Advertisement
ಸಿಎಎ ಹಾಗೂ ಎನ್‌ಆರ್‌ಸಿ ಕುರಿತು ಪಕ್ಷದ ಕಚೇರಿಯಲ್ಲಿ ನಡೆದ ಕಾರ್ಯಾಗಾರದಲ್ಲಿ ಕೇಂದ್ರ ಸರ್ಕಾರದ ನಿರ್ಧಾರವನ್ನು ಖಂಡಿಸಿ ನಿರ್ಣಯ ಕೈಗೊಳ್ಳಲಾಯಿತು. ಸಿಎಎ ಹಾಗೂ ಎನ್‌ಆರ್‌ಸಿಯನ್ನು ವಾಪಸ್ ಪಡೆಯುವಂತೆ ಕಾಂಗ್ರೆಸ್ ಪಕ್ಷದಿಂದಲೇ ಹೋರಾಟ ರೂಪಿಸುವುದು.
Related Articles
ಆರ್‌ಎಸ್‌ಎಸ್‌ನವರು ಜಾತ್ಯತೀತ ಭಾರತವನ್ನು ಹಿಂದೂ ರಾಷ್ಟ್ರ ಮಾಡುವ ಉದ್ದೇಶ ಇಟ್ಟುಕೊಂಡಿದ್ದಾರೆ. ಆದರೆ, ಯಾವುದೇ ಕಾರಣಕ್ಕೂ ಭಾರತವನ್ನು ಧರ್ಮಾಧಾರಿತ ಹಿಂದೂ ರಾಷ್ಟ್ರ ಮಾಡಲು ಬಿಡುವುದಿಲ್ಲ ಎಂದು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.
Advertisement
ಕಾರ್ಯಾಗಾರದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಸ್ವಾಮಿ ವಿವೇಕಾನಂದ, ಮಹಾತ್ಮಾ ಗಾಂಧಿ, ರವೀಂದ್ರನಾಥ ಟ್ಯಾಗೋರ್ ಭಾರತವನ್ನು ಧರ್ಮದ ಆಧಾರದಲ್ಲಿ ಕಟ್ಟುವುದನ್ನು ವಿರೋಧಿಸಿದ್ದರು. ದೇಶ ಆರ್ಥಿಕ ಸಮಸ್ಯೆ, ಬಡತನ, ಉದ್ಯೋಗ ಸೇರಿದಂತೆ ಹಲವಾರು ಕಿತ್ತು ತಿನ್ನುವ ಸಮಸ್ಯೆಗಳನ್ನು ಎದುರಿಸುತ್ತಿವೆ. ಅವುಗಳನ್ನು ಬಗೆಹರಿಸಿ ಜನರಿಗೆ ಬದುಕು ನೀಡುವುದರ ಕಡೆಗೆ ಗಮನ ಹರಿಸುವ ಬಗ್ಗೆ ಬಿಜೆಪಿಯ ಯಾವುದೇ ನಾಯಕರು ಮಾತನಾಡುವುದಿಲ್ಲ. ಪೌರತ್ವ ಕಾಯ್ದೆ ಚುನಾವಣಾ ಪ್ರಣಾಳಿಕೆಯಲ್ಲಿ ಘೋಷಿಸಲಾಗಿದೆ ಎಂದು ಬಿಜೆಪಿಯವರು ಹೇಳುತ್ತಿದ್ದಾರೆ. ಅದರಂತೆ ಪ್ರಣಾಳಿಕೆಯಲ್ಲಿ ಅನೇಕ ಜನಪರ ಭರವಸೆಗಳನ್ನು ನೀಡಿದ್ದರು. ಅವುಗಳ ಜಾರಿಗೆ ಬಿಜೆಪಿಯವರು ಏಕೆ ಗಮನ ಹರಿಸುತ್ತಿಲ್ಲ ಎಂದು ಪ್ರಶ್ನಿಸಿದರು.
ಪಾಕಿಸ್ತಾನ, ಬಂಗ್ಲಾ ದೇಶಗಳು ಧರ್ಮದ ಆಧಾರದಲ್ಲಿ ನಿರ್ಮಾಣವಾಗಿದ್ದರೆ, ಭಾರತವೂ ಅದೇ ರೀತಿ ಆಗಬೇಕೆಂದೇನಿಲ್ಲ. ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಸಿಎಎ ಸಂವಿಧಾನ ವಿರೋಧಿ ಹಾಗೂ ಮಾನವೀಯತೆಯ ವಿರೋಧಿಯೂ ಹೌದು. ಈ ಕಾಯ್ದೆ ಕೇವಲ ಮುಸಲ್ಮಾನರಿಗೆ ಅಷ್ಟೇ ಅಲ್ಲ. ದಲಿತರು, ಆದಿವಾಸಿಗಳು. ಅಲೆಮಾರಿಗಳಿಗೆ ಸಮಸ್ಯೆಯಾಗುತ್ತದೆ ಎಂದು ಹೇಳಿದರು.
ನನಗೆ ನನ್ನ ಜನ್ಮ ದಿನಾಂಕವೇ ಗೊತ್ತಿಲ್ಲ. ಶಾಲೆಯಲ್ಲಿ ಶಿಕ್ಷಕರು ದಾಖಲೆಯಲ್ಲಿ ನಮೂದಿಸಿದ್ದೇ ಜನ್ಮ ದಿನಾಂಕವಾಗಿದೆ. ಇನ್ನು ನನ್ನ ತಂದೆ ಅಜ್ಜನ ಜನ್ಮ ದಿನಾಂಕ ಗೊತ್ತಿಲ್ಲ. ಮೂಲ ಎಲ್ಲಿಂದ ತರುವುದು. ಸಿಎಎ ವಿರುದ್ಧ ಕಾಂಗ್ರೆಸ್ ಬೇರೆಯವರ ಹೋರಾಟದಲ್ಲಿ ಹಿಂದೆ ನಿಲ್ಲುವ ಬದಲು ನೇರವಾಗಿಯೇ ಹೋರಾಟಕ್ಕೆ ಇಳಿಯಬೇಕು ಎಂದು ಸಿದ್ದರಾಮಯ್ಯ ಕರೆ ನೀಡಿದರು.
ಪೌರತ್ವ ಕಾಯ್ದೆ ವಿರೋಧಿಸುವವರನ್ನು ಹಿಂದೂ ವಿರೋಧಿಗಳು, ಮೋದಿ ವಿರೋಧಿಸುವವರನ್ನು ದೇಶ ವಿರೋಧಿಗಳು ಎಂದು ಬಿಂಬಿಸಲಾಗುತ್ತಿದೆ. ಪ್ರತಿಭಟನೆ ಮಾಡುವವರ ವಿರುದ್ಧ ದೌರ್ಜನ್ಯ ಮಾಡಲಾಗುತ್ತಿದೆ. ಸುಪ್ರೀಂ ಕೋರ್ಟ್ ಈ ಕಾಯ್ದೆಯನ್ನು ರದ್ದುಗೊಳಿಸದಿದ್ದರೆ ಸಂವಿಧಾನಕ್ಕೆ ಧಕ್ಕೆಯಾಗುತ್ತದೆ.ದಿನೇಶ್ ಗುಂಡೂರಾವ್, ಕೆಪಿಸಿಸಿ ಅಧ್ಯಕ್ಷ. ಧರ್ಮದ ಆಧಾರದಲ್ಲಿ ದೇಶದ ಜನರಿಗೆ ಬಿಜೆಪಿ ನಾಯಕರು ಕಿರುಕುಳ ನೀಡಲು ಹೊರಟಿದ್ದಾರೆ. ಸಂವಿಧಾನ ವಿರುದ್ಧವಾಗಿ ಕಾಯ್ದೆ ತರುತ್ತಿದ್ದಾರೆ. ವಿಶ್ವವಿದ್ಯಾಲಯ, ಸಂಘ ಸಂಸ್ಥೆಗಳಲ್ಲಿಯೂ ಬಿಜೆಪಿಗರು ರಾಜಕಾರಣ ಮಾಡುತ್ತಿದ್ದಾರೆ. ವಿದ್ಯಾರ್ಥಿಗಳ ಮೇಲೆ ಹಲ್ಲೆಗೆ ಪ್ರಚೋದಿಸುತ್ತಿದ್ದಾರೆ. ಇದೆಲ್ಲವನ್ನೂ ನಾವು ಹತ್ತಿಕ್ಕಬೇಕಾಗಿದೆ.ಜನನರಿಗೆ ವಾಸ್ತವ ಅರಿವನ್ನು ಮೂಡಿಸಬೇಕಿದೆ. ಈಶ್ವರ್ ಖಂಡ್ರೆ, ಕೆಪಿಸಿಸಿ ಕಾರ್ಯಾಧ್ಯಕ್ಷ. ಕಾಟಾಚಾರದ ಕಾರ್ಯಾಗಾರಕ್ಕೆ ಅಸಮಾಧಾನ
ಸಿಎಎ ಹಾಗೂ ಎನ್‌ಆರ್‌ಸಿ ಬಗ್ಗೆ ದೇಶ್ಯಾದ್ಯಂತ ಹೋರಾಟ ಆರಂಭವಾಗಿ ಎರಡು ತಿಂಗಳಾದ ಮೇಲೆ ರಾಜ್ಯ ಕಾಂಗ್ರೆಸ್ ಈಗ ಎಚ್ಚೆತ್ತುಕೊಂಡಿದ್ದು, ಈಗಲೂ ಯಾವ ರೀತಿಯ ಹೋರಾಟ ಮಾಡಬೇಕೆಂದು ಸರಿಯಾದ ನೀಲ ನಕ್ಷೆ ಹಾಕಿಕೊಂಡು ಕಾರ್ಯಾಗಾರ ಮಾಡುವ ಬದಲು ಕೇವಲ ನಾಯಕರ ಭಾಷಣ ಮಾಡಲು ಸೀಮಿತಗೊಳಿಸುವುದರಿಂದ ಜನರಿಗೆ ಹೇಗೆ ಜಾಗೃತಿ ಮೂಡಿಸಲು ಸಾಧ್ಯವಾಗುತ್ತದೆ. ಜಿಲ್ಲೆಗಳಲ್ಲಿ ಯಾವ ರೀತಿಯ ಹೋರಾಟ ಮಾಡಬೇಕು. ಪ್ರತಿಭಟನಾ ಸ್ವರೂಪ ಹೇಗಿರಬೇಕು ಎನ್ನುವ ಬಗ್ಗೆ ಸ್ಪಷ್ಟ ವಿವರಣೆ ನೀಡದೇ ಕಾಟಾಚಾರಕ್ಕೆ ವಿರೋಧಿ ಭಾಷಣ ಮಾಡಿದರೆ ಜನರಿಗೆ ಜಾಗೃತಿ ಮೂಡಿಸಲು ಹೇಗೆ ಸಾಧ್ಯ ಎಂದು ಕಾರ್ಯಾಗಾರದಲ್ಲಿ ಪಾಲ್ಗೊಂಡ ಬಹುತೇಕ ನಾಯಕರು ಅಸಮಾಧಾನ ವ್ಯಕ್ತಪಡಿಸಿದ್ದು ಕಂಡು ಬಂದಿತು.