ವಿಜಯಪುರ: ಬದಾಮಿ ಕ್ಷೇತ್ರದಿಂದ ಕೋಲಾರ ಕಡೆ ಮುಖ ಮಾಡಿರುವ ವಿಧಾನಸಭೆ ವಿಪಕ್ಷ ನಾಯಕ ಸಿದ್ಧರಾಮಯ್ಯ ಅವರಿಗೆ ‘ಸಿಕ್ಕಿದ್ದೇ ಶ್ರೀಪಾದ ಎನ್ನುವಂತಾಗಿದೆ’ ಎಂದು ವಿಜಯಪುರ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಕುಟುಕಿದ್ದಾರೆ.
ಬುಧವಾರ ನಗರದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ‘ಗೋಕಾಕ್ ಗೆ ಬಂದು ಮಾತನಾಡುವಂತೆ ಸತೀಶ ಜಾರಕಿಹೊಳಿ ಅವರು ಸವಾಲು ಹಾಕಿದ್ದರಿಂದ ಬಿಹಾರ ಹಾಗೂ ರಾಜಪ್ರಭುತ್ವದಂತೆ ಸಾಮ್ರಾಜ್ಯ ಸ್ಥಾಪಿಸಿಕೊಂಡಿರುವ ಅಹಂ ನಲ್ಲಿ ಇರುವ ಅವರಿಗೆ ಉತ್ತರಿಸಲು ಅಲ್ಲಿಗೆ ಹೋಗಿದ್ದೆ’ ಎಂದರು.
‘ಸತೀಶ ಜಾರಕಿಹೊಳಿ ಅವರಿಗೆ ರಾಜಕೀಯ ಅಂತ್ಯಕಾಲ ಬಂದಿದೆ. ಹೀಗಾಗಿ ದುರಂಹಕಾರದಲ್ಲಿ ಮೆರೆಯುತ್ತಿದ್ದಾರೆ’ ಎಂದು ಟೀಕಿಸಿದರು. ಇನ್ನು ವಿಜಯಪುರ ನಗರ ಕ್ಷೇತ್ರದಿಂದ ತಮ್ಮ ಪುತ್ರಿ ಸಂಯುಕ್ತ ಪಾಟೀಲ ಅವರಿಗೆ ಕಾಂಗ್ರೆಸ್ ಟಿಕೆಟ್ ಕೇಳಿರುವ ಮಾಜಿ ಸಚಿವರಾದ ಬಸವನಬಾಗೇವಾಡಿ ಶಾಸಕ ಶಿವಾನಂದ ಪಾಟೀಲ ವಿರುದ್ಧವೂ ವಾಗ್ದಾಳಿ ನಡೆಸಿದರು.
‘ಸಿದ್ದರಾಮಯ್ಯ ಬಂದಾಗ ವಿಜಯಪುರ ನಗರ ಕ್ಷೇತ್ರದಲ್ಲಿ ಮುಸ್ಲಿಂ ಸಮುದಾಯದ ವ್ಯಕ್ತಿಯನ್ನು ನಿಲ್ಲಿಸಿ ಗೆಲ್ಲಿಸುವುದಾಗಿ ಅಬ್ಬರಿಸಿದ್ದ ಶಿವಾನಂದ ಪಾಟೀಲ, ತಮ್ಮ ಮಗಳಿಗೆ ಟಿಕೆಟ್ ಕೇಳಿದ್ದೇಕೆ. ನನ್ನ ವಿರುದ್ದ ಬಂದು ಸ್ವಯಂ ನಾನೇ ನಿಲ್ಲುತ್ತೇನೆ ಗೆದ್ದು ತೋರಿಸಲಿ ಎಂದು ನನಗೆ ಸವಾಲು ಹಾಕಿದ್ದ ವ್ಯಕ್ತಿ, ಬಸವನಬಾಗೇವಾಡಿ ಕ್ಷೇತ್ರದಿಂದ ಟಿಕೆಟ್ ಕೇಳಿದ್ದೇಕೆ’ ಎಂದು ಟೀಕಾ ಪ್ರಹಾರ ನಡೆಸಿದರು.