ಕೋಲಾರ: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪರ್ಧೆ ಘೋಷಣೆ ಕಾರಣದಿಂದ ಕೋಲಾರ ವಿಧಾನಸಭಾ ಕ್ಷೇತ್ರ ಈಗಾಗಲೇ ಹಾಟ್ ಕ್ಷೇತ್ರ ಎನಿಸಿಕೊಂಡಿದೆ. ಸಿದ್ದರಾಮಯ್ಯ ಕಾಂಗ್ರೆಸ್ ಅಭ್ಯರ್ಥಿಯಾಗುವುದು ಖಚಿತವಾದರೆ ಸಮರ್ಥ ಎದುರಾಳಿ ಯಾರು ಎನ್ನುವುದು ಸದ್ಯದ ಕುತೂಹಲ.
2018ರ ಚುನಾವಣೆಯಲ್ಲಿ ಜೆಡಿಎಸ್‌ನಿಂದ ಸ್ಪರ್ಧಿಸಿ ಕೆ. ಶ್ರೀನಿವಾಸಗೌಡ ತಮ್ಮ ನಾಲ್ಕನೇ ಗೆಲುವು ಸಾಧಿಸಿದ್ದರು. ಕಾಂಗ್ರೆಸ್ ಜೆಡಿಎಸ್ ಸಮ್ಮಿಶ್ರ ಸರಕಾರದಲ್ಲಿ ಕೆ. ಶ್ರೀನಿವಾಸ ಗೌಡರಿಗೆ ಮಂತ್ರಿಸ್ಥಾನ ಕೊಡಲಿಲ್ಲವೆಂಬ ಕಾರಣಕ್ಕೆ ಜೆಡಿಎಸ್ ವಿರುದ್ಧ ಮುನಿಸಿಕೊಂಡಿದ್ದು, ಇದೀಗ ಕಾಂಗ್ರೆಸ್‌ನಲ್ಲಿ ಧೈರ್ಯ ವಾಗಿ ಗುರುತಿಸಿಕೊಂಡಿದ್ದಾರೆ. ಸಿದ್ದರಾಮಯ್ಯರನ್ನು ಕೋಲಾರಕ್ಕೆ ಆಹ್ವಾನಿಸಿ ಕ್ಷೇತ್ರ ಬಿಟ್ಟು ಕೊಡುವುದಾಗಿ ಘೋಷಿಸಿದ್ದಾರೆ. ಕಾಂಗ್ರೆಸ್ ರಮೇಶ್‌ಕುಮಾರ್ ನೇತೃತ್ವದ ತಂಡವು ಸಿದ್ದರಾಮಯ್ಯರನ್ನು ಆಹ್ವಾನಿಸಿ ಕೋಲಾರ ದಿಂದಲೇ ಸ್ಪರ್ಧೆ ಎಂಬ ಘೋಷಣೆ ಮೊಳಗಿಸಿದ್ದಾರೆ. ಈಗಾಗಲೇ ನಾಲ್ಕು ಬಾರಿ ಕೋಲಾರಕ್ಕೆ ಆಗಮಿಸಿರುವ ಸಿದ್ದರಾಮಯ್ಯ ಸ್ಪರ್ಧೆ ಕುರಿತಂತೆ ಹಂತ ಹಂತವಾಗಿ ಖಚಿತ ಪಡಿಸುತ್ತಿದ್ದಾರೆ. ಸದ್ಯದಲ್ಲೇ 3 ದಿನ ಇಲ್ಲೇ ಠಿಕಾಣಿ ಹೂಡುವ ಬಗ್ಗೆ ಕಾಂಗ್ರೆಸ್ ಚಿಂತಿಸುತ್ತಿದೆ.
ವರ್ತೂರು ಪ್ರಕಾಶ್: ಕೋಲಾರದಿಂದ ಸಿದ್ದರಾಮಯ್ಯ ಸ್ಪರ್ಧಿಸುವುದು ಖಚಿತವಾದರೆ, ಇವರ ಸಮರ್ಥ ಎದುರಾಳಿ ಯಾರಾಗ ಬಹುದು ಎನ್ನುವುದು ಚರ್ಚೆಯ ವಿಷಯ ವಾಗಿದೆ. ಮಾಜಿ ಸಚಿವ ವರ್ತೂರು ಪ್ರಕಾಶ್ ಬಿಜೆಪಿ ಸೇರಿ ಬಿಜೆಪಿಗೆ ಕೋಲಾರ ಕ್ಷೇತ್ರದಲ್ಲಿ ಬಲ ತುಂಬಿದ್ದಾರೆ. ತಾವೇ ಅಭ್ಯರ್ಥಿ ಎಂಬ ಆತ್ಮವಿಶ್ವಾಸದಲ್ಲಿ ನಿತ್ಯವೂ ಗ್ರಾಮಾಂತರ ಪ್ರದೇಶದಲ್ಲಿ ಭರ್ಜರಿ ಪ್ರಚಾರದಲ್ಲಿ ತೊಡಗಿದ್ದಾರೆ. ಬಿಜೆಪಿ ಟಿಕೆಟ್‌ಗಾಗಿ ಓಂ ಶಕ್ತಿ ಚಲಪತಿಯೂ ಪೈಪೋಟಿ ಸಾಲಿನಲ್ಲಿದ್ದಾರೆ. ಕಳೆದ ಬಾರಿ ಬಿಜೆಪಿಯಿಂದ ಸ್ಪರ್ಧಿಸಿ ಸೋತಿದ್ದ ಅನುಕಂಪ ಇವರಿಗಿದೆ. ಬಿಜೆಪಿ ಜಾತಿ, ಹಣ ಬಲದ ಲೆಕ್ಕಾಚಾರದಲ್ಲಿ ಮತ್ತಷ್ಟು ಪ್ರಬಲ ಅಭ್ಯರ್ಥಿಗೆ ಹುಡುಕಾಟ ನಡೆಸುತ್ತದೆಯೋ ಎನ್ನುವುದು ರಹಸ್ಯವಾಗಿದೆ.
ಬಿಜೆಪಿಯಿಂದ ವೈ.ಎ.ನಾರಾಯಣಸ್ವಾಮಿ, ಆರ್.ಅಶೋಕ್, ಮುನಿರತ್ನ, ಛಲವಾದಿ ನಾರಾಯಣಸ್ವಾಮಿ ಮತ್ತಿತರರ ಹೆಸರು ಚಾಲ್ತಿಯಲ್ಲಿವೆ. ಇಷ್ಟಾದರೂ ಬಿಜೆಪಿ ಇನ್ನೂ ಅಧಿಕೃತವಾಗಿ ಚುನಾವಣಾ ಕೆಲಸ ಆರಂಭಿಸಿಲ್ಲ. ವರ್ತೂರು ಮತ್ತು ಓಂಶಕ್ತಿ ಚಲಪತಿ ತಮ್ಮ ಸ್ವ ಸಾಮರ್ಥ್ಯದ ಮೇಲೆ ಪ್ರಚಾರ ನಡೆಸುತ್ತಿದ್ದಾರೆ.
ಸಿಎಂಆರ್ ಶ್ರೀನಾಥ್: ಜೆಡಿಎಸ್ ಅಭ್ಯರ್ಥಿ ಸಿಎಂಆರ್ ಶ್ರೀನಾಥ್ ಎಂದು ಪಕ್ಷವು ಘೋಷಿಸಿದೆ. ಈ ಘೋಷಣೆಗೂ ಮುನ್ನ ಶ್ರೀನಾಥ್‌ರಿಗೆ ಪ್ರತಿಸ್ಪರ್ಧಿಯಾಗಿ ಜೆಡಿಎಸ್ ಕೋಲಾರ ತಾಲೂಕು ಅಧ್ಯಕ್ಷೆ ಕುರ್ಕಿ ರಾಜೇಶ್ವರಿ ಪೈಪೋಟಿ ನಡೆಸಿದ್ದರು. ಮಹಿಳಾ ಕೋಟಾದ ಮೀಸಲಾತಿ ಪ್ರತಿಪಾದಿಸಿದ್ದರು. ಆದರೆ, ಎಚ್.ಡಿ.ಕುಮಾರಸ್ವಾಮಿ ಶ್ರೀನಾಥ್‌ರನ್ನು ಅಭ್ಯರ್ಥಿ ಎಂದು ಘೋಷಿಸಿದ್ದಾರೆ.
ಟೊಮೇಟೋ ಮಂಡಿ ಮಾಲೀಕರಾದ ಸಿಎಂಆರ್ ಶ್ರೀನಾಥ್ ಕಳೆದ ಮೂರು ನಾಲ್ಕು ವರ್ಷಗಳಿಂದಲೂ ಸೇವಾ ಕಾರ್ಯಗಳ ಮೂಲಕ ಜನರ ಮನಸನ್ನು ಗೆಲ್ಲುವ ಪ್ರಯತ್ನವನ್ನು ನಡೆಸುತ್ತಿದ್ದಾರೆ. ಆದರೂ, ಸಿದ್ದರಾಮಯ್ಯ ಅಭ್ಯರ್ಥಿ ಎಂದು ಘೋಷಿಸಿದ ನಂತರ ಜೆಡಿಎಸ್‌ನಿಂದಲೂ ಮತ್ತಷ್ಟು ಪ್ರಭಾವಿ ನಾಯಕರನ್ನು ಕಣಕ್ಕಿಳಿಸುತ್ತಾರೆಂಬ ಮಾತುಗಳು ಕೇಳಿ ಬರುತ್ತಿವೆ. ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ, ಯುವ ಘಟಕದ ರಾಜ್ಯಾಧ್ಯಕ್ಷ ನಿಖೀಲ್ ಕುಮಾರ್ ಸಿದ್ದರಾಮಯ್ಯರಿಗೆ ಪ್ರತಿಸ್ಪರ್ಧಿಗಳಾಗಬಹುದು ಎಂಬ ಲೆಕ್ಕಾಚಾರಗಳಿವೆ.
– ಕೆ.ಎಸ್.ಗಣೇಶ್