Advertisement

ಸಿದ್ದು ಹುಟ್ಟುಹಬ್ಬ; ಕಾಂಗ್ರೆಸ್‌ನಲ್ಲೇಕೆ ಢವ ಢವ?

12:27 PM Jul 18, 2022 | Team Udayavani |

ರಾಜ್ಯ ರಾಜಕೀಯ ವಲಯದಲ್ಲಿ ಸಿದ್ದರಾಮಯ್ಯ ಹುಟ್ಟು ಹಬ್ಬ ಪ್ರಯುಕ್ತ ದಾವಣಗೆರೆಯಲ್ಲಿ ಆಯೋಜಿಸಿರುವ ಸಮಾವೇಶ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ವಿಧಾನಸಭೆ ಚುನಾವಣೆ ಹೊಸ್ತಿಲಲ್ಲಿ ಇಂತದ್ದೊಂದು ಸಮಾವೇಶ ನಡೆಯುತ್ತಿರುವುದಕ್ಕೆ ರಾಜಕೀಯ ಸ್ವರೂಪವೂ ಸಿಕ್ಕಿದೆ. ಹುಟ್ಟುಹಬ್ಬ ಕಾಂಗ್ರೆಸ್ ಮಾತ್ರವಲ್ಲದೆ ಜೆಡಿಎಸ್‌ ಹಾಗೂ ಬಿಜೆಪಿ ಪಕ್ಷಗಳಲ್ಲೂ ಬಹುಚರ್ಚಿತ ವಿಷಯವಾಗಿ ಸದ್ದು ಮಾಡುತ್ತಿದೆ.

Advertisement

ಹುಟ್ಟುಹಬ್ಬದ ಮೂಲಕ ಸಿದ್ದರಾಮಯ್ಯ ಮುಂದಿನ ಮುಖ್ಯಮಂತ್ರಿ ಎಂದು ಬಿಂಬಿಸಿಕೊಳ್ಳಲು ಈ ಸಮಾವೇಶ ವನ್ನೂ ವೇದಿಕೆ ಮಾಡಿಕೊಳ್ಳುವ ಕಸರತ್ತು ಸದ್ದಿಲ್ಲದೆ ನಡೆಯುತ್ತಿದೆ ಎಂಬ ಅನುಮಾನ ಇಡೀ ಕಾರ್ಯಕ್ರಮದ ದಿಕ್ಕು ಬೇರೆಡೆಗೆ ತಿರುಗುವಂತೆ ಮಾಡಿದೆ. ಏಕೆಂದರೆ ಸಮಾವೇಶ ಆಯೋಜಕರಲ್ಲಿ ಮುಂಚೂಣಿಯಲ್ಲಿರುವವರ ಅಭಿಲಾಷೆಯೂ ಅದೇ ಇದ್ದಂತಿದೆ. ಕಾಂಗ್ರೆಸ್ ನಲ್ಲಿ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು 80ನೇ ವರ್ಷಕ್ಕೆ ಕಾಲಿಡುತ್ತಿದ್ದಾರೆ. ಇತ್ತೀಚೆಗಷ್ಟೇ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ 60ನೇ ವರ್ಷಕ್ಕೆ ಕಾಲಿಟ್ಟಿದ್ದರು. ಆದರೆ ಸಿದ್ದರಾಮಯ್ಯ ಅವರ 75ನೇ ವರ್ಷದ ಹುಟ್ಟುಹಬ್ಬದ ಮಾದರಿ ಅದ್ದೂರಿ ಕಾರ್ಯಕ್ರಮ ಅಥವಾ ಸಮಾವೇಶ ಏರ್ಪಾಡಾಗಿಲ್ಲ ಎಂಬುದು ಗಮನಿಸಬೇಕಾದ ಸಂಗತಿ.

ಸಿದ್ದರಾಮಯ್ಯ 75ನೇ ವರ್ಷಕ್ಕೆ ಕಾಲಿಡುವ ಸಂದರ್ಭಕ್ಕೆ ಸಮಾವೇಶದ ರೂಪ ಕೊಡುವುದು ದಿಢೀರ್‌ ಹುಟ್ಟಿಕೊಂಡ ವಿಚಾರ. ದಿಲ್ಲಿಯಲ್ಲಿ ರಾಹುಲ್‌ ಗಾಂಧಿಯವರಿಗೆ ಸಿದ್ದರಾಮಯ್ಯ ಆಹ್ವಾನ ನೀಡಿ ಅವರೂ ಬರುವುದಾಗಿ ಒಪ್ಪಿದರೋ ಅಲ್ಲಿಂದ ರಾಜ್ಯ ಕಾಂಗ್ರೆಸ್ಸಿಗರಲ್ಲಿ ಬೇಗುದಿ ಪ್ರಾರಂಭವಾಗಿದೆ.

ಈ ಹಿಂದೆ ಮಾಜಿ ಮುಖ್ಯಮಂತ್ರಿ ಬಿ.ಎಸ್‌. ಯಡಿ ಯೂರಪ್ಪ ಅವರ ಹುಟ್ಟುಹಬ್ಬಕ್ಕೆ ಸಿದ್ದರಾಮಯ್ಯ ಹಾಜರಾಗಿ ರಾಜಕೀಯ ವಲಯದಲ್ಲಿ ಅಚ್ಚರಿ ಮೂಡಿಸಿದ್ದರು. ಅದೇ ರೀತಿ ಸಿದ್ದರಾಮಯ್ಯ ಹುಟ್ಟುಹಬ್ಬಕ್ಕೆ ಯಡಿಯೂರಪ್ಪ ಅವರಿಗೆ ಆಹ್ವಾನ ಕೊಡುವುದು, ರಾಷ್ಟ್ರಮಟ್ಟದ ಸಮಾಜ ವಾದಿ ಮೂಲ ಪಕ್ಷಗಳ ನಾಯಕರಿಗೆ, ಎಡಪಕ್ಷದ ನಾಯಕ ರಿಗೆ ಆಹ್ವಾನ ನೀಡುವುದು ಬೆಂಬಲಿಗರ ಯೋಜನೆಯಾಗಿತ್ತು. ಅದರಿಂದ ಬೇರೆ ಸಂದೇಶ ರವಾನೆಯಾಗಬಹುದು ಎಂದು ಈ ಯೋಜನೆ ವಿಫ‌ಲಗೊಳಿಸುವಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಒಂದು ಹಂತದಲ್ಲಿ ಯಶಸ್ವಿಯಾದರು ಎಂಬುದು ದಿಲ್ಲಿ ವಲಯದ ಮಾಹಿತಿ. ಆದರೆ ರಾಹುಲ್‌ ಗಾಂಧಿ, ರಾಜ್ಯ ಉಸ್ತುವಾರಿ ರಣದೀಪ್‌ ಸಿಂಗ್‌ ಸುರ್ಜೆವಾಲಾ, ಕೆ.ಸಿ. ವೇಣುಗೋಪಾಲ್, ಮಲ್ಲಿಕಾರ್ಜುನ ಖರ್ಗೆ ಕಾರ್ಯಕ್ರಮಕ್ಕೆ ಬರುವುದಾಗಿ ಒಪ್ಪಿಗೆ ಕೊಟ್ಟ ಅನಂತರ ಒಟ್ಟಾರೆ ಕಾರ್ಯಕ್ರಮದ ಸ್ವರೂಪವೇ ಬದಲಾಗಿ ಕೆಲವು ಕಾಂಗ್ರೆಸ್ ನಾಯಕರಿಗೆ ಬಿಸಿ ತುಪ್ಪದಂತಾಗಿದೆ. ಕಾಂಗ್ರೆಸ್ ಬಿಟ್ಟು ಹುಟ್ಟುಹಬ್ಬ ಮಾಡುವುದು ಬೇಡ ಎಂದು ಹೈಕಮಾಂಡ್‌ ಮೂಲಕ ಹೇಳಿಸಿದವರಿಗೆ ಇದೀಗ ಕೋಲು ಕೊಟ್ಟು ಹೊಡೆಸಿಕೊಂಡಂತ ಅನುಭವವಾಗುತ್ತಿದೆ ಎಂಬ ವ್ಯಾಖ್ಯಾನಗಳೂ ಇವೆ.

ಆದರೆ ಸಿದ್ದರಾಮಯ್ಯ ವಿಚಾರದಲ್ಲಿ ಕಾಂಗ್ರೆಸ್ ಹೈಕ ಮಾಂಡ್‌ ಮೊದಲಿನಿಂದಲೂ ಸಾಫ್ಟ್. ಅದರಲ್ಲೂ ರಾಹುಲ್‌ ಗಾಂಧಿಗೆ ಸಿದ್ದರಾಮಯ್ಯ ಎಂದರೆ ಅಚ್ಚುಮೆಚ್ಚು.
ಸೋನಿಯಾಗಾಂಧಿ ವಲಯದಲ್ಲಿ ಡಿ.ಕೆ. ಶಿವಕುಮಾರ್‌ ಪ್ರಭಾವಿ. ಆದರೆ ಸದ್ಯಕ್ಕೆ ಕರ್ನಾಟಕದ ಮಟ್ಟಿಗೆ ಪ್ರಮುಖ ತೀರ್ಮಾನ ಕೈಗೊಳ್ಳುತ್ತಿರುವುದು ರಾಹುಲ್‌ ಗಾಂಧಿಯೇ.

Advertisement

ಹುಟ್ಟುಹಬ್ಬ ಪಕ್ಕಕ್ಕಿಟ್ಟು ನೋಡುವುದಾದರೆ ಸ್ಥಳೀಯ ಸಂಸ್ಥೆಗಳಿಂದ ರಾಜ್ಯ ವಿಧಾನಪರಿಷತ್‌ಗೆ ನಡೆದ ಚುನಾವಣೆ, ಹಾನಗಲ್‌, ಮಸ್ಕಿ ಸೇರಿ ಉಪ ಚುನಾವಣೆಗಳಲ್ಲಿ ಜಯ ಗಳಿಸಿ ಇನ್ನೇನು ಅಧಿಕಾರಕ್ಕೆ ಬಂದೇ ಬಿಟೆೆವು ಎಂದು ಬೀಗುತ್ತಿರುವಾಗಲೇ ಹಿಜಾಬ್‌, ಆಜಾನ್‌, ಪಠ್ಯ ಪರಿಷ್ಕರಣೆ ವಿಚಾರದಲ್ಲಿ ಎದ್ದ ವಿವಾದ ಯಾರು ಏನೇ ಹೇಳಿದರೂ ಬಿಜೆಪಿಗೆ ತುಸು ರಾಜಕೀಯ ಲಾಭವಾಗಿರುವುದಂತೂ ನಿಜ. ಇದರ ನಡುವೆ, ಕಾಂಗ್ರೆಸ್‌ ಭದ್ರಕೋಟೆ ಹಳೇ ಮೈಸೂರು ಭಾಗದ ಕೋಲಾರ-ಚಿಕ್ಕಬಳ್ಳಾಪುರ ವಿಚಾರದಲ್ಲಿ ಕೇಂದ್ರದ ಮಾಜಿ ಸಚಿವ ಕೆ.ಎಚ್‌. ಮುನಿಯಪ್ಪ ಹಾಗೂ ಮಾಜಿ ಸ್ಪೀಕರ್‌ ರಮೇಶಕುಮಾರ್‌ ನಡುವಿನ ಮುಸುಕಿನ ಗುದ್ದಾಟ ಸರಿಪಡಿಸಲಾಗದ ಮಟ್ಟಕ್ಕೆ ಹೋಗಿದೆ. ಬಿ.ಕೆ. ಹರಿಪ್ರಸಾದ್‌, ಎಚ್‌.ಕೆ. ಪಾಟೀಲ್‌ ಅವರೂ ಕೆ.ಎಚ್‌. ಮುನಿಯಪ್ಪ ಪರ ನಿಂತಿದ್ದಾರೆ.

ನಾನು ನಿನ್ನನ್ನು ಮುಖ್ಯಮಂತ್ರಿ ಮಾಡಬೇಕು ಎಂದುಕೊಂಡಿದ್ದರೆ ನೀನು ಸಿದ್ದರಾಮಯ್ಯ ಉತ್ಸವ ಮಾಡಿ ಹೆಗಲ ಮೇಲೆ ಕುಳ್ಳಿರಿಸಿ ಮೆರವಣಿಗೆ ಮಾಡಲು ಹೊರಟಿ ದ್ದೀಯ ಎಂದು ಹಿರಿಯ ನಾಯಕರೊಬ್ಬರು ಡಿ.ಕೆ. ಶಿವ ಕುಮಾರ್‌ಗೆ ಖಾರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ ಎಂಬ ಮಾತು ಕಾಂಗ್ರೆಸ್ ಪಡಸಾಲೆಯಲ್ಲಿ ಚರ್ಚೆ ಯಾಗುತ್ತಿದೆ. ಯಾಕೆಂದರೆ, ಕಾಂಗ್ರೆಸ್ ನಲ್ಲಿ ಮುಖ್ಯಮಂತ್ರಿ ರೇಸ್‌ನಲ್ಲಿ ಸಿದ್ದರಾಮಯ್ಯ ಅವರಷ್ಟೇ ಅಲ್ಲ. ಅವಕಾಶ ಸಿಕ್ಕರೆ ಮಲ್ಲಿಕಾರ್ಜುನ ಖರ್ಗೆ ಅವರೂ ಮುಖ್ಯಮಂತ್ರಿಯಾಗಲು ಸಿದ್ಧರಿದ್ದಾರೆ. ಡಿ.ಕೆ. ಶಿವಕುಮಾರ್‌, ಎಂ.ಬಿ. ಪಾಟೀಲ್‌, ಬಿ.ಕೆ. ಹರಿಪ್ರಸಾದ್‌, ಡಾ| ಜಿ. ಪರಮೇಶ್ವರ, ಕೆ.ಎಚ್‌.ಮುನಿಯಪ್ಪ ಎಲ್ಲರೂ ಆಕಾಂಕ್ಷಿಗಳೇ.

ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಅತಂತ್ರ ಸ್ಥಿತಿ ನಿರ್ಮಾಣವಾಗಲಿದೆ ಎಂಬ ಕನಸು ಕಾಣುತ್ತಿರುವ ಕಾಂಗ್ರೆಸ್ ನ ಬಹುತೇಕ ನಾಯಕರು ಜೆಡಿಎಸ್‌ ಬೆಂಬಲದೊಂದಿಗೆ ಮುಖ್ಯಮಂತ್ರಿಯಾಗಲು ವೇದಿಕೆ ಸಿದ್ಧಪಡಿಸಿಕೊಳ್ಳುತ್ತಿದ್ದಾರೆ.

ಸಮುದಾಯವಾರು ಲೆಕ್ಕಾಚಾರ ಪ್ರಕಾರ ಮುಸ್ಲಿಂ ಸಮುದಾಯ ಸಿದ್ದರಾಮಯ್ಯ ಅವರನ್ನೇ ನಾಯಕ ಎಂದು ಒಪ್ಪಿದೆ. ಅವರೇ ಮುಂದಿನ ಮುಖ್ಯಮಂತ್ರಿ ಎಂದು ಘೋಷಿಸಿದರೆ ಸಾರಾಸಗಟಾಗಿ ಮುಸ್ಲಿಂ ಹಾಗೂ ಹಿಂದುಳಿದ ವರ್ಗದ ಮತ ಬುಟ್ಟಿಗೆ ಬೀಳುತ್ತದೆ ಎಂಬುದು ಅವರ ಆಪ್ತರ ಅಂಬೋಣವಾದರೂ ಒಕ್ಕಲಿಗರು, ದಲಿತರು, ಲಿಂಗಾಯಿತರು ಸಿದ್ದರಾಮಯ್ಯ ಮುಖ್ಯಮಂತ್ರಿ ಎಂದು ಘೋಷಿಸಿದರೆ ಕೋಪ ಮಾಡಿಕೊಳ್ಳಬಹುದು ಎಂಬ ವಾದ ಡಿ.ಕೆ. ಶಿವಕುಮಾರ್‌ ಬಣದ ವಾದ.

ಬಿಜೆಪಿ-ಜೆಡಿಎಸ್‌ಗೆ ಇದೇ ಬೇಕು: ಸಿದ್ದರಾಮಯ್ಯ ಹುಟ್ಟುಹಬ್ಬದ ವಿಚಾರವಾಗಿ ಕಾಂಗ್ರೆಸ್ ನಲ್ಲಿ ಆಂತರಿಕ ಹಾಗೂ ಬಹಿರಂಗವಾಗಿ ಕಲಹ ಏರ್ಪಡಬೇಕು ಎಂಬುದನ್ನೇ ಬಿಜೆಪಿ ಹಾಗೂ ಜೆಡಿಎಸ್‌ ಕಾಯುತ್ತಿವೆೆ.ಅದಕ್ಕೆ ಪೂರಕವಾಗಿ ನಿತ್ಯ ಹೇಳಿಕೆ ಕೊಡುತ್ತಿದ್ದಾರೆ. ಸಿದ್ದರಾಮಯ್ಯ ಹುಟ್ಟುಹಬ್ಬದ ಬಗ್ಗೆ ಬಿಜೆಪಿ ಎಷ್ಟರ ಮಟ್ಟಿಗೆ ಗಂಭೀರವಾಗಿ ಪರಿಗಣಿಸಿದೆ ಎಂಬುದಕ್ಕೆ ಇದು ಸಾಕ್ಷಿ.

ಸಿದ್ದರಾಮಯ್ಯ ಹುಟ್ಟುಹಬ್ಬ ಯಶಸ್ವಿಯಾದರೆ ನಿರೀಕ್ಷೆೆಯಂತೆ ಲಕ್ಷಾಂತರ ಜನ ಸೇರಿದರೆ ಸಿದ್ದರಾಮಯ್ಯ ಈಗಲೂ ಶಕ್ತಿ ಎಂಬ ಸಂದೇಶ ಹೋಗುತ್ತದೆ. ಚುನಾವಣೆ ಸಂದರ್ಭದಲ್ಲಿ ಅಹಿಂದ ಸಮಾವೇಶದ ರೀತಿಯಲ್ಲಿ ಹಿಂದುಳಿದ, ದಲಿತ, ಅಲ್ಪಸಂಖ್ಯಾಕರು ಒಟ್ಟಾದರೆ ಸಿದ್ದರಾಮಯ್ಯ ಜತೆಗೂಡಿದರೆ ಕಷ್ಟವಾಗಬಹುದು ಎಂಬುದು ಬಿಜೆಪಿ, ಜೆಡಿಎಸ್‌ ಪಕ್ಷಗಳ ಆತಂಕ. ದಾವಣಗೆರೆಯ ಸಿದ್ದರಾಮಯ್ಯ ಹುಟ್ಟುಹಬ್ಬ ಸಮಾವೇಶ ರಾಜಕೀಯವಾಗಿ ಸಂದೇಶ ರವಾನಿಸು ವುದಂತೂ ಹೌದು. ಅದರಿಂದಾಚೆ ಏನು ಎಂಬುದಷ್ಟೇ ಈಗಿನ ಕುತೂಹಲ.

ವ್ಯಕ್ತಿ ಪೂಜೆ ಬೇಡ, ಪಕ್ಷ ಪೂಜೆ ಮಾಡಿ…
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಪದೆ ಪದೇ ವ್ಯಕ್ತಿಪೂಜೆ ಬಿಡಿ ಪಕ್ಷ ಪೂಜೆ ಮಾಡಿ ಎಂದು ಹೇಳುತ್ತಲೇ ಬರುತ್ತಿದ್ದಾರೆ. ಆದರೆ ಸಿದ್ದರಾಮಯ್ಯ ಹುಟ್ಟುಹಬ್ಬದ ಸಮಾವೇಶ ಒಂದು ರೀತಿಯಲ್ಲಿ ವ್ಯಕ್ತಿಪೂಜೆಯಂತೆಯೇ ಆಗುವ ಎಲ್ಲ ಲಕ್ಷಣಗಳೂ ಕಂಡುಬರುತ್ತಿವೆ. ಖುದ್ದು ರಾಹುಲ್‌ ಗಾಂಧಿ, ಎಐಸಿಸಿ ಪ್ರಧಾನ ಕಾರ್ಯದರ್ಶಿ, ರಾಜ್ಯ ಉಸ್ತುವಾರಿ ಭಾಗವಹಿಸುವುದರಿಂದ ಅಲ್ಲಿ ಸಿದ್ದರಾಮಯ್ಯ ಶಕ್ತಿ ಪ್ರದರ್ಶನವಾಗುತ್ತದೆ. ಪರೋಕ್ಷವಾಗಿ ನಾಯಕತ್ವಕ್ಕೆ ಇರುವ ಬೆಂಬಲ ಎಂದೇ ಬಿಂಬಿತವಾಗುತ್ತದೆ. ಈ ಸಮಾವೇಶದಿಂದ ಯಾವ ರೀತಿಯ ಸಂದೇಶ ರವಾನೆಯಾಗಬಹುದು ಎಂಬ ಅಂದಾಜು ಮಾಡಿರುವ ರಾಜ್ಯ ಕಾಂಗ್ರೆಸ್‌ ನಾಯಕರ ದಂಡು ದಿಢೀರ್‌ ಎದ್ದು ಕುಳಿತು ಹೈಕಮಾಂಡ್‌ ಬಾಗಿಲು ಬಡಿಯುತ್ತಿದೆ. ಕಾಂಗ್ರೆಸ್ ನಲ್ಲಿ ಕಚ್ಚಾಟಕ್ಕಾಗಿ ಕಾಯುತ್ತಿರುವ ಬಿಜೆಪಿ-ಜೆಡಿಎಸ್‌ ಕಾದು ನೋಡಿ ಅಳೆದು ತೂಗಿ ಅಸ್ತ್ರ ಬಿಡಲು ಸಜ್ಜಾಗುತ್ತಿವೆ.

– ಎಸ್‌.ಲಕ್ಷ್ಮಿನಾರಾಯಣ

Advertisement

Udayavani is now on Telegram. Click here to join our channel and stay updated with the latest news.

Next