖಲೆಗಳನ್ನು ಬಿಡುಗಡೆ ಮಾಡಬೇಕು ಮತ್ತು ಈ ಮಹಾ ಸುಳ್ಳಿನ ಕುರಿತು ರಾಜ್ಯದ ಜನರಲ್ಲಿ ಕ್ಷಮೆ ಕೇಳಬೇಕೆಂದು ಆಗ್ರಹಿಸಿದ್ದಾರೆ.

Advertisement

ಇದನ್ನೂ ಓದಿ: ದಾವಣಗೆರೆ: ಯುಗಾದಿಗೆ ಅತ್ತೆ ಮನೆಗೆ ಬಂದು ನಾಪತ್ತೆಯಾಗಿದ್ದ ಅಳಿಯನ ಭೀಕರ ಹತ್ಯೆ

Advertisement

Udayavani is now on Telegram. Click here to join our channel and stay updated with the latest news.

Next