Advertisement

ಮೀಸಲಾತಿ ಕುರಿತ ಬೊಮ್ಮಾಯಿ ಸರ್ಕಾರದ ತೀರ್ಮಾನಗಳು ಕೇವಲ ಚುನಾವಣಾ ಗಿಮಿಕ್ಕು: ಸಿದ್ದು ಕಿಡಿ

08:32 PM Mar 25, 2023 | Team Udayavani |

ಬೆಂಗಳೂರು: ಬೊಮ್ಮಾಯಿ ಸರ್ಕಾರದ ಮೀಸಲಾತಿ ಕುರಿತ ತೀರ್ಮಾನಗಳು ಪ್ರಾಮಾಣಿಕವಲ್ಲ. ಎಲ್ಲವೂ ಚುನಾವಣಾ ಗಿಮಿಕ್ಕುಗಳು ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ಬಿಜೆಪಿ ವಿರುದ್ಧ ಕಿಡಿಕಾರಿದ್ದಾರೆ.

Advertisement

ಪತ್ರಿಕಾ ಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ರಾಜ್ಯ ಸರ್ಕಾರ ನಿನ್ನೆ ನಡೆದ ಸಚಿವ ಸಂಪುಟ ಸಭೆಯಲ್ಲಿ ಮೀಸಲಾತಿಯ ಕುರಿತು ತೆಗೆದುಕೊಂಡ ತೀರ್ಮಾನಗಳು ಸಮುದಾಯಗಳಲ್ಲಿ ಹಲವು ರೀತಿಯ ಗೊಂದಲ, ಅಶಾಂತಿಯನ್ನು ಹುಟ್ಟು ಹಾಕಿವೆ ಎಂದು ಹೇಳಿದರು.

ಮುಖ್ಯಮಂತ್ರಿಗಳು ಮೀಸಲಾತಿಯ ಸಮಸ್ಯೆಯನ್ನು ಬಗೆಹರಿಸಿದ್ದೇನೆಂದು ಹೇಳಿಕೆ ಕೊಟ್ಟಿದ್ದಾರೆ. ಆದರೆ ಸಮಸ್ಯೆಯನ್ನು ಪರಿಹರಿಸುವ ಬದಲಿಗೆ ಹೆಚ್ಚಿಸುವ ಕೆಲಸವನ್ನು ಬಿಜೆಪಿ ಸರ್ಕಾರ ಮಾಡಿದೆ ಎಂಬುದು ಜನರ ಪ್ರತಿಕ್ರಿಯೆಗಳನ್ನು ನೋಡಿದ ಮೇಲೆ ಸ್ಪಷ್ಟವಾಗುತ್ತಿದೆ. ಪರಿಶಿಷ್ಟ ಜಾತಿಗಳ ಬಹುಪಾಲು ಮುಖಂಡರು ಸರ್ಕಾರದ ಈ ನಿರ್ಧಾರವನ್ನು ವಿರೋಧಿಸಿದ್ದಾರೆ. ಸರ್ಕಾರ ಯಾರನ್ನೂ ವಿಶ್ವಾಸಕ್ಕೆ ತೆಗೆದುಕೊಡಿಲ್ಲ. ನಾಗಮೋಹನ ದಾಸ್ ಅವರ ಸಮಿತಿಯ ಶಿಫಾರಸ್ಸುಗಳಂತೆ ಮೀಸಲಾತಿ ಹೆಚ್ಚಿಸುವ ಕುರಿತು ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ ತೆಗೆದುಕೊಂಡು 6 ತಿಂಗಳುಗಳಾಗುತ್ತಾ ಬಂದಿದೆ. ಅದನ್ನು ಲೋಕಸಭೆಯ ಅಧಿವೇಶನ ಮುಗಿಯುವಾಗ ಶೆಡ್ಯೂಲ್ 9 ಕ್ಕೆ ಸೇರಿಸಿ ಎಂದು ಇದೆ 23ನೆ ತಾರೀಖು ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ. ರಾಜ್ಯದಲ್ಲಿ ಚುನಾವಣೆ ಘೋಷಣೆಯಾಗುವುದಕ್ಕೆ ಕೆಲವೆ ದಿನಗಳಿರುವಾಗ ಒಳಮೀಸಲಾತಿಯ ನಾಟಕ ಆಡಲಾಗಿದೆ.

ಬಿಜೆಪಿ ಸರ್ಕಾರಕ್ಕೆ ನೈಜ ಕಾಳಜಿ ಇದ್ದರೆ ಪರಿಶಿಷ್ಟ ಜಾತಿಯ ಎಲ್ಲ ಜಾತಿಗಳ ಮುಖಂಡರುಗಳ ಜೊತೆ ಚರ್ಚಿಸಿ ಎಲ್ಲರ ಹಿತಾಸಕ್ತಿಗಳನ್ನು ಪರಿಗಣಿಸಿ ತೀರ್ಮಾನ ತೆಗೆದುಕೊಳ್ಳಬೇಕಾಗಿತ್ತು. ಇಡಬ್ಲ್ಯುಎಸ್ ಮೀಸಲಾತಿಯನ್ನು ಕೇವಲ ನಾಲ್ಕೇ ದಿನಗಳಲ್ಲಿ ಮುಗಿದು ಸಂವಿಧಾನಕ್ಕೆ ತಿದ್ದುಪಡಿ ತಂದು ಅನುಷ್ಠಾನ ಮಾಡಲಾಯಿತು. ಈಗಲೂ ಮೀಸಲಾತಿಯ ಹೆಚ್ಚಳ ಮತ್ತು ಒಳಮೀಸಲಾತಿಯ ಕುರಿತು ಅಷ್ಟೆ ಕಾಳಜಿ ಮತ್ತು ಬದ್ಧತೆಯನ್ನು ತೋರಿಸಬೇಕೆಂದು ಹಲವು ಮುಖಂಡರುಗಳು ಒತ್ತಾಯಿಸುತ್ತಿದ್ದಾರೆ.

ಇಷ್ಟನ್ನು ಮಾಡದೆ ಹೋದರೆ ಸರ್ಕಾರ ಕೇವಲ ಚುನಾವಣಾ ಗಿಮಿಕ್ಕು ಮಾಡುತ್ತಿದೆ. ಸರ್ಕಾರಕ್ಕೆ ಪ್ರಾಮಾಣಿಕ ಕಾಳಜಿ ಇಲ್ಲ ಎಂಬುದು ಸ್ಪಷ್ಟವಾಗುತ್ತದೆ. ಸರ್ಕಾರಕ್ಕೆ ನಿಜವಗಿಯೂ ಸಂವಿಧಾನದ ಆಶಯಗಳಲ್ಲಿ ನಂಬಿಕೆ ಇದ್ದರೆ, ಅದಕ್ಕೆ ಕರುಣೆ, ತಾಯ್ತನದ ಗುಣಗಳು ಇದ್ದಿದ್ದರೆ ಇಡಬ್ಲ್ಯುಎಸ್‍ನಲ್ಲಿ ಶೇ.10 ರಷ್ಟು ಜನಸಂಖ್ಯೆ ಇಲ್ಲದ ಕಾರಣ ಅದರಲ್ಲಿನ ಕೆಲವು ಪರ್ಸೆಂಟ್ ಮೀಸಲಾತಿಯನ್ನು ಉಳಿದ ಹಿಂದುಳಿದ ವರ್ಗಗಳಿಗೆ ಹಂಚಿಕೆ ಮಾಡಬಹುದಾಗಿತ್ತು ಹಾಗೆ ಮಾಡುವುದರಿಂದ ಹಲವು ಸಮಸ್ಯೆಗಳು ಬಗೆಹರಿಯುತ್ತಿದ್ದವು. ನಾನು ಸರ್ಕಾರಕ್ಕೆ ಹಲವು ಬಾರಿ ಇದೆ ಸಲಹೆ ಕೊಟ್ಟಿದ್ದೆ. ಆದರೆ ಇದನ್ನೆಲ್ಲ ಕಾಲ ಕೆಳಕ್ಕೆ ಹಾಕಿಕೊಂಡು ಹೊಸಕಿ ಹಾಕಲಾಗಿದೆ ಎಂದು ಹೇಳಿದರು.

Advertisement

ಇದನ್ನೂ ಓದಿ: ಅಮೆರಿಕದಲ್ಲಿ ಭೀಕರ ಸುಂಟರಗಾಳಿ ಕನಿಷ್ಠ 23 ಮಂದಿ ಮೃತ್ಯು

ಸರ್ಕಾರದ ಅಮಾನವೀಯ ನಿರ್ಧಾರದಿಂದ ಅತಿ ಹೆಚ್ಚು ಅನ್ಯಾಯಕ್ಕೆ ಒಳಗಾಗಿರುವವರು ಪ್ರವರ್ಗ-1, ಪ್ರವರ್ಗ- 2 ಗಳಲ್ಲಿ ಹಿಂದುಳಿದವರು ಮತ್ತು ಪ್ರವರ್ಗ- 2 ಬಿರಲ್ಲಿದ್ದ ಮುಸ್ಲಿಮರು. ಈ ಮೂರೂ ಪ್ರವರ್ಗಗಳಲ್ಲಿ ಶೇ.48-50 ರಷ್ಟು ಜನಸಂಖ್ಯೆ ಇದೆಯೆಂದು ಹಲವು ವರದಿಗಳು ಹೇಳಿವೆ. ಇಷ್ಟು ಜನಸಂಖ್ಯೆಗೆ ಈಗ ಕೇವಲ ಶೇ.19 ರಷ್ಟು ಮಾತ್ರ ಮೀಸಲಾತಿ ಇದೆ. ಪ್ರವರ್ಗ–1 ರಲ್ಲಿ ಬೆಸ್ತರು, ಮೊಗವೀರರು, ಗೊಲ್ಲರು, ಉಪ್ಪಾರರು, ದಾಸರು ಸೇರಿದಂತೆ 95 ಜಾತಿಗಳಿವೆ. ಈ ಜಾತಿಗಳಲ್ಲಿ ಸುಮಾರು 80 ಲಕ್ಷದಷ್ಟು ಜನಸಂಖ್ಯೆ ರಾಜ್ಯದಲ್ಲಿದೆ. ಒಟ್ಟಾರೆ ಜನಸಂಖ್ಯೆಯ ಶೇ.12 ರಷ್ಟು ಜನರು ಈ ಪ್ರವರ್ಗದಲ್ಲಿದ್ದಾರೆ.

ಒಳಮೀಸಲಾತಿಯ ಕುರಿತು ಈಗ ಪ್ರಾರಂಭವಾಗಿರುವ ಭಿನ್ನಾಭಿಪ್ರಾಯಗಳನ್ನು ಎಲ್ಲ ಸಂಬಂಧಿತ ಸಮುದಾಯಗಳ ಮುಖಂಡರ ಜೊತೆ ಚರ್ಚಿಸಿ ಸಮ್ಮತವಾಗುವ ತೀರ್ಮಾನವನ್ನು ಕೂಡಲೆ ತೆಗೆದುಕೊಂಡು ಇದನ್ನೂ ಸಹ ಶೆಡ್ಯೂಲ್ 9ಕ್ಕೆ ಸೇರಿಸಿ ಆದೇಶ ಹೊರಡಿಸಬೇಕು.

ಪ್ರವರ್ಗ 2ಎ ಗೆ ಸಂಬಂಧಿಸಿದಂತೆಯೂ ಮೀಸಲಾತಿಯ ಪ್ರಮಾಣವನ್ನು ವೈಜ್ಞಾನಿಕವಾಗಿ ಉಳಿದ ಜಾತಿಗಳಿಗೆ ಸಿಗುತ್ತಿರುವಂತೆ ಹೆಚ್ಚಿಸಬೇಕು. ಈ ಪ್ರವರ್ಗದಲ್ಲಿರುವ ಅನೇಕ ಜಾತಿಗಳು ಪರಿಶಿಷ್ಟ ಜಾತಿ ಹಾಗೂ ಪಂಗಡಕ್ಕೆ ಸೇರಿಸಬೇಕೆಂದು ಶೀಫಾರಸ್ಸುಗಳಾಗಿವೆ ಹಾಗೂ ಬೇಡಿಕೆಗಳನ್ನು ಮಂಡಿಸಲಾಗಿದೆ. ಅವುಗಳನ್ನು ಸರ್ಕಾರ ಶೀಘ್ರವಾಗಿ ಈಡೇರಿಸಬೇಕು. ಪ್ರವರ್ಗ2-ಬಿ ರಲ್ಲಿರುವ ಮುಸ್ಲಿಮರಿಗೆ ಹಿಂದೆ ಇದ್ದ ಮೀಸಲಾತಿಯನ್ನು ಮುಂದುವರೆಸಬೇಕು. ಸಂವಿಧಾನದ ಮೇಲೆ ಪ್ರಮಾಣ ಮಾಡಿ ಅಧಿಕಾರಕ್ಕೆ ಬಂದವರು ಧರ್ಮ ಬೇರೆ ಎಂಬ ಕಾರಣಕ್ಕೆ ತಾರತಮ್ಯ ಮಾಡುವುದು ಅಮಾನವೀಯ ಹಾಗೂ ಸಂವಿಧಾನ ಬಾಹಿರ ಎಂದು ಹೇಳಿದರು.

ಇದನ್ನೂ ಓದಿ : ಮೂಳೂರು: ಬೈಕ್ ಗೆ ಟ್ಯಾಂಕರ್ ಢಿಕ್ಕಿ: ಇಬ್ಬರು ಬೈಕ್ ಸವಾರರು ಮೃತ್ಯು

ಪ್ರವರ್ಗ-2ಸಿ, 2ಡಿ ಎಂದು ಹೊಸ ಪ್ರವರ್ಗಗಳನ್ನು ಸೃಷ್ಟಿಸಿ ಎ ಮತ್ತು 3 ಬಿ ಪ್ರವರ್ಗಗಳನ್ನು ರದ್ದು ಮಾಡಿರುವ ಕುರಿತಂತೆ ನಮ್ಮ ವಿರೋಧವೇನೂ ಇಲ್ಲ. ಆದರೆ ಈ ಪ್ರವರ್ಗಗಳಿಗೆ ಮೀಸಲಾತಿಯ ಪ್ರಮಾಣವನ್ನು ಹೆಚ್ಚಿಸಬೇಕು ಎಂಬ ವಿಚಾರದಲ್ಲೂ ನಮ್ಮ ಸಹಮತಿ ಇದೆ. ಆದರೆ ಪ್ರವರ್ಗ 2ಬಿಯಲ್ಲಿನ ಮುಸಲ್ಮಾನರ ಮೀಸಲಾತಿಯನ್ನು ರದ್ದು ಪಡಿಸುವುದರ ಬದಲಿಗೆ ಇಡಬ್ಲ್ಯುಎಸ್‍ನಲ್ಲಿನ ಹೆಚ್ಚುವರಿ ಮೀಸಲಾತಿಯನ್ನು ಈ ಎರಡು ಪ್ರವರ್ಗಗಳಿಗೆ ಹಂಚಿಕೆ ಮಾಡಿ ಸಮಸ್ಯೆಯನ್ನು ಬಗೆಹರಿಸಿದ್ದರೆ ಅದು ಮುತ್ಸದ್ಧಿತನವಾಗುತ್ತಿತ್ತು.

ಸರ್ಕಾರ ತೆಗೆದುಕೊಂಡಿರುವ ನಿರ್ಧಾರ ಕೇವಲ ಚುನಾವಣಾ ಗಿಮಿಕ್ಕು. ಹಣೆಗೆ ತುಪ್ಪ ಹಚ್ಚಿ, ಕಿವಿಗೆ ಹೂ ಇಡುವ ತಂತ್ರವಲ್ಲದೆ ಬೇರೇನೂ ಅಲ್ಲ ಎಂಬುದು ಸಾಮಾನ್ಯ ತಿಳುವಳಿಕೆ ಇರುವ ಎಲ್ಲರಿಗೂ ಅರ್ಥವಾಗುತ್ತದೆ ಎಂದು ಕಿಡಿಕಾರಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next